– ನವೀನ್ ಸೂರಿಂಜೆ
ಸೀತಾರಾಂ ಯೆಚೂರಿ ಮತ್ತು ಕರ್ನಾಟಕದ ಮಧ್ಯೆ ಒಂದು ಬಿಡಿಸಲಾರದ ಬಾಂಧವ್ಯವಿದೆ. ಕರ್ನಾಟಕ ಸೀತಾರಂ ಯೆಚೂರಿಯವರ ಹುಟ್ಟೂರೇನೋ ಎಂದು ಅನುಮಾನ ಬರುವಂತೆ ಅವರು ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸುತ್ತಿದ್ದರು. ಕರ್ನಾಟಕದಲ್ಲಿ ನಡೆಯುವ ಕೋಮು, ಜಾತಿ, ಭೂಮಾಲಕರು, ಬಂಡವಾಳಶಾಹಿಗಳ ದೌರ್ಜನ್ಯದ ವಿರುದ್ದ ಪ್ರಖರವಾಗಿ ಮಾತನಾಡುತ್ತಿದ್ದರು ಮಾತ್ರವಲ್ಲದೇ ದೂರದ ದೆಹಲಿಯಿಂದ ಬಂದು ಸ್ಥಳಕ್ಕೆ ಭೇಟಿ ಕೊಟ್ಟು ಸಂತ್ರಸ್ತರಿಗೆ ಧೈರ್ಯ ತುಂಬುತ್ತಿದ್ದರು.
2016 ಜುಲೈ 25 ರಂದು ಸೀತಾರಾಂ ಯೆಚೂರಿಯವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ದೆಹಲಿ ರಾಜಕಾರಣದಲ್ಲಿ ಆತ್ಮೀಯರಾಗಿರುವ ಕರ್ನಾಟಕ ಮೂಲದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸೀತಾರಾಂ ಯೆಚೂರಿಯವರಿಗೆ ಫೋನ್ ಮಾಡಿದರು. “ನೀವು ಬೆಂಗಳೂರಲ್ಲೇ ಬೇಕಾದರೆ ಒಂದು ಪ್ರೆಸ್ ಮೀಟ್ ಮಾಡಿ. ದಯವಿಟ್ಟು ಹಾಸನಕ್ಕೆ ಹೋಗಬೇಡಿ. ದಲಿತರ ದೇವಸ್ಥಾನ ಪ್ರವೇಶ ರಾಜಕೀಯ ಬೇರೆ ಇದೆ” ಎಂದು ದೇವೇಗೌಡರು ಮನವಿ ಮಾಡುತ್ತಾರೆ. ಸೀತಾರಾಂ ಯೆಚೂರಿ ಈ ಮನವಿಗೆ ಕ್ಯಾರೇ ಅನ್ನುವುದಿಲ್ಲ. “ದೇವೇಗೌಡರೇ, ಇದು ನಮ್ಮ ಪಾರ್ಟಿ ನಿರ್ಧಾರ. ಏನು ನಿರ್ಧಾರವಾಗಿದೆಯೋ ಹಾಗೆಯೇ ಮಾಡುತ್ತೇನೆ” ಎನ್ನುತ್ತಾರೆ.
ಹೊಳೆನರಸೀಪುರದ ಸೀಗರನಹಳ್ಳಿಯಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಬಾರದು. ದಲಿತರು ಪ್ರವೇಶಿಸಿದ ದೇವಸ್ಥಾನಕ್ಕೆ ಸವರ್ಣಿಯರು ಬರುವುದಿಲ್ಲ ಎಂಬ ವಿವಾದ ಎದ್ದಿತ್ತು. ದೇವೇಗೌಡರ ಪುತ್ರ ಮಾಜಿ ಸಚಿವ, ಹಾಲಿ ಶಾಸಕ ಎಚ್ ಡಿ ರೇವಣ್ಣ ಸವರ್ಣಿಯರ ಪರ ಬಲವಾಗಿ ನಿಂತಿದ್ದರು. ಎಚ್ ಡಿ ರೇವಣ್ಣ ಯಾವ ಕಡೆ ಇದ್ದಾರೋ ಯಾವ ಸರ್ಕಾರವಾದರೂ ಆ ಕಡೆಯೇ ವಾಲುತ್ತದೆ. ಸಿಪಿಐಎಂ ದಲಿತರ ದೇವಸ್ಥಾನ ಪ್ರವೇಶ ಹೋರಾಟ ಕೈಗೆತ್ತಿಕೊಂಡಿತ್ತು. ಒಂದು ಸಣ್ಣ ಹಳ್ಳಿಯಲ್ಲಿನ ದೇವಸ್ಥಾನ ಪ್ರವೇಶ ಹೋರಾಟಕ್ಕೆ ಸಿಪಿಐಎಂ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಭಾ ಸದಸ್ಯ ಸೀತಾರಾಂ ಯೆಚೂರಿ ಬಂದಿದ್ದರು.
”ಸಾಮಾಜಿಕ ವ್ಯವಸ್ಥೆಯೊಳಗೆ ಯಾವುದೇ ಜಾತಿ, ಮತ ಬೇಧ ತರುವುದು ಸರಿಯಲ್ಲ. ಸಂವಿಧಾನ ದತ್ತವಾಗಿ ಬಂದ ಹಕ್ಕುಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಸಮಾಜದ ಎಲ್ಲ ವರ್ಗದ ಮೇಲಿದೆ. ಸಂವಿಧಾನದ ದೃಷ್ಟಿಯಲ್ಲಿ ಮಾನವೀಯತೆ ಉಳ್ಳ ಎಲ್ಲರೂ ಸಮಾನರು. ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್‌ರ 125ನೇ ಜನ್ಮದಿನ ಆಚರಿಸುತ್ತಿರುವ ಇಂದಿಗೂ ದಲಿತ ವಿರೋಧಿ ನೀತಿ ಜೀವಂತ ಇರಿಸಿರುವುದು ವಿಷಾದನೀಯ.” ಎಂದು ಹೇಳಿದ ಸೀತಾರಾಂ ಯೆಚೂರಿಯವರು ದೇವೇಗೌಡರ ಕುಟುಂಬದ ಪಾಳೇಗಾರಿಕೆಯನ್ನೂ ಪ್ರಸ್ತಾಪಿಸಿದರು.
ಮಂಗಳೂರಿನ ಬೆಳ್ತಂಗಡಿಯ ಕುಗ್ರಾಮದಲ್ಲಿ ಸುಂದರ ಮಲೆಕುಡಿಯ ಎಂಬ ದಲಿತ ಆದಿವಾಸಿ ಕೃಷಿಕರ ಕೈಯನ್ನು ಭೂಮಾಲಕನೊಬ್ಬನು ಕಡಿದ ಪ್ರಕರಣ ನಡೆದಾಗ ರಾಜ್ಯಸಭಾ ಸದಸ್ಯ ಸೀತಾರಾಂ ಯೆಚೂರಿ ಮಂಗಳೂರಿಗೆ ಭೇಟಿ ನೀಡಿದ್ದರು. ಸುಂದರ ಮಲೆಕುಡಿಯರನ್ನು ಕರಾವಳಿಯ ಶಾಸಕರು, ಸಂಸದರೇ ನಿರ್ಲಕ್ಷಿಸಿದ್ದ ಸಮಯದಲ್ಲಿ ದೂರದ ದೆಹಲಿಯಿಂದ ಬಂದು 2015 ಸೆಪ್ಟೆಂಬರ್ 03 ರಂದು ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿ ಸಾಂತ್ವಾನ ಹೇಳಿದ್ದರು. ಬಳಿಕ ಸ್ಥಳದಲ್ಲಿದ್ದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳರನ್ನು ಉದ್ದೇಶಿಸಿ “ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ವಿರಮಿಸಬಾರದು. ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ನಾನೂ ರಾಜ್ಯಸಭೆಯಲ್ಲಿ ಈ ವಿಷಯವನ್ನು ಮಾತನಾಡುತ್ತೇನೆ” ಎಂದರು. ಅರೆಸ್ಟ್ ಆಗಲು ಸಾಧ್ಯವೇ ಇಲ್ಲ ಎಂಬಂತಿದ್ದ ರಾಜಕಾರಣಿಯೂ ಆಗಿದ್ದ ಪ್ರಭಾವಿ ಭೂಮಾಲಕ ಹೋರಾಟದ ಫಲವಾಗಿ ಅರೆಸ್ಟ್ ಆಗಲೇಬೇಕಾಯಿತು.
