ಬೆಂಗಳೂರು : ಸಾಹಿತ್ಯ ಸಮ್ಮೇಳನದಲ್ಲಿನ ತಾರತಮ್ಯವನ್ನು ಖಂಡಿಸಿ ಕವಿಗೋಷ್ಠಿಯಿಂದ ಅನೇಕ ಕವಿಗಳು ಹಿಂದೆ ಸರಿಯುತ್ತಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಬೇಕಿದ್ದ ಲೇಖಕಿ ಎಚ್.ಆರ್.ಸುಜಾತ, ಕವಿಗೋಷ್ಠಿಯಲ್ಲಿ ಭಾಗವಹಿಸಬೇಕಿದ್ದ ಕವಿಗಳಾದ ಚಾಂದ್ ಪಾಷಾ, ರಮೇಶ್ ಅರೋಲಿ ಹಿಂದೆ ಸರಿಯುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಹಾವೇರಿಯಲ್ಲಿ ಆಯೋಜಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಸಮಕಾಲೀನ ಮಹತ್ವದ ಲೇಖಕ ಲೇಖಕಿಯರ, ಮುಸ್ಲಿಮ್ ಸಮುದಾಯದ ಲೇಖಕರಿಗೆ ಪ್ರಾತಿನಿಧ್ಯ ನೀಡದೆ ತಾರತಮ್ಯ ಮಾಡಲಾಗಿದ್ದು, ಈ ಸಮ್ಮೇಳನದಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಕವಯಿತ್ರಿ, ಲೇಖಕಿ ಎಚ್.ಆರ್.ಸುಜಾತ ತಿಳಿಸಿದ್ದಾರೆ.
ಈ ಸಂಬಂಧ ಕಸಾಪ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ವಿವಿಧ ಗೋಷ್ಠಿಗಳಲ್ಲಿ, ವೇದಿಕೆಗಳಲ್ಲಿ ಕನ್ನಡದ ಸಮಕಾಲೀನ ಮಹತ್ವದ ಲೇಖಕ ಲೇಖಕಿಯರ ಹೆಸರುಗಳೇ ಕಂಡು ಬರುತ್ತಿಲ್ಲ. ಅಲ್ಲದೇ ಕನ್ನಡಿಗರೇ ಆಗಿರುವ ಮುಸ್ಲಿಮ್ ಸಮುದಾಯದ ಲೇಖಕರ ಪ್ರಾತಿನಿಧ್ಯವೇ ಇರುವುದಿಲ್ಲ. ನೂರಾರು ಸಂಖ್ಯೆಯಲ್ಲಿರುವ ಬ್ಯಾರಿ ಸಮುದಾಯದ ಮಹತ್ವದ ಲೇಖಕರನ್ನು ಸಮ್ಮೇಳನದಲ್ಲಿ ಸಂಯೋಜಿಸಿಕೊಂಡಿಲ್ಲ. ಈ ಬಗ್ಗೆ ಕನ್ನಡದ ಹಲವಾರು ಲೇಖಕರು ಪ್ರತಿರೋಧ ವ್ಯಕ್ತಪಡಿಸಿದರೂ ಪರಿಷತ್ನಿಂದ ಯಾವುದೇ ರೀತಿಯ ಸಮಜಾಯಿಷಿ ಹೇಳಿಕೆಗಳೂ ಬಂದಿಲ್ಲ. ಈ ಎಲ್ಲ ಘಟನೆಗಳನ್ನು ನೋಡಿದರೆ ಬ್ಯಾರಿ ಸಮುದಾಯದ ಲೇಖಕರನ್ನು ಸಮ್ಮೇಳನದಿಂದ ಬೇಕೆಂದೇ ದೂರವಿಟ್ಟಿರುವಂತೆ ಮೇಲು ನೋಟಕ್ಕೆ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.
ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ರೀತಿಯ ತಾರತಮ್ಯ ಇರಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ಇಂಥ ತಾರತಮ್ಯದಿಂದ ಕೂಡಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾನು ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಯಲ್ಲಿ ಭಾಗವಹಿಸಿ ಅಧ್ಯಕ್ಷತೆ ವಹಿಸಲು ಕನ್ನಡ ಸಾಹಿತ್ಯ ಪರಿಷತ್ ಗೆ ನನ್ನ ಸಮ್ಮತಿಯನ್ನು ನೀಡಿದ್ದಾಗ ಮುಂದೆ ಈ ರೀತಿಯ ಪರಿಸ್ಥಿತಿ ಉದ್ಭವಿಸಬಹುದು ಎನ್ನುವ ಕಲ್ಪನೆ ನನಗೆ ಇರಲಿಲ್ಲ. ಆದರೆ ಈ ರೀತಿಯ ಬೆಳವಣಿಗೆಗಳು ಘಟಿಸಿ ನನ್ನ ಮನಸ್ಸಿಗೆ ಕಸಿವಿಸಿ ಉಂಟಾಗಿದೆ. ಕವಿ ಗೋಷ್ಠಿಯ ಅಧ್ಯಕ್ಷತೆಗೆ ಒಪ್ಪಿಗೆ ನೀಡಿ ಈಗ ಅಸಮ್ಮತಿ ಸೂಚಿಸುತ್ತಿರುವುದರಿಂದ ನಿಮಗೆ ಆಗಬಹುದಾದ ಮುಜುಗುರಕ್ಕೆ ವಿಷಾದ ವ್ಯಕ್ತ ಪಡಿಸುತ್ತೇನೆ. ಇನ್ನು ಮುಂದೆ ಇಂಥ ಘಟನೆಗಳು ಪುನರಾವರ್ತನೆ ಆಗದಂತೆ ಗಮನ ಹರಿಸಬೇಕು ಎಂದು ಕಸಾಪ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪೆಂಡಾಲ್ ಹೇಳಿಕೆ : ಸಾಕ್ಷಿ ನೀಡುವಂತೆ ಸವಾಲೆಸೆದ ಬಿಳಿಮಲೆ
ಸಮುದಾಯವನ್ನು ದೂರವಿಟ್ಟ ಸಮ್ಮೇಳನದ ಸಂಭ್ರಮ ಸೂತಕವಿದ್ದಂತೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಮ್ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ಕಡೆಗಣಿಸಿರುವುದನ್ನು ಖಂಡಿಸಿ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸುವುದಿಲ್ಲ ಎಂದು ಯುವ ಬರಹಗಾರ, ಕವಿ ಚಾಂದ್ ಪಾಷಾ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, ಮೂರನೇ ಕವಿಗೋಷ್ಟಿಯಲ್ಲಿ ಕವನ ವಾಚಿಸಲು ನನ್ನನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸಮ್ಮೇಳನದ ರೀತಿ ನೀತಿ, ಸಮ್ಮೇಳನಾಧ್ಯಕ್ಷರ ಹಿಂದಿ ರಾಷ್ಟ್ರೀಯ ಭಾಷೆ ಎಂಬ ಹೇಳಿಕೆಗಳು ಖಂಡನೀಯವಾದುದು. ಅಲ್ಲದೆ ಸಮ್ಮೇಳನ ರಾಜಕೀಯ, ಧಾರ್ಮಿಕ ನೆಲೆಗಟ್ಟನ್ನು ಒಳಗೊಂಡಿರುವ ಕಾರಣ ಕವಿ ಗೋಷ್ಠಿಯಿಂದ ಹಿಂದೆ ಸರಿಯುತ್ತೇನೆ. ಜ.8ರ ಜನಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಪ್ರತಿರೋಧ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
