ಕೇರಳ : ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಅರೆಕಾಲಿಕ ಕಸಗುಡಿಸುವ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು, ಅದೇ ಪಂಚಾಯತ್‌ಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಘಟನೆ ಕೇರಳದ ಪತ್ತನಾಪುರಂ ತಾಲ್ಲೂಕು ಪಂಚಾಯತ್‌ನಲ್ಲಿ ನಡೆದಿದೆ. ಒಟ್ಟು 13 ಸ್ಥಾನಗಳಿರುವ ಪತ್ತನಾಪುರಂ ಬ್ಲಾಕ್ ಪಂಚಾಯತ್‌ನಲ್ಲಿ ಸಿಪಿಐಎಂ ನೇತೃತ್ವದ ಎಲ್‌ಡಿಎಫ್ 7 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 6 ಸ್ಥಾನಗಳನ್ನು ಗೆದ್ದಿತ್ತು.
ಆನಂದವಳ್ಳಿ ಯವರು ಪಂಚಾಯತ್‌ನ ತಲವೂರ್ ಡಿವಿಸನ್‌ನಿಂದ ಸಿಪಿಐಎಂ ಅಭ್ಯರ್ಥಿಯಾಗಿ ಅವರು ಗೆದ್ದಿದ್ದಾರೆ. ಸುಮಾರು 10 ವರ್ಷದಿಂದ ಅದೇ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಅರೆಕಾಲಿಕ ಕಸಗುಡಿಸುವ ಕೆಲಸವನ್ನು ನಿರ್ವಹಿಸುತ್ತಿದ್ದ ಅವರು, ದಿನಕ್ಕೆ 200 ರೂ. ಗಳನ್ನು ಪಡೆಯುತ್ತಿದ್ದರು. ದಿನದ ಉಳಿದ ಸಮಯದಲ್ಲಿ ಅವರು ಕುಡುಂಬಸ್ರೀ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.
ಪಕ್ಷವು ತನಗೆ ವಹಿಸಿದ ಹೊಸ ಜವಾಬ್ದಾರಿಯ ಬಗ್ಗೆ ಸಂತೋಷಗೊಂಡಿರುವ ಅವರು, ತಮ್ಮ ಪಕ್ಷದ ಸದಸ್ಯರು ಮತ್ತು ಆಡಳಿತ ಸಮಿತಿ ಸದಸ್ಯರ ಸಹಾಯದಿಂದ ಉತ್ತಮ ಆಡಳಿತವನ್ನು ಖಚಿತವಾಗಿ ನೀಡುತ್ತೇನೆ ಎಂದು ಹೇಳಿದ್ದಾರೆ. ಆನಂದವಳ್ಳಿಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ. ನೆರೆ ಮನೆಯವರು, ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿ, ಶುಭಾಶಯ ತಿಳಿಸಿದ್ದಾರೆ.