ಕರಾವಳಿಯಲ್ಲಿ ಕೋಮುವಾದಿಗಳು ನಡೆಸುವ ಅನೈತಿಕ ಗೂಂಡಾಗಿರಿಯನ್ನು ಸೀತಾರಂ ಯೆಚೂರಿ ಹಲವು ಬಾರಿ ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕರ್ನಾಟಕದ ಸಂಸದರು ಯೆಚೂರಿ ಮಾತಿಗೆ ‘ಟೇಬಲ್ ಗುದ್ದಲೂ’ ಹಿಂದೆ ಮುಂದೆ ನೋಡುತ್ತಿದ್ದರು. ಆದರೆ ಸೀತಾರಾಂ ಯೆಚೂರಿ ಕರ್ನಾಟಕದಲ್ಲಿ ನಡೆಯುವ ಕೋಮು ದೌರ್ಜನ್ಯವನ್ನು ‘ದೇಶದ ಸಮಸ್ಯೆ’ ಎಂದು ಪರಿಗಣಿಸಿ ಮಂಡಿಸಿದ್ದಾರೆ.
“ಕರ್ನಾಟಕದಲ್ಲಿ ಗೋಮಾಂಸ ಭಕ್ಷಣೆ ಹೆಸರಿನಲ್ಲಿ ನಡೆಯುವ ದಾಳಿಗಳು, ಮುಸ್ಲಿಮರ ಮನೆಗಳ ಮೇಲೆ ದಾಳಿ, ಜನರು ತಿನ್ನುವ ಆಹಾರವನ್ನು ಪರಿಶೀಲಿಸುವುದು ಮತ್ತು ಜನರನ್ನು ಕೊಲ್ಲುವುದು ದೇಶದಲ್ಲಿ ‘ಆಹಾರ ತುರ್ತು’ ವಾತಾವರಣವನ್ನು ಸೃಷ್ಟಿಸಿದೆ” ಎಂದು ಕರ್ನಾಟಕದ ಉದಾಹರಣೆಯನ್ನೂ ಕೊಟ್ಟು ಯೆಚೂರಿ ರಾಜ್ಯಸಭೆಯಲ್ಲಿ ಹೇಳಿದ್ದರು. ಇದು ಗದ್ದಲಕ್ಕೆ ಕಾರಣವಾಗಿತ್ತು. ಯೆಚೂರಿ ಅದನ್ನು ರಾಜ್ಯಸಭೆಯಲ್ಲಿ ಏಕಾಂಗಿಯಾಗಿ ಎದುರಿಸಿದ್ದರು.
ಶ್ರೀರಾಮ ಸೇನೆಯನ್ನು ನಿಷೇದ ಮಾಡಬೇಕು ಎಂದು ಸದನದಲ್ಲಿ ಪ್ರಸ್ತಾಪಿಸಿದ್ದ ಸೀತಾರಾಂ ಯೆಚೂರಿ, ಶ್ರೀರಾಮ ಸೇನೆ ಕರ್ನಾಟಕದಲ್ಲಿ ನಡೆಸುವ ದೇಶದ್ರೋಹಿ ಚಟುವಟಿಕೆಗಳು, ದ್ವೇಷದ ರಾಜಕಾರಣ, ದೇಶದ ಐಕ್ಯತೆಗೆ ಉಂಟಾಗಿರುವ ಅಡ್ಡಿಯ ಬಗ್ಗೆ ಸುಧೀರ್ಘವಾಗಿ ಮಾತನಾಡಿದ್ದರು.
