- ಅಂಕಿಗಳನ್ನು ಅಕ್ಷರ ರೂಪದಲ್ಲಿ ನಮೂದಿಸಿದರೆ ಮತ ಅಸಿಂಧು ಆಗಲಿದೆ.
- ಮತಪತ್ರದಲ್ಲಿ ಮತದಾರ ಹೆಸರು ಬರೆದರೆ, ಸಹಿ ಮಾಡಿದರೆ, ಹೆಬ್ಬೆಟ್ಟು ಹಾಕಿದರೆ ಅದು ಅಸಿಂಧು ಆಗಲಿದೆ
- ಒಬ್ಬ ಅಭ್ಯರ್ಥಿಯ ಹೆಸರಿನ ಎದುರು ಒಂದು ಅಂಕಿಯನ್ನು ಮಾತ್ರ ನಮೂದಿಸಬೇಕು. ಒಂದಕ್ಕಿಂತ ಹೆಚ್ಚು ಅಂಕಿಗಳನ್ನು ನಮೂದಿಸಿದರೂ ಮತ ಅಸಿಂಧು ಆಗಲಿದೆ.
- ಮತಪತ್ರದಲ್ಲಿ ಅಂಕಿಗಳನ್ನು ಗುರುತಿಸಲು ಚುನಾವಣಾಧಿಕಾರಿ ನೀಡಿದ ನೇರಳೆ ಬಣ್ಣದ ಸ್ಕೆಚ್ ಪೆನ್ ಮಾತ್ರ ಬಳಸಬೇಕು. ಅದರ ಬದಲು ಬೇರೆ ಪೆನ್ ಬಳಸಿದರೂ ಮತ ಅಸಿಂಧು ಆಗಲಿದೆ.
ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಗೆ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಇದೇ ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಡಿಸೆಂಬರ್ 14ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ.
2023ರ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಈ ಚುನಾವಣೆ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿದ್ದು, ಮೂರು ರಾಜಕೀಯ ಪಕ್ಷಗಳ ಮೇಲ್ಮನೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ಅಬ್ಬರದ ಪ್ರಚಾರ ನಡೆಸಿದ್ದಾರೆ. ಬಹಳಷ್ಟು ಕಡೆ ಹಣ, ಒಡವೆ ನೀಡಿ ದೇವರ ಮೇಲೆ ಆಣೆ ಮಾಡಿಸಿಕೊಳ್ಳಲಾಗಿದೆ. ಇದೇ ವೇಳೆ ಪಕ್ಷಾಂತರವೂ ನಡೆಯುತ್ತಿದೆ.
ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ 90 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಪೈಪೋಟಿ ಏರ್ಪಟ್ಟಿದ್ದರೆ, ಜೆಡಿಎಸ್ ಸ್ಪರ್ಧಿಸಿರುವ 6 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನೂ, ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮತದಾನಕ್ಕೆ ಒಟ್ಟು 6,072 ಮತಗಟ್ಟೆಗಳನ್ನು ಸ್ಥಾಪಿಸಿದೆ. ಡಿ.10ರ ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿದ್ದು, ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಡಿ.14ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದು ಮಧ್ಯಾಹ್ನದ ವೇಳೆ ಫಲಿತಾಂಶ ಬಹಿರಂಗಗೊಳ್ಳುವ ಸಾಧ್ಯತೆಗಳಿವೆ.
ಮತದಾನ ಪ್ರಕ್ರಿಯೆ ಹೇಗೆ ? : ವಿಧಾನ ಪರಿಷತ್ ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಕೆ ಮಾಡುವುದಿಲ್ಲ. ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಗೆದ್ದ ಅಭ್ಯರ್ಥಿಯನ್ನು ಘೋಷಣೆ ಮಾಡುವುದರಿಂದ ಸರಿಯಾಗಿ ಮತದಾನ ಮಾಡಬೇಕು. ಇಲ್ಲವಾದಲ್ಲಿ ಮತ ಅಸಿಂಧುವಾಗುತ್ತದೆ. ಮತದಾನದ ಗೌಪ್ಯತೆಯನ್ನು ಕಾಪಾಡುವುದು ಸಹ ಮುಖ್ಯವಾಗುತ್ತದೆ. ನೀಡಲಾದ ಮತಪತ್ರವನ್ನು ತಪ್ಪದೇ ಮತಪೆಟ್ಟಿಗೆಯಲ್ಲಿ ಹಾಕಬೇಕು. ಮತಪತ್ರವನ್ನು ಕೇಂದ್ರದಿಂದ ಹೊರಗೆ ತೆಗೆದುಕೊಂಡು ಹೋಗುವುದು ಅಪರಾಧವಾಗಿದೆ. ಮತದಾನಕ್ಕೆ ಬರುವಾಗ ಉರಿಯುವ ವಸ್ತುಗಳು, ಬೆಂಕಿ ಪೊಟ್ಟಣ/ ಲೈಟರ್, ಯಾವುದೇ ದ್ರವ ಪದಾರ್ಥ, ಯಾವುದೇ ಆಯುಧ ಅಥವಾ ಬೆಂಕಿ ಸಾಧನಗಳು, ಮೊಬೈಲ್, ಕ್ಯಾಮರಾ, ಪೆನ್ನು ತರುವಂತಿಲ್ಲ.
