ಕರ್ನಾಟಕ ರಾಜ್ಯೋತ್ಸವ : ಏಕೀಕರಣ ಹೋರಾಟ ಮರೆಯಬಾರದು ಕಮ್ಯೂನಿಷ್ಟರ ಪಾತ್ರವನ್ನು ನೆನೆಯಬೇಕು

ಗುರುರಾಜ ದೇಸಾಯಿ
ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಕರ್ನಾಟಕ ಏಕೀಕರಣದ ಹೋರಾಟವನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಕರ್ನಾಟಕ ಹೀಗೆ ಇರಲಿಲ್ಲ. ಸುಮಾರು ಇಪತ್ತು ಆಡಳಿತಾತ್ಮಕ ಘಟಕಗಳಾಗಿ ಹಂಚಿ ಹೋಗಿತ್ತು. ಮೈಸೂರು ಸಂಸ್ಥಾನ, ಹೈದ್ರಾಬಾದ್​​ನ ನಿಜಾಮರು, ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಕೊಡಗು ಇತ್ಯಾದಿ ಹಲವು ಆಡಳಿತಾತ್ಮಕ ಘಟಕಗಳು  ಕರ್ನಾಟಕದಲ್ಲಿದ್ದವು.

ಕರ್ನಾಟಕ ಏಕೀಕರಣ ಚಳುವಳಿಗೆ ಹೋಗುವ ಮೊದಲು, ಕರ್ನಾಟಕದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ನಮ್ಮ ಕನ್ನಡ ಭಾಷೆ ಕ್ರಿ.ಶ 3ನೇ ಶತಮಾನದಲ್ಲಿ ಹುಟ್ಟಿ ಬೆಳದ ಭಾಷೆ. 8 ನೇ ಶತಮಾನದಲ್ಲಿ ಪ್ರಸಿದ್ಧ ಕಾವ್ಯಗಳು ಹುಟ್ಟಿದ್ದವು ಎಂಬುದಕ್ಕೆ ಅನೇಕ ದಾಖಲೆಗಳಿವೆ. ಪಂಪನ ವಿಕ್ರಮಾರ್ಜುನ ವಿಜಯ, ಆದಿ ಪುರಾಣ ಕೃತಿಗಳು ಕನ್ನಡವನ್ನು ಉನ್ನತಗೊಳಿಸಿದ ಕೃತಿಗಳಾಗಿವೆ. 11 ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು, 12 ನೇ ಶತಮಾನದಲ್ಲಿ ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಕಾರರು ಕನ್ನಡ ಭಾಷೆಯಲ್ಲಿ ಬರೆಯುತ್ತಿದ್ದರು. ಆದರೆ ಕನ್ನಡವನ್ನು ಒಗ್ಗೂಡಿಸುವ, ಒಂದು ಆಡಳಿತವನ್ನು ನೀಡುವ ಯೋಜನೆಗಳು ಇರಲಿಲ್ಲ. ಅದಕ್ಕೆ ಕಾರಣವೇನೆಂದರೆ, ರಾಜರು, ಪಾಳೆಗಾರರು ಆಳುತ್ತಿದ್ದುದರು, ಇವರಿಗೆ ಕನ್ನಡ ನಾಡು ಒಂದಾಗುವುದು, ಒಂದೇ ಆಡಳಿತಕ್ಕೆ ಬರುವುದು ಬೇಕಾಗಿರಲಿಲ್ಲ, ಇವರ ಕೈಯಲ್ಲಿ ಸಿಲುಕು, ನಲುಗಿಹೋಗಿದ್ದ ಕನ್ನಡ ನಾಡು ಸಿಕ್ಕಿದ್ದು ಬ್ರಿಟೀಷರ ಕೈಗೆ!

ಹೀಗೆ ಬ್ರಿಟೀಷರು ಅಧಿಕಾರ ನಡೆಸುತ್ತಿರುವ ಸಂದರ್ಭದಲ್ಲಿಯೇ ಕನ್ನಡ ಮಾತನಾಡುವವರೆಲ್ಲರೂ ಒಂದಾಗಬೇಕು ಎಂಬ ಕೂಗು ಕೇಳಿ ಬಂತು. ಇದು ಗಟ್ಟಿಯಾಗಿ ಕರ್ನಾಟಕದ ಪ್ರಗತಿಯಲ್ಲಿ ಮಹತ್ವದ ಪಾತ್ರವಹಿಸಿತು. ಕೈಗಾರಿಕಾ ಬೆಳವಣಿಗೆ, ಶಿಕ್ಷಣದ ಪ್ರಗತಿ, ನವೋದಯ ಸಾಹಿತ್ಯ ಒಂದರ ಹಿಂದೆ ಒಂದು ಕ್ರಾಂತಿ ಆರಂಭಿಸಿದವು. ಇದು ಕರ್ನಾಟಕದ ಏಕೀಕರಣದ ಕೂಗು ಗಟ್ಟಿಯಾಲು ಕಾರಣವಾಯಿತು.

ಹೀಗೆ ಹುಟ್ಟಿದ ಕರ್ನಾಟಕ ಏಕೀಕರಣ ಚಳುವಳಿಯ ಬೆಳವಣಿಗೆಯನ್ನು ನಾಲ್ಕುಹಂತಗಳಲ್ಲಿ ವಿಂಗಡಿಸಿಬಹುದು.  ಬ್ರಿಟೀಷರು ಒಂದೊಂದಾಗಿ ಕರ್ನಾಟಕದ ವಿವಿಧ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾ ಬಂದರು, 1856 ರಲ್ಲಿ ಬ್ರಿಟೀಷರ ಬಂಡವಾಳವು, ವಾಣಿಜ್ಯ, ಹೆಂಚಿನ ಕಾರ್ಖಾನೆ, ಕಾಫೀ ತೋಟಗಳಲ್ಲಿ ಹೂಡಿಕೆಯಾಗತೊಡಗಿತು. ಜೊತೆ ಜೊತೆಗೆ ಶಿಕ್ಷಣವು ವ್ಯಾಪಕಗೊಳ್ಳಲು ಆರಂಭಿಸಿದ್ದರಿಂದ ಕನ್ನಡದ ಬೆಳವಣಿಗೆಗೆ ಅನುಕೂಲವಾಯಿತು. ನಾಲ್ಕೈದು ಕನ್ನಡ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿದ್ದವು. ಮರಾಠಿ, ಬೆಂಗಾಲಿಯಿ ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡವು, ನಂತರ ಸ್ವತಂತ್ರ ಕನ್ನಡ ಕಾದಂಬರಿಗಳು ಆರಂಭಗೊಂಡವು. 1890 ರಲ್ಲಿ ವಿದ್ಯಾವರ್ಧಕ ಸಂಘ ಹುಟ್ಟಿಕೊಂಡಿತು. ಶೈಕ್ಷಣಿಕ ಉದ್ದೇಶಕ್ಕಾಗಿ ಹುಟ್ಟಿಕೊಂಡಿದ್ದ ಈ ಸಂಸ್ಥೆ ಸಾಹಿತ್ಯಿಕ ಚಳುವಳಿಯನ್ನು ಪುನರುಜ್ಜೀವನಗೊಳಿಸಿದ್ದು ಮೊದಲನೆಯ ಹಂತವಾಗಿದೆ.

ಭಾರತದ ಮೊತ್ತ ಮೊದಲ ಸ್ವಾತಂತ್ರ್ಯ ಚಳುವಳಿ  ಎಂದು ಕರೆಯಿಸಿಕೊಳ್ಳುವ ವಂಗಭಂಗ ಚಳುವಳಿಯು,  ಕರ್ನಾಟಕ ಏಕೀಕರಣದ ಚಳುವಳಿಗಾರರನ್ನು ಸೆಳಿಯಿತು, ಹಾಗೂ ಅವರ ಮೇಲೆ ಪರಿಣಾಮ ಬೀರಿತು.  1905 ರ ವಂಗ ಭಂಗ ಚಳುವಳಿ. ಬಂಗಾಲವನ್ನು ಹಿಂದು, ಮುಸ್ಲಿಂ ಬಂಗಾಲಗಳೆಂದು ಎರಡಾಗಿ ವಿಭಜಿಸಿದ ಬ್ರಿಟಿಷರ ಕುತಂತ್ರದ ವಿರುದ್ಧ ಹಿಂದೂ, ಮುಸ್ಲಿಂ ಬಂಗಾಲಿ ಭಾಷಿಕರು ಒಟ್ಟಾಗಿ ಮಾಡಿದ ಹೋರಾಟ ಇದು. ವಂಗಭಂಗ ಚಳುವಳಿಯ ಕುರಿತು 1907 ರಲ್ಲಿ ಕನ್ನಡ ವಾಗ್ಬೂಷಣ ಪತ್ರಿಕೆಯುಪ್ರಕಟಣೆಯನ್ನು ಮಾಡಿ ಜನರ ಮುಂದೆ ಇಟ್ಟಿತು.  1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ 1926 ರಲ್ಲಿ ಕರ್ನಾಟಕ  ಸಭಾ ಭವನ ಜನ್ಮ ತಾಳುವ ಮೂಲಕ ಕರ್ನಾಟಕ ಏಕೀಕರಣದ ಹೋರಾಟ ವ್ಯಾಪಕಗೊಳ್ಳಲು ಕಾರಣವಾಗಿದ್ದು ಎರಡನೇ ಹಂತ,

1920 ರಲ್ಲಿ ಧಾರವಾಡದಲ್ಲಿ ನಡೆದ ಕರ್ನಾಟಕ ರಾಜಕೀಯ ಪರಿಷತ್‌ ಎಂಬ ಸಮಾವೇಶವು ಕರ್ನಾಟಕ ಏಕೀಕರಣದ ಪ್ರಶ್ನೆಯನ್ನು ಹಾಗೂ ಕರ್ನಾಟಕ ಅಭಿವೃದ್ಧಿ ಕುರಿತ ವಿಚಾರಗಳನ್ನು ಜನರ ಮುಂದೆ ಇಟ್ಟಿತ್ತು.  ಈ ವೇಳೆ ಅನೇಕ ಸಂಘಟನೆಗಳು ಬೆಳದವು, ಕರ್ನಾಟಕ ಏಕೀಕರಣಕ್ಕೆ ಟೊಂಕಕಟ್ಟಿ ನಿಂತವು. ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಬಲಗೊಂಡು ಅಲ್ಲಲ್ಲಿ ಸಮ್ಮೇಳನಗಳು ನಡೆಯತೊಡಗಿದವು, ಹೈದ್ರಾಬಾದ್‌ ಕನ್ನಡ, ಮಂಗಳೂರು ಕನ್ನಡ, ಧಾರವಾಡ ಕನ್ನಡ, ಮೈಸೂರು ಕನ್ನಡದ ಜನರಿಗೆ ಅರ್ಥವಾಗುವ ಸಾಹಿತ್ಯದ ಕೃಷಿ ಬೆಳೆಯಲಾರಂಭಿಸಿತು ಇದು ಮೂರನೇ ಹಂತವಾಗಿದೆ.

1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದರೂ, ಕರ್ನಾಟಕ ಏಕೀಕರಣದ ಕನಸು ನನಸಾಗಿರಲಿಲ್ಲ. ಇದರಿಂದಾಗಿ ಜನ ಬಹಳಷ್ಟು ನಿರಾಶೆಗೊಳಗಾಗಿದ್ದರು.  ಕರ್ನಾಟಕ ಏಕೀಕರಣ ಸಮ್ಮೇಳನ, ಸಮಾವೇಶಗಳು ವಿವಿಧ ಪ್ರದೇಶದಲ್ಲಿ ನಡೆಯತೊಡಗಿದವು. ಅಲ್ಲಲ್ಲಿ ಉಪವಾಸ ಸತ್ಯಾಗ್ರಹಗಳು ನಡೆಯತೊಡಗಿದವು. 1953 ಏಪ್ರಿಲ್‌ 20 ರಂದು ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ) ಸಭೆಗೆ ಕಮ್ಯೂನಿಸ್ಟರ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುತ್ತದೆ.  ಈ ವೇಳೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಕಮ್ಯೂನಿಸ್ಟ್‌ ಮತ್ತು ಇತರ ಹೋರಾಟಗಾರರನ್ನು ಪ್ರತಿನಿಧಿಸುವ “ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್‌” ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತದೆ. ಗುತ್ತೇದಾರಿ ಬಂಡವಾಳಿಷಾಹಿ ಹಾಗೂ ಕಾಂಗ್ರೆಸ್‌ನ ನೀತಿಯಿಂದಾಗಿ ಇಂತಹ ನಿಲುವುಗಳನ್ನು ತಳೆದಿದ್ದು, ಅಂತಿಮವಾಗಿ 1956 ರಲ್ಲಿ ಮೈಸೂರು ಸಂಸ್ಥಾನ, ಮುಂಬೈ ಪ್ರಾಂತ, ಹೈದ್ರಾಬಾದ್‌ ಸಂಸ್ಥಾನ, ಮದ್ರಾಸ್‌ ಪ್ರಾಂತ, ಕೊಡುಗು ಪ್ರದೇಶಗಳು ಏಕೀಕೃತ ರಾಜ್ಯದಲ್ಲಿ ಸೇರ್ಪಡೆಗೊಂಡು ಮೈಸೂರು ರಾಜ್ಯ ಎಂದು ಕರೆಯಿಸಿಕೊಡಿತು.

ವಿಶಾಲ ಮೈಸೂರು ರಾಜ್ಯ ರಚನೆಯಾದ ನಂತರವೂ ಕರ್ನಾಟಕ ಏಕೀಕರಣ ಚಳುವಳಿ ಮುಂದುವರೆಯಿತು. ಮೈಸೂರು ರಾಜ್ಯದ ಬದಲಾಗಿ ಕರ್ನಾಟಕ ರಾಜ್ಯ ಎಂದು ಹೆಸರಿಡಬೇಕು ಎಂಬ ಕೂಗು ದೊಡ್ಡದಾಯಿತು. ಮೈಸೂರಿಗರು ಏಕೀಕರಣವನ್ನು ವಿರೋಧಿಸಿದರು,  ಆದಾಗ್ಯೂ ಕರ್ನಾಟಕ ರಾಜ್ಯ ನಿರ್ಮಾಣದ ಪಟ್ಟು ಸಡಿಲಗೊಳ್ಳಲಿಲ್ಲ, ಅಂತಿಮವಾಗಿ 1957 ರಲ್ಲಿ ವಿಧಾನಸಭೆಯಲ್ಲಿ ಈ ಕುರಿತು ಚರ್ಚೆ ಆರಂಭಗೊಂಡಿತು. ಅಂತಮವಾಗಿ 17 ವರ್ಷದ ನಂತರ 1973 ರ ನವೆಂಬರ್‌ 01 ರಂದು ಕರ್ನಾಟಕ ರಾಜ್ಯ ಎಂದು ಕರೆಯಲಾಯಿತು.

