ಬೆಂಗಳೂರು : ಕಸ ನಿರ್ವಹಣೆ ಬಳಕೆದಾರರ ಶುಲ್ಕ ಹೆಚ್ಚಳ ಖಂಡಿಸಿ ಇಂದು ಬೆಂಗಳೂರಿನ ಬಿಬಿಎಂಪಿ ಕಛೇರಿಯ ಎದುರು ಸಿಸಿಪಿಐಎಂ ಪಕ್ಷದಿಂದ ಬಿಬಿಎಂಪಿ ಚಲೋ ಹಮ್ಮಿಕೊಂಡಿತ್ತು. ಕೋವಿಡ್ -19 ಸೋಂಕು ಮತ್ತು ಲಾಕ್ ಡೌನ್ ನಿಂದಾಗಿ ಈಗಾಗಲೇ ಬಾಧಿತರಾಗಿರುವ ಮಹಾನಗರದ ಜನತೆಗೆ ಬಿಬಿಎಂಪಿಯು ಈಗ ಕಸ ನಿರ್ವಹಣೆ ಶುಲ್ಕ ಹೆಚ್ಚಿಸಿ ಮತ್ತುಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಸಂಕಷ್ಟ ಸಂದರ್ಭದಲ್ಲಿ ಬಿಬಿಎಂಪಿಯು ಪ್ರತಿ ಮನೆಗೆ ರೂ 200 ಕಸ ನಿರ್ವಹಣೆಗೆ ಬಳಕೆದಾರರ ಶುಲ್ಕವನ್ನು ವಿಧಿಸಲು ಮುಂದಾಗಿ. ಘನ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಮಂಡಳಿ ರಚಿಸಿ ಅದರ ನಿರ್ವಹಣೆಯನ್ನು ಕಾರ್ಪೋರೇಟ್ ಕಂಪನಿಗಳಿಗೆ ತಾಂತ್ರಿಕ ಪರಿಣಿತಿ ಮತ್ತು ತಜ್ಞತೆಯ ನೆಪದಲ್ಲಿ ವಹಿಸಲು ಹಾಗೂ ಆಡಳಿತಾರೂಢ ಪಕ್ಷದ ರಾಜಕೀಯ ನಿರುದ್ಯೋಗಿಗಳಿಗೆ ಅಧ್ಯಕ್ಷ ಸ್ಥಾನದ ಪುನರ್‌ವಸತಿ ಕಲ್ಪಿಸಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್ ಉಮೇಶ್ ಮಾತನಾಡುತ್ತಾ ಬಿಬಿಎಂಪಿ ಯ ಮೂಲ ಕೆಲಸವಾದ ಕಸ ಸಂಗ್ರಹಣೆಯನ್ನು ಮಂಡಳಿಗೆ ವಹಿಸಿ ಅಧಿಕಾರ ವಿಕೇಂದ್ರೀಕರಣದ ಹಾಗೂ ಅದರಲ್ಲಿ ಜನತೆಯ ಪಾಲ್ಗೊಳ್ಳುವಿಕೆಯನ್ನು ಇಲ್ಲದಾಗಿಸಲು ಮುಂದಾಗಿದೆ. ವಾರ್ಷಿಕ 940 ಕೋಟಿ ರೂಗಳ ವ್ಯವಹಾರಕ್ಕೆ ಘನ ತ್ಯಾಜ್ಯ ಸೆಸ್ ಮೂಲಕ ಕೇವಲ 65 ಕೋಟಿ ರೂಗಳನ್ನು ಬಿಬಿಎಂಪಿ ಯು ಪಾವತಿಸುತ್ತಿದೆ.
ಇಂತಹಸಂದರ್ಭದಲ್ಲಿ ಬಿಬಿಎಂಪಿ ಗೆ ಅದರ ನಿರ್ವಹಣೆ ಹೊಣೆ ಬೇಡವೆಂಬ ವಾದವನ್ನು ಕಾರ್ಪೊರೇಟ್ ಸಂಸ್ಥೆಗಳು ಮಂಡಿಸುತ್ತಿವೆ. ಆದರೆ ಕಸ ನಿರ್ವಹಣೆಯನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಮಂಡಳಿ ವಹಿಸಿಕೊಟ್ಟಲ್ಲಿ ಲಾಭ-ನಷ್ಟ ಲೆಕ್ಕಾಚಾರದಲ್ಲಿ ಪ್ರತಿ ತಿಂಗಳು ಘನ ತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕವು ಹೆಚ್ಚಲಿದೆ. ಈ ಮಂಡಳಿಗೆ ಅನುಕೂಲ ಮಾಡಿಕೊಡಲೆಂದೇ ಈಗಾಗಲೇ ಘನ ತ್ಯಾಜ್ಯ ಸೆಸ್, ಸ್ವಚ್ಛ ಭಾರತ್ ಸೆಸ್ ಮುಂತಾದವನ್ನು ಮಹಾನಗರದ ಜನತೆ ಪಾವತಿಸುತ್ತಿರುವಾಗ ಮತ್ತೊಂದು ಕಸ ನಿರ್ವಹಣೆ ಬಳಕೆದಾರರ ಶುಲ್ಕ ವಿಧಿಸಲು ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಬಿಎಂಪಿ ಮುಂದಾಗಿವೆ ಎಂದು ಆರೋಪಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಗೌರಮ್ಮ, ಕೆ.ಎಸ್.ವಿಮಲಾ, ಕೆ.ಪ್ರಕಾಶ, ಹೆಚ್.ಎನ್. ಗೋಪಾಲಗೌಡ, ಗೋಪಾಲಕೃಷ್ಣ ಅರಳಹಳ್ಳಿ, ಪ್ರತಾಪ್ ಸಿಂಹ, ಲೀಲಾವತಿ ಸೇರಿದಂತೆ ಮಂತಾದವರು ಭಾಗವಹಿಸಿದ್ದರು.