ಜುಲೈ 26ಕ್ಕೆ ಸಿಎಂ ಸ್ಥಾನಕ್ಕೆ ಬಿಎಸ್‌ವೈ ರಾಜೀನಾಮೆ..? ಮುಂದಿನ ಸಿಎಂ ಯಾರು…??

ಬೆಂಗಳೂರು : ಸಿಎಂ ಬಿ.ಎಸ್. ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಕುರಿತಂತೆ ನಡೆಯುತ್ತಿರುವ ಚರ್ಚೆಗಳಿಗೆ ಸದ್ಯದಲ್ಲೇ ತೆರೆ ಬೀಳುವ ಸಾಧ್ಯತೆಗಳಿವೆ. ಜುಲೈ 26 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳಲ್ಲಿ ಕಳೆದೆರಡು ದಿನಗಳಿಂದ ವರದಿಯಾಗುತ್ತಿದೆ.

ಮೊನ್ನೆಯಷ್ಟೇ ದೆಹಲಿ ಪ್ರವಾಸ ಮಾಡಿರುವ ಬಿಎಸ್ ವೈ, ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರನ್ನು ಭೇಟಿ ಮಾಡಿದ್ದರು. ದೆಹಲಿಯಿಂದ ಅವರು ತಂದ ಸುದ್ದಿ ಸಿಹಿಯೋ, ಹುಳಿಯೋ ಎಂಬ ಗುಟ್ಟನ್ನು ಯಡಿಯೂರಪ್ಪನವರು ಇನ್ನೂ ಬಿಚ್ಚಿಟ್ಟಿಲ್ಲ

ಜುಲೈ 26 ರಂದೆ ಯಾಕೇ? : ನಾಯಕತ್ವ ಬದಲಾವಣೆಯಾಗಲಿದೆ ಎನ್ನುವ ಊಹಾಪೋಹಗಳಿಗೆ ಇಂಬು ಕೊಡುವಂತೆ ಜುಲೈ 26ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ  ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿ ಜುಲೈ  26 ಕ್ಕೆ ಎರಡು ವರ್ಷ ಪೂರೈಸಲಿದ್ದಾರೆ. ಆದ ಕಾರಣ ಶಾಸಕಾಂಗದ ಸಭೆ ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿಯೇ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ ಎಂಬುದು ಬಿಜೆಪಿ ವಲಯದಲ್ಲಿ ಗುಸುಗುಸು ಕೇಳಿ ಬರುತ್ತಿದೆ.  ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಸಿಎಂ ಸ್ಥಾನದಲ್ಲಿ ಯಡಿಯೂರಪ್ಪ ಮುಂದುವರಿಕೆ ಬಗ್ಗೆ ಅನಿಶ್ಚಿತತೆ ಮೂಡಲಾರಂಭಿಸಿದ್ದು, ಬೇರೆ ಬೇರೆ ಲೆಕ್ಕಾಚಾರಗಳು ಹುಟ್ಟಿಕೊಳ್ಳಲಾರಂಭಿಸಿವೆ. ಜುಲೈ 26 ರಂದು ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯೇ ಮಹತ್ತರ ಬದಲಾವಣೆ, ಬೆಳವಣಿಗೆಗೆ ನಾಂದಿ ಹಾಡಬಹುದು ಎನ್ನುವ ಮಾತುಗಳಿದ್ದು, ದೆಹಲಿ ಭೇಟಿ ವೇಳೆಯೂ ನಾವು ತಿಳಿಸುತ್ತೇವೆ ಎಂದಷ್ಟೇ ಹೈಕಮಾಂಡ್​ ಮುಖ್ಯಮಂತ್ರಿಗೆ ಹೇಳಿ ಕಳುಹಿಸಿದ್ದಾರೆ ಎಂಬ ಮಾಹಿತಿ ಸಿಎಂ ಆಪ್ತ ಬಳಗದಿಂದ ಲಭ್ಯವಾಗಿದೆ

