ಬೆಂಗಳೂರು: ಕರ್ನಾಟಕ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನ ನೇಮಕ ಮಾಡಲಾಗಿದ್ದು, ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಅವರ ಅವಧಿ ಮುಗಿದ ಹಿನ್ನೆಲೆ ಕರ್ನಾಟಕ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರನ್ನ ನೇಮಕ ಮಾಡಲಾಗಿದೆ.
ಇದನ್ನು ಓದಿ:ಕೇಂದ್ರ-ರಾಜ್ಯಗಳ ಸಂಬಂಧ: ಒಕ್ಕೂಟ ತತ್ವದ ಮೇಲೆ ಹೆಚ್ಚುತ್ತಿರುವ ದಾಳಿ
ರಾಜ್ಯಸಭಾ ಸ್ಥಾನದಿಂದ ನಿವೃತ್ತಿ ಹೊಂದುತ್ತಿರುವ ತಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುತ್ತಿದೆ. ಕೇಂದ್ರದ ಎನ್‌ಡಿಎ ಸರಕಾರದಲ್ಲಿ ಅತ್ಯಂತ ದೀರ್ಘಕಾಲವಾಗಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ತಾವರ್ ಚಂದ್ ಅವರಿಗೆ ಇದೆ.
ತವಾರ್ ಚಂದ್ ಗೆಹ್ಲೋಟ್ ಅವರ ಹಿನ್ನೆಲೆ
ಮಧ್ಯಪ್ರದೇಶದ ನಾಗ್ಡಾದಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ತಾವರ್ ಚಂದ್ ಗೆಹ್ಲೋಟ್ ಅವರಿಗೆ 73 ವರ್ಷ. ಪ್ರಸಕ್ತ ಕೇಂದ್ರ ಸಚಿವರಾಗಿ ಮತ್ತು ರಾಜ್ಯಸಭಾ ಸದಸ್ಯರಾಗಿರುವ ತವಾರ್ ಚಂದ್ ಗೆಹ್ಲೋಟ್ ಅವರು ಇಂದು ರಾಜ್ಯಸಭಾ ಸ್ಥಾನದಿಂದ ನಿವೃತ್ತಿ ಹೊಂದಲಿದ್ದಾರೆ. ಮಧ್ಯಪ್ರದೇಶದಿಂದ 2012ರ ಏಪ್ರಿಲ 3ರಿಂದ ರಾಜ್ಯಸಭೆಯನ್ನು ಪ್ರತಿನಿಧಿಸಿದ್ದಾರೆ.
ತವಾರ್ ಚಂದ್ ಗೆಹ್ಲೋಟ್ ಅವರು ಮೂರು ಬಾರಿ ಶಾಸಕರಾಗಿ ಎರಡು ಅವಧಿಗೆ ಲೋಕಸಭಾ ಸದಸ್ಯರಾಗಿ, ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತವಾರ್ ಚಂದ್ ಗೆಹ್ಲೋಟ್ ಅವರು 2014ರಿಂದಲೂ ಅವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಅವರು 2019ರಿಂದ ರಾಜ್ಯಸಭೆಯ ನಾಯಕರನ್ನಾಗಿಯೂ ಇದುವರೆಗೆ ಉಪಸ್ಥಿತರಿದ್ದರು. ಎನ್‌ಡಿಎ ಮೊದಲ ಅವಧಿಗೆ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿಯೂ ಕೂಡ ಕ್ಯಾಬಿನೆಟ್ ಮಂತ್ರಿಯಾಗಿದ್ದರು. 1996 ರಿಂದ 2009ರ ವರೆಗೆ ಮಧ್ಯಪ್ರದೇಶದ ಶಜಾಪುರ ಮೀಸಲು ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿಯೂ ಆಯ್ಕೆಯಾಗಿದ್ದರು. ನೀತಿ ಆಯೋಗದ ವಿಶೇಷ ಆಹ್ವಾನಿತರಾಗಿಯೂ ಕಾರ್ಯನಿರ್ವಹಿಸಿದ್ದರು.
ರಾಜ್ಯಪಾಲ ಹುದ್ದೆಯಿಂದ ವಜುಭಾಯಿ ವಾಲಾ ನಿವೃತ್ತಿ
ನಿವೃತ್ತಿಯನ್ನು ಹೊಂದುತ್ತಿರುವ ರಾಜ್ಯಪಾಲ ವಜುಭಾಯಿ ರುಢಭಾಯಿ ವಾಲಾ ಅವರು ಕರ್ನಾಟಕದ ರಾಜ್ಯಪಾಲರಾಗಿ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದು, ಅವರು ರಾಜ್ಯಪಾಲರಾಗಿ ದೀರ್ಘಕಾಲ ಸೇವೆ ಸಲ್ಲಿಸಿದವರಲ್ಲಿ ಒಬ್ಬರು.
ವಜುಭಾಯಿ ವಾಲಾ ಅವರು 2014ರ ಸೆಪ್ಟೆಂಬರ್‌ನಲ್ಲಿ ರಾಜ್ಯದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡು ಇಂದಿನ ವರೆಗೆ ಮುಂದುವರೆದಿದ್ದರು. ಅದರಂತೆ 2019ರ ಸೆಪ್ಟೆಂಬರ್‌ನಲ್ಲಿ ವಾಲಾ ಅವರ 5 ವರ್ಷದ ಅಧಿಕಾರಾವಧಿ ಪೂರ್ಣಗೊಂಡಿತ್ತು. ಆದರೆ, ಹೊಸ ರಾಜ್ಯಪಾಲರ ನೇಮಕದ ಆದೇಶ ಆಗದಿದ್ದಾಗ, ವಾಲಾ ಅವರೇ ಮತ್ತೊಂದು ವರ್ಷದ ಅವಧಿಗೆ ಮುಂದುವರಿದರು. ಅದಕ್ಕೆ ಸಂಬಂಧಿಸಿದ ಲಿಖಿತ ಆದೇಶವೇನೂ ಬಂದಿರಲಿಲ್ಲ.
ಅದಾದ ಬಳಿಕ 2020ರ ಸೆಪ್ಟೆಂಬರ್‌ನಲ್ಲಿ ವಜುಭಾಯಿ ವಾಲಾ ಅವರನ್ನು ಬದಲಿಸಿ ಬೇರೊಬ್ಬರನ್ನು ರಾಜ್ಯಪಾಲರಾಗಿ ನೇಮಿಸಲಾಗುತ್ತದೆ ಎಂಬ ಸುದ್ದಿಯೂ ಹರಿದಾಡಿತ್ತು. ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಹೆಸರು ಸಹ ಕೇಳಿ ಬಂದಿತ್ತು. ಅಂತಿಮವಾಗಿ ಇಂದು ರಾಜ್ಯಪಾಲ ಹುದ್ದೆಯಿಂದ ವಜುಭಾಯಿ ವಾಲಾ ಅವರು ನಿವೃತ್ತರಾಗುತ್ತಿದ್ದು, ಆ ಸ್ಥಾನಕ್ಕೆ ತಾವರ್ ಚಂದ್ ಗೆಹ್ಲೋಟ್ ನೇಮಕಗೊಂಡಿದ್ದಾರೆ.
ಇದನ್ನು ಓದಿ: ಯಡಿಯೂರಪ್ಪ ಸಂಪುಟ ಸೇರಿದ ಏಳು ಜನ ನೂತನ ಸಚಿವರು
ವಜುಭಾಯಿ ವಾಲಾ ಅವರ ಅವಧಿಯಲ್ಲಿ ಬಿಜೆಪಿಯ ಅಣತಿಯಂತೆ ನಡೆದುಕೊಂಡರು ಎಂಬ ಗಂಭೀರ ಆರೋಪಗಳು ಸಹ ಕೇಳಿ ಬಂದಿದ್ದವು. ವಿಶೇಷವಾಗಿ 2013 ರಿಂದ 2018ರ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಸರಕಾರದ ಅಧಿಕಾರದ ಅವಧಿಯಲ್ಲಿ ಸರಕಾರದ ನಡೆಯ ಬಗ್ಗೆ ಅಸಹಕಾರವನ್ನು ತೋರುತ್ತಿದ್ದರು. 2018ರ ವಿಧಾನಸಭಾ ಚುನಾವಣೆ ಬಳಿಕ ಯಾವ ಪಕ್ಷಕ್ಕೂ ಬಹುಮತ ಸಾಬೀತು ಆಗದಿದ್ದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಎರಡು ದಿನಗಳ ಅವಧಿಗೆ ರಾಜ್ಯದ ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ಸಂದರ್ಭದಲ್ಲಿ ರಾಜಭವನದಲ್ಲಿ ನಿಯಮಗಳು ಮೀರಿ ಕಾರ್ಯನಿರ್ವಹಿಸಿದವು ಎಂಬ ಆರೋಪಗಳು ಸಹ ಕೇಳಿ ಬಂದಿದ್ದವು. ನಂತರ ಮತ್ತೆ ಜೆಡಿಎಸ್—ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿಯೂ ರಾಜ್ಯಪಾಲರ ನಡೆಗಳ ಬಗ್ಗೆ ಸಮ್ಮಿಶ್ರ ಸರಕಾರ ಅಸಮಾಧಾನವನ್ನು ವ್ಯಕ್ತಪಡಿಸಿದ್ದವು.