ಬೆಂಗಳೂರು : ಸಂವಿಧಾನ ನನಗೆ ಭಗವತ್ ಗೀತೆಗಿಂತ ಮೇಲೆ. ನಾನು ಸಂವಿಧಾನಕ್ಕೆ ನೀಡಿರುವ ಪ್ರಮಾಣ ವಚನಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆ” ಎಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷತ್ ಹೇಳಿದ್ದಾರೆ.
ಹಿಜಾಬ್ ಅರ್ಜಿ ವಿಚಾರಣೆ ನಡೆಸುತ್ತಿರುವ ವೇಳೆ ಎಲ್ಲಾ ಭಾವನೆಗಳನ್ನು ಬದಿಗಿರಿಸಿ ಸಂವಿಧಾನ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇನೆ. ಸಂವಿಧಾನ ನನಗೆ ಭಗವತ್ ಗೀತೆಗಿಂತ ಮೇಲೆ. ನಾನು ಸಂವಿಧಾನಕ್ಕೆ ನೀಡಿರುವ ಪ್ರಮಾಣ ವಚನಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ಹಿಜಾಬ್ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ಜನರು ನೋಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ‘ಹಿಂದೂ – ಮುಸ್ಲಿಂ ಏಕ್ ಹೈ’ ವಿದ್ಯಾರ್ಥಿಗಳಿಂದ ಮೊಳಗಿದ ಘೋಷಣೆ
ಉಡುಪಿ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪ್ರವೇಶ ನಿರಾಕರಿಸಿರುವುದನ್ನು ಪ್ರಶ್ನಿಸಿ, ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶ ನೀಡುವಂತೆ ಕೋರಿ ಹಾಕಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರ ನಡೆಸುತ್ತಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ನಾಲ್ಕು ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ.
ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೇಶಮ್ ಫಾರೂಕ್ ಸಲ್ಲಿಸಿರುವ ಅರ್ಜಿಯಲ್ಲಿ ಸಂವಿಧಾನದ 14 ಮತ್ತು 25ನೇ ವಿಧಿಯಡಿ ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿರುವ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸರ್ಕಾರದ ಪರವಾಗಿ ವಾದಿಸುತ್ತಿದ್ದು, ವಿದ್ಯಾರ್ಥಿನಿಯರ ಪರವಾಗಿ ಹಿರಿಯ ವಕೀಲ ದೇವದತ್ತ ಕಾಮತ್ ಮತ್ತು ಮೊಹಮ್ಮದ್ ತಾಹೀರ್ ವಾದಿಸುತ್ತಿದ್ದಾರೆ.