ಬೆಂಗಳೂರು: ಕೊರೊನಾ ವೈರಸ್ ಎರಡನೇ ಅಲೆಯ ಅಬ್ಬರದಿಂದಾಗಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಲಾಕ್ಡೌನ್ ಹಾಗೂ ಉಚಿತ ಲಸಿಕೆ ವಿಚಾರವಾಗಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು 14 ದಿನಗಳ ಕಾಲ ಪರೋಕ್ಷವಾಗಿ ಲಾಕ್ಡೌನ್ ಘೋಷಣೆ ಮಾಡುವುದರೊಂದಿಗೆ ಆರು ತಿಂಗಳುಗಳ ಕಾಲ ಎಲ್ಲ ಚುನಾವಣೆಯನ್ನು ಮುಂದೂಡಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಬಿಬಿಎಂಪಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಕೆಲ ಪುರಸಭೆ, ನಗರಸಭೆ ಚುನಾವಣೆಗಳು ಆರು ತಿಂಗಳುಗಳ ಕಾಲ ಮುಂದೂಡಿಕೆಯಾಗಲಿದೆ.
ಮೇ ತಿಂಗಳ ಅಂತ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರವಧಿ ಮುಗಿಯಲಿದೆ. ಅಂತಿಮ ಗಡುವಿನೊಳಗೆ ಚುನಾವಣೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿತ್ತು. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮೇ 9ರಂದು ನಡೆಯಲು ದಿನಾಂಕ ನಿಗದಿಯಾಗಿತ್ತು. ಆದರೆ, ಇದೀಗ ಆರು ತಿಂಗಳುಗಳ ಕಾಲ ಎಲ್ಲ ಚುನಾವಣೆ ಮುಂದೂಡಿರುವುದರಿಂದ ಈ ಚುನಾವಣೆ ಮುಂದೂಡಿಕೆಯಾಗಲಿದೆ.