ಕೊರೊನಾ ಕಾಲದಲ್ಲಿ, ಮೊದಲು ಮತ್ತು ನಂತರ – ಕರ್ನಾಟಕದ ದುಡಿಯುವ ಜನ ಕ್ರೂರ ದಮನ ಕಾಣಲಿದ್ದಾರೆ

ಕರ್ನಾಟಕದ ಯಾವುದೇ ಬಿಜೆಪಿ ನಾಯಕರಿಗೆ ಬಲಾಢ್ಯವಾದ, ಕೇಂದ್ರೀಕರಣವನ್ನು ಆರಾಧಿಸುವ ಪ್ರಾಂತೀಯ ರಾಜಕೀಯ ಶಕ್ತಿಗಳನ್ನು ಮೂಲೆಗುಂಪು ಮಾಡಲು ಬಯಸುವ ರಾಷ್ಟ್ರನಾಯಕರನ್ನು ಪ್ರಶ್ನಿಸುವ ಸಾಮರ್ಥ್ಯವೇ ಇಲ್ಲ. ಇದರ ಪರಿಣಾಮವೆಂದರೆ ಕೊರೊನಾ ಪಿಡುಗನ್ನು ತಡೆಗಟ್ಟುವುದರಲ್ಲಿ ಆಗಿರುವ ಆಘಾತಕಾರಿ ಸೋಲು.. ಸಂಪೂರ್ಣವಾಗಿ ಬಂಡವಾಳಶಾಹಿಗಳ ಪರವಾಗಿರುವ ಕರ್ನಾಟಕದ ರಾಜಕೀಯ ವ್ಯವಸ್ಥೆಯು ಇನ್ನು ಮುಂದೆ ರೈತರನ್ನು, ಕಾರ್ಮಿಕರನ್ನು, ಅಸಂಘಟಿತ ಶ್ರಮಜೀವಿಗಳನ್ನು ಅತ್ಯಂತ ಕ್ರೂರವಾಗಿ ದಮನಿಸುತ್ತದೆ. ಏಕೆಂದರೆ ಅಂತರರಾಷ್ಟ್ರೀಯ ಬಂಡವಾಳಶಾಹಿಯ ಈಗಿನ ಅಪೇಕ್ಷೆಯೆಂದರೆಬಲಿಷ್ಠವಾದ ಸರ್ವಾಧಿಕಾರಿ ಪ್ರಭುತ್ವಗಳು; ಪ್ರಭುತ್ವಗಳ ಆದೇಶಗಳನ್ನು ಪಾಲಿಸುವ ಸೈನಿಕರು ಮತ್ತು ಪೋಲೀಸರು; ರೈತರು, ಕಾರ್ಮಿಕರು ಇವರ ಪರವಾಗಿ ಹೋರಾಡುವ ವ್ಯಕ್ತಿಗಳು ಹಾಗೂ ಸಂಘಟನೆಗಳನ್ನು ಅಪಾರ ಹಿಂಸೆಗೆ ಈಡು ಮಾಡುವುದಕ್ಕೆ ಸಿದ್ಧವಾಗಿರುವ ನ್ಯಾಯಾಂಗ ವ್ಯವಸ್ಥೆ. ಇವೆಲ್ಲವು ಇಂದು ಭಾರತದಲ್ಲಿವೆ. ಆದರೆ ಅಸಹ್ಯ ರಾಜಕೀಯವನ್ನು ವಿಮರ್ಶಿಸುವ, ವಿರೋಧಿಸುವ ನೆಲೆಗಳು ಕರ್ನಾಟಕದಲ್ಲಿವೆ. ಇಡೀ ದೇಶದ ಜನಸಾಮಾನ್ಯರ ಸಾವುಬದುಕಿನ ಸಮಸ್ಯೆ ಇರುವಾಗ, ಪ್ರಜಾಪ್ರಭುತ್ವದ ಮೂಲ ಆಕಾಂಕ್ಷೆಗಳೇ ಅಪಾಯದಲ್ಲಿರುವಾಗ ಕರ್ನಾಟಕದ ಜನಪರ ಸಂಘಟನೆಗಳು ಒಂದು ವೇದಿಕೆಯಲ್ಲಿ ಒಂದುಗೂಡಲು ಈಗಲೂ ಸಿದ್ಧರಿಲ್ಲ. ನೆನಪಿರಲಿ! ಚರಿತ್ರೆಯು ಇಂಥ ಬೇಜವಾಬ್ದಾರಿಯನ್ನು ಎಂದೂ ಕ್ಷಮಿಸುವುದಿಲ್ಲ.

