ಕರ್ನಾಟಕದ ಗ್ಯಾರಂಟಿ ಅಲೆ ತೆಲಂಗಾಣದಲ್ಲೂ ಬಿಸುತ್ತಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಸರ್ಕಾರದ ಸಾಧನೆ ನಿರ್ಣಾಯಕ ಪಾತ್ರ ವಹಿಸಲಿದೆ. ತೆಲಂಗಾಣದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಯಶಸ್ಸಿನ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.ಗ್ಯಾರೆಂಟಿ

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು ಇದರಿಂದ ಪ್ರಧಾನಿ  ಅವರೂ ಸೇರಿದಂತೆ ಬಿಜೆಪಿ  ನಾಯಕರೆಲ್ಲರೂ ಸೋಲಿನ ಭೀತಿಗೀಡಾಗಿದ್ದು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಾಧನೆಯ ಪ್ರಚಾರವನ್ನು ತಡೆಯಲು ಹತಾಶ ಪ್ರಯತ್ನ ನಡೆಸಿದ್ದಾರೆ ಎಂದು ಟೀಕಿಸಿದ್ದಾರೆ. ಗ್ಯಾರೆಂಟಿ 

ತೆಲಂಗಾಣ ಚುನಾವಣೆ ಎನ್ನುವುದು ವಚನಬದ್ದ ಕಾಂಗ್ರೆಸ್‌ ಮತ್ತು ವಚನಭ್ರಷ್ಟ ಬಿಜೆಪಿ ನಡುವಿನ ಸಮರ ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ಸತ್ಯ ಮತ್ತು ಬಿಜೆಪಿಯ ಸುಳ್ಳುಗಳ ನಡುವಿನ ಸಂಘರ್ಷವೂ ಆಗಿದೆ. ಒಂಬತ್ತುವರೆ ವರ್ಷಗಳ ಅವಧಿಯ  ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯ ಶೇಕಡಾ ಹತ್ತರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ ಎನ್ನುವುದು ಅಲ್ಲಿನ ಮತದಾರರಿಗೆ ಅರಿವಾಗಿದೆ. ಇದರಿಂದ ಅಲ್ಲಿ ಪ್ರಧಾನಿ ನರೇಂದ್ರಮೋದಿಯವರ ಪ್ರಚಾರದಿಂದ ಆ ಪಕ್ಷಕ್ಕೆ ನಷ್ವವೇ ಹೊರತು ಲಾಭ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

2013-18 ರ ಅವಧಿಯ ನಮ್ಮ ಹಿಂದಿನ ಸರ್ಕಾರ ಮತ್ತು ಆರು ತಿಂಗಳ ಅವಧಿಯ ಈಗಿನ ಸರ್ಕಾರದ ಸಾಧನೆಗಳನ್ನು ಆ ರಾಜ್ಯದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮನೆಮನೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಮರೆತುಬಿಟ್ಟಿರುವ ಬಿಆರ್‌ಎಸ್ ಪಕ್ಷ ಮತ್ತು ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲು ವಿಫಲವಾಗಿರುವ ಕೇಂದ್ರದ  ನರೇಂದ್ರ ಮೋದಿ ಸರ್ಕಾರದ ಎದುರಲ್ಲಿ ತೆಲಂಗಾಣದ ಮತದಾರರಿಗೆ ಕಾಂಗ್ರೆಸ್ ಪಕ್ಷ ಭರವಸೆಯ ಆಶಾಕಿರಣದಂತೆ ಕಾಣಿಸುತ್ತಿರುವ ಕಾರಣದಿಂದಾಗಿಯೇ ಕಾಂಗ್ರೆಸ್ ಪಕ್ಷದ ಪರವಾದ ಅಲೆ ಎದ್ದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅದಾನಿ ಅಂಬಾನಿಗೆ ಸಾಲ ಮನ್ನಾ ಮಾಡುವ ಸರ್ಕಾರ ಮಹಿಳೆ, ಕಾರ್ಮಿಕರಿಗೆ ಏನು ಕೊಟ್ಟಿದೆ- ಎಸ್. ವರಲಕ್ಷ್ಮಿ

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಎಕ್ಸ್ ಪೈರಿ ಡೇಟ್ ಮುಗಿದಿದೆ. ಇದು ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿಯೇ ಸಾಬೀತಾಗಿದೆ. ತೆಲಂಗಾಣ ಸೇರಿದಂತೆ ಪಂಚರಾಜ್ಯ ಚುನಾವಣೆಗಳಲ್ಲಿ ಮರುಸಾಬೀತಾಗಲಿದೆ ಎಂದು ಟೀಕಿಸಿದ್ದಾರೆ.

ಪ್ರತ್ಯೇಕ ರಾಜ್ಯವಾಗಿ ತೆಲಂಗಾಣ ರೂಪುಗೊಳ್ಳಲು ಕಾಂಗ್ರೆಸ್ ಪಕ್ಷ ಕಾರಣ ಎನ್ನುವುದನ್ನು ಆ ರಾಜ್ಯದ ಮತದಾರರು ವಿಳಂಬವಾಗಿಯಾದರೂ ಅರ್ಥ ಮಾಡಿಕೊಂಡಿದ್ದಾರೆ. ಪ್ರಾದೇಶಿಕ ಆಶೋತ್ತರದ ಹೆಸರಲ್ಲಿ ಜನರನ್ನು ಮರುಳು ಮಾಡುತ್ತಾ ಬಂದಿರುವ ಬಿಆರ್ ಎಸ್ ಪಕ್ಷದ ನಾಟಕ ಅಲ್ಲಿನ ಮತದಾರರಿಗೆ ಅರಿವಾಗಿದೆ. ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಮಿತಿಮೀರಿದ ಭ್ರಷ್ಟಾಚಾರದಿಂದಾಗಿ ಬಿಆರ್‌ಎಸ್ ಪಕ್ಷ ಜನತೆಯ ವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಿದೆ. ಬಿಜೆಪಿ ಮತ್ತು ಬಿಆರ್‌ಎಸ್ ಎರಡೂ ಪಕ್ಷಗಳನ್ನು ಹಿಂದಕ್ಕಟ್ಟಿ ಮುಂದೋಡುತ್ತಿರುವ ಕಾಂಗ್ರೆಸ್ ಪಕ್ಷ ಅಚ್ಚರಿಯ ಗೆಲುವನ್ನು ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ: ಪೋಕ್ಸೋ ಪ್ರಕರಣದ ಆರೋಪಿ ಸ್ವಾಮಿಗೆ ಪಾದಪೂಜೆ ! ಜನರ ಪ್ರಜ್ಞೆಗೆ ಏನಾಗಿದೆ? – ಮೂಡ್ನಾಕೂಡು ಚಿನ್ನಸ್ವಾಮಿ

Donate Janashakthi Media

Leave a Reply

Your email address will not be published. Required fields are marked *