ಕರ್ನಾಟಕ ವಿವಿಯಲ್ಲಿ ಐಚ್ಛಿಕ ಕನ್ನಡಕ್ಕೆ ಕೊಕ್ಕೆ!?

ಗುರುರಾಜ ದೇಸಾಯಿ
ಪದವಿ ವಿದ್ಯಾರ್ಥಿಗಳ ಪ್ರವೇಶಾತಿ ಇನ್ನೇನು ಆರಂಭವಾಗಲಿದೆ. 2024-25 ನೇ ಸಾಲಿನ ಐಚ್ಛಿಕ ವಿಷಯಗಳ ಆಯ್ಕೆಯಲ್ಲಿ ಕನ್ನಡ ಮರೆಯಾಗುತ್ತಿದೆ ಎಂಬ ಆರೋಪ ಧಾರವಾಡ ವಿಶ್ವವಿದ್ಯಾಲಯದಲ್ಲಿ ಕೇಳಿ ಬಂದಿದೆ. ಕರ್ನಾಟಕ

ಹೌದು ಧಾರವಾಡ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಐಚ್ಚಿಕ ವಿಷಯ ಆಯ್ಕೆಯಲ್ಲಿ ಈ ಮೊದಲು ಇದ್ದಂತೆ ಕನ್ನಡ ಐಚ್ಛಿಕ ಭಾಷೆ ಆಯ್ಕೆಗೆ ಅವಕಾಶ ಕಡಿತಗೊಳಿಸಲಾಗುತ್ತಿದೆ ಎಂದು ಕಾಲೇಜುಗಳಲ್ಲಿ ಚರ್ಚೆಯಾಗುತ್ತಿದೆ. ವಿದ್ಯಾರ್ಥಿ ತನ್ನ ಇಚ್ಛೆಗೆ ಅನುಸಾರವಾಗಿ ಆರಿಸಿಕೊಳ್ಳುವ ಅಧ್ಯಯನ ವಿಷಯಗಳು (ಆಪ್ಷನಲ್ ಸಬ್ಜಕ್ಟ್ಸ್) ಪದವಿ ಶಿಕ್ಷಣದಲ್ಲಿ ಇರುತ್ತವೆ.

ಧಾರವಾಡ ವಿಶ್ವವಿದ್ಯಾಲಯವು 235 ಪದವಿ ಕಾಲೇಜುಗಳನ್ನು ಹೊಂದಿದ್ದು, ಅದರಲ್ಲಿ 31 ಸರ್ಕಾರಿ ಪದವಿ ಕಾಲೇಜುಗಳು, 45 ಅನುದಾನಿದತ ಪದವಿ ಕಾಲೇಜು, 154 ಖಾಸಗಿ ಪದವಿ ಕಾಲೇಜು ಇವೆ. ಈ ಮೊದಲು 3 ಕಾಂಬಿನೇಷನ್ ಗಳಲ್ಲಿ ಕನ್ನಡ ಐಚ್ಛಿಕ ಕಡ್ಡಾಯವಾಗಿತ್ತು. ಇತಿಹಾಸ, ಸಮಾಜ , ಕನ್ನಡ ಒಂದು ಕಾಂಬಿನೇಷನ್ ಆದರೆ, ಇತಿಹಾಸ, ಶಿಕ್ಷಣಶಾಸ್ತ್ರ, ಕನ್ನಡ, ಮತ್ತೊಂದು ಕಾಂಬಿನೇಷನ್, ಇತಿಹಾಸ, ರಾಜ್ಯಶಾಸ್ತ್ರ, ಕನ್ನಡ ಇನ್ನೊಂದು ಕಾಂಬಿನೇಷನ್ ಆಗಿರುತ್ತಿತ್ತು, ಕೆಲ ಕಾಲೇಜುಗಳಲ್ಲಿ ಇತಿಹಾಸ, ಅರ್ಥಶಾಸ್ತ್ರ, ಕನ್ನಡ ಇರುತ್ತಿತ್ತು. ಆದರೆ ಈಗ ಕೇವಲ ಇತಿಹಾಸ, ರಾಜ್ಯಶಾಸ್ತ್ರ, ಕನ್ನಡ ಒಂದು ಕಾಂಬೇನೇಷನ್ ಮಾತ್ರ ಅಳವಡಿಸಿಕೊಳ್ಳುವಂತೆ ಕಾಲೇಜುಗಳಿಗೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮುಂಚೆ ರಾಜ್ಯಶಾಸ್ತ್ರ ಎರಡು ಕಾಂಬಿನೇಷ್‌ನ್‌ಗಳಲ್ಲಿ ಮಾತ್ರ ಕಲಿಯಲು ಅವಕಾಶ ಇತ್ತು, ಈಗ ಎಲ್ಲಾ ಕಾಂಬಿನೇಷನ್‌ಗಳಲ್ಲೂ ರಾಜ್ಯಶಾಸ್ತ್ರವನ್ನು ಕಡ್ಡಾಯ ಮಾಡಿದ್ದಾರೆ. ಕರ್ನಾಟಕ