ವಿಠಲ ಮಲೆಕುಡಿಯ ಬಂಧನವಾದಾಗ ಸೀತಾರಾಂ ಯೆಚೂರಿ ಮಾತನಾಡಿದ್ದರು. ಪತ್ರಕರ್ತನಾದ ನಾನು ಆರ್ ಎಸ್ ಎಸ್ ನ ಹತ್ತಾರು ನೈತಿಕ ಪೊಲೀಸ್ ಗಿರಿಯನ್ನು ಬಯಲು ಮಾಡಿ 43 ಹಿಂಜಾವೇ ಕಾರ್ಯಕರ್ತರು ಅರೆಸ್ಟ್ ಆಗುವಂತೆ ಮಾಡಿದ್ದಕ್ಕಾಗಿ ಸೇಡಿ ಕ್ರಮವಾಗಿ 2012 ರ ಬಿಜೆಪಿ ಸರ್ಕಾರ ನನ್ನನ್ನು ಜೈಲಿಗೆ ತಳ್ಳಿತ್ತು. ಈ ಸಂದರ್ಭದಲ್ಲೂ ಸೀತಾರಾಂ ಯೆಚೂರಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ, ಕೋಮುವಾದದ ವಿರುದ್ದ ನಿಂತು ನನ್ನನ್ನು ಬೆಂಬಲಿಸಿದ್ದರು.
2014 ಆಗಸ್ಟ್ 16 ರಂದು ನಾನು ಮತ್ತು ಸೀತಾರಾಂ ಯೆಚೂರಿ ಬೆಂಗಳೂರಿನಲ್ಲಿ ಒಂದೇ ವೇದಿಕೆಯಲ್ಲಿ ಇದ್ದೆವು. ನಯನ ಸಭಾಂಗಣದಲ್ಲಿ ‘ಜನಶಕ್ತಿ’ ವಾರಪತ್ರಿಕೆ ವತಿಯಿಂದ ಏರ್ಪಡಿಸಿದ್ದ ‘ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದೆವು. “ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳ ಒಡೆತನ ಬಲಿಷ್ಠರ ಕೈಯಲ್ಲೇ ಕೇಂದ್ರೀಕೃತವಾಗಿರುವುದರಿಂದ ಜನಸಾಮಾನ್ಯರು ನಿರ್ಧರಿಸಬೇಕಾದ ಸಂಗತಿಗಳನ್ನು ಬಂಡವಾಳಶಾಹಿಗಳು ನಿರ್ಧರಿಸಿ ನಿಯಂತ್ರಿಸುತ್ತಿದ್ದಾರೆ. ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ಸುದ್ದಿಗಳ ವೈಭವೀಕರಣ ಹೆಚ್ಚುತ್ತಿದೆ. ದಲಿತರ ಮೇಲಿನ ದೌರ್ಜನ್ಯ, ಮಾನವ ಹಕ್ಕು ಉಲ್ಲಂಘನೆಗಳಂತಹ ಸಮಸ್ಯೆಗಳು ನೈಜಸುದ್ದಿಯ ಕೇಂದ್ರಬಿಂದುವಾಗಿ ಉಳಿದಿಲ್ಲ. ಮುಕ್ತ, ನ್ಯಾಯಸಮ್ಮತ ಹಾಗೂ ನಿಖರ ಮಾಹಿತಿ ನೀಡುವ ಮಾಧ್ಯಮದ ಮೂಲಗುಣ ನೇಪಥ್ಯಕ್ಕೆ ಸರಿದಿದೆ’ ಎಂದು ಭಾಷಣ ಮಾಡಿದ್ದ ನೆನಪು. ಕಾರ್ಯಕ್ರಮ ಮುಗಿದ ಬಳಿಕ ‘ನಿಮ್ಮ ಮೇಲಿನ ಕೇಸ್ ಏನಾಯ್ತು ?’ ಎಂದು ವಿಚಾರಿಸಿದ್ದರು.
ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಕೋಮುವಾದಿಗಳಿಂದ ಕೊಲೆಯಾದಾಗ ರಾಷ್ಟ್ರಮಟ್ಟದಲ್ಲಿ ಖಂಡನೆ ವ್ಯಕ್ತವಾಗಲು ಸೀತಾರಾಂ ಯೆಚೂರಿಯವರೂ ಒಂದು ಕಾರಣ. ನಾವುಗಳು ಸಂಘಟಿತರಾಗಿ ಗೌರಿ ಸಮಾವೇಶ ನಡೆಸಿದಾಗ ಆ ಸಮಾವೇಶದಲ್ಲಿ ಪಾಲ್ಗೊಂಡು ಕನ್ನಡಿಗರ ‘ಕೋಮುವಾದದ ವಿರುದ್ದದ ಹೋರಾಟಕ್ಕೆ’ ಬೆಂಬಲ ಸೂಚಿಸಿದ್ದರು. ಎಂ ಎಂ ಕಲಬುರ್ಗಿಯವರ ಕೊಲೆ ನಡೆದ ಬಳಿಕ ಯೆಚೂರಿಯವರು ರಾಷ್ಟ್ರಾಧ್ಯಂತ ಎಲ್ಲೇ ಭಾಷಣ ಮಾಡಿದರೂ ಉಲ್ಲೇಖ ಮಾಡುತ್ತಿದ್ದರು.
ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ನಡೆದ ಭೂಸ್ವಾಧೀನ, ಕೋಕ್ ಸಲ್ಫರ್ ಘಟಕಗಳ ಮಾಲಿನ್ಯ, ಸ್ಥಳೀಯರಿಗೆ ಉದ್ಯೋಗ ಕೊಡದ ಬಂಡವಾಳಶಾಹಿ ವ್ಯವಸ್ಥೆ, ಎಂಆರ್ ಪಿಎಲ್ ಮಾಲಿನ್ಯ ವಿಷಯಗಳ ಬಗ್ಗೆಯೂ ಸೀತಾರಾಂ ಯೆಚೂರಿ ಧ್ವನಿ ಎತ್ತಿದ್ದಾರೆ.
ಇಂತಹ ಹಲವು ವಿಷಯಗಳಲ್ಲಿ ಕನ್ನಡಿಗರ ಮೇಲೆ ಆಗುವ ದೌರ್ಜನ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರಶ್ನಿಸಲು ಯಾರೂ ಇಲ್ಲವೇ ಎಂಬ ಪ್ರಶ್ನಾರ್ಥಕ ನೋವು ಕಾಡಿದಾಗ ಸೀತಾರಾಂ ಯೆಚೂರಿಯವರು ಬಂದು ಅಪ್ಪಿಕೊಳ್ಳುತ್ತಿದ್ದರು. ಸೀತಾರಾಂ ಯೆಚೂರಿಯವರ ನಿಧನ ಸೌಹಾರ್ಧ ಕರ್ನಾಟಕಕ್ಕೊಂದು ಅಭದ್ರ ಭಾವನೆ ಮೂಡಿಸುವುದು ಸುಳ್ಳಲ್ಲ. ಹೋಗಿ ಬನ್ನಿ ಯೆಚೂರಿಯವರೇ, ಕರ್ನಾಟಕ ಮೂಲೆ ಮೂಲೆಯಲ್ಲಿನ ದಲಿತರು, ಶೋಷಿತರು, ಅಲ್ಪಸಂಖ್ಯಾತರು ಸದಾ ನಿಮ್ಮನ್ನು ಸ್ಮರಿಸುತ್ತಾರೆ.