– ಎಚ್.ಆರ್. ನವೀನ್ ಕುಮಾರ್, ಹಾಸನ
ನಾಯಕ ನಟನಾಗಿ ದರ್ಶನ್, ನಾಯಕಿ ನಟಿಯಾಗಿ ಆರಾಧನಾ ಅಭಿನಯದ, ತರುಣ್ ಸುಧೀರ್ ನಿರ್ದೇಶನದ, ರಾಕ್ ಲೈನ್ ಪ್ರೊಡಕ್ಷನ್ ಗಟ್ಟಿ ಕಥಾಹಂದರವನ್ನು ಹೊಂದಿರುವ ಅಪರೂಪದ ಕನ್ನಡ ಸಿನಿಮಾ ಕಾಟೇರ. ಕಾಟೇರ
ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಕಮರ್ಷಿಯಲ್ ಸಿನಿಮಾದ ಎಲ್ಲಾ ಜಲಕ್ ಗಳನ್ನು, ಸ್ವಲ್ಪ ಅತಿಯಾದ ಫೈಟ್ ಗಳನ್ನು ಹೊಂದಿದ್ದರೂ ಇಡೀ ಚಿತ್ರದ ಚಿತ್ರಕತೆ, ಸಂಭಾಷಣೆ ಮತ್ತು ಅದರಲ್ಲಿ ಬರುವ ರೈತರ ಬವಣೆ – ಭೂಮಿಯ ಪ್ರಶ್ನೆ ಹಾಗು ಜಾತಿ ಅಸ್ಪೃಶ್ಯತೆ – ಮರ್ಯಾದೆ ಹತ್ಯೆಗಳ ಕರಾಳತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ನಿರ್ದೇಶಕ ತರುಣ್ ಸುಧೀರ್ ಯಶಸ್ವಿಯಾಗಿದ್ದಾರೆ.
ಸೈರಾಟ್, ಜೈ ಭೀಮ್, ಅಸುರನ್, ಫಂಡ್ರಿ, ಸರಪಟ್ಟ ಅಂತಹ ಸಿನಿಮಾಗಳು ತಮಿಳು, ಮಲೆಯಾಳಂ ಮತ್ತಿತರೆ ಭಾಷೆಗಳಲ್ಲಿ ಬಂದಾಗೆಲ್ಲಾ ಕನ್ನಡ ಚಿತ್ರರಂಗಕ್ಕೆ ಏನಾಗಿದೆ. ಅಬ್ಬರದ ಸಿನಿಮಾಗಳನ್ನು ಕೇವಲ ಕೆಟ್ಟ ಮನೋರಂಜನೆಗೆ ಮಾತ್ರ ಬಳಕೆ ಮಾಡುತ್ತಿದ್ದು, ಸಾಮಾಜಿಕ ಕಳಕಳಿ ಇರುವ ಸಿನಿಮಾ ಮಾಡುವವರು ಯಾರೂ ಇಲ್ಲವಾ ಎಂದು ಹಲವು ಬಾರಿ ಅನಿಸಿದ್ದುಂಟು. ಅದರಲ್ಲೂ ಸ್ಟಾರ್ ನಟನಟಿಯರೇ ಇಂತಹ ಚಿತ್ರಕತೆಗಳನ್ನು ಒಪ್ಪಿ ಅಭಿನಯಿಸಿದರೆ ಜನರಿಗೆ ಸುಲಭವಾಗಿ ವಿಚಾರಗಳು ಮನಮುಟ್ಟುತ್ತವೆ ಎಂದು ಅನಿಸಿತ್ತು. ಈಗ ನನ್ನ ಎಲ್ಲಾ ಪ್ರಶ್ನೆಗಳಿಗೆ ಕಾಟೇರ ಉತ್ತರವಾಗಿ ನಿಂತಿದೆ.
ಭೂಮಿ ಇಲ್ಲದೆ ರೈತರು ಭೂಮಾಲಕರ ಜಮೀನುಗಳಲ್ಲಿ ಗೇಣಿಗೆ ದುಡಿದು ಬಂದ ಫಸಲನ್ನೆಲ್ಲಾ ಗೇಣಿ ಮೂಲಕ ಭೂಮಾಲಕನಿಗೆ ಕೊಟ್ಟು ಉಪವಾಸ ಸಾಯಬೇಕಾದಂತಹ ಅತ್ಯಂತ ಕಠೋರ ಪರಿಸ್ಥಿತಿ ಭೂಮಾಲಕ, ಪಾಳೇಗಾರಿ ವ್ಯವಸ್ಥೆಯದ್ದು. ಕಾಟೇರ
ಸ್ವತಂತ್ರ ಪೂರ್ವ ಮತ್ತು ನಂತರ ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗಳಿಂದ ಕೂಡಿದ್ದ ಭೂಮಾಲಕ ವ್ಯವಸ್ಥೆ, ಗೇಣಿ ಪದ್ದತಿಯ ವಿರುದ್ಧ, ಉಳುವವನಿಗೆ ಭೂಮಿ ಎಂಬ ಹಲವು ರೈತ ಹೋರಾಟಗಳು ದೇಶದ ಹಲವು ಭಾಗಗಳಲ್ಲಿ ನಡೆದಿವೆ. ಅದರಲ್ಲಿ ನಮ್ಮ ಗಡಿರಾಜ್ಯಗಳಾದ ತೆಲಂಗಾಣ ರೈತರ ಸಶಸ್ತ್ರ ಹೋರಾಟ, ಕೇರಳದ ಕಯ್ಯೂರು, ಪುನ್ನಪ್ಪ ವೈಯಲಾರ್ ರೈತ ಹೋರಾಟ, ಮಹಾರಾಷ್ಟ್ರದ ವಾರಲಿ ಆದಿವಾಸಿಗಳ ಹೋರಾಟ. ಇಷ್ಟು ಮಾತ್ರವಲ್ಲದೆ ಅದೇ ಕಾಲಘಟ್ಟದಲ್ಲಿ ದೇಶಾದ್ಯಂತ ಹತ್ತು ಹಲವು ರೈತ ಹೋರಾಟಗಳು ಭೂಮಿಯ ಪ್ರಶ್ನೆಯನ್ನು ಪ್ರಧಾನ ಪ್ರಶ್ನೆಯನ್ನಾಗಿ ಎತ್ತಿಕೊಂಡು ಸಮರಧೀರ ಚಳುವಳಿಯನ್ನು ನಡೆಸಿವೆ. ಕಾಟೇರ
ಇವುಗಳ ಪ್ರತಿಫಲವಾಗಿಯೇ 1957 ರಲ್ಲಿ ಕೇರಳದಲ್ಲಿ ಅಧಿಕಾರಕ್ಕೆ ಬಂದ ಇಎಂಎಸ್ ನಂಬೂದಿರಿ ಪಾಡ್ ರವರ ನೇತೃತ್ವದ ಮೊದಲ ಎಡರಂಗ ಸರ್ಕಾರ, ನಂತರ ಪಶ್ಚಿಮ ಬಂಗಾಳ ಮತ್ತು ತ್ರಿಪುರಾಗಳಲ್ಲಿ ಅಧಿಕಾರಕ್ಕೆ ಬಂದ ಎಡರಂಗ ಸರ್ಕಾರಗಳು ಭೂಸುಧಾರಣಾ ಕಾನೂನುಗಳನ್ನು ಜಾರಿಗೆ ತಂದು ಭೂಹೀನ ಬಡವರಿಗೆ ಮತ್ತು ದಲಿತರಿಗೆ ಲಕ್ಷಾಂತರ ಎಕ್ಕರೆ ಭೂಮಿಯನ್ನು ಉಚಿತವಾಗಿ ಹಂಚಿಕೆ ಮಾಡಲಾಯಿತು.
ಇವೆಲ್ಲವುಗಳ ಫಲಶೃತಿಯಾಗಿ ದೇಶದಲ್ಲಿ ಇಂದಿರಾಗಾಂಧಿ ಭೂಸುಧಾರಣಾ ಕಾನೂನು ಜಾರಿಗೆ ಬಂದು ಕರ್ನಾಟಕದಲ್ಲಿ ಮುಖ್ಯಮಂತ್ರಿ ದೇವರಾಜು ಅರಸುರವರು ಇದನ್ನು ಜಾರಿಗೆ ತಂದರು. ಕಾಟೇರ
ಈ ಸಂದರ್ಭದಲ್ಲಿನ ಭೂಮಾಲಕ, ಪಾಳೇಗಾರರ ದೌರ್ಜನ್ಯ, ಮತ್ತು ಶೋಷಣೆಯನ್ನು ಸಿನಿಮಾ ಅತ್ಯುತ್ತಮವಾಗಿ ಹಿಡಿದಿಟ್ಟಿದೆ. ಭೂಸುಧಾರಣಾ ಕಾನೂನು ಜಾರಿಯಾದ ಸುದ್ಧಿ ತಿಳಿದ ಗೇಣಿದಾರ ರೈತರು ಸಂಘಟಿತರಾಗಿ ರೈತ ಸಂಘದ ಮೂಲಕ ಒಗ್ಗಟ್ಟಿನಿಂದ ತಮ್ಮ ಭೂಮಿಯ ಹಕ್ಕನ್ನು ಪಡೆಯಲು ಮುಂದಾಗುತ್ತಾರೆ. ಇದನ್ನು ತಡೆಯಲು ಭೂಮಾಲಕರು ತಮ್ಮ ಹಣ ಬಲ, ತೋಳ್ಬಲ ಮತ್ತು ಅಧಿಕಾರ ಬಲ, ರಾಜಕೀಯ ಬಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ.
ಇದನ್ನು ಓದಿ : ಇಟಾಲಿಯನ್ ನವವಾಸ್ತವವಾದಿ ಸಿನಿಮಾ ʼದಿ ಬೈಸಿಕಲ್ ಥೀವ್ಸ್ʼಗೆ 75ರ ಗರಿ
ಸನಿಮಾದ ಪ್ರತಿ ದೃಶ್ಯದಲ್ಲಿರುವ ಒಂದೊಂದು ಡೌಲಾಗ್ ಗಳು ಪ್ರೇಕ್ಷಕರಿಂದ ಕೇಕೆ ಮತ್ತು ಶಿಳ್ಳೆಗಳನ್ನು ಗಳಿಸುತ್ತಿದ್ದರೂ ಒಂದು ಗಂಭೀರ ಚಿಂತನೆಗೆ ಒಡ್ಡುತ್ತಿತ್ತು.
ಜಮೀನ್ದಾರಿ ವಿರುದ್ಧ, ಜಾತಿ ವ್ಯವಸ್ಥೆ ವಿರುದ್ಧ ನಾಯಕ ನಟ ಆಡುವ ಮಾತು, “ವ್ಯವಸ್ಥೆ ಬದಲಾಗಬೇಕು ಅಂದ್ರೆ ಹೋರಾಟ ಆಗಲೇ ಬೇಕು” ಈ ಮಾತುಗಳು ಕಥೆಯನ್ನು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿ ಹೆಣೆಯದೆ ಒಂದು ಸಾಮೂಹಿಕ ಪ್ರಯತ್ನದ ಭಾಗವಾಗಿ ಎಲ್ಲವನ್ನು ಗಳಿಸಿಕೊಳ್ಳಬಹುದೆಂಬ ಸಂದೇಶವನ್ನು ನೀಡಲು ಪ್ರಯತ್ನಿಸಲಾಗಿದೆ. ಕಾಟೇರ
ಇಡೀ ಸಿನಿಮಾದಲ್ಲಿ ಮತ್ತೊಂದು ಪ್ರಧಾನ ಅಂಶ ಎಂದರೆ ಅದು ಜಾತಿ ಅಸ್ಪೃಶ್ಯತೆ, ತಾರತಮ್ಯ ಮತ್ತು ಮರ್ಯಾದೆ ಹತ್ಯೆಗಳು. ಇವುಗಳನ್ನು ನಿರ್ದೇಶಕ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡಲು ಶ್ರಮಿಸಿದ್ದಾರೆ. ಅದಕ್ಕೆ ದರ್ಶನ್ ಆದಿಯಾಗಿ ಎಲ್ಲಾ ಕಲಾವಿದರೂ ಸಾತ್ ನೀಡಿದ್ದಾರೆ. ಕೆಲವು ದೃಷ್ಯಗಳನ್ನು ನೋಡುತ್ತಿದ್ದರೆ ಇವು ನಮ್ಮ ಊರಲ್ಲೇ ನಡೆದಂತಹವು, ಈ ಘಟನೆಯನ್ನು ನಾನು ಪತ್ರಿಕೆಯಲ್ಲಿ ಓದಿ, ಟಿವಿಯಲ್ಲಿ ನೋಡಿದ್ದೇವೆ ಎಂದೆನಿಸುವುದು ಮಾತ್ರವಲ್ಲ ಸಿನಿಮಾ ಮುಗಿದ ನಂತರವೂ ಈ ದೃಶ್ಯಗಳು ನಮ್ಮನ್ನು ಕಾಡುತ್ತವೆ. ಕಾಟೇರ
ತನ್ನೆಲ್ಲಾ ಅಂತಸ್ತು, ಹೀರೋನ ಇಮೇಜ್ ಗಳನ್ನೆಲ್ಲಾ ಲೆಕ್ಕಿಸದೆ ಸಮಾಜಕ್ಕೆ ಒಂದು ಪರಿಣಾಮಕಾರಿ ಸಂದೇಶ ನೀಡುವ ಇಂತಹ ಚಿತ್ರವನ್ನು ಒಪ್ಪಿಕೊಂಡಿದ್ದಕ್ಕೆ ಧರ್ಶನ್ ಸೆಲಬ್ರಿಟಿಗಳ ಹೃದಯದಲ್ಲಿ ಇನ್ನೂ ಎತ್ತರಕ್ಕೆ ಬೆಳೆದಿದ್ದಾರೆ. ಅದೇ ರೀತಿ ಇಂತಹ ಒಬ್ಬ ಕಮರ್ಷಿಯಲ್ ಹೀರೋಗೆ ಇಂತಹದೊಂದು ಚಿತ್ರಕತೆಯನ್ನು ಹೆಣೆದು ಸಿನಿಮಾವನ್ನು ಗೆಲ್ಲಿಸಬಹುದು ಎಂದು ಯೋಚಿಸಿ ಕೈ ಹಾಕಿದ ನಿರ್ದೇಶಕ ತರುಣ್ ಸುಧೀರ್ ಅವರಿಗೆ, ಇಂತಹ ಕಥೆಗೆ ಹಣ ಹೂಡಿಕೆ ಮಾಡುವ ಧೈರ್ಯ ಮಾಡಿದ ರಾಕಲೈನ್ ಪ್ರೊಡಕ್ಷನ್ ವೆಂಕಟೇಶ್ ಈ ಮೂವರು ಅಭಿನಂದನಾರ್ಹರು. ಕಾಟೇರ
ಅಂತಿಮವಾಗಿ ಸಿನಿಮಾದ ಇತರೆ ಕಲಾವಿದರು, ತಂತ್ರಜ್ಞರ ಜೊತೆಗೆ ಈ ಸಿನಿಮಾವನ್ನ ತಲೆಯ ಮೇಲೆ ಹೊತ್ತು ಸಾಗಿಸುತ್ತಿರುವ ಕನ್ನಡದ ಮನಸುಗಳಿಗೆ ಕೋಟಿ ಕೋಟಿ ವಂದನೆಗಳನ್ನು ಹೇಳುತ್ತಾ, ಸಿನಿಮಾವನ್ನು ಕೇವಲ ಮನೋರಂಜನೆಗೆ ಮಾತ್ರ ನೋಡಿ ಮರೆಯದೆ, ಅದರ ಅಂಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಅನಿಷ್ಟ ಜಾತಿಪದ್ದತಿ ಮತ್ತು ಪಾಳೇಗಾರಿ ವ್ಯವಸ್ಥೆ ವಿರುದ್ಧ ದನಿ ಎತ್ತಿ ಎಂದು ಮನವಿ ಮಾಡಿಕೊಳ್ಳುತ್ತೇನೆ.
ಎಲ್ಲರೂ ಕುಟುಂಬ ಸಮೇತರಾಗಿ ಮನೆ ಮಂದಿಯೆಲ್ಲಾ ಚಿತ್ರಮಂದಿರಕ್ಕೆ ಬಂದು ಕಾಟೇರ ಸಿನಿಮಾ ನೋಡಿ. ಕಾಟೇರ
ಇದನ್ನು ನೋಡಿ : ಪಿಚ್ಚರ್ ಪಯಣ – 143, ಸಿನೆಮಾ : ಗಂಗೂಬಾಯಿ ಕಾಠೆವಾಡಿ, ವಿಶ್ಲೇಷಣೆ : ಮೀನಾಕ್ಷಿ ಬಾಳಿ