ಇದನ್ನೂ ಓದಿನವೆಂಬರ್ 01 ರಂದು ಯಾವೆಲ್ಲ ರಾಜ್ಯಗಳು ರಾಜ್ಯೋತ್ಸವ ಆಚರಿಸಿಕೊಳ್ಳತ್ತವೆ ನಿಮಗೆ ಗೊತ್ತೆ? ಇಲ್ಲಿದೆ ಸಂಕ್ಷಿಪ್ತ ವಿವರಣೆ

ಕಮ್ಯೂನಿಷ್ಟರ ಪಾತ್ರ : ಕರ್ನಾಟಕ ಏಕೀಕರಣಕ್ಕಾಗಿ ಹಾಗೂ ಕರ್ನಾಟಕ ಎಂಬ ಹೆಸರು ಬರುವಲ್ಲಿ ಕಮ್ಯೂನಿಷ್ಟರ ಪಾತ್ರ ದೊಡ್ಡದಿದೆ. ಆದರೆ ಚರಿತ್ರೆ ಬರೆಯುವ ಲೇಖಕರು, ಲೇಖನಗಳನ್ನು ಬರೆಯುವ ಬರಹಗಾರರು, ಮಾಧ್ಯಮಗಳು ಬೇಕೆಂದೆ ಕಮ್ಯೂನಿಷ್ಟರ ಪಾತ್ರದ ಬಗ್ಗೆ ಬರೆಯದೆ, ಚರಿತ್ರೆಯನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ.

1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕರ್ನಾಟಕದ ಬೇಡಿಕೆ ಈಡೇರುತ್ತದೆ ಎಂದು ಜನ ನಂಬಿದ್ದರು. ಆದರೆ ಕಾಂಗ್ರೆಸ್‌ನಲ್ಲಿದ್ದ ಬಹಳಷ್ಟು ನಾಯಕರು (ವಲ್ಲಭಾಯಿ ಪಟೇಲ್‌ ) ಭಾಷಾವಾರು ಪ್ರಾಂತರಚನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಭಾಷಾವಾರು ಪ್ರಾಂತ್ಯ ರಚನೆಗೆ ಒಪ್ಪಿಕೊಂಡಿದ್ದ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ನಂತರ ಭಾಷಾವಾರು ಪ್ರಾಂತ್ಯ ರಚನೆಯ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡಿತು. ಗೋಲಿಬಾರ್‌ ಲಾಠೀಚಾರ್ಜ್‌ ಮೂಲಕ ಅಮಾನುಷ ದಬ್ಬಾಳಿಕಗಳನ್ನು ನಡೆಸಿತು. ಆ ದಬ್ಬಾಳಿಕೆಯನ್ನು ದಿಕ್ಕರಿಸಿ ಕಮ್ಯೂನಿಸ್ಟರ್‌ ನೇತೃತ್ವದಲ್ಲಿ ಏಕೀಕರಣ ಚಳುವಳಿ ಬಲಗೊಂಡಿತು.

1951 ರಲ್ಲಿ ಉಳ್ಳಾಲದಲ್ಲಿ ನಡೆದ ಕಮ್ಯೂನಿಷ್ಟ ಪಕ್ಷದ ರಾಜ್ಯ ಸಮ್ಮೇಳನದಲ್ಲಿ ಕರ್ನಾಟಕ ಏಕೀಕರಣ ಚಳುವಳಿಯನ್ನು ತೀವೃಗೊಳಿಸಲು ಕರೆ ನೀಡಿತು.  ಕೇಂದ್ರಕ್ಕೆ ಹಲವಾರು ಬಾರಿ ನಿಯೋಗವನ್ನು ಒಯ್ಯಲಾಯಿತು. ನೆಹರೂ ಅವರ ಆಶ್ವಾಸನೆಗಳಿಗೆ ಜನರು ಬೇಸತ್ತಿದ್ದರು. ಇಂತಹ ಸಂದರ್ಭದಲ್ಲಿ ಏಕೀಕರಣ ಚಳುವಳಿಯನ್ನು ಮುಂದುವರೆಸಿದ  ಕಮ್ಯೂನಿಷ್ಟ ಪಕ್ಷವು ಜನರಲ್ಲಿ ಚೈತನ್ಯವನ್ನು ತುಂಬಿತು. ಇದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ, ಪುರೋಗಾಮಿ ಪಕ್ಷದ ಮರುಳಾರಾಧ್ಯ ಸೊಶಲಿಸ್ಟ್‌ ಪಕ್ಷದ ಕೆ.ಆರ್.‌ ಕಾರಂತ್‌, ಕಾಂಗ್ರೆಸ್‌ನ ಸಿದ್ದಪ್ಪ ಹೊಸಮನಿ, ಚೆನ್ನಪ್ಪ ವಾಲಿ, ಮಹಾದೇವಪ್ಪ ಮರುಗೋಡು, ಊರವಗೊಂಡ ಸ್ವಾಮಿ ಮುಂತಾದವರು ಕಮ್ಯೂನಿಷ್ಟ ನಾಯಕರಾದ ಎನ್‌ ಎಲ್‌. ಉಪಾಧ್ಯಾಯ ಹಾಗೂ ಬಿವಿ ಕಕ್ಕಿಲಾಯರ ಜೊತೆ ಸೇರಿ ಏಕೀಕರಣದ ಚಳುವಳಿಯಲ್ಲಿ ತೊಡಗಿಕೊಳ್ಳುತ್ತಾರೆ. ದಾವಣಗೆರೆ, ಹುಬ್ಬಳಿಯಲ್ಲಿ ಸಮಾವೇಶ ನಡೆಸಿ ಅಳವಂಡಿಯ ಶಿವಮೂರ್ತಿ ಸ್ವಾಮಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್‌ ಸ್ಥಾಪನೆ ಮಾಡುತ್ತಾರೆ. ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಬಿಜಾಪುರ, ಮಂಗಳೂರಿನಲ್ಲಿ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಮ್ಯೂನಿಷ್ಟರ ನೇತೃತ್ವದಲ್ಲಿ ಏಕೀಕರಣ ಹೋರಾಟ ನಡೆಯುತ್ತದೆ. ಅನೇಕ ಕಡೆ ಶಾಲಾ ವಿದ್ಯಾರ್ಥಿಗಳು ರೈಲ್‌ ರೋಕೊ, ರಸ್ತೆ ರೋಕೊ ನಡೆಸುತ್ತಾರೆ.

ಇದನ್ನೂ ಓದಿ : ಕರ್ನಾಟಕ ರಾಜ್ಯೋತ್ಸವ: ಕನ್ನಡ, ಪ್ರಜಾಪ್ರಭುತ್ವದ ಅಳಿವು-ಉಳಿವಿನ ಪ್ರಶ್ನೆ

ಬೆಂಗಳೂರಿನಲ್ಲಿ, ಎಂಎಸ್‌ ಕೃಷ್ಣನ್‌, ಸೂರ್ಯನಾರಾಯಣರಾವ್‌, ಎನ್‌ ಎಲ್‌. ಉಪಾಧ್ಯಾಯ ನೇತೃತ್ವದಲ್ಲಿ, ವಾಟಾಳ್‌ ನಾಗರಾಜ್‌ ಮೊದಲಾದವರನ್ನು ಸೇರಿಸಿ ಹೋರಾಟವನ್ನು ತೀವ್ರಗೊಳಿಸಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಎಜೆ ಮುಧೋಳ್‌, ಎಂಪಿ ಲಕ್ಷ್ಮೇಶ್ವರ್‌ ಮೊದಲಾದ ಕಮ್ಯೂನಿಷ್ಟ ನಾಯಕರು ಹೋರಾಟ ನಡೆಸಿದರು. ಬಹಳಷು ಜನ ನಾಯಕರು ಗೋಲಿಬಾರ್‌, ಲಾಠೀಚಾರ್ಜ್‌ ದಾಳಿಗೆ ಒಳಗಾಗಿದ್ದರು ಎಂದು ಕಮ್ಯುನಿಸ್ಟ್‌ ನಾಯಕ ಎನ್‌.ಕೆ. ಉಪಾಧ್ಯಾಯ 1986 ರಲ್ಲಿ ಐಕ್ಯರಂಗ ಪತ್ರಿಕೆಗೆ ಲೇಖನ ಬರೆದಿದ್ದರು.

