ಸೆಪ್ಟೆಂಬರ್ ಮೊದಲ ವಾರ ವಿಧಾನಸಭಾ ಅಧಿವೇಶನ ಸಾಧ್ಯತೆ

ಬೆಂಗಳೂರು: ವಿಧಾನಮಂಡಲದ ಅಧಿವೇಶನವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಬಾರಿ ಬೆಳಗಾವಿ ಬದಲಾಗಿ ಬೆಂಗಳೂರಿನಲ್ಲಿಯೇ 10 ದಿನಗಳ ಕಾಲ ನಡೆಸುವ ಸಾಧ್ಯತೆಗಳಿವೆ ಎಂಬ ಮಾಹಿತಿ ಇದೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಯಾದ ನಂತರದಲ್ಲಿ ಇದು ಮೊದಲನೇ ಅಧಿವೇಶನವಾಗಿದೆ. ಈ ಬಾರಿ ಅಧಿವೇಶನದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಪ್ರವಾಹ ಪರಿಸ್ಥಿತಿ, ಸಾಂಕ್ರಾಮಿಕ ರೋಗದ ನಿರ್ವಹಣೆ, ಲಸಿಕೆ ಕೊರತೆ ಮತ್ತು ಇನ್ನಿತರೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಗೆ ಒಳಪಡಿಸುವ ಸಾಧ್ಯತೆಗಳಿವೆ. ಆ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ನಿರ್ಧರಿಸಿವೆ.

ಇದನ್ನು ಓದಿ: ಸಚಿವರಿಗೆ ಖಾತೆಗಳು ಹಂಚಿಕೆ: ಸಿಎಂಗೆ ಹಣಕಾಸು, ಆರಗ ಜ್ಞಾನೇಂದ್ರಗೆ ಗೃಹ, ಸಿ.ಸಿ.ಪಾಟೀಲ ಲೋಕೋಪಯೋಗಿ

ಸಂವಿಧಾನ 174ನೇ ನಿಯಮಗಳ ಪ್ರಕಾರ ಆರು ತಿಂಗಳಿಗೊಮ್ಮೆ ಅಧಿವೇಶನ ಕರೆಯಬೇಕಾಗಿದೆ. ಹೀಗಾಗಿ ಸರ್ಕಾರ ಸೆಪ್ಟೆಂಬರ್ 24ರೊಳಗಾಗಿ ಅಧಿವೇಶನ ನಡೆಸಬೇಕಿದೆ. ಸರ್ಕಾರದ ಮೂಲಗಳ ಪ್ರಕಾರ, ಸೆಪ್ಟೆಂಬರ್ 6 ಅಥವಾ ಸೆಪ್ಟೆಂಬರ್ ಎರಡನೇ ವಾರದಲ್ಲಿ ಅಧಿವೇಶನ ಆರಂಭಗೊಳ್ಳುವ ಸಾಧ್ಯತೆಗಳಿವೆ.

ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಸಬೇಕೆಂದು ವಿವಿಧ ಮೂಲಗಳಿಂದ ಚರ್ಚೆಗಳು ಕೇಳಿಬಂದಿದ್ದವು. ಆದರೆ, ಕೋವಿಡ್ -19 ರೋಗ ನಿಯಂತ್ರಗಳ ಬಗೆಗಿನ ನಿಯಮಗಳಿಂದಾಗಿ ಬೆಂಗಳೂರಿನಲ್ಲಿ ಅಧಿವೇಶನ ನಡೆಸು ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಧುಸ್ವಾಮಿ ಕೋವಿಡ್ನ ಎಲ್ಲಾ ನಿಯಮಗಳನ್ನು ಅನುಸರಿಸಿ ಸರಕಾರ ಅಧಿವೇಶನ ನಡೆಸಲು ಸಿದ್ಧವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಮತ್ತು ಮುಂದಿನ ವಾರದ ವೇಳೆಗೆ ಅದನ್ನು ಸಂಪುಟದದಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುವುದು. ಕೋವಿಡ್ -19 ಪರಿಸ್ಥಿತಿಗೆ ಅವಲಂಬಿಸಿ ಅಧಿವೇಶನದ ದಿನಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ ಎಂದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ದಿನಾಂಕ ಮತ್ತು ವೇಳಾಪಟ್ಟಿ ಬಗ್ಗೆ ಸಂಪುಟ ಸಭೆ ನಿರ್ಧರಿಸುತ್ತದೆ ಎಂದಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ಬಜೆಟ್ ಅಧಿವೇಶನವನ್ನು ನಡೆದಿತ್ತು.  ಮಾರ್ಚ್ 4 ರಿಂದ 31ರವರೆಗೆ ನಡೆಯಬೇಕಾಗಿದ್ದ ಅಧಿವೇಶನ ಕೋವಿಡ್ ಪ್ರಕರಣಗಳ ಏರಿಕೆಯಿಂದಾಗಿ ಮಾರ್ಚ್ 24ರವರೆಗೆ ಮಾತ್ರ ನಡೆಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *