ಬೆಂಗಳೂರು : ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಅಂಗೀಕಾರಗೊಂಡಿದೆ.
ರಾಜೀನಾಮೆಗೆ ಮೊದಲು ಬಿಜೆಪಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಭಾಗವಹಿಸಿ ಭಾಷಣ ಮಾಡಿದ ಬಳಿಕ ದುಃಖದಿಂದಲ್ಲ ಸಂತೋಷದಿಂದ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭಾಷಣದಲ್ಲಿ ಗದ್ಗದಿತರಾಗಿ ಹೇಳಿದರು.
ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ತಮ್ಮ ರಾಜಕೀಯ ಜೀವನವನ್ನು ಭಾವನಾತ್ಮಕವಾಗಿ ಯಡಿಯೂರಪ್ಪ ನೆನೆದರು. ಇಬ್ಬರು ಶಾಸಕರಿಂದ ಆರಂಭವಾದ ನಮ್ಮ ಸಾಧನೆ ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಷ್ಟು ಬೆಳೆದಿದೆ. ಈ ಸಾಧನೆಗೆ ಲಕ್ಷಾಂತರ ಜನ ಕಾರ್ಯಕರ್ತರ ಪರಿಶ್ರಮ ಕಾರಣ ಎಂದರು. 75 ವರ್ಷ ಮೀರಿದ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ. ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದೆ ಬರುವ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅವಕಾಶ ಸಿಗುವಂತಾಗಬೇಕು ಎಂದು ಗದ್ಗದಿತರಾಗಿ ಭಾಷಣ ಮಾಡಿದರು.
ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದ ಅವರು ತನ್ನ ಎರಡು ವರ್ಷದ ಅವಯಲ್ಲಿ ಸಹಕಾರ ನೀಡಿದ ಎಲ್ಲಾ ಸಹೋದ್ಯೋಗಿ ಸಚಿವರುಗಳಿಗೆ , ಅಧಿಕಾರಿ ವರ್ಗಕ್ಕೆ ಧನ್ಯವಾದ ಅರ್ಪಿಸಿದರು. ನನ್ನ ಜೀವನವನ್ನೇ ರಾಜ್ಯದ ಜನತೆಗಾಗಿ ಮುಡುಪಾಗಿಟ್ಟು ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಮತ್ತು ಸಮಾಧಾನವಿದೆ. ಮುಂದೆಯೂ ಕೂಡ ನನ್ನ ಉಸಿರು ಇರುವವರೆಗೂ ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.