ದೆಹಲಿ ಯಾತ್ರೆ ಮುಗಿಸಿ ಬಂದಿರುವ ಸಿಎಂ ಯಡಿಯೂರಪ್ಪ ಅವರು ಬಾಕಿ ಇರುವ ಎಲ್ಲಾ ಕಡತಗಳನ್ನು ಕ್ಲಿಯರ್ ಮಾಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯ ಸಿಬ್ಬಂದಿಗಳಿಗೆ  ಜುಲೈ 26ರ ಒಳಗೆ ಎಲ್ಲಾ ಕಡತಗಳ ವಿಲೇವಾರಿಯನ್ನು ಮುಗಿಸಿ ಎಂದು ಮೌಖಿಕವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಸಹ ಯಡಿಯೂರಪ್ಪನವರ ರಾಜೀನಾಮೆ ಫಿಕ್ಸ್ ಎಂದು ಹೇಳಿತ್ತು. ರಾಜೀನಾಮೆ ಪ್ರಕ್ರಿಯೆ ಆರಂಭವಾಗಿರುವ ಕುರಿತ ಮಾತುಗಳು ಆಡಿಯೋದಲ್ಲಿವೆ. ಹಾಗಾಗಿ 26 ಕ್ಕೆ ಯಡಿಯೂರಪ್ಪ ರಾಜೀನಾಮೆ ಫಿಕ್ಸ್‌ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ : ಸಿಎಂ ಖುರ್ಚಿಯ ಮೇಲೆ ಎಲ್ಲರ ಕಣ್ಣು?!

ಮುಂದಿನ ಸಿಎಂ ಯಾರು? : ಈ ಎಲ್ಲಾ ಬೆಳವಣಿಗೆಗಗಳಿಂದ ಸಿಎಂ ಆಗಲು ಹವಣಿಸುತ್ತಿದ್ದವರ ದಾರಿ ಸಲುಭವಾದಂತೆ ಕಾಣುತ್ತಿದೆ. ದೆಹಲಿಗೆ ಹಾರಿದ್ದ ಸಚಿವ ಮುರಗೇಶ್‌ ನಿರಾಣಿಯವರು ಮುಖ್ಯಮಂತ್ರಿಯಾಗುವ ಪಟ್ಟಿಯಲ್ಲಿರುವ ಮೊದಲ ಹೆಸರಾಗಿದೆ. ನಂತರದಲ್ಲಿ ಅರವಿಂದ್‌ ಬೆಲ್ಲದ್‌, ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಷಿ ನಂತರದ ಸ್ಥಾನದಲ್ಲಿದ್ದಾರೆ. ಮಾಜಿ ಸಚಿವ ಸದಾನಂದಗೌಡರು ರೇಸ್‌ನಲ್ಲಿದ್ದರೂ ಹೈಕಮಾಂಡ್‌ ವಿಶ್ವಾಸಗಳಿಸುವಲ್ಲಿ ವಿಫಲರಾಗಿದ್ದಾರೆ. ಇನ್ನೂ ನಳೀನ್‌ ಕುಮಾರ್‌ ಕಟೀಲ್‌ ರವರದ್ದು ಎನ್ನಲಾದ ಆಡಿಯೋದಲ್ಲಿ ಚರ್ಚಿಸಿದಂತೆ ಈಶ್ವರಪ್ಪ ಮತ್ತು ಯಡಿಯೂರಪ್ಪ ಬಣದ ಗುಂಪಿನಲ್ಲಿ ಗುರುತಿಸಿಕೊಳ್ಳದ ಯುವ ಶಾಸಕರನ್ನು ಅಥವಾ ಸಂಘಕ್ಕೆ ನಿಷ್ಟೆಯಾಗಿರುವ ಯುವ ಸಂಸದನನ್ನು ಮುಖ್ಯಮಂತ್ರಿ ಹುದ್ದೆಗೆ ಕೂಡಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ನಾಯಕತ್ವ ಬದಲಾವಣೆ ಬಗ್ಗೆ ಪ್ರತಿ ಬಾರಿ ಕೂಗು ಎದ್ದಾಗಲೂ ಅಷ್ಟೇ ವೇಗವಾಗಿ ತಣ್ಣಗಾಗಿದೆ. ಇತ್ತೀಚೆಗಷ್ಟೇ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡಿ ಆಡಳಿತ ಪಕ್ಷದ ಶಾಸಕರನ್ನು ಭೇಟಿ ಮಾಡಿದ್ದರು. ಈ ಭೇಟಿಯ ನಂತರ ಅವರು ಮುಖ್ಯಮಂತ್ರಿಗೆ ಪಕ್ಷದಲ್ಲಿ ಬೆಂಬಲವಿದ್ದು, ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು. ಇದರ ನಂತರ ಕೂಡಾ ನಾಯಕತ್ವ ಬದಲಾವಣೆಯ ಕೂಗು ನಿಂತಿರಲಿಲ್ಲ. ಈಬಾರಿಯೂ ಅದೇ ರೀತಿ ಆಗುತ್ತದೆಯೇ ಎಂಬುದು ಜುಲೈ 26 ಕಳೆದ ಮೇಲೆ ಹೇಳಬಹುದು.

Donate Janashakthi Media

Leave a Reply

Your email address will not be published. Required fields are marked *