ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಿಗ್ಗೆ 11 ಗಂಟೆ ಸರಿಯಾಗಿ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರಿಂದ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.
‘ಬಸವರಾಜ ಬೊಮ್ಮಾಯಿ ಎಂಬ ಹೆಸರಿನ ನಾನು ಕಾನೂನಿನ ಮೂಲಕ ಸ್ಥಾಪಿತ ಭಾರತ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆ ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತೇನೆಂದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಅಂತಃಕರಣಪೂರ್ವಕವಾಗಿ ನೆರವೇರಿಸುತ್ತೇನೆಂದು, ಭಯ ಅಥವಾ ಪಕ್ಷಪಾತವಿಲ್ಲದೆ, ರಾಗ–ದ್ವೇಷವಿಲ್ಲದೆ ಎಲ್ಲರಿಗೂ ನ್ಯಾಯ ಒದಗಿಸಿಕೊಡುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಎಂದು ಪ್ರಮಾಣವಚನ ಸ್ವೀಕರಿಸಿದರು.
ಇದನ್ನು ಓದಿ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಇಂದು
ಪ್ರಮಾಣವಚನ ಸ್ವೀಕರಿಸಿದ ಬಳಿಕ ಕಡತಕ್ಕೆ ಸಹಿ ಮಾಡಿದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು.
ಇಂದು ಮುಖ್ಯಮಂತ್ರಿಯಾಗಿ ಮಾತ್ರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆದಿದ್ದು, ಸಂಪುಟ ರಚನೆಯಾಗದ ಕಾರಣ ಸಚಿವರ ಪ್ರಮಾಣವಚನ ಬೇರೆದಿನ ನಿಗದಿ ಮಾಡಲಾಗಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ಅವರು ವೇದಿಕೆಗೆ ಬಂದು ಹೂಗುಚ್ಛ ನೀಡಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಿದರು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿತರಿದ್ದರು. ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಮುರುಗೇಶ ನಿರಾಣಿ, ಡಾ.ಸಿ.ಎನ್. ಅಶ್ವತ್ಥನಾರಾಯಣ ಕೂಡ ಹಾಜರಿದ್ದರು.
ಕೋಟ ಶ್ರೀನಿವಾಸ ಪೂಜಾರಿ, ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್, ಡಾ.ಕೆ. ಸುಧಾಕರ್, ಬೈರತಿ ಬಸವರಾಜ, ಎಸ್. ಸುರೇಶ್ ಕುಮಾರ್, ವಿ. ಸೋಮಣ್ಣ, ಕೆ.ಸಿ. ನಾರಾಯಣ ಗೌಡ, ಎಂ.ಟಿ.ಬಿ. ನಾಗರಾಜ್ ಸೇರಿದಂತೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಹಲವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಹಿನ್ನೆಲೆಯಲ್ಲಿ ರಾಜಭವನದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದ್ದು, ಡಿಸಿಪಿ, ಎಸಿಪಿ ಸೇರಿ 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.
ಇದನ್ನು ಓದಿ: ಬಸವರಾಜ ಬೊಮ್ಮಾಯಿಗೆ ಉತ್ತಮ ಹಿನ್ನಲೆ ಇದೆ, ಹೇಗೆ ಬಳಕೆಯಾಗಬಹುದು ಕಾದು ನೋಡಬೇಕಿದೆ – ಪುರುಷೋತ್ತಮ ಬಿಳಿಮಲೆ
ಸೋಮವಾರ ಮಧ್ಯಾಹ್ನ ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಸಲ್ಲಿಸದರು. ತಮ್ಮ ಸರಕಾರದ ಎರಡು ವರ್ಷದ ಸಾಧನಾ ಸಮಾವೇಶವನ್ನು ನಡೆದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದರು. ನೆನ್ನೆ ಬೆಳಿಗ್ಗೆ ದೆಹಲಿಯಲ್ಲಿ ಕೇಂದ್ರದ ಬಿಜೆಪಿ ಸಂಸದೀಯ ಮಂಡಳಿ ಸಭೆಯನ್ನು ಸೇರಿ ಮುಖ್ಯಮಂತ್ರಿಯಾಗಿ ಆಯ್ಕೆ ಚರ್ಚೆ ನಡೆದ ಬಳಿಕ ಬಿಜೆಪಿ ಪಕ್ಷದ ಮೂವರು ವೀಕ್ಷರು ರಾಜ್ಯಕ್ಕೆ ಆಗಮಿಸಿದರು. ನೆನ್ನೆ ಸಂಜೆ 7.30ಕ್ಕೆ ಜರುಗಿದ ರಾಜ್ಯ ಬಿಜೆಪಿ ಶಾಸಕಾಂಗ ಸಭೆ ಬಳಿಕ ಬವರಾಜ ಬೊಮ್ಮಾಯಿ ನೂತಮ ಮುಖ್ಯಮಂತ್ರಿ ಎಂದು ಬಿಜೆಪಿ ಪಕ್ಷವು ಘೋಷಣೆ ಮಾಡಿತು.
ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್ ಆರ್ ಬೊಮ್ಮಾಯಿ ಅವರೂ ಸಹ ರಾಜ್ಯದ ಮುಖ್ಯಮಂತ್ರಿ ಆಗಿದ್ದವು. ಹಾವೇರಿ ಜಿಲ್ಲೆಯ ಶಿಗ್ಗಾಂವ ಶಾಸಕರಾದ ಬಸವರಾಜ ಬೊಮ್ಮಾಯಿ ಅವರು ಹಿಂದಿನ ಬಿ ಎಸ್ ಯಡಿಯೂರಪ್ಪ ಸರಕಾರದಲ್ಲಿ ದಲ್ಲಿ ಗೃಹ ಸಚಿವರಾಗಿದ್ದರು.