        ಕೃಪೆ: ಪಿ. ಮಹಮ್ಮದ್, ವಾರ್ತಾಭಾರತಿ

ಕೊರೊನಾ ಪೂರ್ವ ಹಾಗೂ ನಂತರದ ಕರ್ನಾಟಕ ರಾಜ್ಯದ ರಾಜಕೀಯವು ಎಂದಿನಂತೆ ಅನೇಕ ವೈರುಧ್ಯಗಳನ್ನು ಒಳಗೊಂಡಿದೆ. ಒಂದು ಕಡೆಗೆ ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವುದೇ ಪಕ್ಷಕ್ಕೆ ಪ್ರಬಲವಾದ ಬಹುಮತ ಬರದಿದ್ದುದರಿಂದ ಉಂಟಾಗುವ ಅಸ್ಥಿರತೆ. ಇದರಿಂದಾಗಿ ಪ್ರಣಾಳಿಕೆಗಳಲ್ಲಿ, ರಾಜಕೀಯ ನಿಲುವುಗಳಲ್ಲಿ, ಸಿದ್ಧಾಂತಗಳಲ್ಲಿ ಯಾವುದೇ ಸಹಮತವಿಲ್ಲದ ಪಕ್ಷಗಳು ಸಮ್ಮಿಶ್ರ ಸರಕಾರಗಳನ್ನು ರಚಿಸುವಂತಾಗುತ್ತದೆ. ಈ ಸರಕಾರಗಳು ಸ್ಪಷ್ಟವಾಗಿಯೇ ತಾತ್ಕಾಲಿಕ ಹೊಂದಾಣಿಕೆಯ ಫಲಗಳು. ಈವರೆಗೂ ಯಾವುದೇ ಸಮ್ಮಿಶ್ರ ಸರಕಾರವು ಕರ್ನಾಟಕದಲ್ಲಿ common minimum ಕಾರ್ಯಕ್ರಮಗಳನ್ನು ರಚಿಸಿಕೊಳ್ಳಲೇ ಇಲ್ಲ. ಹೀಗಾಗಿ ವಿವಿಧ ನಾಯಕರುಗಳ ವರ್ಚಸ್ಸು, ಜಾತಿ, ಹಣದ ಬಲ ಇವುಗಳ ಆಧಾರದ ಮೇಲೆ ಸದಾ ಅಸ್ಥಿರವಾಗುವ ಸರಕಾರಗಳನ್ನೇ ಕಂಡಿದ್ದೇವೆ. ಹೀಗೆ ಆಗುವುದಕ್ಕೆ ಎರಡು ಮುಖ್ಯ ಕಾರಣವೆಂದರೆ ಕರ್ನಾಟಕದ ರಾಜಕೀಯವು ಏಕೀಕರಣದಿಂದ ಇಲ್ಲಿಯವರೆಗೆ ಜಾತಿ ರಾಜಕಾರಣವೇ ಆಗಿದೆ. ತಮಿಳುನಾಡಿನಲ್ಲಿ ಎಷ್ಟೇ ವೈರುಧ್ಯಗಳಿದ್ದರೂ ಒಂದು ಬಗೆಯ “ತಮಿಳು ರಾಷ್ಟ್ರವಾದ” ಹಾಗೂ “ಉತ್ತರ ಭಾರತದ ರಾಜಕೀಯದ ವಿರೋಧ”ಗಳು ಅಲ್ಲಿಯ ರಾಜಕೀಯಕ್ಕೆ ಒಂದು ಚಹರೆಯನ್ನು ಕೊಟ್ಟಿವೆ. ಬ್ರಾಹ್ಮಣ ವಿರೋಧಿ, ದ್ರಾವಿಡ ಸಿದ್ಧಾಂತ ಹಾಗೂ ಹೋರಾಟಗಳ ಸಾಂಸ್ಕೃತಿಕ ನೆನಪುಗಳು ಈಗ ಇಲ್ಲದಿರಬಹುದು. ಆದರೆ ಕರ್ನಾಟಕ ರಾಜಕೀಯಕ್ಕೆ ಯಾವ ಚಹರೆ ಅಥವಾ ಐಡೆಂಟಿಟಿ ಇಲ್ಲವೇ ಇಲ್ಲ.

