ಬೆಂಗಳೂರು: ಬೆಂಗಳೂರು ಕಾರ್ಮಿಕ ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನೀಡಿರುವ ಕಾರ್ಯಾದೇಶವನ್ನು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ರದ್ದುಗೊಳಿಸಿರುವುದನ್ನು ಸ್ವಾಗತ ಮಾಡಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಇದು ತಮ್ಮ ಹೋರಾಟಕ್ಕೆ ಸಂದ ಜಯ ಎಂದು ಪ್ರಶಂಸಿದೆ.
ರಾಜ್ಯದಲ್ಲಿ ಇರುವ 30 ಲಕ್ಷ ಕಟ್ಟಡ ಹಾಗೂ 10 ಲಕ್ಷ ವಲಸೆ ಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಕಟ್ಟಡ ಕಾರ್ಮಿಕ ಮಂಡಳಿ ಪ್ರತಿ ಡೋಸ್ ಗೆ ರೂ 780 ದರ ನಿಗದಿಯಂತೆ ಇತ್ತೀಚಿಗೆ ಆದೇಶವನ್ನು ಹೊರಡಿಸಿತ್ತು. ಇದನ್ನು ವಿರೋಧಿಸಿ ಕಟ್ಟಡ ಕಾರ್ಮಿಕ ಸಂಘಟನೆಗಳು ತೀವ್ರತರವಾದ ಹೋರಾಟವನ್ನು ನಡೆಸಿ, ಕಾರ್ಮಿಕ ಕಲ್ಯಾಣಕ್ಕಾಗಿ ಮೀಸಲಿಟ್ಟ ಸೆಸ್ ಹಣವನ್ನು ರಾಜ್ಯದ 400 ಖಾಸಗಿ ಆಸ್ಪತ್ರೆಗಳಿಗೆ ನೀಡುವ ತೀರ್ಮಾನ ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದೇವು ಸಿಡಬ್ಲ್ಯೂಎಫ್‌ಐ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ ಹೇಳಿದ್ದಾರೆ.
ಇದನ್ನು ಓದಿ: ಸರಕಾರವೇ ಲಸಿಕೆ ವಿತರಿಸಲಿ-ಮಂಡಳಿ ನಿಧಿ ಖಾಸಗಿ ಆಸ್ಪತ್ರೆಗಳಿಗೆ ನೀಡಬಾರದೆಂದು ಕಟ್ಟಡ ಕಾರ್ಮಿಕರ ಪ್ರತಿಭಟನೆ
ಕಾರ್ಮಿಕರ ಹೋರಾಟದಿಂದ ಕಲ್ಯಾಣ ಮಂಡಳಿ ತನ್ನ ತೀರ್ಮಾನದಿಂದ ಹಿಂದೆ ಸರಿದಿದ್ದು ಎಲ್ಲ ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೂ ಸರ್ಕಾರದ ವತಿಯಿಂದಲೇ ಉಚಿತ ಲಸಿಕೆ ನೀಡುವುದಾಗಿ ಪ್ರಕಟಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕೆ. ಮಹಾಂತೇಶ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ಅದಾಗಲೇ ಬೆಂಗಳೂರಿನ ಆರು ಕಾರ್ಮಿಕ ಉಪವಿಭಾಗ ವ್ಯಾಪ್ತಿಯಲ್ಲಿ 2 ಲಕ್ಷ ಲಸಿಕೆಗಳನ್ನು ನೀಡಲು ಮಂಡಳಿಯಿಂದ ರೂ 15.60 ಕೋಟಿಯ ಕಾರ್ಯಾದೇಶ ನೀಡಲಾಗಿದೆ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಶನ್ ಒತ್ತಾಯಿಸಿದೆ.
ಇದನ್ನು ಓದಿ: ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ 700 ಕೋಟಿ ರೂ ಖಾಸಗಿ ಆಸ್ಪತ್ರೆಗೆ
ಕಾರ್ಮಿಕ ಕಲ್ಯಾಣ ಮಂಡಳಿಯು ಖಾಸಗಿ ಆಸ್ಪತ್ರೆಗಳ ಒಕ್ಕೂಟವಾದ ಫನಾಗೆ ಕಳಿಸಲಾದ ಆದೇಶದಲ್ಲಿ ರಾಜ್ಯ ಸರ್ಕಾರ ಎಲ್ಲ ಕಾರ್ಮಿಕರಿಗೆ ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಜಾರಿಗೊಳಿಸುತ್ತಿರುವುದರಿಂದ ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕೆ ಹಾಕುವ ಕಾರ್ಯಕ್ರಮ ರದ್ದುಗೊಳಿಸಬೇಕೆಂದು ತಿಳಿಸಿದೆ.
ಈ ಕ್ರಮಕ್ಕಾಗಿ ಮಂಡಳಿ ಕಾರ್ಯದರ್ಶಿಗಳು ಮತ್ತು ಸರ್ಕಾರಕ್ಕೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಅಭಿನಂದನೆ ಸಲ್ಲಿಸಿದೆ.