- ಅನುರಾಧ ಭಾಸಿನ್, ದೀಪಿಕಾ ರಾಜಾವತ್ ಮೇಲೆ ಹಲ್ಲೆಗೆ ಖಂಡನೆ
- ಇಬ್ಬರು ಧೀರ ಮಹಿಳಾ ಹೋರಾಟಗಾರ್ತಿಯರಿಗೆ ಎಐಡಿಡಬ್ಲ್ಯೂಎ ಬೆಂಬಲ ಘೋಷಣೆ
ನವದೆಹಲಿ: ‘ಕಾಶ್ಮೀರ್ ಟೈಮ್ಸ್’ನ ಸಂಪಾದಕಿ ಅನುರಾಧಾ ಭಾಸಿನ್ ಮೇಲೆ ಇತ್ತೀಚೆಗೆ ಜಮ್ಮುವಿನಲ್ಲಿ ಹಲ್ಲೆ ನಡೆಸಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯುಎ) ಬಲವಾಗಿ ಖಂಡಿಸಿದೆ.
ಭಾರತ ಸರಕಾರ ಕಳೆದ ವರ್ಷ ಆಗಸ್ಟ್ 5ರಿಂದ ಜಮ್ಮು ಮತ್ತು ಕಾಶ್ಮೀರದ ಜನತೆಯ ಹಕ್ಕುಗಳ ಮೇಲೆ ಮಾಡುತ್ತಿರುವ ದಾಳಿಗಳನ್ನು ಖಂಡತುಂಡವಾಗಿ ವಿರೋಧಿಸುತ್ತಿರುವ ಅನುರಾಧಾ ಭಾಸಿನ್ ಸಂಪರ್ಕ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಷೇಧ ಹೇರಿದ ಸರಕಾರದ ಕ್ರಮದ ವಿರುದ್ಧ ಸುಪ್ರಿಂ ಕೋರ್ಟಿಗೆ ಹೋಗಿದ್ದರು. ಕಳೆದ ಮೂರು ವಾರಗಳಲ್ಲಿ ಅವರನ್ನು ಸರಕಾರದಿಂದ ಮಂಜೂರಾಗಿದ್ದ ನಿವಾಸದಿಂದ ಬಲವಂತದಿಂದ ಹೊರಹಾಕಲ್ಪಟ್ಟಿದ್ದರು. ಮತ್ತು ಆಕೆಯ ಕಾಶ್ಮೀರ್ ಟೈಮ್ಸ್ ಪತ್ರಿಕೆಯ ಕಚೇರಿಗೆ ಬೀಗ ಹಾಕಲಾಗಿದೆ. ಆದರೂ ಆಕೆ ತಾನು ಸತ್ಯ ಹೇಳುವುದನ್ನು ಮುಂದುವರಿಸುವುದಾಗಿ ಪ್ರಕಟಿಸಿದ ಬಳಿಕ ಹಲ್ಲೆ ನಡೆಸಲಾಗಿದೆ ಎಂದು ಎಐಡಿಡಬ್ಲ್ಯುಎ ದೂರಿದೆ.
ಇನ್ನೊಂದು ಆಘಾತಕಾರಿ ಘಟನೆಯಲ್ಲಿ,ಅಡ್ವೊಕೇಟ್ ದೀಪಿಕಾ ರಾಜಾವತ್ ಮೇಲೆ ಗುಂಪು ಹಲ್ಲೆ ಮಾಡಲಾಗಿದೆ. ಹಲ್ಲೆ ನಡೆಸಿದ ಗುಂಪನ್ನು ಚದುರಿಸಲಾಯಿತು. ಆದರೆ ವರ್ಷವಿಡೀ ಮಹಿಳೆಯರಿಗೆ ಕಿರುಕುಳ ಕೊಟ್ಟು, ಹಿಂಸಿಸಿ ನವರಾತ್ರಿಯ ದಿನಗಳಲ್ಲಿ ಮಾತ್ರ ‘ಪೂಜಿಸುವ’ ಗೋಸುಂಬೆತನವನ್ನು ಗೇಲಿ ಮಾಡುವ ಒಂದು ಕಾರ್ಟೂನನ್ನು ಆಕೆ ಫಾರ್ವರ್ಡ್ ಮಾಡಿದ್ದ ಪ್ರಕರಣವನ್ನು ಹಿಡಿದುಕೊಂಡು ಆಕೆಯ ಮೇಲೆಯೇ ‘ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ’ ಎಂದು ಎಫ್‍ಐಆರ್ ಹಾಕಲಾಗಿದೆ. ಎಫ್‍ಐಆರ್ ಹಾಕಿದ ದಿನ ದೀಪಿಕಾ ಕೂಡ ನವರಾತ್ರಿ ವ್ರತದಲ್ಲಿದ್ದರು. ದೀಪಿಕಾ ಜಮ್ಮು ಮತ್ತು ಕಾಶ್ಮೀರದ ಒಂದು ದೇವಸ್ಥಾನದ ಪೂಜಾರಿ ಮತ್ತು ಇತರರು ಬಕರವಾಲ್ ಅಲೆಮಾರಿ ಸಮುದಾಯದ 8 ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ಕೊಟ್ಟು ಸಾಯಿಸಿದ ಕೇಸಿನಲ್ಲಿ ಸಂತ್ರಸ್ತೆ ಪರ ಹೋರಾಡಿದ ವಕೀಲೆ. ಇದೇ ಕಾರಣಕ್ಕೆ ಸಂಘ ಪರಿವಾರ ದೀಪಿಕಾ ಮೇಲೆ ದ್ವೇಷ ಕಾರುತ್ತಿದ್ದು, ಇದೇ ಕಾರಣದಿಂದ ಹಲ್ಲೆ ನಡೆಸಿರುವುದು ಮತ್ತು ಎಫ್‍ಐಆರ್ ಹಾಕಲಾಗಿದೆ ಎಂದು ಎಐಡಿಡಬ್ಲ್ಯುಎ ಆರೋಪಿಸಿದೆ.
ಹೇಡಿತನದ ಬೆದರಿಕೆಗಳಿಗೆ ತಲೆಬಾಗಲು ನಿರಾಕರಿಸಿರುವ ಈ ಇಬ್ಬರು ಧೀರಮಹಿಳೆಯರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿರುವ ಎಐಡಿಡಬ್ಲ್ಯುಎ, ಅವರ ಹೋರಾಟಗಳಿಗೆ ಸೌಹಾರ್ದ ವ್ಯಕ್ತಪಡಿಸುತ್ತ ಸರಕಾರ ಅವರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು, ಅವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದೆ.