ಕಾರವಾರ : ವೆಂಟಿಲೇಟರ್, ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಸಿಗದ ಹಿನ್ನೆಲೆ ಮೂರು ತಿಂಗಳ ಹಸುಗೂಸೊಂದು ಸಾವನ್ನಪ್ಪಿರುವ ಮನಕಲಕುವ ಘಟನೆ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಸಮಯಕ್ಕೆ ಸರಿಯಾಗಿ ವೆಂಟಿಲೇಟರ್ ಸಿಗದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಕಿನ್ನರ ಮೂಲದ ರಾಜೇಶ್ ಎನ್ನುವವರ ಮಗು ಸಾವನ್ನಪ್ಪಿದೆ.
ಕಾರವಾರದ ಕಿನ್ನರ ನಿವಾಸಿ ರಾಜೇಶ್ ನಾಗೇಕರ್ ಮತ್ತು ರಿಯಾ ನಾಗೇಕರ್ ದಂಪತಿಯ ಮೂರು ತಿಂಗಳ ಗಂಡು ಮಗು ರಾಜನ್‌ಗೆ ಕಫ ಹೆಚ್ಚಾಗಿ ನ್ಯೂಮೋನಿಯಾಗೆ ತಿರುಗಿದ್ದ ಕಾರಣ ಕಳೆದ ಮೂರು ದಿನಗಳಿಂದ ಕಾರವಾರದ ಜಿಲ್ಲಾಸ್ಪತ್ರೆಯ ಪಿಡಿಯಾಟ್ರಿಕ್ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ರಾತ್ರಿ ಏಕಾಏಕಿ ಮಗುವಿನ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಹೀಗಾಗಿ ತಕ್ಷಣ ಉಡುಪಿ ಆಸ್ಪತ್ರೆಗೆ ಕೊಂಡೊಯ್ಯಲು ವೈದ್ಯರು ತಿಳಿಸಿದ್ದಾರೆ. ವೇಳೆ ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲು ವೆಂಟಿಲೇಟರ್, ಅಂಬ್ಯುಲೆನ್ಸ್ ಅಭಾವ ಎದುರಾಗಿದೆ.
ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವೆಂಟಿಲೇಟರ್ ಹೊಂದಿರುವ ಆಂಬ್ಯುಲೆನ್ಸ್ ಇಲ್ಲ. ನಂತರ ಮಗುವಿನ ಪೊಷಕರು ಉಡುಪಿಯಿಂದ ವೆಂಟಿಲೇಟರ್ ತರಿಸಲು ಮುಂದಾಗಿದ್ದಾರೆ. ಆದರೆ ಅಂಬ್ಯುಲೆನ್ಸ್ ಬರುವ ಮುನ್ನ ಪುಟ್ಟ ಕಂದಮ್ಮ ಮೃತಪಟ್ಟಿದ್ದು, ಇದೀಗ ಆಸ್ಪತ್ರೆ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಸ್ಥಳಕ್ಕೆ ಕಾರವಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಮಗುವಿನ ಸಾವಿಗೆ ಕಾರಣ ವೈದ್ಯರ ನಿರ್ಲಕ್ಷ್ಯ ಮತ್ತು ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಪಿಡಿಯಾಟ್ರಿಕ್ ವೆಂಟಿಲೇಟರ್, ಆಂಬ್ಯುಲೆನ್ಸ್ ಸಿಗದೇ ಇರುವುದು ಕಾರಣ ಎಂದು ಆರೋಪಿಸಿ ಪೋಷಕರು ಹಾಗೂ ಸಂಘಟನೆಗಳು ಆಸ್ಪತ್ರೆ ಮುಂದೆ ಮಗುವಿನ ಮೃತ ದೇಹವನ್ನಿಟ್ಟು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪದೇ ಪದೇ ಪ್ರಕರಣಗಳು ಕಾಣಬರುತ್ತಿರುವುದರಿಂದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಹಾಗೂ ಹೋರಾಟಗಾರರು ಒತ್ತಾಯಿಸಿದ್ದಾರೆ.