ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ನಿನ್ನೆ ಮೌಖಿಕ ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್ ಇಂದು ಮಧ್ಯಂತರ ಆದೇಶವನ್ನು ಪ್ರಕಟಿಸಿದೆ. ಅದರಲ್ಲಿ ಹೈಕೋರ್ಟ್ ಹೀಗೆ ಹೇಳಿದೆ: ನಮ್ಮದು ನಾಗರಿಕ ಸಮಾಜ. ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿ ಇಂತಹ ಕೃತ್ಯ ನಡೆಸಲು ಅವಕಾಶವಿಲ್ಲ. ತಡೆಯಿರದ ಪ್ರತಿಭಟನೆಗಳಿಂದ ಶಾಲೆ ಕಾಲೇಜುಗಳು ಬಂದ್ ಆಗಬಾರದು ಎಂದು ತಿಳಿಸಲಾಗಿದೆ.
ಎಲ್ಲ ರಿಟ್ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಋತರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ಮಹಿಳಾ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಮೂವರು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಇಂದು ಈ ಮಧ್ಯಂತರ ಆದೇಶ ಬಿಡುಗಡೆ ಮಾಡಿದೆ.
ಶಿಕ್ಷಣ ಸಂಸ್ಥೆಗಳು ಅನಿರ್ದಿಷ್ಟ ಕಾಲ ಬಂದ್ ಆಗುವುದು ಒಳ್ಳೆಯ ಸಂಗತಿಯಲ್ಲ. ಈ ಪ್ರಕರಣದ ವಿಚಾರಣೆಯನ್ನು ತುರ್ತು ಆಧಾರದ ಮೇಲೆ ನಡೆಸಲಾಗುತ್ತಿದೆ. ಶೈಕ್ಷಣಿಕ ವರ್ಷವನ್ನು ವಿಳಂಬಿಸುವುದರಿಂದ ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾಗುತ್ತದೆ. ಪ್ರಸಕ್ತ ಶೈಕ್ಷ ಕ್ಷಣಿಕ ವರ್ಷ ಇನ್ನೇನು ಅಂತ್ಯವಾಗುತ್ತಿದೆ. ಸಂಬಂಧಪಟ್ಟವರೆಲ್ಲಾ ಶಾಂತಿ ಸಾಮರಸ್ಯ ಕಾಯ್ದುಕೊಳ್ಳಬೇಕಿದೆ. ಹೀಗಾಗಿ ಶಿಕ್ಷಣ ಸಂಸ್ಥೆ ತೆರೆದು ವಿದ್ಯಾರ್ಥಿಗಳು ಮರಳಲು ಅವಕಾಶ ನೀಡಿ ಸರ್ಕಾರ ಸೇರಿದಂತೆ ಸಂಬಂಧಪಟ್ಟವರಿಗೆ ಮನವಿ ಮಾಡುತ್ತೇವೆ. ಉನ್ನತ ಶಿಕ್ಷಣದ ಪ್ರವೇಶಕ್ಕೆ ಸಮಯ ಈಗಾಗಲೇ ನಿಗದಿಯಾಗಿರುತ್ತದೆ. ನಿಗದಿತ ಸಮಯದೊಳಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು ಕಡ್ಡಾಯವಾಗುತ್ತದೆ.
ಪ್ರತಿಭಟನೆಗಳಿಂದ ಶಾಲೆ-ಕಾಲೇಜು ಮುಚ್ಚಿದ್ದು ನೋವಿನ ಸಂಗತಿ. ಸಂವಿಧಾನ ಮತ್ತು ವೈಯಕ್ತಿಕ ಕಾನೂನಿನ ಗಂಭೀರ ವಿಚಾರಣೆ ನಡೀತಿದೆ. ಭಾರತ ಬಹುತ್ವದ ಜಾತ್ಯತೀತ ದೇಶ. ಕೇವಲ ಒಂದು ಧರ್ಮಕ್ಕೆ ಮಾತ್ರವೇ ಸೀಮಿತವಾದ ಧರ್ಮದ ಆಧಾರದಲ್ಲಿ ಗುರುತಿಸುವಂತಹ ದೇಶ ಇದಲ್ಲ. ಬಹುಭಾಷೆ, ಬಹು ಸಂಸೃತಿ, ಬಹು ಧರ್ಮಗಳಿಂದ ಕೂಡಿರುವ ದೇಶವಿದು. ಇಲ್ಲಿ ಪ್ರತಿಯೊಬ್ಬ ನಾಗರಿಕನೂ ತನ್ನಿಚ್ಛೆ ಮತ್ತು ವೈಯಕ್ತಿಕ ನಂಬಿಕೆಗಳಿಗೆ ಅನುಗುಣವಾಗಿ ತನ್ನ ಧಾರ್ಮಿಕ ಆಚರಣೆಯ ಹಕ್ಕು ಮತ್ತು ಸ್ವಾತಂತ್ರ್ಯ ಹೊಂದಿರುತ್ತಾನೆ. ಆದಾಗ್ಯೂ, ಇವೆಲ್ಲವೂ ಸಂವಿಧಾನದ ಚೌಕಟ್ಟಿನಲ್ಲಿರುವ ನಿರ್ಬಂಧಗಳಿಗೆ ಒಳಪಟ್ಟಿರಬೇಕಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ನ್ಯಾಯಪೀಠ ಎಚ್ಚರಿಸಿದೆ.
ತರಗತಿಯಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕೇ? ಎಂಬ ಪ್ರಶ್ನೆಯಿದೆ. ಈ ಬಗ್ಗೆ ಆಳವಾದ ವಿಚಾರಣೆ ನಡೆಸುವ ಅಗತ್ಯವಿದೆ. ನಮ್ಮದು ನಾಗರಿಕ ಸಮಾಜ ಎಂದಿರುವ ಹೈಕೋರ್ಟ್‌ನ ಪೂರ್ಣ ಪೀಠವು ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿ ಇಂತಹ ಕೃತ್ಯ ನಡೆಸಲು ಅವಕಾಶವಿಲ್ಲ ಎಂದಿದೆ.
ಆದಷ್ಟು ಬೇಗ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿ. ಎಲ್ಲಾ ವಿದ್ಯಾರ್ಥಿಗಳಿಗೂ ನಾವು ನಿರ್ಬಂಧ ಹೇರುತ್ತಿದ್ದೇವೆ. ತಮ್ಮ ಧರ್ಮಾನುಸಾರ ಕೇಸರಿ ಶಾಲು ಅಥವಾ ಸ್ಕಾರ್ಫ್ ಯಾವುದೇ ಆಗಲಿ. ಹಿಜಾಬ್, ಧಾರ್ಮಿಕ ಬಾವುಟಗಳನ್ನಾಗಲೀ ತರಗತಿಯೊಳಗೆ ತರುವಂತಿಲ್ಲ. ಮುಂದಿನ ಆದೇಶದವರೆಗೂ ಇವುಗಳನ್ನು ತರದಂತೆ ನಿರ್ಬಂಧಿಸುತ್ತಿದ್ದೇವೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
“ಯಾವ ಕಾಲೇಜು ಅಭಿವೃದ್ಧಿ ಸಮಿತಿಗಳು (ಸಿಡಿಸಿ) ವಸ್ರ್ತಸಂಹಿತೆ ನಿಗದಿಪಡಿಸಿವೆಯೋ ಮತ್ತು ಯಾವ ಶೈಕ್ಷಣಿಕ ಸಂಸ್ಥೆಗಳು ಸಮವಸ್ತ್ರ ನೀತಿಯನ್ನು ಜಾರಿ ಮಾಡಿವೆಯೊ ಅವುಗಳಿಗೆ ಮಾತ್ರವೇ ಈ ಆದೇಶ ಸೀಮಿತವಾಗಿದೆ” ಎಂದೂ ನ್ಯಾಯಪೀಠ ತನ್ನ ಏಳು ಪುಟಗಳ ಕ್ಲುಪ್ತ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಮುಂದಿನ ವಿಚಾರಣೆ ಸೋಮವಾರ(ಫೆ.14)ಕ್ಕೆ ನಿಗದಿಪಡಿಸಲಾಗಿದೆ.