ನಾನೇಕೆ ಅಸಮಾಧಾನಗೊಳ್ಳಬೇಕು? ನಾವು ಸಾಗಬೇಕಾದ ದಾರಿ ಬಹಳ ದೂರವಿದೆ : ಡಿಕೆ ಶಿವಕುಮಾರ್

ನವದೆಹಲಿ: “ನಾನೇಕೆ ಅಸಮಾಧಾನಗೊಳ್ಳಬೇಕು? ನಾವು ಸಾಗಬೇಕಾದ ದಾರಿ ಇನ್ನು ಬಹಳ ದೂರ ಇದೆ” ಎಂದು ಕರ್ನಾಟಕ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಕಾಂಗ್ರೆಸ್​ ಪಕ್ಷದ ಹೈಕಮಾಂಡ್ ನಿಮ್ಮನ್ನು​ ಉಪಮುಖ್ಯಮಂತ್ರಿ ಎಂದು ಘೋಷಣೆ ಮಾಡಿರುವುದು ನಿಮಗೆ ಸಂತೋಷವಾಗಿದೆಯೇ ಎಂದು ಗುರುವಾರ ಕೆಲವು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ನವದೆಹಲಿಯಲ್ಲಿ ಹೀಗೆ ಉತ್ತರ ನೀಡಿದರು.

“ರಾಜ್ಯದ ಜನರೆಲ್ಲ ಸೇರಿ ನಮಗೆ ದೊಡ್ಡ ಪ್ರಮಾಣದಲ್ಲಿ ಜನಾದೇಶ ನೀಡಿದ್ದಾರೆ. ಹರಸಿದ್ದಾರೆ, ಹಾಗಾಗಿ ನಮಗೆ ಬಹಳ ಖುಷಿ ಇದೆ. ಚುನಾವಣೆಗೂ ಮುನ್ನ ಕಾಂಗ್ರೆಸ್​ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಅದು ನಮ್ಮ ಮುಖ್ಯ ಧ್ಯೇಯ ಮತ್ತು ಅಜೆಂಡಾ. ಅದನ್ನು ಈಡೇರಿಸುತ್ತೇವೆ” ಎಂದು ಅವರು ಹೇಳಿದರು. ಕಾಂಗ್ರೆಸ್​ ಹೈಕಮಾಂಡ್​​ ತಮ್ಮನ್ನು ಉಪಮುಖ್ಯಮಂತ್ರಿ ಆಗಿ ಘೋಷಣೆ ಮಾಡಿದ ಬಳಿಕ ಮೊದಲ ಬಾರಿ ಅವರು ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದರು.

“ಎಲ್ಲವೂ ಚೆನ್ನಾಗಿದೆ ಮತ್ತು ಚೆನ್ನಾಗಿಯೇ ಇರುತ್ತದೆ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕಾಂಗ್ರೆಸ್​ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಾವೂ ಕೂಡ ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಂಡಿದ್ದೇವೆ”.

“ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಮೊದಲೇ ಒನ್ ಲೈನ್ ನಿರ್ಧಾರ ಮಾಡಿದ್ದೆವು. ಅಂತಿಮವಾಗಿ ರಾಹುಲ್ ಗಾಂಧಿ ಅವರು ನನಗೆ ಕರೆ ಮಾಡಿ ನೀವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು. ಅಲ್ಲದೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ನಮಗೆ ಕರೆ ಮಾಡಿ ಈ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಯಾವುದೇ ಸೂತ್ರವನ್ನು ರಚಿಸಲಾಗಿದ್ದರೂ ನಾವೆಲ್ಲರೂ ಒಪ್ಪಿಕೊಂಡಿದ್ದೇವೆ”ಎಂದು ಅವರು ಹೇಳಿದರು.

 

Donate Janashakthi Media

Leave a Reply

Your email address will not be published. Required fields are marked *