ಗುರುರಾಜ ದೇಸಾಯಿ
ಸಂಪುಟ ವಿಸ್ತರಣೆಯ ಬೆನ್ನಲ್ಲೆ ಬಿಜೆಪಿಯೊಳಗೆ ಅಸಮಾಧಾನ ಸ್ಪೋಟ ಗೊಂಡಿದೆ. ಕೆಲ ಶಾಸಕರು ಬಹಿರಂಗವಾಗಿ ಆಕ್ರೋಶ ಹೊರಹಾಕಿದರೆ, ಇನ್ನೂ ಕೆಲವರು ತಮ್ಮ ಬೆಂಬಲಿಗರ ಮೂಲಕ ಹೊರಹಾಕುತ್ತಿದ್ದಾರೆ. ಇನ್ನೂ ಕೆಲವರು ಗುಪ್ತ ಗುಪ್ತ ಸಭೆ ಮೂಲಕ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಸಚಿವ ಸ್ಥಾನವೂ ಕೈ ತಪ್ಪಿರುವ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಎಸ್.ಎ.ರವೀಂದ್ರನಾಥ್, ಹರತಾಳ ಹಾಲಪ್ಪ, ಕುಮಾರ್ ಬಂಗಾರಪ್ಪ, ರಾಜೂಗೌಡ ನಾಯಕ್, ಶಿವನಗೌಡ ನಾಯಕ್, ಸೋಮಶೇಖರರೆಡ್ಡಿ, ದತ್ತಾತ್ರೇಯ ಪಾಟೀಲ್ ರೇವೂರ, ರಾಜ್ಕುಮಾರ್ ಪಾಟೀಲ್ ತೇಲ್ಕೂರ್, ದುರ್ಯೋಧನ ಐಹೊಳೆ, ಎಸ್.ಎ.ರಾಮದಾಸ್, ರಾಜೀವ್, ನೆಹರು ಓಲೇಕರ್, ಆರ್.ಶಂಕರ್, ಶ್ರೀಮಂತಪಾಟೀಲ್, ನಾಗೇಶ್ ಸೇರಿದಂತೆ ಅನೇಕರು ಅಸಮಾಧಾನಗೊಂಡಿದ್ದಾರೆ.
ಸಂಪುಟ ರಚನೆ ನಿಗದಿ ಆಗುತ್ತಿದ್ದಂತೆಯೆ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟವಾಗಿದೆ. ಮಂತ್ರಿಯಾಗದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಬೆಳಗಾವಿ ಜಿಲ್ಲೆ ಸವದತ್ತಿ ಎಲ್ಲಮ್ಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಮಾಮನಿ ಅವರು ಹೇಳಿದ್ದರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿರುವ ಅವರು, ಸಚಿವ ಸ್ಥಾನ ಸಿಗದಿದ್ದಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ ಎಂದು ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ಹೇಳಿಕೆ ನೀಡಿದ್ದರು. ಆದರೆ ಎರಡನೇ ಹಂತದ ಸಂಪುಟ ವಿಸ್ತರಣೆ ಮಾಡುವಾಗ ಮಂತ್ರಿ ಸ್ಥಾನ ಕೊಡುವ ಭರವಸೆಯನ್ನು ಬಿಜೆಪಿ ನಾಯಕರು ಕೊಟ್ಟಿದ್ದಾರೆ. ಹೀಗಾಗಿ ರಾಜೀನಾಮೆ ನಿರ್ಧಾರದಿಂದ ಶಾಸಕ ಆನಂದ್ ಮಾಮನಿ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿಯಿದೆ. ಇದೀಗ ಮತ್ತೆ ಬೆಳಗಾವಿ ಜಿಲ್ಲೆಯಿಂದಲೇ ಅಸಮಾಧಾನ ಸ್ಫೋಟವಾಗಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಮಂತ್ರಿಯಾಗಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ಗೆ ಬಸವರಾಜ ಬೊಮ್ಮಾಯಿನ ಸಂಪುಟದಲ್ಲಿ ಮಂತ್ರಿಸ್ಥಾನ ನಿರಾಕರಿಸಲಾಗಿದೆ. ಈಗ ಅವರು ರಾಜೀನಾಮೆ ನೀಡುವ ಆಲೋಚನೆಯಲ್ಲಿದ್ದಾರೆ ಎಂದು ಶ್ರೀಮಂತ ಪಾಟೀಲ್ ರವರ ಖಾಸಾ ಮೂಲಗಳು ತಿಳಿಸಿವೆ. ಶ್ರೀಮಂತ ಪಾಟೀಲ್ರನ್ನು ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಮರಾಠ ಸಮುದಾಯದ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಸರ್ಕಾರ ಬಂದಾಗಲೇ ನಮ್ಮ ಸಮಾಜದ ಕಡೆಗಣನೆ ಆಗಿದೆ. ಯಡಿಯೂರಪ್ಪ ಬಂದಾಗ ಶ್ರೀಮಂತ ಪಾಟೀಲ್ ಸಚಿವರಾಗಿದ್ದರು. ಈ ಸರ್ಕಾರ ಬರೋದಕ್ಕೆ ಯಾರು ಕಾರಣರೋ ಅವರನ್ನೇ ಕೈ ಬಿಡಲಾಗಿದೆ. ಪಾರ್ಟಿಯನ್ನೇ ಬಿಟ್ಟು ಬಿಡೋಣ ಅನ್ನುವ ಮಟ್ಟಕ್ಕೆ ಶ್ರೀಮಂತ ಪಾಟೀಲ್ ಬೇಸರಗೊಂಡಿದ್ದಾರೆ. ಈಗಾಗಲೇ ನಮ್ಮ ಮರಾಠಾ ನಿಗಮ ಮಾಡಲಾಗಿದೆ. ಎಂಟು ತಿಂಗಳಾದರೂ ಮರಾಠ ನಿಗಮಕ್ಕೆ ಅಧ್ಯಕ್ಷರ ಆಯ್ಕೆ ಆಗಿಲ್ಲ, ಅನುದಾನ ಬಿಡುಗಡೆ ಮಾಡಿಲ್ಲ. ಇದನ್ನು ಸರ್ಕಾರ ಮಾಡದೇ ಹೋದರೆ ಸರ್ಕಾರದ ವಿರುದ್ಧ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿಯವರೆಗೆ ಮರಾಠಾ ಸಮಾಜ ಬೀದಿಗೆ ಬಂದಿಲ್ಲ. ಹೀಗೆ ಮುಂದುವರಿದರೆ ನಮ್ಮನ್ನು ಬಿಟ್ಟರೆ ಏನಾಗುತ್ತಾರೆ ಎಂಬುದನ್ನು ತೋರಿಸುತ್ತೇವೆ” ಎಂದು ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ಅಧ್ಯಕ್ಷ ರಾಣೋಜಿರಾವ್ ಸಾಠೆ ಎಚ್ಚರಿಕೆ ನೀಡಿರುವುದು ಬಿಜೆಪಿಯಲ್ಲಿನ ಅಸಮಾಧಾನದ ಹೊಗೆಯನ್ನು ತೋರಿಸುತ್ತಿದೆ.
