ಶಾಲಾ – ಕಾಲೇಜ್ ಬಂದ್ ಇಲ್ಲ, ಮುಖ್ಯ ಕಾರ್ಯದರ್ಶಿ ಹೊರತುಪಡಿಸಿ ಸಚಿವರು ಪ್ರತ್ಯೇಕ ಆದೇಶ ಹೊರಡಿಸುವಂತಿಲ್ಲ
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಹಾಗೂ ನೈಟ್ ಕರ್ಫ್ಯೂ ಜಾರಿ ಮಾಡುವುದಿಲ್ಲ. ಆದರೆ 15 ದಿನ ಯಾವುದೇ ರೀತಿಯ ಪ್ರತಿಭಟನೆಗಳಿಗೆ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಕೊರೊನಾ ಕುರಿತು ಸಭೆ ನಡೆಸಿದ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, “ಮಾಸ್ಕ್ ಹಾಕದಿದ್ದರೆ ದಂಡ ವಿಧಿಸಲಾಗುತ್ತದೆ. ದಂಡದ ಪ್ರಮಾಣ ಹೆಚ್ಚಿಸಲ್ಲ, ಆದರೆ ದಂಡ ವಸೂಲಿ ಮಾಡಲಾಗುತ್ತದೆ. ಕಲ್ಯಾಣ ಮಂಟಪಗಳಲ್ಲಿ ಮಾರ್ಗಸೂಚಿ ಉಲ್ಲಂಘನೆಯಾದರೆ ಕಲ್ಯಾಣ ಮಂಟಪ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಆರು ತಿಂಗಳು ಕಲ್ಯಾಣ ಮಂಟಪ ಮುಚ್ಚಲಾಗುತ್ತದೆ,” ಎಂದು ತಿಳಿಸಿದ್ದಾರೆ.
ಲಾಕ್‌ಡೌನ್, ಕರ್ಫ್ಯೂ ಇಲ್ಲ: ರಾಜ್ಯದಲ್ಲಿ ಮುಂದೆ ಯಾವುದೇ ರೀತಿಯ ಲಾಕ್‌ಡೌನ್, ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಿಲ್ಲ. ಪಬ್, ಚಿತ್ರಮಂದಿರಗಳಲ್ಲಿ ನಿರ್ಬಂಧ ಜಾರಿಗೊಳಿಸುವ ಪ್ರಸ್ತಾವವೂ ಸದ್ಯಕ್ಕೆ ಇಲ್ಲ ಎಂದರು. ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ಪ್ರತಿ ಸೋಂಕಿತರಿಗೆ 25ಕ್ಕೆ ಬದಲಾಗಿ 30 ಜನ ಸಂಪರ್ಕಿತರನ್ನು ಪತ್ತೆಹಚ್ಚುವಂತೆ ಗುರಿ ನಿಗದಿಪಡಿಸಲಾಗಿದೆ. ಸಂಪರ್ಕಿತರ ಪತ್ತೆಗೆ ಶಿಕ್ಷಣ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಿದರು.
ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರ ಸಭೆಗಳಲ್ಲಿ ಹೆಚ್ಚು ಜನರು ಒಂದೆಡೆ ಸೇರದಂತೆ ನಿಯಂತ್ರಿಸಲಾಗುವುದು. ಈ ಸಂಬಂಧ ಮಂಗಳವಾರವೇ ಹೊಸದಾಗಿ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸೋಂಕಿತ ಪ್ರದೇಶದ ಮೇಲೆ ನಿಗಾ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆಯಾಗಿದೆ. ಮೈಸೂರು, ಕಲಬುರ್ಗಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದಿನವೊಂದಕ್ಕೆ ಸರಾಸರಿ 100 ಪ್ರಕರಣಗಳು ವರದಿಯಾಗುತ್ತಿವೆ. ಈ ಜಿಲ್ಲೆಗಳಲ್ಲೂ ನಿಗಾ ಇಡಲಾಗುವುದು ಎಂದರು.
ಶಾಲೆ, ಕಾಲೇಜು ಬಂದ್ ಇಲ್ಲ: ಶಾಲೆ, ಕಾಲೇಜುಗಳನ್ನು ಬಂದ್ ಮಾಡುವ ಪ್ರಸ್ತಾವವೇ ಇಲ್ಲ. 15 ದಿನಗಳಲ್ಲಿ ಪರೀಕ್ಷೆಗಳು ಪೂರ್ಣಗೊಳ್ಳಲಿದ್ದು, ಆ ಬಳಿಕ ಈ ಕುರಿತು ಯೋಚಿಸಲಾಗುವುದು. ಮಕ್ಕಳು ಶಾಲೆ, ಕಾಲೇಜುಗಳಿಗೆ ಬಂದರೆ ಶಿಸ್ತಿನಿಂದ ಇರುತ್ತಾರೆ. ಅಪಾರ್ಟ್‌ಮೆಂಟ್ ಮತ್ತು ಮನೆಗಳಲ್ಲಿ ಗುಂಪುಗೂಡಿ ಇರುತ್ತಾರೆ ಎಂದರು. ಒಂದರಿಂದ ಒಂಬತ್ತನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಪರೀಕ್ಷೆಯೇ ಇಲ್ಲದೆ ಮುಂದಿನ ತರಗತಿಗೆ ಉತ್ತೀರ್ಣಗೊಳಿಸುವ ಕುರಿತು ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದರು. ‘ಎಲ್ಲ ಶಿಕ್ಷಕರಿಗೂ ಕೋವಿಡ್ ಲಸಿಕೆ ಹಾಕಿಸಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಯಡಿಯೂರಪ್ಪ ತಿಳಿಸಿದರು.
ಪ್ರತ್ಯೇಕ ಆದೇಶ ಹೊರಡಿಸುವಂತಿಲ್ಲ: ಕೋವಿಡ್ ನಿಯಂತ್ರಣ, ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಮಾತ್ರ ಆದೇಶ, ಸುತ್ತೋಲೆಗಳನ್ನು ಹೊರಡಿಸಬೇಕು. ಯಾವುದೇ ಸಚಿವರು ಅಥವಾ ಅಧಿಕಾರಿಗಳು ಪ್ರತ್ಯೇಕವಾಗಿ ಆದೇಶ, ಸುತ್ತೋಲೆ ಹೊರಡಿಸಬಾರದು ಎಂದು ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ.
ಮಾಲೀಕರಿಗೆ ದಂಡ: ಮದುವೆ ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾದರೆ ಈವರೆಗೂ ಆಯೋಜಕರಿಗೆ ದಂಡ ಹಾಕಲಾಗುತ್ತಿತ್ತು. ಮುಂದೆ ಕಲ್ಯಾಣ ಮಂಟಪಗಳ ಮಾಲೀಕರಿಗೆ ದಂಡ ವಿಧಿಸಿ, ಆರು ತಿಂಗಳವರೆಗೆ ಮುಚ್ಚುವಂತೆ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ಪ್ರತಿಭಟನೆಗೆ ಅವಕಾಶ ನಿರಾಕರಣೆ ಸರಿಯಲ್ಲ : ಪ್ರತಿಭಟನೆಗೆ ಅವಕಾಶ ನಿರಸಕರಣೆ ಮಾಡಿರುವುದು ಸರಿಯಲ್ಲ ಎಂದು ಜನಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ವಿಧಾನಸಭಾ ಚುನಾವಣೆ ಎಷ್ಟು ಜನ ಸೇರಬೇಕು ಎಂಬ ನಿಯಮಗಳನ್ನು ಜಾರಿ ಮಾಡಲು ಯೋಚಿಸುವ ಸರಕಾರ ಪ್ರತಿಭಟನೆಗೆ ಅವಕಾಶ ಎಲ್ಲ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಜನಪರ ಸಂಘಟನೆಗಳು ಆರೋಪಿಸಿವೆ.