ಎರಡು ಪ್ರಬಲ ಜಾತಿಗಳಾದ ಲಿಂಗಾಯತರು ಮತ್ತು ಒಕ್ಕಲಿಗರು ಕರ್ನಾಟಕದ ರಾಜಕೀಯ ಅಧಿಕಾರವನ್ನು ಹಂಚಿಕೊಂಡಿದ್ದಾರೆ. ಈ ಎರಡು ಜಾತಿಗಳು ತಮ್ಮ ಶೂದ್ರ ಅಸ್ಮಿತೆಯನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಇತರ ರಾಜ್ಯಗಳಲ್ಲಿ ಜಯಶೀಲವಾದ ಶೂದ್ರ ರಾಜಕೀಯವು ಕರ್ನಾಟಕದಲ್ಲಿ ಬೆಳೆಯಲಿಲ್ಲ. ಹೀಗೆ ಸಾಂಸ್ಕೃತಿಕ ನೆನಪುಗಳೇ ಇಲ್ಲದ ಕಾರಣದಿಂದಾಗಿ ವಚನಕಾರ ಚಳುವಳಿಗೆ ವಾರಸುದಾರ ಎಂದು ಹೇಳಿಕೊಳ್ಳುವ ಲಿಂಗಾಯತ ಜಾತಿ(ಜಾತಿಗಳು ಎನ್ನುವುದು ಹೆಚ್ಚು ಸೂಕ್ತ) ಕೋಮುವಾದಿ ರಾಜಕೀಯ ಪಕ್ಷದ ಭದ್ರವಾದ ನೆಲೆಯಾಗಿದೆ. ಲಿಂಗಾಯತ ಮಠಗಳು ‘ನಮ್ಮವರು ಅಧಿಕಾರದಲ್ಲಿದ್ದರೆ ಸಾಕುʼ ಎನ್ನುವ ರಾಜಕೀಯದ ಬಹುಮುಖ್ಯ ಸಮರ್ಥಕ ಶಕ್ತಿಗಳಾಗಿವೆ. ಇದಕ್ಕೆ ಸಮನಾಂತರವಾಗಿ ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ “ನಮ್ಮವರು” ಎನ್ನುವ ಸಿದ್ಧಾಂತವನ್ನು ಒಕ್ಕಲಿಗ ಜಾತಿಯೂ ಪಾಲಿಸುತ್ತಿದೆ. ದುರಂತವೆಂದರೆ ಸಂಖ್ಯೆ ಹಾಗೂ ಪ್ರಭಾವದಲ್ಲಿ ಗಟ್ಟಿಯಾಗಿರುವ ಇತರ ಶೂದ್ರ ಜಾತಿಗಳು ತಾವೇ ಅಧಿಕಾರಕ್ಕೆ ಬರುವ ಸ್ಥಿತಿಯಲ್ಲಿಲ್ಲ. ಇತಿಹಾಸಕಾರರಿಗೆ ಅರ್ಥವಾಗದ ವಿಷಯವೆಂದರೆ ಆಧುನಿಕ ಭಾರತದ ಅತ್ಯಂತ ಪ್ರಮುಖ ಚಳುವಳಿಯಾದ ದಲಿತ ಸಂಘರ್ಷ ಸಮಿತಿಯ ತವರಾದ ಕರ್ನಾಟಕದಲ್ಲಿ ದಲಿತ ರಾಜಕೀಯವು ಬೆಳೆಯಲೇ ಇಲ್ಲ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಹೋರಾಟಗಳನ್ನು ರಾಜಕೀಯ ಶಕ್ತಿಯಾಗಿ (hegemony) ಪರಿವರ್ತಿಸಲು ಈವರೆಗೂ ಸಾಧ್ಯವಾಗಲಿಲ್ಲ. ಯಾವುದೇ ಪಕ್ಷದಲ್ಲಿದ್ದುಕೊಂಡು, ದಲಿತ ಸಿದ್ಧಾಂತವೆಂದರೇನು ಎಂದು ಗೊತ್ತಿರದ ಕರ್ನಾಟಕದ ದಲಿತ ರಾಜಕೀಯ ಜನಪ್ರತಿನಿಧಿಗಳು ಮತ್ತು ಮಂತ್ರಿಗಳು ಹಾಸ್ಯಾಸ್ಪದ ನಕಲಿ ಶಾಮರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಕೊರೊನಾ ಪಿಡುಗು ಪ್ರವೇಶ ಮಾಡಿತು. ಯಾವುದೇ ಮುಚ್ಚುಮರೆಲ್ಲದೆ ಬಹಿರಂಗವಾಗಿಯೇ ನಡೆದ ಅಪಾರವಾದ ಹಣದ ವ್ಯವಹಾರದ ಮೂಲಕ ಪಕ್ಷಾಂತರ ಮಾಡಿಸಿ ಅನೈತಿಕ ಸರಕಾರವೊಂದು ಅಸ್ತಿತ್ವಕ್ಕೆ ಬಂದಿತ್ತು. ಯಾವ ದೃಷ್ಟಿಯಿಂದ ನೋಡಿದರೂ ಇದೊಂದು ತೇಪೆ ಹಚ್ಚಿದ ಅಸ್ಥಿರವಾದ ರಾಜಕೀಯವೇ. ಸ್ಥಿರತೆಯ ಒಂದೇ ಶಕ್ತಿಯೆಂದರೆ ರಾಷ್ಟ್ರದಲ್ಲಿಯೂ, ಪಕ್ಷದಲ್ಲಿಯೂ ಯಾವುದೇ ಪ್ರಜಾಪ್ರಭುತ್ವವಾದಿ ಭಿನ್ನಮತವನ್ನು ಇಲ್ಲದಂತೆ ಮಾಡುತ್ತಿರುವ ರಾಷ್ಟ್ರನಾಯಕರು. ಇದಕ್ಕೆ ಪೂರಕವಾಗಿ ಕರ್ನಾಟಕದ ಯಾವುದೇ ಬಿಜೆಪಿ ನಾಯಕರಿಗೆ ಬಲಾಢ್ಯವಾದ, ಕೇಂದ್ರೀಕರಣವನ್ನು ಆರಾಧಿಸುವ ಪ್ರಾಂತೀಯ ರಾಜಕೀಯ ಶಕ್ತಿಗಳನ್ನು ಮೂಲೆಗುಂಪು ಮಾಡಲು ಬಯಸುವ ರಾಷ್ಟ್ರನಾಯಕರನ್ನು ಪ್ರಶ್ನಿಸುವ ಸಾಮರ್ಥ್ಯವೇ ಇಲ್ಲ. ಅದೇ ಹೊತ್ತಿಗೆ ಈಗಿರುವ ಕರ್ನಾಟಕದ ಸರಕಾರದಲ್ಲಿ ಅನೇಕ ಮಂತ್ರಿಗಳು ತಮ್ಮದೇ ಆದ ಆರ್ಥಿಕ, ರಾಜಕೀಯ ಶಕ್ತಿಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ.

ಇದರ ಪರಿಣಾಮವೆಂದರೆ ಕೊರೊನಾ ಪಿಡುಗನ್ನು ತಡೆಗಟ್ಟುವುದರಲ್ಲಿ ಆಗಿರುವ ಆಘಾತಕಾರಿ ಸೋಲು. ಕಳೆದ ತಿಂಗಳಿನಿಂದ ಕರ್ನಾಟಕವು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತು ಸಾವುಗಳಲ್ಲಿ ಮುಂಚೂಣಿಗೆ ಬರುತ್ತಿದೆ. ಈ ಭೀಕರ ಸಾವು ನೋವುಗಳ ಮಧ್ಯ ಸರಕಾರವು ಮಾಡಿದ ಭ್ರಷ್ಟಾಚಾರವು ಮನುಷ್ಯರು ಮಾಡುವ ಕೆಲಸವಲ್ಲ. ನಾನು ವಿರೋಧ ಪಕ್ಷದ ಟೀಕೆಗಳನ್ನು ಸಮರ್ಥಿಸುತ್ತಿಲ್ಲ. ನಾನು ವಾಸಿಸುವ ಶಿವಮೊಗ್ಗೆಯ ಜನಸಾಮಾನ್ಯರು ನನಗೆ ದಿನವೂ ಕೊಡುವ ವಿವರಗಳ ಆಧಾರದ ಮೇಲೆ ಹೇಳುತ್ತಿದ್ದೇನೆ. ಅಲ್ಲದೆ ಇದು ಕೇವಲ ಆಡಳಿತ ಪಕ್ಷದ ಟೀಕೆಯೂ ಅಲ್ಲ, ಕರ್ನಾಟಕದ ಯಾವುದೇ ರಾಜಕೀಯ ಪಕ್ಷವು ಅಧಿಕಾರದಲ್ಲಿದ್ದರೆ ಜಾಗತಿಕ ಪಿಡುಗನ್ನು ಭ್ರಷ್ಟಾಚಾರಕ್ಕಾಗಿ ಬಳಸಿಕೊಳ್ಳುತ್ತಿತ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಕರ್ನಾಟಕ ರಾಜ್ಯದ ಸ್ಥಿತಿ. ಇದನ್ನು ಅತಿಶಯೋಕ್ತಿ ಎನ್ನುವವರು ಒಂದು ಸರಳ ಪ್ರಶ್ನೆಗೆ ಉತ್ತರಿಸಲಿ. ಕಳೆದ ಹಲವಾರು ವರ್ಷಗಳಿಂದ ನಡೆದಿರುವ ರಾಜ್ಯಗಳಲ್ಲಿನ ಭ್ರಷ್ಟಾಚಾರದ ಎಲ್ಲಾ ಸಮೀಕ್ಷೆಗಳಲ್ಲಿ ಕರ್ನಾಟಕವು ಮೊದಲ ಅಥವಾ ಮೊದಲ ಮೂರನೇ ಸ್ಥಾನಗಳೊಳಗೆ ಯಾಕೆ ಇದೆ?

