– ಡಾ. ಮೀನಾಕ್ಷಿ ಬಾಳಿ
ಕನ್ನಡ ನಾಡವರು ಕೇವಲ ತಾತ್ವಿಕವಾಗಿ ಮಾತ್ರ ಸಾಮರಸ್ಯ ಹೇಳಲಿಲ್ಲ. ಬದುಕಿನ ಪ್ರತಿ ಹಂತದಲ್ಲಿಯೂ ಧರ್ಮ ಸಮನ್ವಯತೆಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಊರಿನ ಜಾತ್ರೆ, ಹಬ್ಬಗಳಲ್ಲಿಯೂ ಇದನ್ನು ಕಾಣುತ್ತೇವೆ. ಸುರಪೂರಿನ ತಿಂತಣಿ ಮೋನಪ್ಪಯ್ಯನ ಜಾತ್ರೆಯಲ್ಲಿ ಬ್ರಾಹಣರಾದಿ ದಲಿತ, ಮುಸ್ಲಿಂ ಎಲ್ಲರೂ “ಏಕ ಲಾಕ್ ಪಾಚೋ ಪೀರ್ ಪೈಗಂಬರ ಕಾಶಿಪತಿ ಗಂಗಾಧರ ಹರಹರ ಮಹದೇವ” ಎಂದೇ ಜಯಕಾರ ಹಾಕುತ್ತಾರೆ. ಕಲಬುರಗಿಯ ಸೂಫಿ ಸಂತ ಖಾಜಾ ಬಂದೇ ನವಾಜರ ಉರುಸ್ ಗೆ ಶರಣಬಸವೇಶ್ವರ ಸಂಸ್ಥಾನದಿಂದ ಹೂ, ಚಾದರ್ ನೇಮ ಸಲ್ಲಿಸಿದರೆ ಶರಣಬಸವನ ಜಾತ್ರೆಗೆ ದರ್ಗಾದಿಂದ ಗಂಧ, ಶಲ್ಯ ಬರುತ್ತದೆ. ಗದಗ ತೋಟದಾರ್ಯ ಮಠದ ಜಾತ್ರೆಗೆ ಮುಸ್ಲಿಂ ಬಂಧುಗಳ ಉಸ್ತುವಾರಿ ಇದ್ದರೆ ಕಲಬುರಗಿಯ ಗೋಗಿಯ ಚಂದಾಪೀರನ ಉರುಸಿನಲ್ಲಿ ಗೌಡರಿಗೆ ಜಾಜ ಇರುತ್ತದೆ. ಕೊಡೆಕಲ್ ಬಸವಣ್ಣನ ಗದ್ದುಗೆಯಲ್ಲಿ ದಲಿತರು ಪೂಜೆಗೆಂದು ನೀರು ತರುತ್ತಾರೆ. ಮುಸ್ಲಿಂರು ಹೂವಿನ ಸೇವೆ ಮಾಡುತ್ತಾರೆ. ಜಂಗಮರು ವಚನ ಪಠಿಸುತ್ತಾರೆ.
ಯಂ ಶೈವಾಸ್ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ
ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕರ್ತೇತಿ ನೈಯ್ಯಾಯಿಕಾಃ||
ಅರ್ಹನ್ನಿತ್ಯಥ ಜೈನ ಶಾಸನ ರತಾಃ ಕರ್ಮೇತು ಮೀಮಾಂಸಕಃ
ಸೋsಯವೋ ವಿಧಧಾತು ವಾಂಛಿತ ಫಲಂ ಕೇಶವೇಶಸ್ಸದಾ||
ಕ್ರಿ.ಶ. 1050 ರಲ್ಲಿ ರಚನೆಯಾದ ಬೇಲೂರಿನ ಶಾಸನವೊಂದರಲ್ಲಿ ಧರ್ಮ ಸಮನ್ವಯತೆಯನ್ನು ಹೀಗೆ ಎತ್ತಿ ತೋರಿಸಲಾಗಿದೆ. ಶೈವರು ಶಿವನೆಂದು, ವೇದಾಂತಿಗಳು ಬ್ರಹ್ಮನೆಂದು, ಬೌದ್ಧರು ಬುದ್ಧನೆಂದು, ನೈಯಾಯಿಕರು ಶಬ್ದ ಪ್ರಮಾಣವೆನ್ನುವ, ಜೈನರು ಜಿನನೆಂದು ಮೀಮಾಂಸಕರು ಕರ್ತೃ-ಕರ್ಮವೆಂದು ಯಾವ ಶಕ್ತಿಯನ್ನು ಆರಾಧಿಸುತ್ತಾರೋ ಅದು ಕೇಶವನೇ ಆಗಿದ್ದು, ಸಕಲರಿಗೂ ಇಚ್ಛಿತ ಫಲವನ್ನು ನೀಡುತ್ತಿದೆ ಎಂಬ ನಂಬಿಕೆ ಇಲ್ಲಿದೆ. ಇರುವ ಒಂದೇ ಸತ್ಯಕ್ಕೆ ನಾಮ ಹಲವು. ಮಾರ್ಗ ಹಲವು. ಆಚರಣೆ, ವಿಧಿ, ವಿಧಾನ ಏನೇ ಇರಲಿ ಎಲ್ಲವೂ ಮನುಷ್ಯರನ್ನು ಒಂದು ಆತ್ಯಂತಿಕ ಸ್ಥಿತಿಯತ್ತ ನಡೆಸುತ್ತವೆ ಎನ್ನುತ್ತಾರೆ ದಾರ್ಶನಿಕರು. ಅಂದರೆ ಆ ಕಾಲಕ್ಕಾಗಲೇ ಕರ್ನಾಟಕ ಒಳಗೊಂಡಂತೆ ಭಾರತದಲ್ಲಿ ಹತ್ತಾರು ಪಂಥಗಳು, ಲೆಕ್ಕವಿಲ್ಲದಷ್ಟು ದಾರ್ಶನಿಕ ಧಾರೆಗಳು ಅಸ್ತಿತ್ವಗೊಂಡಿದ್ದವು. ಜನರು ಹಲವು ನಂಬಿಕೆಗಳಲ್ಲಿ ಹಂಚಿ ಹೋಗಿದ್ದರು. ಆದರೆ ಎಲ್ಲರ ಹುಟ್ಟು, ಸಾವು, ಬದುಕಿನ ತತ್ವಗಳು ಮಾತ್ರ ಏಕವಾಗಿದ್ದವಲ್ಲ. ನೆಲದ ಮೇಲಿನ ಬದುಕು ಎಲ್ಲರಿಗೂ ಒಂದೇ. ಮತ್ತು ಅದು ಮಾತ್ರ ಏಕೈಕ ಸತ್ಯವಾಗಿತ್ತು. ಬದುಕು ನಂಬಿಕೆಯ ಸಂಗತಿಯಲ್ಲ. ಅದು ವಾಸ್ತವ. ಹುಟ್ಟು-ಸಾವುಗಳ ಮಧ್ಯದ ಬದುಕು ಬಹಳ ಮುಖ್ಯ ಮತ್ತು ನಿತ್ಯ ಸತ್ಯವು ಆಗಿದೆ. ಹುಟ್ಟಿದ ಎಲ್ಲರಿಗೂ ಬದುಕುವ ಸಮಾನ ಹಕ್ಕು ಮತ್ತು ಅವಕಾಶವನ್ನು ನಿಸರ್ಗ ನೀಡಿದೆ. ನಿಸರ್ಗ ಮಡಿಲಿನಲ್ಲಿ ಸಚರಾಚರ ಜೀವಿಗಳೆಲ್ಲ ಸಮಾನವಾಗಿವೆ.
ವಿಕಸಿತ ಮೆದುಳು ಹೊಂದಿದ ಮನುಷ್ಯ ಪ್ರಾಣಿಗಳು ತಮಗಾಗಿ ಹತ್ತಾರು ಸಂಗತಿಗಳನ್ನು ಗುಡ್ಡೆ ಹಾಕಿಕೊಂಡಿವೆ. ಹೀಗೆ ಗುಡ್ಡೆ ಹಾಕೊಕೊಂಡ ಸಂಗತಿಗಳಲ್ಲಿ ಧರ್ಮವು ಒಂದು. ಮನುಷ್ಯರ ಅದಮ್ಯ ಕುತೂಹಲ ಮತ್ತು ದಣಿವರಿಯದ ಅನ್ವೇಷಣೆಯಿಂದಾಗಿ ಭೂಮಿಯ ಮೇಲೆ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಅತ್ಯಂತ ಪ್ರಾಚೀನ ಕಾಲದಿಂದಲೂ ಭಾರತವೆಂಬ ಭೂಪ್ರದೇಶದಲ್ಲಿ ಮಾನವ ವಾಸವು ಅಸ್ತಿತ್ವಗೊಂಡಿದ್ದರಿAದ ಇಲ್ಲಿ ಕಾಲಕಾಲಕ್ಕೂ ಹಲವು ಧರ್ಮ, ಮತ, ಪಂಥಗಳು ಹುಟ್ಟಿಕೊಂಡಿವೆ. ಹೊರಗಿನಿಂದಲೂ ಅನೇಕ ಧರ್ಮಗಳು ಹರಿದು ಬಂದಿವೆ. ಹೀಗೆ ಹರಿದು ಬಂದ ಧರ್ಮಗಳು ಕೂಡ ಸ್ಥಳೀಯ ಮತ, ಪಂಥಗಳೊAದಿಗೆ ಕೊಡು-ಕೊಳೆ ನಡೆಸಿ ಸಾಮರಸ್ಯದ ಬಾಳನ್ನು ಹೂಡಿವೆ. ಕ್ರಮೇಣ ಧರ್ಮಗಳನ್ನು ಗುತ್ತಿಗೆ ತೆಗೆದುಕೊಂಡ ಪುರೋಹಿತರು ಮತ್ತು ನಿಸರ್ಗ ಸಂಪತ್ತಿನ ಮೇಲೆ ತಮ್ಮದೆ ಆಧಿಪತ್ಯ ಸ್ಥಾಪಿಸಬೇಕೆಂದು ಹಪಹಪಿ ಉಳ್ಳವರು ಧರ್ಮ ಮತ್ತು ದೇವರುಗಳನ್ನು ದುರ್ಬಳಕೆ ಮಾಡಿಕೊಂಡರು. ತಮ್ಮ ಧರ್ಮ ಮಾತ್ರ ಶ್ರೇಷ್ಠ ಉಳಿದವು ಅಪ್ರಯೋಜಕ ಎಂದು ವಾದಿಸತೊಡಗಿದರು. ಇಂಥವರೇ ಧರ್ಮಾಂಧರಾಗಿ, ಮೂಲಭೂತವಾದಿಗಳಾಗಿ ತಮ್ಮ ಮತ, ಪಂಥಗಳಲ್ಲದವರನ್ನು ದಮನಿಸುವ ಕ್ರೂರತನಕ್ಕೆ ಇಳಿದರು. ಮನುಷ್ಯರ ಒಳಿತಿಗಾಗಿ ಹುಟ್ಟಿದ ಧರ್ಮಗಳು ಮನುಷ್ಯರ ಮಾರಣ ಹೋಮಕ್ಕೆ ಕಾರಣವಾದವು. ದಾರ್ಶನಿಕರು ಮಾತ್ರ ಧರ್ಮಾಂಧರ ಈ ನಡೆಗಳನ್ನು ಖಂಡಿಸುತ್ತಲೆ ಬಂದರು. ಕರ್ನಾಟಕದಲ್ಲಿಯಂತೂ ಧರ್ಮ ಸಮನ್ವಯಕಾರರು ಇಡೀ ದೇಶಕ್ಕೆ ಮಾದರಿಯಾಗುವಂತೆ ಬಾಳಿ ಹೋಗಿದ್ದಾರೆ.
ಸಾಮರಸ್ಯದ ತಾತ್ವಿಕತೆ
ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗದಲ್ಲಿ “ಕಸವರಮೆಂಬುದು ನೆರೆ| ಸೈರಿಲಾರ್ಪೊಡೆ ಪರವಿಚಾರಮಂ ಧರ್ಮಮುಮಂ| ಕಸವೇಂ ಕಸವರಮೇನುಬ್ಬಸಮಂ ಬಸಮಲ್ಲದಿರ್ದು ಮಾಡುವುವೆಲ್ಲಂ||” ಎಂದು ಹೇಳಲಾಗಿದೆ. ಇದರರ್ಥ, ಇತರರ ವಿಚಾರವನ್ನು ಧರ್ಮವನ್ನು ಸಹಿಸಿಕೊಳ್ಳುವುದೇ ನಿಜವಾದ ಬಂಗಾರ. ಇಂತಹ ಗುಣವಿಲ್ಲದಿದ್ದರೆ ಬಂಗಾರವೂ ಕಸವೇ. ತನ್ನ ಧರ್ಮವನ್ನು ಪಾಲಿಸಬೇಕು. ಇತರ ಧರ್ಮವನ್ನು ಗೌರವಿಸಬೇಕು. ಹೀಗೆ ಬದುಕುವುದೇ ನಿಜವಾದ ಆಧ್ಯಾತ್ಮ ಎಂದು ರಾಮಕೃಷ್ಣ ಪರಮಹಂಸರು ಬೋಧಿಸಿದರು.
ಸಂಪತ್ತಿನ ಮೇಲೆ ತಮ್ಮದೆ ಒಡೆತನ ಸಾಧಿಸಬೇಕೆಂಬ ಸತ್ತಾವಾದಿಗಳು ಪುರೋಹಿತರೊಂದಿಗೆ ಸೇರಿ ದೇವರು ಮತ್ತು ಧರ್ಮದ ಹೆಸರಿನಿಂದ ಜನಸಾಮಾನ್ಯರ ಮಧ್ಯೆ ಎಷ್ಟೆಲ್ಲ ಭೇದಗಳನ್ನು ಸೃಷ್ಟಿಸಿ ಸ್ವಾರ್ಥ ಸಾಧಿಸಬೇಕೆಂದು ಪ್ರಯತ್ನ ಪಟ್ಟರೂ ಅದುಸಾಧ್ಯವಾಗಲಿಲ್ಲ. ಜನಸಾಮಾನ್ಯರು ಮತ್ತು ನಿಜವಾದ ದಾರ್ಶನಿಕರು ಸಮತೆ, ಮಮತೆಗಳೆ ಜೀವನದ ಪರಮ ಸಾಧನ ಎಂದು ಹೇಳಿದಷ್ಟೇ ಅಲ್ಲ ಅದನ್ನು ಬದುಕಿಯೂ ತೋರಿದರು. ಈಗಲೂ ಕರ್ನಾಟಕದ ತುಂಬ ಹರಿದಾಡುತ್ತಿರುವ ಭಾವೈಕ್ಯದ ನೆಲೆ, ನಂಬಿಕೆಗಳನ್ನು ಕಾಣಬಹುದು.
ಬಾದಾಮಿ ಚಾಲುಕ್ಯ ದೊರೆ ವಿಜಯಾದಿತ್ಯನು ಶಕವರ್ಷ 621ರಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿಮೂರ್ತಿ ದೇವಾಲಯ ಕಟ್ಟಿಸುತ್ತಾನೆ. ಹರಿಹರ ಸಮನ್ವಯದ ಮೂರ್ತಿಗಳಂತೂ ಕನ್ನಡ ನಾಡಿನ ಉದ್ದಕ್ಕೂ ದೊರೆಯುತ್ತವೆ. ರಾಷ್ಟ್ರಕೂಟರ 3ನೇ ಜಯಸಿಂಹನ ಅಕ್ಕ ಅಕ್ಕಾದೇವಿ ಎಂಬಾಕೆ ಬೌದ್ಧ, ಜೈನ, ಶೈವ, ವೈಷ್ಣವ ಎಲ್ಲ ಧರ್ಮಗಳ ಪ್ರಕ್ರಿಯೆಗಳನ್ನು ತಾನೇ ಸ್ವತಃ ಆಚರಿಸುತ್ತಿದ್ದಳೆಂದು ಶಾಸನ ಹೇಳುತ್ತದೆ. ಮೈಸೂರು ಅರಸರಂತೂ ಅದೇ ಆಗ ತಾನೇ ಕನ್ನಡ ನಾಡಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಮುಸ್ಲಿಂ ಧರ್ಮವನ್ನು ಪುರಷ್ಕರಿಸಿ ಅವರಿಗಾಗಿ ಮಸೀದಿ ಕಟ್ಟಿಸಿಕೊಟ್ಟಿದ್ದನ್ನು ಶಾಸನಗಳು ಉಲ್ಲೇಖಿಸುತ್ತವೆ. ಅದಕ್ಕಾಗಿಯೇ ಶಾಸನದಲ್ಲಿ ಕರ್ನಾಟಕವನ್ನು ‘ಬಹುಧರ್ಮಧೇನು ನಿವಹಕ್ಕಾಡಂಬೊಲ’ ಎಂದು ಹೇಳಲಾಗಿದೆ. ಅಂದರೆ ಹಲವು ಧರ್ಮಗಳೆಂಬ ಆಕಳುಗಳು ಆರಾಮವಾಗಿ ಮೇಯುವ ಹುಲುಸಾದ ಭೂಮಿ ಇದು ಎಂದರ್ಥ.
ಹೀಗಾಗಿಯೇ ಸೂಫಿಗಳ ಮೂಲಕ ಬಂದ ಇಸ್ಲಾಂ, ಮಿಷನರಿಗಳ ಸೇವೆಯ ಮೂಲಕ ಪ್ರಸರಿಸಿದ ಕೈಸ್ತ ಧರ್ಮಗಳು ಇಲ್ಲಿನ ಶೈವ, ವೈಷ್ಣವ, ಬೌದ್ಧ, ಜೈನಗಳೊಂದಿಗೆ ಸಂಕರಗೊಂಡು ಸ್ಥಳೀಯ ಸಂಸ್ಕೃತಿಯಲ್ಲಿ ಲೀನವಾದವು. ಎಲ್ಲವುಗಳನ್ನು ಕಲಸು ಮೇಲೋಗರ ಮಾಡಿಕೊಂಡ ವಿಶಿಷ್ಠ ಜೀವನ ವಿಧಾನವೊಂದನ್ನು ಕರ್ನಾಟಕ ಒಳಗೊಂಡಂತೆ ಭಾರತೀಯರು ಅಪ್ಪಿಕೊಂಡರು. ಆದ್ದರಿಂದ ಇವರಿಗೆ ಹರಿ-ಹರ-ಹಜರತ್ ರಲ್ಲಿ ಯಾವ ಭೇದ ಕಾಣಿಸಲಿಲ್ಲ. ಶಿವ, ವಿಷ್ಣು, ಅಲ್ಲಾ, ಏಸು, ನಿರಾಕಾರ ಎಲ್ಲವನ್ನು ಏಕವಾಗಿಸುವ ಇವರ ಮಾನಸಿಕ ಪಕ್ವತೆ, ಜೀವನಾನುಭವ, ಪ್ರಾಯೋಗಿಕ ದಾರ್ಶನಿಕೆಗಳು ವಿಶ್ವಕ್ಕೆ ಮಾದರಿಯಾಗಿ ನಿಂತಿವೆ. ಇದನ್ನೆ ವಿವೇಕಾನಂದ ಚಿಕ್ಯಾಗೋನಲ್ಲಿ ಹೇಳಿ ವಿಶ್ವವ್ಯಾಪಿ ಮೆಚ್ಚುಗೆ ಪಡೆದುಕೊಂಡರು.
ಸಾಮರಸ್ಯ ತಾತ್ವಿಕವಾಗಿ ಮಾತ್ರವಲ್ಲ, ಆಚರಣೆಯಲ್ಲೂ
ಕನ್ನಡ ನಾಡವರು ಕೇವಲ ತಾತ್ವಿಕವಾಗಿ ಮಾತ್ರ ಸಾಮರಸ್ಯ ಹೇಳಲಿಲ್ಲ. ಬದುಕಿನ ಪ್ರತಿ ಹಂತದಲ್ಲಿಯೂ ಧರ್ಮ ಸಮನ್ವಯತೆಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಊರಿನ ಜಾತ್ರೆ, ಹಬ್ಬಗಳಲ್ಲಿಯೂ ಇದನ್ನು ಕಾಣುತ್ತೇವೆ. ಸುರಪೂರಿನ ತಿಂತಣಿ ಮೋನಪ್ಪಯ್ಯನ ಜಾತ್ರೆಯಲ್ಲಿ ಬ್ರಾಹಣರಾದಿ ದಲಿತ, ಮುಸ್ಲಿಂ ಎಲ್ಲರೂ “ಏಕ ಲಾಕ್ ಪಾಚೋ ಪೀರ್ ಪೈಗಂಬರ ಕಾಶಿಪತಿ ಗಂಗಾಧರ ಹರಹರ ಮಹದೇವ” ಎಂದೇ ಜಯಕಾರ ಹಾಕುತ್ತಾರೆ. ಕಲಬುರಗಿಯ ಸೂಫಿ ಸಂತ ಖಾಜಾ ಬಂದೇ ನವಾಜರ ಉರುಸ್ ಗೆ ಶರಣಬಸವೇಶ್ವರ ಸಂಸ್ಥಾನದಿಂದ ಹೂ, ಚಾದರ್ ನೇಮ ಸಲ್ಲಿಸಿದರೆ ಶರಣಬಸವನ ಜಾತ್ರೆಗೆ ದರ್ಗಾದಿಂದ ಗಂಧ, ಶಲ್ಯ ಬರುತ್ತದೆ. ಗದಗ ತೋಟದಾರ್ಯ ಮಠದ ಜಾತ್ರೆಗೆ ಮುಸ್ಲಿಂ ಬಂಧುಗಳ ಉಸ್ತುವಾರಿ ಇದ್ದರೆ ಕಲಬುರಗಿಯ ಗೋಗಿಯ ಚಂದಾಪೀರನ ಉರುಸಿನಲ್ಲಿ ಗೌಡರಿಗೆ ಜಾಜ ಇರುತ್ತದೆ. ಕೊಡೆಕಲ್ ಬಸವಣ್ಣನ ಗದ್ದುಗೆಯಲ್ಲಿ ದಲಿತರು ಪೂಜೆಗೆಂದು ನೀರು ತರುತ್ತಾರೆ. ಮುಸ್ಲಿಂರು ಹೂವಿನ ಸೇವೆ ಮಾಡುತ್ತಾರೆ. ಜಂಗಮರು ವಚನ ಪಠಿಸುತ್ತಾರೆ. ನಮ್ಮ ನಾಡಿನ ಪ್ರತಿ ಹಳ್ಳಿಗಳ ಜಾತ್ರೆಗಳಲ್ಲಿ ದೇವರು ಹಿಂದೂ, ಮುಸ್ಲಿಂ, ದಲಿತ, ಹಿಂದುಳಿದ ಜಾತಿ ಹೀಗೆ ಯಾವುದೇ ಮತಾಚಾರಕ್ಕೆ ಸೇರಿರಲಿ. ಗ್ರಾಮಸ್ಥರು ಮಾತ್ರ ಎಲ್ಲ ದೇವರ ಜಾತ್ರೆಗಳಲ್ಲಿ ಭಾಗವಹಿಸುತ್ತಾರೆ.
ಉತ್ತರ ಕರ್ನಾಟಕದಲ್ಲಿಯಂತೂ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಎರಡು ಸಮುದಾಯದವರು ಭರ್ಜರಿಯಾಗಿ ಆಚರಿಸುತ್ತಾರೆ. ಮೊಹರಂ ಆಚರಿಸುವೆಡೆಯಲ್ಲಿ ಗ್ರಾಮದ ಎಲ್ಲರ ಮನೆಯಿಂದ ಕಾಯಿ, ಕರ್ಪೂರ, ನೈವೇದ್ಯ, ಚಾದರ್ ತಪ್ಪದೆ ಬರುತ್ತದೆ. ದಕ್ಷಿಣ ಕರ್ನಾಟಕದ ಕರಗ ಆಚರಣೆಯಲ್ಲಿ ಕರಗದ ಮೂರ್ತಿಯನ್ನು ಶೃಂಗರಿಸುವಲ್ಲಿ ಮುಸ್ಲಿಂ ಪಾತ್ರ ಹಿರಿದು. ಗ್ರಾಮ ದೇವತೆಯ ಜಾತ್ರೆಗೆ ಮದುವೆಯಾಗಿ ಬೇರೆ ಊರಿಗೆ ಹೋಗಿದ್ದ ಲಿಂಗಾಯತ, ದಲಿತ, ಕುರುಬ, ಕಬ್ಬಲಿಗ, ಮುಸ್ಲಿಂ, ಅಲೆಮಾರಿ ಎಲ್ಲ ಸಮುದಾಯದ ಹೆಣ್ಣುಮಕ್ಕಳು ತಪ್ಪದೆ ಬರುತ್ತಾರೆ. ಬಳೆ ತೊಟ್ಟು, ಬೆಂಡು ಬತ್ತಾಸು ಖರೀದಿಸಿಯೇ ತಮ್ಮೂರಿಗೆ ಮರಳುತ್ತಾರೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡಮುಗಳಿ ಎಂಬ ಹಳ್ಳಿಯ ಮಹಿಳೆಯರು ವಿದೇಶದಲ್ಲಿದ್ದರೂ ಮೊಹರಂ ಹಬ್ಬಕ್ಕೆ ಊರಿಗೆ ಬಂದ ಉದಾಹರಣೆಗಳಿವೆ. ಕಡಕೋಳ ಮಡಿವಾಳಪ್ಪನವರ ಜಾತ್ರೆಗೆ ದುಬೈನಲ್ಲಿದ್ದ ಎಲ್ಲ ಮುಸ್ಲಿಂ ಬಾಂಧವರು ತಪ್ಪದೆ ದೇಣಿಗೆ ನೀಡುತ್ತಾರೆ. ಬೆಳಗಾಂವ ಜಿಲ್ಲೆ ಸಾವಳಗಿ ಶಿವಲಿಂಗನ ರುಮಾಲು ಹಸಿರು. ಆತನ ಸನ್ನಿಧಿಗೆ ಮಣಿಯದ ಜಾತಿ, ಧರ್ಮಗಳೇ ಇಲ್ಲ. ಆಳಂದ ತಾಲೂಕಿನ ಗೋಳ್ಯಾದ ಲಕ್ಕಮ್ಮನ ಜಾತ್ರೆಯಲ್ಲಿ ಮಾಡುವ ಸ್ವಾದಿಷ್ಟ ಮಾಂಸದಡಿಗೆ ಉಣ್ಣದವರೇ ಇಲ್ಲ. ಇಂದಿಗೂ ಗಣಪತಿಯ ಮೂರ್ತಿಗಳನ್ನು ದೊಡ್ಡ ಮಟ್ಟದಲ್ಲಿ ತಯಾರಿಸುವವರು ಮುಸ್ಲಿಂ ಬಂಧುಗಳೇ.
ಕನ್ನಡ ತತ್ವಪದಗಳಂತೂ ಸರ್ವ ಜನಾಂಗದ ದರ್ಶನ ಸಾರವಾಗಿವೆ. ಕನ್ನಡ ನಾಡಿನಲ್ಲಿ ಅಸ್ತಿತ್ವದಲ್ಲಿರುವ ಪ್ರತಿ, ಮತ, ಪಂಥದ ಅನುಭಾವಿಗಳು ತತ್ವಪದಗಳನ್ನು ಬರೆದಿದ್ದಾರೆ. ಅದರಲ್ಲಿಯೂ 20ಕ್ಕೂ ಹೆಚ್ಚು ಮುಸ್ಲಿಂ ಕವಿಗಳು ಬಹು ಮಹತ್ವದ ಪದ ರಚಿಸಿದ್ದಾರೆ. ಪಿಂಜಾರ ಬಡೇಸಾಬನು ರಾಮದಾಸನಾಗಿ ಕೀರ್ತನೆಗಳನ್ನು ರಚಿಸಿ ಸೈ ಎನಿಸಿಕೊಂಡಿದ್ದಾನೆ. ‘ಅನುಭಾವ’ ಎಂಬುದು ಅಂತರಂಗದ ಮುತ್ತು. ಇದಕ್ಕೆ ಜಾತಿ, ಧರ್ಮ, ಭಾಷೆ, ಪ್ರದೇಶ, ಗಡಿಗಳ ಹಂಗಿಲ್ಲ ಎಂಬುದನ್ನು ಸಾಕ್ಷಾತ್ಕರಿಸಿದವರು ಈ ತತ್ವಪದಕಾರರು. ಚೆನ್ನೂರು ಜಲಾಲ ಸಾಹೇಬನು ‘ಸಬ್ ಕೆಹೆತೆ ಹೈ ಈಶ್ವರ ಅಲ್ಲಾ | ಇದರ ಭೇದ ಯಾರಿಗೆ ತಿಳಿದಿಲ್ಲ| ಹಿಂದೂ ಮುಸ್ಲಿಂ ಶಾಸ್ತ್ರ ಪಡತೆ ಹೈ| ಗುರುಮನಿ ಕೀಲ ಸಿಗಲಿಲ್ಲ| ಹೀಗೆ ಉರ್ದು ಮಿಶ್ರಿತ ಶೈಲಿಯಲ್ಲಿ ಪದಗಳನ್ನು ಬರೆದು ಭಾಷಾ ಬಾಂಧವ್ಯ ಮೆರೆದಿದ್ದಾರೆ. ಕನ್ನಡ, ಉರ್ದು, ಮರಾಠಿ, ಹಿಂದಿ, ತೆಲಗು ಹಲವು ಗಡಿ ಭಾಷೆಗಳ ಮಿಶ್ರಣದಲ್ಲಿ ರಚನೆಯಾದ ನೂರಾರು ಪದಗಳು ಕನ್ನಡವರ ಮುಕ್ತ ಚಿಂತನಾ ಪ್ರಸ್ಥಾನಗಳನ್ನು ಎತ್ತಿ ತೋರಿಸುತ್ತಿವೆ. ಕನ್ನಡ ನಾಡಿನ ವಾಸ್ತುಶಿಲ್ಪ, ಸಂಗೀತ, ಚಿತ್ರಕಲೆ ಎಲ್ಲ ಸಾಂಸ್ಕೃತಿಕ ವಿನ್ಯಾಸಗಳಲ್ಲಿ ಹಿಂದೂ ಮುಸ್ಲಿಂ ಕೊಡುಕೊಳುವಿಕೆ ಸಹಜವೆಂಬಂತೆ ಮೂಡಿ ಬಂದಿದೆ. ಜನಪದರು ತಮ್ಮ ಬದುಕಿನ ಸಹಜ ನಡೆಯಾಗಿ, ಪ್ರಾಯೋಗಿಕ ಜೀವನ ಚಹರೆಯಾಗಿ ಸಮನ್ವಯತೆಯನ್ನು ಸಾಧಿಸಿಕೊಂಡು ಬರುತ್ತಿದ್ದಾರೆ.
ದಾಳಿಕಾರಂಗೆ ಧರ್ಮವುಂಟೆ?
ಆದರೆ ಇತ್ತೀಚಿನ ದಿನಗಳಲ್ಲಿ ದ್ವೇಷವನ್ನೆ ತಮ್ಮ ಸಿದ್ಧಾಂತವಾಗಿಸಿಕೊಂಡಿರುವ ಸಂಘ ಪರಿವಾರಿಗಳು ನಮ್ಮ ಪಾರಂಪರಿಕ ಸಾಮರಸ್ಯವನ್ನು ಹಾಳು ಮಾಡಿ ಬಿಟ್ಟಿದ್ದಾರೆ. ಬಿಜೆಪಿ ಎಂಬ ಕೋಮುವಾದಿ ಪಕ್ಷ ದೇಶದ ಚುಕ್ಕಾಣಿ ಹಿಡಿದಾಗಿನಿಂದಲೂ ಬಾಳಿನ ಕಣಕಣದಲ್ಲಿಯೂ ದ್ವೇಷ, ವೈರತ್ವ, ಹಿಂಸೆ, ಜಾತಿಯತೆ, ಮತಾಂಧತೆಗಳನ್ನು ಯುವಕರ ಧಮನಿ ಧಮನಿಗಳಲ್ಲಿ ಕಸಿ ಮಾಡುತ್ತಿದ್ದಾರೆ. ಹುಸಿ ರಾಷ್ಟಿçಯತೆಯ ನೆಪದಲ್ಲಿ ಮುಸ್ಲಿಂ ವಿರೋಧಿ ವಿಷಾನಿಲವನ್ನು ಎಲ್ಲೆಲ್ಲೂ ಹರಡುತ್ತಿದ್ದಾರೆ. ಹಿಂದೂತ್ವದಲ್ಲಿ ಹೆಸರಲ್ಲಿ ದೇಶದ ಶತಮಾನಗಳ ಜೀವನ ವಿಕಾಸದ ಫಲಶ್ರುತಿಯಾದ ಬಹುತ್ವವನ್ನು ಮೂರಾಬಟ್ಟೆ ಮಾಡುತ್ತಿದ್ದಾರೆ. ಈ ಹಿಂದೂತ್ವವಾದಿಗಳು ನಿಜವಾಗಿ ಧರ್ಮ ನಿಷ್ಟರೆಂದು ಯಾರಾದರೂ ಭಾವಿಸಿದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ. ಅವರಿಗೆ ಧರ್ಮವು ತಮ್ಮ ಬಂಡವಾಳಶಾಹಿ ಪರ ನೀತಿಯನ್ನು ಮರೆಮಾಚಲು ಇರುವ ಅಸ್ತ್ರ, ದೇಶದ ಸಂಪತ್ತಿನ ಮೇಲೆ ಕೆಲವೊಬ್ಬರೆ ಹಕ್ಕು ಸಾಧಿಸಬೇಕೆಂಬ ದುರ್ಭಾವದ ವಿಷ ಜಂತುಗಳಿಗೆ ಅಮಾಯಕರು ಬಲಿಯಾಗಬೇಕು.
ಅಲ್ಲಮ ಪ್ರಭು ಒಂದೆಡೆ ಹೇಳುವಂತೆ “ಅಗ್ನಿಗೆ ತಂಪುಂಟೆ, ವಿಷಕ್ಕೆ ರುಚಿಯುಂಟೆ, ದಾಳಿಕಾರಂಗೆ ಧರ್ಮವುಂಟೆ? ಹೌದು ಈ ಕೋಮುವಾದಿ ಸಂಘ ಪರಿವಾರದವರಿಗೆ ಅಸಲಿಗೆ ಮನುಷ್ಯತ್ವವೇ ಇಲ್ಲ. ಗೋರಕ್ಷಣೆ, ಹಿಜಾಬ್, ಆಜಾನ್, ತಲಾಕ್, ಟೀಪ್ಪೂ ಸುಲ್ತಾನ, ಮುಸ್ಲಿಂ ವ್ಯಾಪಾರಿಗಳ ನಿರ್ಬಂಧ, ಮದರಸಾ ಹೀಗೆ ದಿನಬೆಳಗಾದರೆ ಇಲ್ಲದ ಉಪದ್ವಾಪಗಳನ್ನು ಸೃಷ್ಟಿಸಿ, ಅವುಗಳನ್ನು ಟ್ರಿಗರ್ ಮಾಡಲೆಂದೆ ಸುಳ್ಳು ವಿಡೀಯೋಗಳ ಸೃಷ್ಟಿಸಿ, ಬೆಲೆ ಏರಿಕೆ, ಬ್ರಹ್ಮಾಂಡ ಭ್ರಷ್ಟತೆ, ಭಯಂಕರ ನಿರುದ್ಯೋಗ, ಹೆಚ್ಚುತ್ತಿರುವ ವೇಶ್ಯಾವಾಟಿಕೆ, ದೇಶಭಕ್ತಿ ಹೆಸರಿನ ಹಿಂಸೆಗಳು, ಸಂಸ್ಕೃತಿ ರಕ್ಷಣೆ ಹೆಸರಿನಲ್ಲಿ ಮಹಿಳೆಯರ ಮೇಲಿನ ಬರ್ಬರಿಕ ದಾಳಿಗಳು, ಎಲ್ಲ ಬಗೆಯ ಸಬ್ಸಿಡಿಗಳ ಹಿಂತೆಗೆತ, ರೈತ, ಕಾರ್ಮಿಕರ ವಿರೋಧಿ ಕಾನೂನುಗಳು, ಕೂಲಿಕಾರ್ಮಿಕರ ಎಂಟು ತಾಸಿನ ಬದಲು 12 ತಾಸು ದುಡಿತ ಲೆಕ್ಕವಿಲ್ಲದಷ್ಟು ದುಷ್ಟತನದ ನಡಾವಳಿಗಳು. ಫ್ಯಾಸಿಜಂನ ಬರ್ಬರಿಕ ದಾಳಿಗಳನ್ನು ನಾವು ಪ್ರಭುತ್ವ ಪ್ರೇರಿತ ಹತ್ಯಾಕಾಂಡಗಳಲ್ಲಿ ಕಾಣುತ್ತಿದ್ದೇವೆ.
ಧರ್ಮವೆಂಬ ಅಮಲು ತಲೆಯೊಳಗೆ, ಮಧ್ಯದ ನಶೆ ಮೈಯೊಳಗೆ
ಸಾಮಾಜಿಕ ಜಾಲತಾಣಗಳಂತೂ ಕೋಮುವ್ಯಾಧಿಗಳ ಪೈಖಾನಾ ಎಂಬಂತಾಗಿದೆ. ತೋರಿಕೆಗೆ ಮುಸ್ಲಿಂ ವಿರೋಧ. ಆಳದಲ್ಲಿ ಇರುವುದೇ ದಲಿತ ವಿರೋಧಿ ಗುರಿ ಎಂಬುದನ್ನು ಮರೆಯದಿರೋಣ. ಈಗಾಗಲೇ ಹಲವಾರು ಬಿಜೆಪಿ ಸಂಸದ, ಶಾಸಕರು ತಾವು ಬಾಬಾಸಾಹೇಬರು ರಚಿಸಿದ ಸಂವಿಧಾನವನ್ನು ಬದಲಿಸಲೆಂದೆ ಬಂದಿದ್ದೇವೆ. ಮನುಸ್ಮೃತಿಯೇ ನಮ್ಮ ಸಂವಿಧಾನ ಮಾಡುತ್ತೇವೆ ಎಂದು ಖುಲ್ಲಂಖುಲ್ಲಾ ಹೇಳಿದ್ದಾರೆ. ಸಂಘ ಪರಿವಾರದ ನಡೆ ಟೀಕಿಸಿದವರೆಲ್ಲ ರಾಷ್ಟ್ರದ್ರೋಹಿಗಳು. ಸರಕಾರದ ಕೈಗೊಂಬೆಯಾಗಿರುವ ಇಡಿ, ಆಯ್.ಟಿ ಅಷ್ಟೇ ಏಕೆ ನ್ಯಾಯಾಂಗವನ್ನು ಕೋಮುವಾದಿಗಳು ಆಕ್ರಮಿಸಿಕೊಳ್ಳದೆ ಬಿಟ್ಟಿಲ್ಲ ಎಂಬುದಕ್ಕೆ ಇತ್ತೀಚೆಗೆ ಹೊರಬರುತ್ತಿರುವ ಜನವಿರೋಧಿ ತೀರ್ಪುಗಳೆ ಸಾಕ್ಷಿ.
ಚುನಾವಣೆ ಎಂಬದು ದುಷ್ಟರ ಅಟ್ಟಹಾಸವಾಗಿ ಈಗಾಗಲೇ ಮೇರೆ ಮೀರಿದೆ. ಮನುವಾದಿಗಳು ಯಾವತ್ತೂ ಜನೋಪಯೋಗಿ ಕೆಲಸಗಳ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಅವರಿಗೆ ಜನ ಎಂದರೆ ಜಾತಿಗಳು ಮಾತ್ರ. ದುಡಿಯುವ ಜನಗಳು ಪಾಪಿಷ್ಟರು. ಅವರು ಮೇಲ್ವರ್ಗ, ಮೇಲ್ವರ್ಗದವರಿಗೆ ಸೇವೆ ಮಾಡಲೆಂದೆ ಹುಟ್ಟಿದ್ದಾರೆ. ಅದು ಅವರ ಕರ್ಮ. ಇವರ ಸೇವೆ ಮಾಡುತ್ತ ಅನ್ನವಿಲ್ಲದೆ ಒದ್ದಾಡಿ ಸತ್ತರೆ ಶೂದ್ರರಿಗೆ ಮುಕ್ತಿ ಸಿಗುತ್ತದೆ ಎಂದು ನಂಬಿಸುವ ಈ ಮತಾಂಧರಿಗೆ ಧರ್ಮಗಳೆಂಬ ಭಾವನಾತ್ಮಕ ಅಂಶಗಳೇ ಆಧಾರ. ಧರ್ಮ, ಸಂಸ್ಕೃತಿ, ರಾಷ್ಟ್ರಪ್ರೇಮ ಇಂಥ ಅಮೂರ್ತ ಭಾವನೆಗಳ ಮೂಲಕವೇ ಜನರನ್ನು ಮರುಳು ಮಾಡಬಲ್ಲರು. ಧರ್ಮವೆಂಬ ಅಮಲು ತಲೆಯೊಳಗೆ, ಸೆರೆ, ಸೇಂದಿ ಎಂಬ ಮಧ್ಯದ ನಶೆಯನ್ನು ಮೈಯೊಳಗೆ ಏರಿಸಿ ಅಮಾಯಕರ ಮಾರಣಹೋಮ ಮಾಡಿಯೇ ಅಧಿಕಾರ ಪಡೆಯಬಲ್ಲರು.
ಬಂಧುಗಳೇ ನಾವು ಕೋಮುವಾದಿ ದುಷ್ಟರ ಈ ಹುನ್ನಾರಿಗೆ ಬಲಿಯಾಗಬೇಕೆ? ದಯವಿಲ್ಲದ ಧರ್ಮ ಅದಾವುದಯ್ಯಾ ಎಂಬ ಶರಣರ ವಾಣಿ, ಸಕಲ ಜೀವಿಗಳಿಗೆ ಲೇಸ ಬಯಸುವ, ಬಹುಜನ ಸುಖಾಯ, ಬಹುಜನ ಹಿತಾಯ, ಅಹಿಂಸಾ ಪರಮೋಧರ್ಮ, ತಿಜಾರತ್ ಹೀ ಇಬಾದತ್ ಹೈ, ಪ್ರೀತಿಯೇ ದೇವರು ಎಂಬ ತತ್ವಗಳಲ್ಲಿ ನಂಬಿಕೆಯುಳ್ಳವರಾದ ನಾವು ಕೋಮುವಾದಿಗಳನ್ನು ಉಚ್ಛಾಟಿಸಲೇಬೇಕಿದೆ.