ಹಾವೇರಿ ಶಾಸಕ ನೆಹರು ಓಲೇಕರ್ ನನಗೆ ಸಚಿವ ಸ್ಥಾನ ತಪ್ಪಿಸಿದ್ದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು. ಮೋಸ, ವಂಚನೆ, ದಗಲ್ಬಾಜಿ ಮಾಡುವವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ, ನನ್ನಂತ ಹಿರಿಯನಿಗೆ ಸಚಿವ ಸ್ಥಾನ ನೀಡದಿದ್ದರೆ ಇನ್ಯಾರಿಗೆ ಕೊಡುತ್ತಾರೆ ಎಂದು ಪ್ರಶ್ನಿಸಿದರು.ಇನ್ನು ವಿಧಾನಪರಿಷತ್ ಸದಸ್ಯ ಆರ್.ಶಂಕರ್ ಕೂಡ ಅಸಮಾಧಾನಗೊಂಡಿದ್ದಾರೆ. ನಾನು ಬಿಜೆಪಿಯನ್ನು ನಂಬಿದ್ದಕ್ಕೆ ಇಂತಹ ಸ್ಥಿತಿ ಬಂದಿದೆ. ಮಂತ್ರಿ ಸ್ಥಾನ ತ್ಯಜಿಸಿ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದೆ. ಆದರೆ, ಈಗ ನನಗೆ ಮಂತ್ರಿ ಸ್ಥಾನ ತಪ್ಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ಕ್ಯಾಬಿನೆಟ್ನಲ್ಲಿ ಶಶಿಕಲಾ ಜೊಲ್ಲೆ ಅವರಿಗೆ ಕೊಕ್ ಕೊಟ್ಟು ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತೆ ಎನ್ನುವ ಚರ್ಚೆಗಳಾಗಿದ್ದವು. ಆದ್ರೆ, ಕೊನೆಯಲ್ಲಿ ಹೈಕಮಾಂಡ್ ಜೊಲ್ಲೆ ಅವರಿಗೆ ಮಣೆ ಹಾಕಿದ್ದು, ಪೂರ್ಣಿಮಾ ಅವರಿಗೆ ನಿರಾಸೆಯಾಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಪೂರ್ಣಿಮಾ ಶ್ರೀನಿವಾಸ್ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರವಾಗಿ ಪಕ್ಷಕ್ಕಾಗಿ ನಾನು ನನ್ನ ಕುಟುಂಬ ಶ್ರಮಿಸಿದ್ದೇವೆ. ಚುನಾವಣೆ ಸಂದರ್ಭಗಳಲ್ಲಿ ನಿರಂತರವಾಗಿ ಪಕ್ಷಕ್ಕಾಗಿ ದುಡಿದ್ದೇವೆ. ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ. ಆದ್ರೆ ಈಗ ಪಕ್ಷ ಜಾಣ ಕುರುಡರಂತೆ ವರ್ತಿಸುತ್ತಿದೆ. ಗೊಲ್ಲ ಸಮುದಾಯಕ್ಕೆ ಒಂದು ಸ್ಥಾನ ನೀಡದಿರುವುದು ನೋವುಂಟು ಮಾಡಿದೆ ಎಂದು ಬೇಸರ ಹೊರಹಾಕಿದ್ದಾರೆ.
ಇನ್ನೇನು ಮುಖ್ಯಮಂತ್ರಿಯಾಗಿ ಬಿಡುತ್ತಾರೆ ಎಂದು ಭಾವಿಸಿದ್ದ ಅರವಿಂದ್ ಬೆಲ್ಲದ ಮಂತ್ರಿಸ್ಥಾನವೂ ಸಿಗದೆ ಬೇಸರಗೊಂಡಿದ್ದಾರೆ. ಅವರು ತಮ್ಮ ಫೆಸ್ಬುಕ್ ಪೇಜ್ನಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಧಾರವಾಡ-74 ಮತಕ್ಷೇತ್ರವನ್ನು ಕಳೆದ 2 ಅವಧಿಯಿಂದ ಪ್ರತಿನಿಧಿಸುತ್ತಿದ್ದೇನೆ. ಕ್ಷೇತ್ರದ ಮತದಾರರ ಪ್ರೀತಿ-ವಿಶ್ವಾಸ, ಬೆಂಬಲದಿಂದ ಇಂದು ನನ್ನ ಹೆಸರು ರಾಜ್ಯದ ಅತ್ಯುನ್ನತ ಹುದ್ದೆಯವರೆಗೆ ಪರಿಗಣಿಸಲ್ಪಟ್ಟು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗಮನಕ್ಕೆ ಬರುವಂತಾಗಿದೆ. ಇದು ನಿಮ್ಮೆಲ್ಲರ ಆಶೀರ್ವಾದವೇ ಸರಿ. ರಾಜ್ಯದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನಗೆ ಸ್ಥಾನಮಾನ ಸಿಗದೇ ಇರುವುದು ನಿಮ್ಮೆಲ್ಲರಂತೆ ನನಗೂ ಬೇಸರ ತಂದಿದೆ. ಆದರೂ ಪಕ್ಷದ ಚೌಕಟ್ಟಿನಲ್ಲಿ ನಾನು ಇದೆಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ಆದರೆ ನನ್ನ ಕ್ಷೇತ್ರದ ಜನರ ಸೇವೆ ಮಾಡುವಲ್ಲಿ ನನಗೆ ಇವ್ಯಾವೂ ಅಡೆತಡೆಯಾಗುವುದಿಲ್ಲ ಎಂದು ಅವರಷ್ಟಕ್ಕೆ ಅವರೆ ಸಮಾಧಾನ ಮಾಡಿಕೊಂಡಿದ್ದಾರೆ.