ನಮ್ಮ ಮಂತ್ರಿಗಳು ಪ್ರತಿದಿನ ಹೇಳುವ ಗಿಳಿಶಾಸ್ತ್ರವನ್ನು ಬದಿಗಿಟ್ಟು ನೋಡಿದರೆ ಈಗ ಕೊರೊನಾ ಪರಿಸ್ಥಿತಿಯು ಭೀಕರವಾಗಿದೆ. ಕರ್ನಾಟಕವು ಅತಿ ಹೆಚ್ಚು ಸಾವುಗಳನ್ನು ಕಾಣತೊಡಗಿದೆ. ಹಿಂದಿನ ಸರಕಾರಗಳು ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಹಾಳು ಮಾಡಿ ರಾಜ್ಯದಲ್ಲಿ ವೈದ್ಯಕೀಯ, ಆರೋಗ್ಯ ವ್ಯವಸ್ಥೆಯನ್ನು ಖಾಸಗಿ ಬಂಡವಾಳಶಾಹಿಗಳಿಗೆ ಒಪ್ಪಿಸುತ್ತಾ ಬಂದಿವೆ. ಖಾಸಗಿ ವೈದ್ಯಕೀಯ ಸಂಸ್ಥೆಗಳು ಎಲ್ಲಾ ಸರಕಾರಗಳ ಪ್ರತಿಯೊಬ್ಬ ಮಂತ್ರಿಗೂ ನೀಡುತ್ತಾ ಬಂದಿರುವ ಕಪ್ಪಕಾಣಿಕೆಗಳಿಂದಾಗಿ ಕೊರೊನಾ ಪೀಡಿತರಿಗೆ ಆರೈಕೆ ನೀಡದ, ಅಥವಾ ಲಕ್ಷಾನುಗಟ್ಟಲೆ ಶುಲ್ಕ ಪಡೆಯುವ ಖಾಸಗಿ ಆಸ್ಪತ್ರೆಗಳಿಗೆ ಇಂದಿನ ಸರಕಾರವು ಏನನ್ನೂ ಮಾಡುವುದಿಲ್ಲ. ಏಕೆಂದರೆ ಉಪ್ಪಿನ ಋಣ ಇರುವ ಮತ್ತು ರಾಜಕೀಯ ನಾಯಕರಿಗೆ ಕೋವಿಡ್ ಬಂದರೆ ೧೦ ಸೆಕೆಂಡ್‌ಗಳಲ್ಲಿ ಬೆಡ್ ನೀಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಈ ಸರಕಾರವು ಏನು ಮಾಡಬಲ್ಲದು?

ಇದಕ್ಕಿಂತ ಮುಖ್ಯವೆಂದರೆ ವಲಸೆ ಹೋದ ಕಾರ್ಮಿಕರು ಮರಳಿ ಮನೆಗೆ ಬಂದ ಮೇಲೆ ಅವರಿಗೆ ಕೆಲಸ, ಆದಾಯ ಬರುವ ಯಾವ ಕೆಲಸವೂ ಆಗಿಲ್ಲ. ಈಗ ಅನೇಕ ಕೆಲಸಕಾರರು, ಶ್ರಮಜೀವಿಗಳು ವಾಪಸ್ಸು. ಮಹಾನಗರಗಳ ಕಡೆಗೆ ಬರುತ್ತಿದ್ದಾರೆ. ಈ ಬಾರಿ ಅವರು ಇನ್ನೂ ಕ್ರೂರವಾದ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಏಕೆಂದರೆ ಕೋವಿಡ್ ಪಿಡುಗನ್ನು ಬಳಸಿಕೊಂಡು ಕಾರ್ಮಿಕ ವಿರೋಧಿ, ರೈತವಿರೋಧಿ ಕಾನೂನುಗಳನ್ನು ತರಲಾಗುತ್ತಿದೆ.

ಇದರಲ್ಲಿ ನನಗೆ ಕಾಣುವ ಲಕ್ಷಣಗಳೆಂದರೆ, ಸಂಪೂರ್ಣವಾಗಿ ಬಂಡವಾಳಶಾಹಿಗಳ ಪರವಾಗಿರುವ ಕರ್ನಾಟಕದ ರಾಜಕೀಯ ವ್ಯವಸ್ಥೆಯು ಇನ್ನು ಮುಂದೆ ರೈತರನ್ನು, ಕಾರ್ಮಿಕರನ್ನು, ಅಸಂಘಟಿತ ಶ್ರಮಜೀವಿಗಳನ್ನು ಅತ್ಯಂತ ಕ್ರೂರವಾಗಿ ದಮನಿಸುತ್ತದೆ. ಏಕೆಂದರೆ ಅಂತರ್‌ರಾಷ್ಟ್ರೀಯ ಬಂಡವಾಳಶಾಹಿಯ ಈಗಿನ ಅಪೇಕ್ಷೆಯೆಂದರೆ – ಬಲಿಷ್ಠವಾದ ಸರ್ವಾಧಿಕಾರಿ ಪ್ರಭುತ್ವಗಳು; ಈ ಪ್ರಭುತ್ವಗಳ ಆದೇಶಗಳನ್ನು ಪಾಲಿಸುವ ಸೈನಿಕರು ಮತ್ತು ಪೋಲೀಸರು; ರೈತರು, ಕಾರ್ಮಿಕರು ಇವರ ಪರವಾಗಿ ಹೋರಾಡುವ ವ್ಯಕ್ತಿಗಳು ಹಾಗೂ ಸಂಘಟನೆಗಳನ್ನು ಅಪಾರ ಹಿಂಸೆಗೆ ಈಡು ಮಾಡುವುದಕ್ಕೆ ಸಿದ್ಧವಾಗಿರುವ ನ್ಯಾಯಾಂಗ ವ್ಯವಸ್ಥೆ. ಇವೆಲ್ಲವು ಇಂದು ಭಾರತದಲ್ಲಿವೆ. ಹೀಗಾಗಿ “ಸ್ವರ್ಗಾದಪಿ ಗರೀಯಸಿ” ಎಂದು ಬಂಡವಾಳಶಾಹಿಗಳು ಈ ಜನ್ಮಭೂಮಿಯನ್ನು ದೇವರುಗಳ ಭಾಷೆಯಲ್ಲಿ ಕೊಂಡಾಡುತ್ತಿದ್ದಾರೆ.

ಕರ್ನಾಟಕ ರಾಜ್ಯದ ರಾಜಕೀಯದ ಇನ್ನೊಂದು ಲಕ್ಷಣವೆಂದರೆ ಕೇಂದ್ರದಿಂದ ಬರುವ ನೀತಿ ನಿರ್ದೇಶನಗಳನ್ನು ಅತ್ಯಂತ ವಿಧೇಯವಾಗಿ ಪಾಲಿಸುವುದು. ಇದು ಶಿಸ್ತು ಅಥವಾ ವಿಧೇಯತೆಗಿಂತಾಗಿ ಈ ರಾಜ್ಯದ ರಾಜಕೀಯವು ತನ್ನದೇ ಆದಂಥ ರಾಜಕೀಯ ಚಿಂತನೆ ಮತ್ತು ಕಾರ್ಯಸೂಚಿಗಳನ್ನು ಹೊಂದಿರದೆ ಇರುವುದರ ದ್ಯೋತಕವಾಗಿದೆ. ಕರ್ನಾಟಕದ ಏಕೀಕರಣ ಚಳುವಳಿಯ ನಂತರ ಸ್ವತಂತ್ರ ಭಾರತದ ಸರಕಾರವು ಭಾಷಾವಾರು ರಾಜ್ಯಗಳ ರಚನೆಗೆ ಉತ್ಸುಕವಾಗಿರಲಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಜವಾಹರ್‌ಲಾಲ್ ನೆಹರು ಭಾಷಾ ರಾಜಕೀಯದಿಂದ ದೇಶವು ವಿಚ್ಛಿದ್ರವಾಗಬಹುದೆಂಬ ಸಂಶಯವಿಟ್ಟುಕೊಂಡಿದ್ದರು. ಆಗಲೂ ಕೂಡ ಅಂದಿನ ಮೈಸೂರಿನ ಕಾಂಗ್ರೆಸ್ ಸರಕಾರವು ರಾಜ್ಯದ ಮಹಾನ್ ಸಾಂಸ್ಕೃತಿಕ ಏಕೀಕರಣ ಚಳುವಳಿಯನ್ನು ಸಮರ್ಥಿಸಿಕೊಂಡು ಕೇಂದ್ರದ ಮೇಲೆ ಒತ್ತಡ ತರಲಿಲ್ಲ. ಹುಬ್ಬಳ್ಳಿಯಲ್ಲಿ ಕಮ್ಯೂನಿಸ್ಟ್ ಪಕ್ಷದ ಕಾರ್ಮಿಕ ನಾಯಕರು ದೊಡ್ಡ ಪ್ರತಿಭಟನೆ ಮಾಡಿ ಕಾಂಗ್ರೆಸ್ ನಾಯಕರುಗಳಿಗೆ ಬಳೆ ತೊಡಿಸುತ್ತೇವೆ ಎಂದು ಗಲಾಟೆ ಮಾಡದಿದ್ದರೆ ಸರಕಾರವು ಎಚ್ಚರಗೊಳ್ಳುತ್ತಿರಲಿಲ್ಲ. ಈಗಲೂ ಪರಿಸ್ಥಿತಿ ಹಾಗೆಯೇ ಇದೆ. ಕರ್ನಾಟಕದ ಕಾಗೋಡು ಸತ್ಯಾಗ್ರಹ, ದೇವರಾಜ್ ಅರಸ್ ಅವರು ಜಾರಿಗೆ ತಂದ ಭೂಸುಧಾರಣಾ ಕಾನೂನು, ಅಭೂತಪೂರ್ವ ರೈತ ಚಳುವಳಿ-ಇವೆಲ್ಲವುಗಳ ಸಾಂಸ್ಕೃತಿಕ ನೆನಪುಗಳೇ ಇಲ್ಲದಂತೆ ಇಂದಿನ ಸರಕಾರವು ಭೂ ಸುಧಾರಣೆ ಕಾನೂನನ್ನು ಸರ್ವನಾಶ ಮಾಡಿದೆ. ಎಪಿಎಂಸಿಯಂಥ ಸಂಸ್ಥೆಯನ್ನು ಮಾರುಕಟ್ಟೆ ಶಕ್ತಿಗಳಿಗೆ ಪರಭಾರೆ ಮಾಡಿದೆ. ವಿದ್ಯುಚ್ಛಕ್ತಿ ಸರಬರಾಜನ್ನೂ ಇದೇ ಸ್ಥಿತಿಗೆ ತಂದಿದೆ. ವಿಶೇಷವೆಂದರೆ ಇವೆಲ್ಲವು ಕೇಂದ್ರ ಸರಕಾರದಿಂದ ಬಂದಿರುವ ನಿರ್ದೇಶನಗಳ ಪ್ರಕಾರ. ಮತ್ತು ಇವು ಸಂವಿಧಾನವು ಕಲ್ಪಿಸಿದ ಒಕ್ಕೂಟ ವ್ಯವಸ್ಥೆಯನ್ನು ನಾಶಮಾಡುವಂಥವು. ಇಂಥ ಕ್ರಮವನ್ನೇ ನಮ್ಮ ಸರಕಾರವು ಪ್ರಶ್ನಿಸುತ್ತಿಲ್ಲ. ಅಥವಾ ಖಾಸಗೀಕರಣದಿಂದ ಕರ್ನಾಟಕ ರಾಜ್ಯಕ್ಕೆ ಈವರೆಗೆ ಏನು ಲಾಭವಾಗಿದೆಯೆಂದೂ ಹೇಳಲು/ಕೇಳಲು ಸಿದ್ಧವಾಗಿಲ್ಲ. ನಿಜವಾದ ಅರ್ಥದಲ್ಲಿ ಕರ್ನಾಟಕ ರಾಜಕೀಯವು ರಾಜಕೀಯವೇ ಅಲ್ಲ. ಸುಸಂಗತೆಯೇ ಇಲ್ಲದ ad hoc ಕ್ರಿಯೆಗಳ ಸರಣಿಯಾಗಿದೆಯಷ್ಟೆ.

