ನವದೆಹಲಿ : ಕೊನೆಗೂ ಡಿ.ಕೆ.ಶಿವಕುಮಾರ್ ಅವರ ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಡರಾತ್ರಿ ನಡೆದ ಸಂಧಾನದಲ್ಲಿ ಒಪ್ಪಿಕೊಂಡಿದ್ದಾರೆ. ಮೇ 20 ರಂದು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಸಚಿವ ಸಂಪುಟ ಸೇರಲಿದ್ದಾರೆ. ಅವರಿಗೆ ಇತರ ಪ್ರಬಲ ಖಾತೆಗಳನ್ನೂ ಕೊಡುವ ಸಾಧ್ಯತೆಯಿದೆ. ಒಟ್ಟು 5 ವರ್ಷಗಳ ಅಧಿಕಾರ ಅವಧಿಯಲ್ಲಿ ತಲಾ ಎರಡೂವರೆ ವರ್ಷಗಳಾಗಿ ವಿಂಗಡಿಸಲಾಗಿದೆ. ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ, ಎರಡನೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅಧಿಕಾರ ನಡೆಸಲಿದ್ದಾರೆ.
ಬುಧವಾರ ಮಧ್ಯರಾತ್ರಿಯವರೆಗೂ ಖರ್ಗೆ ಅವರ ನಿವಾಸದಲ್ಲಿ ಚುರುಕಿನ ರಾಜಕೀಯ ಬೆಳವಣಿಗೆಗಳು ನಡೆದವು. ಹಲವು ನಾಯಕರೊಂದಿಗೆ ಖರ್ಗೆ ಸಮಾಲೋಚನೆ ನಡೆಸಿದರು. ಸತತ ಮೂರು ದಿನಗಳ ಸುದೀರ್ಘ ಸಭೆಯ ಮೂಲಕ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಿಗೆ ಇದ್ದ ತೊಡಕನ್ನು ಹೈ ಕಮಾಂಡ್ ನಿವಾರಿಸಿದೆ.
ಇನ್ನು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಮಧ್ಯಾಹ್ನ ಬೆಂಗಳೂರಿಗೆ ವಾಪಸ್ಸಾಗಲಿದ್ದು, ಸಂಜೆ ಏಳು ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಎಲ್ಲಾ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಇಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಎಐಸಿಸಿ ನಾಯಕರು ಪತ್ರಿಕಾಗೋಷ್ಠಿ ಮಾಡಲಿದ್ದು, ಸಿಎಲ್‌ಪಿ ನಾಯಕರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
50:50 ಸೂತ್ರ?: ಆಂತರಿಕವಾಗಿ ಒಪ್ಪಂದ ನಡೆದಿದ್ದು, ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಉಳಿದ ಎರಡೂವರೆ ವರ್ಷಕ್ಕೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಗಲಿದ್ದಾರೆ. ಈ ವಿಚಾರವನ್ನು ಆಂತರಿಕವಾಗಿ ಒಪ್ಪಿಗೆ ಪಡೆಯಲಾಗಿದೆ. ಆದ್ರೆ ಇದನ್ನು ಬಹಿರಂಗ ಘೋಷಣೆ ಮಾಡುವುದಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಡಿಕೆಶಿ ಸಂಪುಟಕ್ಕೆ ನಾನು ಹೇಳಿದವರನ್ನೆ ಸಚಿವರನ್ನಾಗಿ ಮಾಡಬೇಕು ಎಂಬ ಬೇಡಿಕೆಯನ್ನು ‘ಹೈ’ ಕಮಾಂಡ್ ಮುಂದೆ ಇಟ್ಟಿದ್ದು, ಅದಕ್ಕೆ ಎಐಸಿಸಿ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.