ಆನಂದ್ ಸಿಂಗ್ ರಿಂದ ಇಂದು ರಾಜೀನಾಮೆ ಸಾಧ್ಯತೆ?
ಸಿಎಂ ನಿರ್ಧಾರದ ಮೇಲೆ ಕಾದು ನೋಡುವ ತಂತ್ರ
ಬೆಂಗಳೂರು : ಪ್ರಬಲ ಖಾತೆ ಮೇಲೆ ಕಣ್ಣಿಟ್ಟಿರುವ ಸಚಿವ ಆನಂದ್ ಸಿಂಗ್ ಅವರ ಮುನಿಸು ಇನ್ನೂ ತಣ್ಣಗಾದಂತೆ ಕಾಣಿಸುತ್ತಿಲ್ಲ. ಇಂದು ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಖಾತೆ ಬದಲಾವಣೆಗಾಗಿ ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್, ಸಿಎಂ ಬೊಮ್ಮಾಯಿ ಅವರಿಗೆ ಆ.15ರ ಗಡುವು ನೀಡಿದ್ದರು. ಆದರೆ ಈವರೆಗೂ ಅವರ ಖಾತೆ ಬದಲಾವಣೆ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಆನಂದ್ ಸಿಂಗ್ ” ನನ್ನ ಭಾವನೆಗಳನ್ನು, ನನ್ನ ಬೇಡಿಕೆಗಳನ್ನು ಈಗಾಗಲೇ ಸಿಎಂ ಅವರಿಗೆ ತಿಳಿಸಿದ್ದೇನೆ”. ಮುಂದಿನ ನಿರ್ಧಾರ ಅವರು ತಿಳಿಸಬೇಕು. ನನ್ನ ರಾಜಕೀಯ ನಡೆ ಬಗ್ಗೆ ಇಂದು ಹೇಳುತ್ತೇನೆ ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ನಾನು ಖಾತೆ ಇನ್ ಚಾರ್ಜ್ ತೆಗೆದುಕೊಳ್ಳದಿದ್ದರೂ ಕೆಲಸಗಳು ನಡೆಯುತ್ತವೆ. ಅಧಿಕಾರಿಗಳು ಇದ್ದರೆ ಸಾಕು ಕೆಲಸ ಕಾರ್ಯಗಳು ನಡೆಯುತ್ತವೆ. ನನ್ನ ಮುಹೂರ್ತ ಇಡುವವರು ಬೇರೆಯವರಿದ್ದಾರೆ. ಮುಹೂರ್ತ ನೋಡಿ ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ರಾಜೀನಾಮೆ ಕೊಡ್ತಾರಾ ಆನಂದ್ ಸಿಂಗ್ : ಕುಮಾರ ಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೆಡವಲು ಪ್ರಥಮವಾಗಿ ರಾಜೀನಾಮೆ ಕೊಟ್ಟ ಆನಂದ್ ಸಿಂಗ್, ಬೊಮ್ಮಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ಇದೇ ರೀತಿಯ ಎಚ್ಚರಿಕೆ ನೀಡಿದ್ದಾರೆ. ಪ್ರಬಲ ಖಾತೆ ಸಿಗುವವರೆಗೆ ನಾನು ಸಮಾಧಾನಗೊಳ್ಳಲಾರೆ ಎಂದು ತಮ್ಮ ಅಪ್ತರ ಬಳಿ ಹೇಳಿಕೊಂಡಿದ್ದಾರೆ. ಇಂದು ವಿಧಾನಸೌಧಕ್ಕೆ ತೆರಳಿ ಸ್ಪೀಕರ್ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂಬ ಮಾತು ಆನಂದ್ ಸಿಂಗ್ ಆಪ್ತರಿಂದ ಕೇಳಿ ಬರುತ್ತಿದೆ.