ಇಲ್ಲಿಯವರೆಗೆ ನಾನು ವಿವರಿಸಿದ್ದು ಕರ್ನಾಟಕ ರಾಜಕೀಯದ ಕರಾಳಮುಖ. ಆದರೆ ಈ ಅಸಹ್ಯ ರಾಜಕೀಯವನ್ನು ವಿಮರ್ಶಿಸುವ, ವಿರೋಧಿಸುವ ನೆಲೆಗಳು ಕರ್ನಾಟಕದಲ್ಲಿವೆ. ಜಾಗತೀಕರಣ, ಖಾಸಗೀಕರಣ, ಕೋಮುವಾದ ಇವುಗಳ ವಿರುದ್ಧ ಅತ್ಯಂತ ಪ್ರಬಲವಾದ ವೈಚಾರಿಕ ಪ್ರತಿರೋಧವು ಬಂದಿದ್ದು ಕರ್ನಾಟಕದಿಂದಲೇ. ಇದು ಕೇವಲ ಅಲ್ಪಸಂಖ್ಯಾತ ಬುದ್ಧಿಜೀವಿಗಳ ಕೊಡುಗೆಯಲ್ಲ, ಅತ್ಯಂತ ಪ್ರತಿಭಾವಂತ, ಸೂಕ್ಷ್ಮ ಚಿಂತನೆಯ ಅನೇಕರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ.  ಸಮಸ್ಯೆಯೆಂದರೆ ಇಲ್ಲಾ ನೀವು ವೈಯಕ್ತಿಕವಾಗಿ ನಿಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬಹುದು ಅಥವಾ ಯಾವುದೋ ಒಂದು ಸಂಘಟನೆಯ ಮೂಲಕ ಇದನ್ನು ಮಾಡಬೇಕು. ಆದರೆ ಇಡೀ ದೇಶದ ಜನಸಾಮಾನ್ಯರ ಸಾವು-ಬದುಕಿನ ಸಮಸ್ಯೆ ಇರುವಾಗ, ಪ್ರಜಾಪ್ರಭುತ್ವದ ಮೂಲ ಆಕಾಂಕ್ಷೆಗಳೇ ಅಪಾಯದಲ್ಲಿರುವಾಗ ಕರ್ನಾಟಕದ ಜನಪರ ಸಂಘಟನೆಗಳು ಒಂದು ವೇದಿಕೆಯಲ್ಲಿ ಒಂದುಗೂಡಲು ಈಗಲೂ ಸಿದ್ಧರಿಲ್ಲ. ನೆನಪಿರಲಿ! ಚರಿತ್ರೆಯು ಇಂಥ ಬೇಜವಾಬ್ದಾರಿಯನ್ನು ಎಂದೂ ಕ್ಷಮಿಸುವುದಿಲ್ಲ.

 

 

Donate Janashakthi Media

Leave a Reply

Your email address will not be published. Required fields are marked *