‘ಕನ್ನಡ ಸಾಹಿತ್ಯ ಪರಿಷತ್ ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವ ಪ್ರಜ್ಞೆ. ಅದೊಂದು ಜಾತಿ, ಧರ್ಮವನ್ನು ಪ್ರತಿನಿಧಿಸುವ ಮತ್ತು ಧರ್ಮದ ವಿಶೇಷಣವನ್ನು ಹೊತ್ತು ಮೆರೆಸುವ ಧಾರ್ಮಿಕ ಕೇಂದ್ರವಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಪರಿಷತ್ ಸಂಪೂರ್ಣವಾಗಿ ಜಾತಿ ಮತ್ತು ಧರ್ಮ ಕೇಂದ್ರಿತ ಹಾಗೂ ಪುರುಷ ಪ್ರಧಾನತೆಯನ್ನೆ ಪ್ರತಿಪಾದಿಸುವ ಮನುಸಂಸ್ಕೃತಿಯನ್ನು ಚಲಾವಣೆಗೆ ತರಲು ಹಾತೊರೆಯುತ್ತಿರುವುದು ದುರಂತವೇ ಸರಿ. ಮನುಷ್ಯ ಕೇಂದ್ರಿತ ಪ್ರಜ್ಞೆಯನ್ನು ಇಲ್ಲವಾಗಿಸಿ, ಸಮುದಾಯವೊಂದರ ಮೇಲಿನ ರಾಜಕೀಯ ಪ್ರೇರಿತ ದ್ವೇಷವನ್ನು ಇಮ್ಮಡಿಗೊಳಿಸುವ ಹಿಡನ್ ಅಜೆಂಡಾವನ್ನು ಇಟ್ಟುಕೊಂಡು ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು, ‘ಸರ್ವ ಜನಾಂಗದ ಶಾಂತಿಯ ತೋಟ’ಕ್ಕೆ ಬೆಂಕಿ ಹಚ್ಚಿದ ಹಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾವೇರಿಯಂತಹ ಸಾಮರಸ್ಯ ಉಳ್ಳ ಸ್ಥಳದಲ್ಲಿ ನಡೆಯುವ ಸಮ್ಮೇಳನವು ದಲಿತ ಮತ್ತು ಮುಸ್ಲಿಂ ಸಮುದಾಯದ ಬರಹಗಾರನ್ನು ವ್ಯವಸ್ಥತವಾಗಿ ಹೊರಗಿಟ್ಟಿದ್ದು, ಉಡುಪಿ ಮಠದಿಂದ ಕನಕದಾಸನನ್ನು ಹೊರಗಿಟ್ಟ ಹಾಗೆಯೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಥ ದುರಿತ ಕಾಲದಲ್ಲಿ ಸಾಮರಸ್ಯವನ್ನು ಹಬ್ಬಿಸಬೇಕೆ ಹೊರತು, ಅದನ್ನು ಇಲ್ಲವಾಗಿಸುವ ಸಾಹಿತ್ಯ ಸಮ್ಮೇಳವನ್ನು ಬಹಿಷ್ಕರಿಸಿಸುವುದು ಸಾಮಾಜಿಕ ಜವಾಬ್ದಾರಿ ಇರುವ ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ನಾನು ನಂಬುತ್ತೇನೆ. ‘ಹಿಂದಿ ಭಾರತದ ರಾಷ್ಟ್ರೀಯ ಭಾಷೆ’ ಎಂದು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ದೊಡ್ಡರಂಗೇಗೌಡರು ಸಂದರ್ಶನದಲ್ಲಿ ಹೇಳಿದ ಮಾತಿದು. ಇಂಥ ಕನ್ನಡ ಭಾಷಾ ವಿರೋಧಿಯನ್ನು ಅಧ್ಯಕ್ಷ ಸ್ಥಾನದಲ್ಲಿರಿಸುವ ಸಮ್ಮೇಳನದಲ್ಲಿ ಆಹ್ವಾನಿತ ಕವಿಯಾಗಿರುವ ನಾನು ಖಂಡಿತವಾಗಿಯು ಕವಿತೆ ಓದಲಾರೆ, ಭಾಗವಹಿಸಿಲಾರೆ. ಸಮುದಾಯವನ್ನು ದೂರವಿಟ್ಟ ಸಮ್ಮೇಳನದ ಸಂಭ್ರಮ ಸೂತಕದ ಹಾಗೆಯೇ ಇದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ದಲಿತ ಗೋಷ್ಠಿಗೆ ನಿರಾಕರಣೆ : ದಲಿತ ಸಂಘಟನೆಗಳಿಂದ ಮಹೇಶ್ ಜೋಷಿಗೆ ತರಾಟೆ
ಕವಿತೆ ಹಾಡುವ ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ
ಉಪನ್ಯಾಸಕ, ಕವಿ ರಮೇಶ್ ಅರೋಲಿ ಕವಿಗೋಷ್ಠಿಯಿಂದ ಹಿಂದೆ ಸರಿದಿದ್ದಾರೆ. ರಮೇಶ್ ಅರೋಲಿ ತಮ್ಮ ಕವಿತೆಗಳನ್ನು ತಾವೇ ಹಾಡುವ ವಿಶಿಷ್ಟ ಕವಿ. ಪರಿಷತ್ತಿನವರು ಸಮ್ಮೇಳನದಲ್ಲಿ ಹಾಡಬಾರದು ಎಂದು ಸೂಚಿಸಿದ್ದಕ್ಕೆ, ‘ಹಾಗಾದರೆ ನಾನು ಬರುವುದಿಲ್ಲ ‘ ಎಂದು ಖಚಿತ ಪಡಿಸಿದ್ದಾರೆ.
ಹಾವೇರಿಯಲ್ಲಿ ನಡೆಯಲಿರುವ ೮೬ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಎರಡನೆಯ ದಿನ ನಡೆಯಲಿರುವ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲು ನನ್ನನ್ನು ಕೋರಿದ್ದೀರಿ ಮತ್ತು ರಾಯಚೂರು ಜಿಲ್ಲೆಯ ಪ್ರತಿನಿಧಿಯಾಗಿ ನನ್ನನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅಹ್ವಾನ ಪತ್ರಿಕೆಯ ಕೊನೆಯ ಸೂಚನೆಗಳಲ್ಲಿ 2ನೆಯ ನಿಯಮ “ಯಾವುದೇ ಕಾರಣಕ್ಕೂ ವಾದ್ಯಗಳನ್ನು ಬಳಸುವಂತಿಲ್ಲ ಹಾಗೂ ಕವಿತೆಗಳನ್ನು ವಾಚಿಸಬೇಕೇ ಹೊರೆತು ಹಾಡುವಂತಿಲ್ಲ” ಎಂಬ ನಿಯಮ ಹಾಕಿದ್ದೀರಿ. ನಾನು ಯಾವುದೇ ವಾದ್ಯ ಬಳಸದೆ ಕವಿತೆಯನ್ನು ಹಾಡ ಬಯಸುವ ಕಾರಣ, ಮತ್ತು ಬಹುತೇಕ ನನ್ನ ಕವಿತೆಗಳು ಹಾಡುಗವಿತೆ/ಲಯ ದಿಂದ ಕೂಡಿರುವ ಕಾರಣ ಆಹ್ವಾನ ಪತ್ರಿಕೆಯ ಈ ನಿಯಮದ ಎರಡನೆಯ ಭಾಗ ನನ್ನನ್ನು ಕೇವಲ ವಾಚನಕ್ಕೆ ಸೀಮಿತ ಗೊಳಿಸಿ ಕವಿತೆ ಹಾಡುವ ನನ್ನ ಸ್ವಾತಂತ್ರ್ಯವನ್ನು ಮಿತಿ ಗೊಳಿಸಿದೆ ಅನಿಸಿ ನಾನು ಈ ಗೋಷ್ಠಿಗೆ ಬರುವುದಿಲ್ಲ ಎಂದು ಕಸಾಪ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
2016 ರಲ್ಲಿ ರಾಯಚೂರಿನಲ್ಲಿ ನಡೆದ 82 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದ ಪ್ರಧಾನ ಕವಿಗೋಷ್ಠಿಯಲ್ಲಿ ಭಾಗವಹಿಸಿ ನಾನು ನನ್ನ ಕವಿತೆಯನ್ನು ಹಾಡಿದ್ದು ಅದು ಜನ ಮೆಚ್ಚುಗೆ ಪಡೆದಿತ್ತು. ಹಾಡುಗಬ್ಬದ ಜಾಡು ಹಿಡಿದ ನನ್ನ ಕವಿತೆಯನ್ನು ಹೀಗೆ ಪರಿಷತ್ತಿನ ನಿಯಮ ಹೊರಗಿಡುವಂತಿದ್ದರೆ ನಾನು ಇದರಿಂದ ದೂರ ಇರಬಯಸುತ್ತೇನೆ. ಶಿಶುನಾಳ ಷರೀಫ ರು, ಬೇಂದ್ರೆ ಯವರು , ಮಧುರಚೆನ್ನ ರು , ರಾಘವ, ಕರೀಂ ಖಾನ್ ರು , ಕೆ.ಎಸ್ ನರಸಿಂಹಸ್ವಾಮಿ ಯವರು, ನಿತ್ಯೋತ್ಸವ ಹಾಡಿನ ಮೂಲಕ ನಿಸಾರ್ ಅಹ್ಮದ್ ರು, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ರು, ಕಂಬಾರರು ಅಷ್ಟೇ ಅಲ್ಲದೆ ಸಮ್ಮೇಳನದ ಅಧ್ಯಕ್ಷರು ಸಹ ಹಾಡುಗಳ ಮೂಲಕವೇ ಕನ್ನಡಿಗರ ಮನವನ್ನು ತಲುಪಿದ್ದು. ಅನೇಕ ಹಿರಿಯರು ಕಾವ್ಯವನ್ನು ಕಟ್ಟಿದ್ದು ಹಾಡಿನ ರೂಪದಲ್ಲಿ. ಇಂದು ಆ ಹಾಡುಗವಿತೆಯನ್ನು ನಿಗದಿತ ಸಮಯದಲ್ಲಿ ಹಾಡಲು ಪರಿಷತ್ತು ಅನುಮತಿ ಇಲ್ಲದೇ, ಕೇವಲ ವಾಚನಕ್ಕೆ ಮಿತಿಗೊಳಿಸಿದ್ದು ಸರಿಯಲ್ಲ ಅನಿಸಿ ನನ್ನ ಭಾಗವಹಿಸುವಿಕೆಯನ್ನು ಹಿಂಪಡಿಯುತ್ತಿದ್ದೇನೆ. ಯಾರ ಮನಸ್ಸನ್ನು ನೋಯಿಸುವ ಉದ್ದೇಶ ಇಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.