ಇನ್ನೋಂದು ಪ್ರಮುಖ ಬೆಳವಣಿಗೆಯಲ್ಲಿ ಇಂದು (ಶುಕ್ರವಾರ) ಸದಾಶಿವನಗರದಲ್ಲಿರುವ ಶಾಸಕ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದ ಬಗ್ಗೆ ಅತೃಪ್ತರಾಗಿರುವ ಶಾಸಕರು ರಹಸ್ಯ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ, ರಾಜೂಗೌಡ, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ಸಿ.ಪಿ.ಯೋಗೇಶ್ವರ್, ಬಾಲಚಂದ್ರ ಜಾರಕಿಹೊಳಿ, ಅರವಿಂದ ಬೆಲ್ಲದ್ ಉಪಸ್ಥಿತರಿದ್ದು, ತಮ್ಮ ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿದೆ.
ಇದು ಮಂತ್ರಿಗಿರಿಗಾಗಿ ಆಸೆಪಟ್ಟವರ ನಡೆಯಾದರೆ, ಮಂತ್ರಿಯಾಗಿರುವವರ ನಡೆ ವಿಚಿತ್ರವಾಗಿದೆ. ನನಗೆ ಈ ಖಾತೆ ಬೇಕು, ಆ ಖಾತೆ ಬೇಡ ಅಂತಾ ಈಗಾಗಲೆ ಕೂಗು ಎಬ್ಬಿಸಿದ್ದಾರೆ. ಇದೇ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಸಿಎಂ ಬೆನ್ನು ಬಿದ್ದಿದ್ದಾರೆ ಈ ವಿಚಾರಕ್ಕೂ ಹೈಕಮಾಂಡ್ ಮದ್ಯಪ್ರವೇಶಿಸುವ ಸಾಧ್ಯತೆಗಳಿವೆ ಈ ಎಲ್ಲ ಬೆಳವಣಿಗೆಗಳು ಬಿಜೆಪಿಯೊಳಗೆ ಬಂಡಾಯವೇಳುವ ಸಾಧ್ಯತೆಗಳನ್ನು ತೋರಿಸುತಿದೆ. ಇತ್ತ ರಾಜ್ಯದಲ್ಲಿ ಮಳೆ ಸೃಷ್ಟಿಸಿದ ಅವಾಂತರ, ಕೋವಿಡ್ ಸಂಕಷ್ಟ, ಶಾಲಾ -ಕಾಲೇಜ್ ಆರಂಭವಾಗದಿರುವುದು, ಆರ್ಥಿಕ ಬೆಳವಣಿಗೆ ಕುಸಿತ ಹೀಗೆ ಸಾಲು ಸಾಲು ಸಂಕಷ್ಟಗಳಿವೆ. ಜನ ಸಂಕಷ್ಟದಲ್ಲಿ ಸರಕಾರ ಚಲ್ಲಾಟದಲ್ಲಿ ಎಂಬಂತಾಗಿದೆ ರಾಜ್ಯದ ಸ್ಥಿತಿ.