ಹೇಗೆ ಪ್ರಾಶಸ್ತ್ಯ ಮತ ಚಲಾವಣೆ?
ನಿರ್ದಿಷ್ಟ ಅಭ್ಯರ್ಥಿ ತನ್ನ ಆಯ್ಕೆ ಆಗಿದ್ದರೆ ಆ ಹೆಸರಿನ ಮುಂದೆ ಮತಗಟ್ಟೆ ಅಧಿಕಾರಿ ಕೊಡುವ ಪೆನ್ನಿಂದಲೇ 1 ಎಂದು ಬರೆಯಬೇಕಾಗುತ್ತದೆ. ಮತಪತ್ರದಲ್ಲಿ ಯಾವುದಾದರೂ ಒಂದು ಹೆಸರಿನ ಎದುರು ಮಾತ್ರ 1 ಎಂದು ನಮೂದಿಸಿರಬೇಕು. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಮುಂದೆ 1 ಎಂದಿದ್ದರೆ ಆ ಮತಪತ್ರವೇ ಅಸಿಂಧು ಆಗುತ್ತದೆ. ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ಚುನಾಯಿಸಬೇಕಿದ್ದ ಪಕ್ಷದಲ್ಲಿ ಸಹ ಅಂಕಿ 1 ನ್ನು ಕೇವಲ ಒಬ್ಬನೇ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು.
ಮತದಾರ ಎರಡನೇ ಅಥವಾ ನಂತರದ ಪ್ರಾಶಸ್ತ್ಯಗಳನ್ನು ಸೂಚಿಸಬಹುದಾಗಿದೆ ಅಥವಾ ಸೂಚಿಸದೇ ಇರಬಹುದಾಗಿದೆ. ಪ್ರಾಶಸ್ತ್ಯವನ್ನು ಅಂಕಿಗಳ ಮೂಲಕ ಮಾತ್ರ ಎಂದರೆ 1, 2, 3, 4 ಎಂದು ಅಂತರರಾಷ್ಟ್ರೀಯ ಅಥವಾ ರೋಮನ್ ಅಥವಾ ಕನ್ನಡ ಅಂಕಿಗಳನ್ನು ಬಳಸಿ ಪ್ರಾಶಸ್ತ್ಯವನ್ನು ತೋರಿಸಬಹುದು. ಅಕ್ಷರಗಳನ್ನು ಬಳಸುವಂತಿಲ್ಲ. ಮತಪತ್ರದಲ್ಲಿ ಹೆಸರು, ಸಹಿ ಅಥವಾ ಹೆಬ್ಬೆರಳ ಗುರುತು ಹಾಕಿದರೆ ಮತಪತ್ರ ಅಸಿಂಧುವಾಗುತ್ತದೆ. ಅಲ್ಲದೇ ಅಂಕಿ 1 ನ್ನು ಮತ್ತು 2, 3 ಇತ್ಯಾದಿ ಅಂಕಿಗಳನ್ನು ಸಹ ಒಬ್ಬನೇ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಹಾಕಿದರೆ ಅದು ಕೂಡ ಅಸಿಂಧುವಾಗುತ್ತದೆ. ನೋಟಾ ಆಯ್ಕೆಯ ಎದುರು 1 ಅಂಕಿಯನ್ನು ಬರೆದು ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಬಹುದು.
ನೇರಳೆ ಇಂಕಿನ ಪೆನ್ : ಮತಗಟ್ಟೆ ಅಧಿಕಾರಿ ಕೊಡುವ ನೇರಳೆ ಇಂಕಿನ ಪೆನ್ನಿಂದಲೇ ಮತದಾರ ಮತಪತ್ರದಲ್ಲಿ ತನ್ನ ಪ್ರಾಶಸ್ತ್ಯ ಮತವನ್ನು ನಮೂದಿಸಬೇಕು. 1 ನೇ ಪ್ರಾಶಸ್ತ್ಯ ನಮೂದಾಗಲೇ ಬೇಕು. ಕ್ರಮಬದ್ಧವಿಲ್ಲದ ಮತಪತ್ರ ಅಸಿಂಧು ಆಗುವುದರಿಂದ ಮತದಾರ ಎಚ್ಚರಿಕೆಯಿಂದ ಮತದಾನ ಮಾಡಬೇಕು. ಹೀಗಾಗಿ ಅಭ್ಯರ್ಥಿಗಳಿಗೆ ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಗೂ ಮತದಾನದ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ.