ಸ್ಲಂ ಬೋರ್ಡು ಕಲ್ಯಾಣ ನಿಧಿಗೆ ಕಟ್ಟಡ ಕಾರ್ಮಿಕರ ನಿಧಿ ಬಳಕೆ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ವಸತಿ ಸಚಿವ ವಿ. ಸೋಮಣ್ಣ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ದುರ್ಬಳಕೆ ಮಾಡಿ ಸ್ಲಂ ಬೋರ್ಡು ಫಲಾನುಭವಿಗಳಿಗೆ ನೀಡಿದ್ದಾರೆ ಇದು ನೈಜ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಗೆದ ದ್ರೋಹವಾಗಿದ್ದು ಕಲ್ಯಾಣ ಮಂಡಳಿಯಿಂದ ಪಡೆಯಲಾದ 76 ಕೋಟಿ ಹಣವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಇಂದು(ಸೆಪ್ಟಂಬರ್‌ 22) ರಾಜ್ಯಾದ್ಯಂತ ಸಾವಿರಾರು ಕಟ್ಟಡ ಕಾರ್ಮಿಕರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಪ್ರತಿಭಟನೆ‌ ನಡೆಸಿದರು.

2007 ರಿಂದ ಅಸ್ವಿತ್ವದಲ್ಲಿರುವ ಕಲ್ಯಾಣ ಮಂಡಳಿಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರ ‘ವಸತಿ ನಿರ್ಮಾಣಕ್ಕೆ  ಇದುವರೆಗೂ ಒಬ್ಬನೇ ಒಬ್ಬ ಕಟ್ಟಡ ಕಾರ್ಮಿಕನಿಗೂ ಸಹಾಯಧನ ದೊರೆತಿಲ್ಲ. ಆದರೆ ವಸತಿ ಸಚಿವ ಸೋಮಣ್ಣ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಜತೆ ಸೇರಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ 76 ಕೋಟಿ ಹಣವನ್ನು ‘ಕೊಳಚೆ ನಿರ್ಮೂಲನಾ ಮಂಡಳಿ’ಯ  ‘5129 ಫಲಾನುಭವಿಗಳಿಗೆ’ ಕಬಳಿಸಿ ರಾಜ್ಯದಲ್ಲಿ ವಸತಿಗಾಗಿ ಹಂಬಲಿಸುತ್ತಿರುವ ಲಕ್ಷಾಂತರ ಕಟ್ಟಡ  ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ. ಮಾತ್ರವಲ್ಲ ಬಿಜೆಪಿ ಸರ್ಕಾರದ ವಸತಿ ಯೋಜನೆಗೆ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣ ಬಳಸಲು ಮುಂದಾಗಿರುವುದನ್ನು ಖಂಡಿಸಿದರು.

ಕಲ್ಯಾಣ ಮಂಡಳಿಯಲ್ಲಿ ರೂಪಿಸಿದ್ದ ಐದು ವರ್ಷ ಕಡ್ಡಾಯ ನೊಂದಣಿ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲಾಗಿದೆ. ಇದರಿಂದ ರಾಜ್ಯದ ಬಿಜೆಪಿ ಸಚಿವರು ಶಾಸಕರು ಹಾಗೂ ಇತರೆ ಪಕ್ಷಗಳ ಶಾಸಕರು ತಮ್ಮ ಕ್ಷೇತ್ರಗಳ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳು ಬೇಕಾಬಿಟ್ಟಿ ಕಲ್ಯಾಣ ಮಂಡಳಿ ಹಣ ದೋಚಲು ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಮುಂದಿನ ತನ್ನ ರಾಜಕೀಯ ನೆಲೆಯನ್ನು ಭದ್ರಪಡಿಸಲು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮುಂದಾಗಿದ್ದಾರೆ ಎಂದು ನೈಜ‌ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಕಾರ್ಮಿಕರು ಕಲ್ಯಾಣ ಮಂಡಳಿಯ ನಿರ್ಧಾರವನ್ನು ವಿರೋಧಿಸಿ ಪ್ರಮುಖ 13 ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸರ್ಕಾರದ‌‌ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್, ರಾಜ್ಯ ಖಜಾಂಚಿ ಲಿಂಗರಾಜ್ ನೇತೃತ್ವದ ನಿಯೋಗ ಭೇಟಿ‌ ಮಾಡಿ ಸಲ್ಲಿಸಿತು.

ಸರ್ಕಾರದ ಸಲ್ಲಿಸಿರುವ ಮನವಿಯಲ್ಲಿ ಕಲ್ಯಾಣ ಮಂಡಳಿ ಸದಸ್ಯನಾಗಿ ಐದು ವರ್ಷ ಪೂರೈಸಿದ ಸದಸ್ಯರಿಗೆ ಮಾತ್ರವೇ ‘ಮನೆ ನಿರ್ಮಾಣಕ್ಕೆ ಸಾಲ/ಸಹಾಯಧನ/ಮುಂಗಡ ಹಣ ಪಾವತಿ ಮಾಡುವ ಕ್ರಮ ಜಾರಿಗೊಳಿಸಬೇಕು. ‘ಆರೋಗ್ಯ ಸಂಜೀವಿನಿ-೨೦೨೧’ ನಗದು ರಹಿತ ಸೇವೆಯನ್ನು ಕೂಡಲೇ ಜಾರಿಗೊಳಿಸಬೇಕು. ಬಾಕಿ ಇರುವ 60 ಸಾವಿರ ಶೈಕ್ಷಣಿಕ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು ಮತ್ತು 2022-23ನೇ ಸಾಲಿನ ಶೈಕ್ಷಣಿಕ ಅರ್ಜಿ ಸ್ವೀಕಾರ ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಲಾಗಿದೆ.

ಅಲ್ಲದೆ, ಕಲ್ಯಾಣ ಮಂಡಳಿಯು ಆರಂಭಿಸಲಾದ ಹೊಸ ಸಾಫ್ಟ್‌ವೇರ್‌ ನಲ್ಲಿ ಕಾರ್ಮಿಕ ಸಂಘಟನೆಗಳು ನೀಡುವ “ಉದ್ಯೋಗ ಪ್ರಮಾಣ ಪತ್ರ” ಗಳನ್ನು ಮಾತ್ರ ಪರಿಗಣಿಸಿ ನೋಂದಣಿ ಮಾಡಬೇಕು. ನಕಲಿ ಗುರುತಿನ ಚೀಟಿಗಳನ್ನು ವ್ಯಾಪಕವಾಗಿ ನಡೆಸುತ್ತಿರುವ ಸಿಎಸ್‌ಸಿ ಸೆಂಟರ್ ಹಾಗೂ ಗ್ರಾಮ ಓನ್ ಕೇಂದ್ರಗಳಲ್ಲಿ ನೋಂದಣಿಗೆ ಇರುವ ಅವಕಾಶವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಕಲ್ಯಾಣ ಮಂಡಳಿಯಲ್ಲಿ ನೈಜ ಕಾರ್ಮಿಕ ಸಂಘಗಳಿಗೆ ಪ್ರಾತಿನಿದ್ಯ ಸಿಗಬೇಕು. ಆರೋಗ್ಯ ತಪಾಸಣೆ ಹಾಗೂ ಕುಶಲತೆ ತರಬೇತಿ ಹೆಸರಿನಲ್ಲಿ ನಡೆದಿರುವ ಕೋಟ್ಯಾಂತರ ಅವ್ಯವಹಾರ ತನಿಖೆಯಾಗಬೇಕು. ಅನಿಯಮಿತ ಬಸ್‌ಪಾಸ್ ವಿತರಣೆ ನಿಲ್ಲಬೇಕು ಹಾಗೂ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ‌ಬಸ್ ಪಾಸ್ ಬದಲು ನೇರ ಹಣ ಕಾರ್ಮಿಕರ ಖಾತೆಗೆ ನೀಡಬೇಕು ಎಂದು ಆಗ್ರಹಿಸಲಾಗಿದೆ.

ರಾಜ್ಯದ ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೋಲಾರ, ಮಂಡ್ಯ, ಮೈಸೂರು, ದಾವಣಗೆರೆ, ವಿಜಯನಗರ, ಕಲಬುರಗಿ, ಬಳ್ಳಾರಿ, ಕೊಡಗು ರಾಯಚೂರು, ಗದಗ, ಕೊಪ್ಪಳ ಮೊದಲಾದ ಜಿಲ್ಲೆಗಳಲ್ಲಿರುವ ಉಪ ಕಾರ್ಮಿಕ ಆಯುಕ್ತರು, ಸಹಾಯಕ ಕಾರ್ಮಿಕ‌ ಆಯುಕ್ತರು, ಜಿಲ್ಲಾ ಹಾಗೂ ತಾಲೂಕ ಕಾರ್ಮಿಕ ಕಚೇರಿಗಳ ಎದುರು ನೂರಾರು ಕಾರ್ಮಿಕರು ಪ್ರತಿಭಟನೆಗಳನ್ನು ನಡೆಸಿ ಮನವಿ ಸಲ್ಲಿಸಿದರು.

ಈಗಾಗಲೇ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ಹಣದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ರೇಷನ್ ಕಿಟ್, ಟೂಲ್ ಕಿಟ್, ಆಂಬ್ಯೂಲೆನ್ಸ್, ದುಬಾರಿ ಕಾರು, ತಂತ್ರಾಂಶ ಖರೀದಿ, ಸುರಕ್ಷಾ ಕಿಟ್ ಮತ್ತು ಬೂಸ್ಟರ್ ಕಿಟ್‌ಗಳನ್ನು ಪಾರದರ್ಶಕತೆ ಕಾಪಾಡದೇ ಖರೀದಿಸಿ ನೂರಾರು ಕೋಟಿ ಭ್ರಷ್ಟಚಾರ ನಡೆಸಿದ್ದಾರೆ. ಇದಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಖರೀದಿಯಲ್ಲಿನ ಪಾರದರ್ಶಕ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ. ಇದು ಸುಪ್ರೀಂ ಕೋರ್ಟ್ ನಿರ್ದೇಶನ  ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ 2021 ರ ಮಾರ್ಚ್‌ ನಲ್ಲಿ ಹೊರಡಿಸಿರುವ ನಿರ್ದೇಶನದ ಸ್ಷಷ್ಟ ಉಲ್ಲಂಘನೆಯಾಗಿದೆ ಈ ಹಿನ್ನಲೆಯಲ್ಲಿ ಹಣ ನಕಲಿ ಫಲಾನುಭವಿಗಳ ಪಾಲಾಗದಂತೆ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.

ಈ ಬಗ್ಗೆ  ಸರ್ಕಾರ ಮತ್ತು ಕಲ್ಯಾಣ ಮಂಡಳಿ ಕ್ರಮವಹಿಸದಿದ್ದಲ್ಲಿ ವಿವಿಧ ಕಾರ್ಮಿಕ ಸಂಘಗಳನ್ನು ಒಳಗೊಂಡು ತೀವ್ರ ಸ್ವರೂಪದ ಹೋರಾಟವನ್ನು ನಡೆಸಲು ಸಂಘಟನೆಯು ನಿರ್ಧರಿಸಿದೆ.

Donate Janashakthi Media

Leave a Reply

Your email address will not be published. Required fields are marked *