ಉಡುಗೊರೆ ಸ್ವೀಕರಿಸಿದ ಪೊಲೀಸರಿಗೆ ಕೆಆರ್‌ಎಸ್‌ ಪಕ್ಷದಿಂದ ಒಳ ಉಡುಪು!

ಬೆಂಗಳೂರು: ಬಾಗಲಗುಂಟೆ ಠಾಣೆಯ ಪೊಲೀಸರು ಸೇವಾ ಶಿಷ್ಟಾಚಾರ ಉಲ್ಲಂಘಿಸಿ ಮಾಜಿ ಶಾಸಕರಿಂದ ಶರ್ಟ್ ಮತ್ತು ಪ್ಯಾಂಟ್ ಬಟ್ಟೆ ಉಡುಗೊರೆಯಾಗಿ ಪಡೆದ ಘಟನೆಯನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ಕಾರ್ಯಕರ್ತರು, ಅಲ್ಲಿನ ಪೊಲೀಸರಿಗೆ ಒಳ ಉಡುಪು ಮತ್ತು ಬಟ್ಟೆ ಹೊಲಿಸಿಕೊಳ್ಳಲು ಹಣ ನೀಡವ ಮೂಲಕ ಆಕ್ರೋಶವನ್ನು ಹೊರಹಾಕಿದರು.

ಪ್ರತಿಭಟನೆ ಉದ್ದೇಶಿಸಿ ಕೆಆರ್‌ಎಸ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿ, ʻಪೊಲೀಸ್‌ ಸೇವಾ ನಿಯಮಗಳ ಪ್ರಕಾರ ಉಡುಗೊರೆ ಪಡೆಯುವುದು ನಿಯಮಬಾಹಿರ. ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಂಡು ರಾಜ್ಯದ ಎಲ್ಲಾ ಠಾಣೆಗಳಿಗೆ ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ನಡವಳಿಕೆ ಕುರಿತಾದ ಸ್ಪಷ್ಟ ಸಂದೇಶದ ಸುತ್ತೋಲೆಯನ್ನು ಹೊರಡಿಸಬೇಕು. ಈ ವಿಚಾರವಾಗಿ ನಮ್ಮ ಪಕ್ಷದ ನಿಯೋಗ ಇಷ್ಟರಲ್ಲಿಯೇ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಲಿದ್ದಾರೆ. ಆ ಭೇಟಿಯ ಸಂದರ್ಭದಲ್ಲಿ ಅವರಿಂದ ನಾವು ಏನನ್ನು ಅಪೇಕ್ಷಿಸುತ್ತಿದ್ದೇವೆಯೋ ಅದನ್ನು ಆ ಭೇಟಿಗೆ ಮೊದಲೇ ಅವರು ಮಾಡಿದರೆ ಅವರ ಮತ್ತು ಇಲಾಖೆಯ ಗೌರವ ಹೆಚ್ಚುತ್ತದೆ ಎಂದರು. ನಾವು ತೆಗೆದುಕೊಂಡು ಹೋಗಿದ್ದ ಒಳ ಉಡುಪುಗಳನ್ನು ಪೊಲೀಸರು ತೆಗೆದುಕೊಳ್ಳಲಿಲ್ಲ. ಅಲ್ಲದೆ, ಸ್ಥಳದಲ್ಲಿಯೇ ಸಂಗ್ರಹಿಸಿದ್ದ ₹ 1,500 ದೇಣಿಗೆಯನ್ನೂ ಸ್ವೀಕರಿಸಲಿಲ್ಲ’ ಎಂದು ರವಿಕೃಷ್ಣಾರೆಡ್ಡಿ ತಿಳಿಸಿದ್ದಾರೆ.

‘ಉಡುಗೊರೆ ಸ್ವೀಕರಿಸಿದ ಕುರಿತು ಇಲಾಖೆಯಿಂದ ವಿಚಾರಣೆ ನಡೆಯುತ್ತಿದೆ. ಈ ಘಟನೆ ನನ್ನ ಕೈ ಮೀರಿ ನಡೆದಿದೆ ಎಂದು ಠಾಣಾಧಿಕಾರಿ ಸುನೀಲ್‌ ವಿಷಾದ ವ್ಯಕ್ತಪಡಿಸಿದ್ದಾರೆ’

Donate Janashakthi Media

Leave a Reply

Your email address will not be published. Required fields are marked *