ಇದನ್ನೂ ಓದಿಕನ್ನಡ ಭಾಷಿಕ ಅಸ್ಮಿತೆಯೂ ಕನ್ನಡಿಗರ ಅಸ್ತಿತ್ವವೂ

ಈ ಕುರಿತು ಧಾರವಾಡ ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ.ಕೆ.ಬಿ.ಗುಡಸಿಯವರ ಜೊತೆ ದೂರವಾಣಿ ಮೂಲಕ ಸಂಪರ್ಕಿಸಿದಾಗ  “ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಿಗೆ ನಾವು ಯಾವುದೆ ಸೂಚನೆಯನ್ನು ನೀಡಿಲ್ಲ, ಅವರಿಗೆ ಇಚ್ಛೆ ಬಂದಂತೆ  ಕಾಂಬಿನೇಷನ್ ಬದಲಿಸುವ ಅವಕಾಶ ಇಲ್ಲ, ಹಾಗೇನಾದರೂ ಕಾಲೇಜುಗಳು ಈ ರಿತಿ ಚರ್ಚೆ ಹುಟ್ಟು ಹಾಕಿದ್ದರೆ, ಈ ಕುರಿತು ಕೂಡಲೇ ಕಾಲೇಜು ಪ್ರಾಂಶುಪಾಲರ ಜೊತೆ ಚರ್ಚೆ ನಡೆಸಿ ಸರಿಪಡಿಸಲಾಗುವುದು ಎಂದರು.

ಇನ್ನೂ ಈ ಚರ್ಚೆಯ ಹಿಂದೆ ಖಾಸಗಿ ಪದವಿ ಕಾಲೇಜುಗಳ ಹುನ್ನಾರವಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ)ರಾಜ್ಯಾಧ್ಯಕ್ಷ ಅಮರೇಶ್ ಕಡಗದ ಆರೋಪಿಸಿದ್ದಾರೆ. ಐಪಿಎಸ್, ಐಎಎಸ್ ಕೋಚಿಂಗ್ ಸೆಂಟರ್ ಹಾಗೂ ಖಾಸಗಿ ಪದವಿ ಕಾಲೇಜುಗಳ ನಡುವೆ ಲಿಂಕ್ ಇದೆ. ಇವರಿಗೆ ಸಹಾಯವಾಗುವಂತೆ ಕಾಂಬಿನೇಷನ್ ಸೃಷ್ಟಿಸಲು ಖಾಸಗಿ ಕಾಲೇಜುಗಳು ಹವಣಿಸುತ್ತಿವೆ. ಪದವಿಯಲ್ಲಿ ರಾಜ್ಯ ಶಾಸ್ತ್ರ, ಇತಿಹಾಸ ತೆಗೆದುಕೊಂಡರೆ ಸರಳವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು ಎಂಬ ವಾದವನ್ನು ಖಾಸಗಿ ಕಾಲೇಜುಗಳು ಸೃಷ್ಟಿಸಿವೆ. ಇದು ಹೊಸ ಶಿಕ್ಷಣ ನೀತಿ ತಂದೊಡ್ಡಿದ ಅಪಾಯ ಎಂದು ಆರೋಪಿಸಿದರು. ಕರ್ನಾಟಕ

ಪದವಿ ಕಾಲೇಜುಗಳಲ್ಲಿ ಪಾಠ ಮಾಡುತ್ತಿರುವ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಈಗ ವರ್ಗಾವಣೆಗೆ ಅರ್ಜಿ ಹಾಕಿದ್ದಾರೆ. ಅವರಿಗೆ ಅನುಕೂಲವಾಗುವಂತೆ ಕಾಂಬಿನೇಷನ್ಗಳನ್ನು ರೂಪಿಸಲಾಗುತ್ತಿದೆ ಎಂದು ಪೋಷಕರ ಸಂಘಟನೆಯ ಮಹೇಶ್ ಪತ್ತಾರ್ ಆರೋಪಿಸಿದ್ದಾರೆ.

ಶಿಕ್ಷಣದಲ್ಲಿ ಕನ್ನಡದ ಸ್ಥಾನ ಎಂದಿನಿಂದಲೂ ಚರ್ಚೆಯ ವಿಷಯವಾಗಿದೆ. ಕನ್ನಡ ಸಾಹಿತ್ಯ, ಭಾಷಾ ವಿಜ್ಞಾನ, ಪರಂಪರೆ ಹೀಗೆ ಕನ್ನಡ ಅಧ್ಯಯನವನ್ನು ಕಲಿಯಲು ಸಾಧ್ಯವಿದೆ. ಸರ್ಕಾರಿ ವಿ.ವಿಗಳಲ್ಲೇ ಐಚ್ಚಿಕ ಕನ್ನಡ ಮತ್ತು ಭಾಷಾ ಬೋಧನೆಗೆ ನಿಖರವಾದ ಒಂದು ನೀತಿಯಿಲ್ಲದಿರುವುದು ಕನ್ನಡದ ಅವನತಿಯನ್ನು ತೋರಿಸುತ್ತದೆ. ಐಚ್ಛಿಕ ಕನ್ನಡ ತೆಗೆದುಕೊಂಡರೆ ನಿಮಗೆ ಉದ್ಯೋಗವೇ ಸಿಗುವುದಿಲ್ಲ ಎಂದು ವಿದ್ಯಾರ್ಥಿಗಳ ತಲೆಗೆ ತುಂಬುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನವಹಿಸಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸಬೇಕಿದೆ. ಕನ್ನಡ ಭಾಷೆಯ ಕುರಿತು ಆಕಾಶ ಮುಗಿಲು ಒಂದಾಗುವಂತೆ ಮಾತನಾಡುವವರು ಈಗ ಬಾಯಿ ಬಿಡಬೇಕಿದೆ.

 

 

Donate Janashakthi Media

Leave a Reply

Your email address will not be published. Required fields are marked *