ಬೆಂಗಳೂರು: ರಾಜ್ಯದ ಬಿಜೆಪಿ ಆಡಳಿತದ ವಿರುದ್ಧ ಎದ್ದಿರುವ 40% ಕಮಿಷನ್ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಸಕ್ತ ವಿಧಾನಮಂಡಲ ಅಧಿವೇಶನದಲ್ಲಿಯೂ ಭಾರೀ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿಯೇ ಇದೀಗ ಬೆಂಗಳೂರು ನಗರದ ಕೆಲವು ಕಡೆಗಳಲ್ಲಿ ಅಂಟಿಸಲಾಗಿರುವ ಭಿತ್ತಿಚಿತ್ರಗಳು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಣಕಿಸುವಂತಿದೆ.
ಭ್ರಷ್ಟಾಚಾರ ಆರೋಪ ಹೊತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಅಭಿಯಾನವನ್ನು ಆರಂಭಿಸಿದ್ದು, ನಗರದ ಹಲವೆಡೆ ಭಿತ್ತಿಚಿತ್ರಗಳನ್ನು ಅಂಟಿಸಲಾಗಿದೆ. ಪೇಟಿಎಂ ಮಾದರಿಯಲ್ಲೇ ʻಪೇ ಸಿಎಂʼ ಎಂಬ ಭಿತ್ತಿಚಿತ್ರಗಳು ರಾರಾಜಿಸುತ್ತಿವೆ.
ನಗರದ ಜಯಮಹಲ್ ರಸ್ತೆ, ಇಂಡಿಯನ್ ಎಕ್ಷ್‌ಪ್ರೆಸ್ ಬಳಿ ಗೋಡೆಗೆ ʻಪೇ ಸಿಎಂʼ ಎಂದು ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಭಿತ್ತಿಚಿತ್ರ ಅಂಟಿಸುವ ಮೂಲಕ ಭ್ರಷ್ಟ ಸರ್ಕಾರ ಎಂದು ಅಣಕಿಸಲಾಗಿದೆ. ಇದನ್ನು ಸ್ಕ್ಯಾನ್ ಮಾಡಿದರೆ 40% ಹಗರಣಗಳ ಪಟ್ಟಿ ತೆರೆದುಕೊಳ್ಳುತ್ತದೆ. ರಸ್ತೆ ಹಗರಣ, ಬಿಟ್‌ಕಾಯಿನ್, ಪಿಎಸ್‌ಐ ಹಗರಣ ಎನ್ನುವ ಪುಟಗಳು ತೆರೆದುಕೊಳ್ಳುತ್ತದೆ. ಸ್ಕ್ಯಾನ್ ಮಾಡಿದವರ ಸಂಖ್ಯೆಯೂ ಎಷ್ಟೆಂಬುದು ತೋರಿಸಲಾಗುತ್ತದೆ. ನಂತರ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಅಭಿಯಾನಕ್ಕೆ ನೀವು ಜೊತೆಯಾಗಿದ್ದೀರಿ ಎಂಬ ಸಂದೇಶ ಬರುತ್ತದೆ.
ಸದನದಲ್ಲಿ 40% ಕಮಿಷನ್ ಚರ್ಚೆಗೆ ವಿರೋಧ ಪಕ್ಷ ಕಾಂಗ್ರೆಸ್ ನಿಲುವಳಿ ಸೂಚನೆ ನೀಡಿದ್ದರೆ, ಮತ್ತೊಂದು ಕಡೆಯಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ‘ಪೇಸಿಎಂ’ ಭಿತ್ತಿಚಿತ್ರಗಳು ರಾರಾಜಿಸುತ್ತಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದ ಬಳಿಯೂ ಹಾಕಲಾಗಿದೆ.
ಗುತ್ತಿಗೆದಾರರಿಂದ 40%ರಷ್ಟು ಕಮಿಷನ್ ರೂಪದಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು. ಇತ್ತೀಚೆಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಶರಣಾಗಿದ್ದು, ಅಂದಿನ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದರು. ನಂತರ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ತೆಲಂಗಾಣದಲ್ಲೂ ಕಾಣಿಸಿಕೊಂಡಿದ್ದ ಭಿತ್ತಿಚಿತ್ರ
ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಇತ್ತೀಚೆಗೆ ಜರುಗಿದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಣಕಿಸುವಂತೆ, ‘ವೆಲ್‌ಕಂ ಟು 40% ಸಿಎಂ’ ಎಂದು ಸ್ವಾಗತಿಸಿ ಅಲ್ಲಿನ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಪಕ್ಷ ವ್ಯಂಗ್ಯವಾಡಿತ್ತು.
ಇದೀಗ ಇದೇ ಮಾದರಿಯ ವಿನೂತನ ಅಣಕ, ವ್ಯಂಗ್ಯದಿಂದ ಕೂಡಿದ ಭಿತ್ತಿಚಿತ್ರಗಳು ರಾಜ್ಯದಲ್ಲೂ ಕಾಣಿಸಿಕೊಳ್ಳಲಾರಂಭಿಸಿದ್ದು, ರಾಜ್ಯ ಬಿಜೆಪಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲಿನ ಭ್ರಷ್ಟಾಚಾರ ಆರೋಪ ಮತ್ತಷ್ಟು ಪ್ರಚುರಪಡಿಸಲಾಗುತ್ತಿದೆ.