ಚರಿತ್ರಾರ್ಹ ಕರ್ನಾಟಕ ಏಕೀಕರಣ ಚಳುವಳಿ ಲೋಕಸಭೆಯಲ್ಲಿ ಧ್ವನಿಸಿತು. ಕಮ್ಯೂನಿಷ್ಟ ಸಂಸದ ಎಕೆ ಗೋಪಾಲನ್‌ ಭಾಷಾವಾರು ಪ್ರಾಂತ್ಯ ರಚನೆಯಾಗಬೇಕು ಎಂಬ ನಿರ್ಣಯವನ್ನು ಮಂಡಿಸಿದ್ದರು.  ಈ ಹೋರಾಟ ಎಷ್ಟರ ಮಟ್ಟಿಗೆ ತೀವ್ರತೆ ಪಡೆದುಕೊಂಡಿತು ಎಂದರೆ, ಭಾಷಾವಾರು ಪ್ರಾಂತ ರಚನೆಯಲ್ಲಿ ಹಳ್ಳಿಯನ್ನು ಘಟಕವನ್ನಾಗಿ ಪರಿಗಣೆನೆಗೆ ತೆಗೆದುಕೊಳ್ಲ ಬೇಕು ಎಂಬ ವಾದವನ್ನು ಕಮ್ಯೂನಿಷ್ಟರು ರಾಜ್ಯದ ಜನರ ಮುಂದೆ ಇಟ್ಟರು.  ಅಂತಿಮವಾಗಿ ಕಮ್ಯೂನಿಷ್ಟರ ಹೋರಾಟ ಹಾಗೂ ಕನ್ನಡ ನಾಡಿನ ಜನರ ಹೋರಾಟದ ಭಾಗವಾಗಿ 1956 ರಲ್ಲಿ ಮೈಸೂರು ಪ್ರಾಂತ ರಚನೆಯಾಗಿ ನಂತರದಲ್ಲಿ ಕರ್ನಾಟಕ ರಾಜ್ಯ ರಚನೆಯಾಯಿತು.

ಪ್ರತಿಬಾರಿಯೂ ನಾವು ನವೆಂಬರ್‌ ಒಂದರಂದು ಕರ್ನಾಟಕ ರಾಜ್ಯೋತ್ಸವ ಆಚರಿಸುವಾಗ ಕರ್ನಾಟಕ ಏಕೀಕರಣ ಚಳುವಳಿ ಹಾಗೂ ಕಮ್ಯೂನಿಷ್ಟರ ಪಾತ್ರವನ್ನು ಕರ್ನಾಟಕದ ಜನ ನೆನೆಯಬೇಕು.

(ಐಕ್ಯರಂಗ ಹಾಗೂ ಏಕೀಕರಣ ಚಳುವಳಿಯ ಪುಸ್ತಕವನ್ನು ಬಳಸಿಕೊಂಡು ಈ ಲೇಖನ ಸಿದ್ಧಪಡಿಸಲಾಗಿದೆ)

ವಿಡಿಯೋ ನೋಡಿ: ಕರ್ನಾಟಕ ರಾಜ್ಯೋತ್ಸವ : ಜನರ ಬದುಕಿನ‌ ಪ್ರಶ್ನೆಗಳು ಯಾಕಿಲ್ಲ? – ಜಿ.ಎನ್ ನಾಗರಾಜ ಅವರ ವಿಶ್ಲೇಷಣೆ Janashakthi Media

 

Donate Janashakthi Media

Leave a Reply

Your email address will not be published. Required fields are marked *