ಕಾಸರಗೋಡು : ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ವಿರುದ್ಧ ಚುನಾವಣಾ ಆಕ್ರಮ ಆರೋಪ ಕೇಳಿ ಬಂದಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಕಾಸರಗೋಡು ಕೋರ್ಟ್ ಸಮ್ಮತಿ ನೀಡಿದೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಕೆ ಸುರೇಂದ್ರನ್ ಸ್ಪರ್ಧಿಸಿದ್ದರು. ತಮ್ಮ ಎದುರಾಳಿಗಳಿಗೆ ನಾಮಪತ್ರ ಹಿಂತೆಗೆದುಕೊಳ್ಳಲು ಪ್ರಭಾವ ಬೀರಿ, ಲಂಚ ನೀಡಿದ ಆರೋಪ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಮೇಲಿದೆ. ಕಾಸರಗೋಡು ಪೊಲೀಸರು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆ ಸುರೇಂದ್ರನ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 171(ಬಿ) ಮತ್ತು (ಇ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನಲೆ :ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಬಿಎಸ್ ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರ್ ಮಾರ್ಚ್ 22ರಂದು ತಮ್ಮ ನಾಮಪತ್ರ ಹಿಂಪಡೆದಿದ್ದರು. ಕೆ. ಸುಂದರ ಮತ್ತು ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಹೆಸರು ತಾಳೆಯಾಗುವುದರಿಂದ ನಾಮಪತ್ರ ಹಿಂಪಡೆಯುವಂತೆ ಆಮಿಷ ಒಡ್ಡಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ನಾಮಪತ್ರ ಸಲ್ಲಿಸಲು, ಹಿಂಪಡೆಯಲು ಬಿಜೆಪಿ ದುಡ್ಡು ನೀಡಿತ್ತು
ಬಿಜೆಪಿ ನಾಯಕರು ನಾಮಪತ್ರ ಹಿಂಪಡೆದುಕೊಳ್ಳುವಂತೆ ಆಮಿಷವೊಡ್ಡಿದ್ದರು. ನಾನು 15 ಲಕ್ಷ ರೂಪಾಯಿ ಕೇಳಿದ್ದೆ. ಆದರೆ ಅವರು ನನಗೆ ಕೇವಲ 2.5 ಲಕ್ಷ ರೂಪಾಯಿ ಹಾಗೂ 15 ಸಾವಿರ ಮೌಲ್ಯದ ಮೊಬೈಲ್ ಫೋನ್ ನೀಡಿದ್ದರು. ಮಂಜೇಶ್ವರದಲ್ಲಿ ಬಿಜೆಪಿ ಗೆದ್ದರೆ ಕರ್ನನಾಟಕದಲ್ಲಿ ಒಂದು ಮದ್ಯದ ಅಂಗಡಿಗೆ ಅವಕಾಶ ಕೊಡಿಸಬೇಕು ಎಂದು ಕೇಳಿದ್ದರೆ. ಆದರೆ ಚುನಾವಣೆ ಮುಗಿದ ನಂತರ ಯಾರೂ ನನ್ನನ್ನು ಸಂಪರ್ಕಿಸಲಿಲ್ಲ ಎಂದು ಸುಂದರ ಆರೋಪಿಸಿದ್ದರು.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಮತ್ತು ಮಂಜೇಶ್ವರ ಎಲ್‌ಡಿಎಫ್ ಅಭ್ಯರ್ಥಿ ವಿ ವಿ ರಮೇಶನ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಕಾಸರಗೋಡಿನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ – II ಈ ನಿರ್ದೇಶನ ನೀಡಿದೆ.