ತಿರುವನಂತಪುರಂ : ಕಾಸರಗೋಡಿನಲ್ಲಿರುವ ಬರುವ ಗ್ರಾಮದ ಕನ್ನಡದ ಹೆಸರುಗಳನ್ನು ಬದಲಾವಣೆ ಮಾಡುವುದಿಲ್ಲವೆಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.
ಯಾವುದೇ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡುವುದಿಲ್ಲ. ಕಾಸರಗೋಡು, ಮಂಜೇಶ್ವರ ಗ್ರಾಮಗಳ ಹೆಸರನ್ನು ಬದಲಾಯಿಸುವುದಿಲ್ಲ. ಕೇರಳ ಸರ್ಕಾರದ ಬಳಿ ಅಂತಹ ಯಾವುದೇ ಪ್ರಸ್ತಾಪವಿಲ್ಲ. ಗ್ರಾಮಗಳ ಹೆಸರು ಬದಲಾವಣೆ ಮಾಡಲಾಗುತ್ತಿದೆ ಎನ್ನುವುದು ವದಂತಿ ಎಂದು ಕೇರಳ ಸರಕಾರ ಸ್ಪಷ್ಟಪಡಿಸಿದೆ.
ಕಾಸರಗೋಡು ತಾಲೂಕಿನ ಕನ್ನಡ ಗ್ರಾಮಗಳ ಹೆಸರನ್ನು ಮಲಯಾಳಂಗೆ ಬದಲಾಯಿಸಲು ಕೇರಳ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸೇರಿದಂತೆ ಹಲವು ಪ್ರಮುಖರು ಕನ್ನಡ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದ್ದರು.
ಈ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೇರಳ ಸರ್ಕಾರಕ್ಕೆ ಪತ್ರ ಬರೆದು ಕಾಸರಗೋಡಿನಲ್ಲಿ ಬರುವ ಯಾವುದೇ ಗ್ರಾಮಗಳ ಕನ್ನಡದ ಹೆರುಗಳನ್ನ ಬದಲಿಸದಂತೆ ಮನವಿ ಮಾಡಿದ್ದರು.
ಅಧಿಕೃತವಾಗಿ ಯಾವುದೇ ಸುತ್ತೋಲೆ ಇಲ್ಲದೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳ ಆಧಾರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಕುಮಾರಸ್ವಾಮಿ ಮಾಡಿರುವ ಟ್ವೀಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನೀಡಿದ ಹೇಳಿಕೆ ಜನರಲ್ಲಿ ಗೊಂದಲ ಉಂಟುಮಾಡಿದೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ನೀಡಿದ ಅನಗತ್ಯ ಹೇಳಿಕೆಯು ವಿಷಾದನೀಯ. ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಪರವಾಗಿ ಕೆಲವು ಪೂರಕ ಕ್ರಮಗಳನ್ನು ಕೇರಳದಲ್ಲಿ ಎಲ್ಲಾ ಸರಕಾರಗಳು ಕೈಗೊಂಡಿದೆ. ಭಾಷಾ ಅಲ್ಪಸಂಖ್ಯಾತರಿಗೆ ಸಮಸ್ಯೆ ಆಗುವ ವಿಚಾರಗಳನ್ನು ಸರಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸರ್ಕಾರ ಧನಾತ್ಮಕವಾಗಿ ಸ್ಪಂದಿಸುವ ವಾತಾವರಣ ಕೇರಳದಲ್ಲಿದೆ. ಪರಿಹಾರವಾಗಬೇಕಾದ ಸಮಸ್ಯೆಗಳು ಇನ್ನೂ ಇರುವುದು ವಾಸ್ತವ. ಇದನ್ನು ಸಂಘಟಿತ ಪ್ರಯತ್ನದಿಂದ ಪರಿಹರಿಸಲು ಸಾಧ್ಯವಾಗುವ ವಾತಾವರಣ ನಿರ್ಮಾಣವಾಗಬೇಕು. ನಾಡಿನ ಭಾಷಾ ಸಾಮರಸ್ಯವನ್ನು, ಸಾಂಸ್ಕೃತಿಕ ವೈವಿಧ್ಯತೆಯನ್ನು ಉಳಿಸಿ ಬೆಳೆಸುವಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಬಾರದು ಹಾಗಾಗಿ ಗ್ರಾಮಗಳ ಹೆಸರು ಪ್ರಸ್ಥಾವನೆ ಕೇವಲ ವದಂತಿ ಎಂದು ಮಂಜೇಶ್ವರ ಶಾಸಕ ಎ.ಕೆ.ಎಮ್ ಅಶ್ರಫ್ ತಿಳಿಸಿದ್ದಾರೆ.