ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ಸಂಬಂಧಪಟ್ಟಂತೆ ಗುರುತಿಸಲಾಗಿರುವ ಬೇಡಿಕೆಗಳನ್ನು ಒಂದು ನಿರ್ದಿಷ್ಟ ಸಮಯದೊಳಗೆ ಬಗೆಹರಿಸಲು ಸರ್ಕಾರ ನಿರ್ಧರಿಸಿದೆ. ಇಂದು ಕಟ್ಟಡ ನಿರ್ಮಾಣ ಕಾರ್ಮಿಕರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ಹಾಗೂ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಾರ್ಮಿಕ ಇಲಾಖೆ) ಡಾ. ಕಲ್ಪನಾ ಅವರೊಂದಿಗೆ ಈ ಬಗ್ಗೆ ಸುಧಿರ್ಘವಾಗಿ ಸಭೆ ನಡೆದೆ.
ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶದಿಂದ ರಚಿಸಲಾದ ಕಲ್ಯಾಣ ಮಂಡಳಿಯಲ್ಲಿನ ಹಲವು ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಗಳನ್ನು ಸಮಗ್ರವಾಗಿ ತನಿಖೆ ಕೈಗೊಳ್ಳಬೇಕು ಹಾಗೂ ಕಟ್ಟಡ ಕಾರ್ಮಿಕರಿಗೆ ಸಮರ್ಪಕವಾಗಿ ಯಾವುದೇ ಲೋಪ ಮತ್ತು ವಿಳಂಬವಿಲ್ಲದೆ ಒದಗಿಸಬೇಕೆಂದು ಕಟ್ಟಡ ಕಾರ್ಮಿಕರ ಜಂಟಿ ವೇದಿಕೆಯು ಸೆಪ್ಟಂಬರ್ 20ರಂದು ಪ್ರತಿಭಟನಾ ಧರಣಿ ನಡೆಸಿ ಹಕ್ಕೊತ್ತಾಯವನ್ನು ಮಂಡಿಸಿದ್ದರು.
ಇದನ್ನು ಓದಿ: ಮಂಡಳಿಯ ಭ್ರಷ್ಟತೆ ಖಂಡಿಸಿ-ಸಮರ್ಪಕ ನೆರವಿಗಾಗಿ ಕಟ್ಟಡ ಕಾರ್ಮಿಕರ ಪ್ರತಿಭಟನೆ
ಅಂದು ಮುಖ್ಯಮಂತ್ರಿ ಮನೆ ಚಲೋ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಮಂಡಿಸಿದ ಕಟ್ಟಡ ಕಾರ್ಮಿಕರ ಜಂಟಿ ವೇದಿಕೆಯ ಮುಖಂಡರೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ಮುಖಂಡರು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದರು.
ಸಂಘಟನೆಗಳು ಮಂಡಿಸಿದ ಬೇಡಿಕೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆದಿದ್ದು, ಬೇಡಿಕೆಗಳನ್ನು ಒಂದು ನಿರ್ದಿಷ್ಟ ಸಮಯದೊಳಗೆ ಬಗೆಹರಿಸಲು ಬೇಕಾದ ಕ್ರಮಗಳನ್ನು ಮಂಡಳಿ ಅಧಿಕಾರಿಗಳು ಕೂಡಲೇ ಕೈಗೊಳ್ಳಬೇಕೆಂದು ಡಾ. ಕಲ್ಪನಾ ಅವರು ನಿರ್ದೇಶನ ನೀಡಿದರು. ಕಾರ್ಮಿಕರ ಕಲ್ಯಾಣ ಮಂಡಳಿ ಹಿರಿಯ ಅಧಿಕಾರಿ ಬಾಬುರಾವ್ ಆನ್‌ಲೈನ್ ಮೂಲಕ ಸಭೆಯಲ್ಲಿ ಹಾಜರಿದ್ದರು.
ಸಮನ್ವಯ ಸಮಿತಿ ಪರವಾಗಿ ಸಭೆಯಲ್ಲಿ ಹಾಜರಿದ್ದ ಮುಖಂಡರು ಮನವಿಯಲ್ಲಿನ ಪ್ರತಿಯೊಂದು ಅಂಶಗಳನ್ನು ಎ.ಸಿ.ಎಸ್ ಅವರ ಗಮನಕ್ಕೆ ಪ್ರತ್ಯೇಕವಾಗಿ ತಂದರು ಮತ್ತು ಪ್ರತಿ ಬೇಡಿಕೆಗಳ ಈಡೇರಿಕೆಗೆ ಬೇಕಾದ ಸಾಧ್ಯತೆಗಳನ್ನು ಆನ್‌ಲೈನ್ ನಲ್ಲಿ ಹಾಜರಿದ್ದ ಮಂಡಳಿ ಅಧಿಕಾರಿಗಳ ಜತೆ ಚರ್ಚಿಸಿ ಜಾರಿಗೊಳಿಸಲು ಬೇಕಾದ ಸೂಚನೆಗಳನ್ನು ನೀಡಿದರು.
ಸಮನ್ವಯ ಸಮಿತಿ ಪರವಾಗಿ ಕೆ.ಮಹಾಂತೇಶ, ಶಾಮಣ್ಣ ರೆಡ್ಡಿ, ಶಿವಣ್ಣ, ಉಮೇಶ್ ಹೆಚ್.ಜಿ., ಬಿ ಉಮೇಶ, ಧನಶೇಖರ್, ನಾಗನಾಥ್, ಲೀಲಾವತಿ, ಶ್ರೀನಿವಾಸ್, ಷಣ್ಮುಗಂ ಹಾಗೂ ಮಹಾದೇವಿ ಸಭೆಯಲ್ಲಿ ಭಾಗವಹಿಸಿದ್ದರು.