ಬೆಂಗಳೂರು ಫೆ 07 : ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಜಿಲ್ಲಾ, ಗಡಿನಾಡು ಘಟಕದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆ ಮಾಡಲಾಗಿದೆ. ಮೇ 9, 2021 ರಂದು ರಾಜ್ಯಾದ್ಯಂತ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರು ಅವರಿಗೆ ಗೊತ್ತುಪಡಿಸಿರುವ ಮತಗಟ್ಟೆಗಳಲ್ಲಿ ತಮ್ಮ ಮತವನ್ನು ಚಲಾಯಿಸಬಹುದಾಗಿದೆ ಎಂದು ಚುನಾವಣಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕಸಾಪ ಸದಸ್ಯತ್ವ ಪಡೆದು ಮೇ 2021ಕ್ಕೆ ಮೂರು ವರ್ಷವಾಗಿರುವವರು ಮತದಾನಕ್ಕೆ ಅರ್ಹರಾಗಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಚುನಾವಣಾ ದಿನಾಂಕಕ್ಕೆ ಕಸಾಪ ಸದಸ್ಯತ್ವ ಪಡೆದು ಹತ್ತು ವರ್ಷಗಳಾಗಿರಬೇಕು. ಜಿಲ್ಲಾ, ಗಡಿನಾಡು ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಚುನಾವಣಾ ದಿನಾಂಕಕ್ಕೆ ಐದು ವರ್ಷಗಳ ಹಿಂದಿನಿಂದ ಸತತವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು ಎಂಬ ನಿಯಮವಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕರ, ಗಡಿನಾಡು ಘಟಕ ಅಧ್ಯಕ್ಷರ ಚುನಾವಣಾ ಅಭ್ಯರ್ಥಿಗಳ ನಾಮಪತ್ರಗಳನ್ನು ಕೇಂದ್ರ ಚುನಾವಣಾಧಿಕಾರಿಗಳ ಕಚೇರಿಗೆ ಮಾರ್ಚ್ 29, 2021 ಸೋಮವಾರ ದಿಂದ ಎಪ್ರಿಲ್ 07, 2021ರ ಬುಧವಾರದವರೆಗೆ ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ( ರಜಾ ದಿನಗಳನ್ನು ಹೊರತುಪಡಿಸಿ) ನಾಮಪತ್ರವನ್ನು ಸಲ್ಲಿಸಬಹುದಾಗಿದೆ.
ಜಿಲ್ಲಾ ಘಟಕಗಳ ಅಧ್ಯಕ್ಷರ ಚುನಾವಣೆ ಸಂಬಂಧ ನಾಮಪತ್ರಗಳನ್ನು ಆಯಾ ಜಿಲ್ಲಾ ಕೇಂದ್ರದ ತಾಲೂಕು ತಹಶೀಲ್ದಾರ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ನಾಮಪತ್ರದ ನಮೂನೆಗಳನ್ನು ಒಂದು ಪ್ರತಿಗೆ 10 ರೂ ನಂತೆ ಪಾವತಿ ಮಾಡಿ ಕಚೇರಿ ವೇಳೆಯಲ್ಲಿ ಪಡೆಯಬಹುದು. ಈ ಎಲ್ಲಾ ನಾಮಪತ್ರಗಳನ್ನು ದಿನಾಂಕ ಎಪ್ರಿಲ್ 08, 2021ರಂದು ಬೆಳಿಗ್ಗೆ 11 ಗಂಟೆಗೆ ಸಂಬಂಧಿಸಿದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲನೆ ಮಾಡಲಾಗುವುದು. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಎಪ್ರಿಲ್ 12, 2021ರ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶವಿರುತ್ತದೆ.
ಕರ್ನಾಟಕ ರಾಜ್ಯಾದ್ಯಂತ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರು ಅವರಿಗೆ ಗೊತ್ತುಪಡಿಸಿರುವ ಮತಗಟ್ಟೆಗಳಲ್ಲಿ ಮೇ 9, 2021ರಂದು ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತಮ್ಮ ಮತವನ್ನು ಚಲಾಯಿಸಬಹುದಾಗಿದೆ.
ಮೇ 11, 2021ರಂದು ಗಡಿನಾಡು ಘಟಕಗಳ ಅಧ್ಯಕ್ಷರ ಫಲಿತಾಂಶಗಳನ್ನು ಘೋಷಣೆ ಮಾಡಲಾಗುತ್ತದೆ. ಮೇ 12, 2021 ರಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚುನಾವಣಾ ಫಲಿತಾಂಶವನ್ನು ಘೋಷಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಚುನಾವಣೆಗೂ ಮುಂಚಿನಿಂದಲೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಕೊಪ್ಪಳದ ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶೇಖರಗೌಡ ಮಾಲಿಪಾಟೀಲ್ ಸಾಕಷ್ಟು ತಯಾರಿ ನಡೆಸಿದ್ದು, ಈಗಾಗಲೆ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ನಾಡೋಜ ಮಹೇಶ್ ಜೋಷಿ ಕೂಡಾ ಸ್ಪರ್ಧೆಗೆ ಉತ್ಸುಕರಾಗಿದ್ದು ಈಗಾಗಲೆ ಪ್ರಚಾರವನ್ನು ಆರಂಭಿಸಿದ್ದಾರೆ. ಬಂಡಾಯ ಸಾಹಿತ್ಯ ವಲಯದಿಂದ ಮಹಿಳಾ ಸ್ಪರ್ಧಿಯೊಬ್ಬರ ಹೆಸರು ಕೇಳಿ ಬರುತ್ತಿದೆ. ಅವರು ಸ್ಪರ್ಧಿಸಿದ್ದೆ ಆದಲ್ಲಿ ಭಾರೀ ಪೈಪೋಟಿ ನಡೆಯಲಿದೆ.