ಲಾಕ್ಡೌನ್ ಜಾರಿ : ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ?

ಲಾಕ್ಡೌನ್ ಬದಲು ಕಠಿಣಕ್ರಮ ಜಾರಿಗೆ ವಿಪಕ್ಷಗಳ ಆಗ್ರಹ 

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದೆ. ಆದರೆ, ಇದೀಗ ಮುಂದಿನ 15 ದಿನಗಳ ಕಾಲ ರಾಜ್ಯಾದ್ಯಂತ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ರಾಜ್ಯ ಸರ್ಕಾರ ಮೂರು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಿದೆ. ರಾಜ್ಯದ ಲಾಕ್ ಡೌನ್ ಭವಿಷ್ಯ, ಲಸಿಕೆಗೆ ಶುಲ್ಕ ನಿಗದಿ ತೀರ್ಮಾನದ ಜೊತೆಗೆ ಶಿಕ್ಷಕರ ವರ್ಗಾವಣೆಗೆ ಸಮಸ್ಯೆಗೆ ಪರಿಹಾರ ಏನೆಂಬ ಪ್ರಶ್ನೆಗೆ ಇಂದು ಉತ್ತತರ ಸಿಗುವ ಸಾಧ್ಯತೆ ಇದೆ. ಲಾಕ್ಡೌನ್ ಬಗ್ಗೆ ಪರ ವಿರೋಧ ಅಭಿಪ್ರಾಯಗಳಿದ್ದು ಕರ್ನಾಟಕ‌ ಲಾಕ್ ಆಗುತ್ತಾ ಎನ್ನುವ ಭಯ ಸಾರ್ವಜನಿಕರನ್ನು ಕಾಡುತ್ತಿದೆ. ಹಾಗಾಗಿ ಎಲ್ಲರ ಚಿತ್ತ ಈಗ ಸಚಿವಸಂಪುಟದತ್ತ ನೆಟ್ಟಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ 2 ವಾರ ನಗರವನ್ನು ಲಾಕ್ ಡೌನ್ ಮಾಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಈ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ.

ಗಂಟೆಗೆ 700 ಜನಕ್ಕೆ ಕೊರೊನಾ ಸೋಂಕು: ಗಂಟೆಗೆ ಅಂದಾಜು 700 ಜನಕ್ಕೆ ಕೊರೊನಾ ಸೋಂಕು ತಗಲುತ್ತಿದೆ. ಮಾರ್ಚ್ ನಲ್ಲಿ 42 ಜನರಿಗೆ ಪ್ರತಿ ಗಂಟೆಗೊಮ್ಮೆ ಪಾಸಿಟಿವ್ ಬರುತ್ತಿತ್ತು. ಈಗ ಈ ಸಂಖ್ಯೆ ವೇಗವಾಗಿ ಸಾಗುತ್ತಿದೆ. ಓರ್ವ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ ಕನಿಷ್ಠ 10 ರಿಂದ 15 ಜನರು ಇರ್ತಾರೆ. ಈ ವೇಗ ಹೀಗೆ ಮುಂದುವರಿದ್ರೆ ಕೊರೊನಾ ಇಡೀ ಬೆಂಗಳೂರು ನಗರವನ್ನ ವ್ಯಾಪಿಸಿಕೊಳ್ಳಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಲಾಕ್ಡೌನ್ ಬೇಡ ಕಠಿಣ ಕ್ರಮ ಜಾರಿ ಮಾಡಿ : ಕಾಂಗ್ರೆಸ್, ಸಿಪಿಐಎಂ ಸೇರಿದಂತೆ ವಿಪಕ್ಷಗಳು ಹಾಗೂ ಅನೇಕ ವೈಧ್ಯರು ಲಾಕ್ಡೌನ್ ಬೇಡ ಬದಲಾಗಿ ಕಠಿಣ ಕ್ರಮ ಮತ್ತು ಆಸ್ಪತ್ರೆಯ ಸೌಲಭ್ಯಗಳನ್ನು ಹೆಚ್ಚಿಸಬೇಕು. ಬೆಡ್, ಆಕ್ಸಿಜನ್ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದಿವೆ.

ರಾಜ್ಯ ಸರಕಾರದ ಉದಾಸೀನವೇ ಕೋವಿಡ್ ಪ್ರಸರಣ ಹೆಚ್ಚಳಕ್ಕೆ ಕಾರಣ ಎಂದು ಸಿಪಿಐಎಂ ಕಾರ್ಯದರ್ಶಿ ಯು. ಬಸವರಾಜ್ ಆರೋಪಿಸಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಅಗತ್ಯ ವಸ್ತು ಹೊರತುಪಡಿಸಿ ಸಂಪೂರ್ಣ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿದೆ. ಇದರಿಂದ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ. ಸರಕಾರ ಅಗತ್ಯ ತಯಾರಿ ಮಾಡಿಕೊಂಡಿದ್ದರೆ ಇಂತಹ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಈಗಲಾದರೂ ಎಚ್ಚತ್ತು ಅಗತ್ಯ ವೈಧ್ಯಕೀಯ ಸೌಲಭ್ಯಗಳನ್ನು ಹೆಚ್ಚಸಲು ರಾಜ್ಯ ಸರಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಂಪೂರ್ಣ ಲಾಕ್ಡೌನ್ ಇಲ್ಲ : ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ವಾರದ ಇತರ ದಿನಗಳಲ್ಲೂ ಕರ್ಫ್ಯೂವನ್ನು ಮುಂದುವರಿಸಿದರೆ ಒಳಿತು ಎಂಬ ಅಭಿಪ್ರಾಯವಿದೆ. ರಾಜ್ಯ ಸರ್ಕಾರಕ್ಕೂ ಕರ್ಫ್ಯೂ ಮುಂದುವರಿಸಬೇಕೆಂಬ ಇಚ್ಛೆ ಇದೆ. ಆದರೆ, ರಾಜ್ಯದ ಜನರೇ ಬೇಡ ಎನ್ನುತ್ತಿದ್ದಾರೆ. ಎಲ್ಲವನ್ನೂ ಸರ್ಕಾರವೇ ನಿಭಾಯಿಸಬೇಕು ಎನ್ನುವುದು ಸರಿಯಲ್ಲ. ಜನರು ಸಹ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.

ಸದ್ಯದ ಮಾರ್ಗಸೂಚಿ ಜಾರಿ : ಜನರು ಸ್ವಯಂಪ್ರೇರಣೆಯಿಂದ ಓಡಾಟ ಕಡಿಮೆ ಮಾಡಿದ್ದು ಕೊರೋನಾ ಸೋಂಕು ತಡೆಗೆ ಇದರಿಂದ ಬಹಳಷ್ಟು ಸಹಕಾರಿಯಾಗಲಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂ ವಿಸ್ತರಿಸುವ ಕುರಿತು ನಿನ್ನೆ ಮುಖ್ಯಮಂತ್ರಿಗಳ ಜೊತೆ ನಡೆಸಿದ ಸಭೆಯಲ್ಲಿ ಪ್ರಸ್ತಾಪ ಬಂದಿಲ್ಲ. ಆ ಬಗ್ಗೆ ಊಹಾಪೋಹ ಹಬ್ಬಿಸುವುದು ಬೇಡ, ಸದ್ಯಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ಯಥಾಸ್ಥಿತಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *