ಹಾಸನ : ಹಾಸನ ಜಿಲ್ಲೆಯ ಜನರ ದಶಕಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಕರ್ನಾಟಕ ಸರ್ಕಾರ ಹಾಸನ ವಿಮಾನ ನಿಲ್ದಾಣ ಯೋಜನೆಗೆ 193 ಕೋಟಿ ರೂ. ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.
ಹಾಸನದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂಬುದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಕಸಸು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಮ್ಮ ಬಜೆಟ್ ಭಾಷಣದಲ್ಲಿ ವಿಮಾನ ನಿಲ್ದಾಣ ಯೋಜನೆಗೆ 175 ಕೋಟಿ ಅನುದಾನ ಘೋಷಣೆ ಮಾಡಿದ್ದರು.
ಹಾಸನ ನಗರದ ಹೊರವಲಯದ ಭುವನಹಳ್ಳಿ ಬಳಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ವಿಮಾನ ನಿಲ್ದಾಣದ ಕಾಮಗಾರಿ ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ. ಯೋಜನೆ ಜಾರಿಗೊಳ್ಳುವ ಪ್ರದೇಶದ 9 ಕಿ.ಮೀ. ವ್ಯಾಪ್ತಿಯಲ್ಲಿರುವ 35 ಮೀಟರ್ ವಿಸ್ತೀರ್ಣದ ಹೈಟೆನ್ಷನ್ ತಂತಿಗಳನ್ನು, ಟವರ್‌ಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.
1996ರಲ್ಲಿ ಎಚ್. ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಹಾಸನ ವಿಮಾನ ನಿಲ್ದಾಣದ ಯೋಜನೆ ರೂಪಗೊಂಡಿತು. 2021ರಲ್ಲಿ ಯೋಜನೆಗೆ ವೇಗ ಸಿಕ್ಕಿದ್ದು, ಕಾಮಗಾರಿ ಆರಂಭಿಸಲು ಕರ್ನಾಟಕ ಸರ್ಕಾರ ಸಹ ಒಪ್ಪಿಗೆ ನೀಡಿದೆ. ಹಾಸನ ಜಿಲ್ಲೆ ಕೃಷಿ, ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ ಪಡೆದಿದೆ. ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಚಿಕ್ಕಮಗಳೂರು ಜಿಲ್ಲೆಗೆ ಸಹ ಅನುಕೂಲವಾಗಲಿದೆ. ಯೋಜನೆ ಪೂರ್ಣಗೊಂಡರೆ ಜನರು ವಿಮಾನಕ್ಕಾಗಿ ಮಂಗಳೂರು, ಬೆಂಗಳೂರಿಗೆ ಪ್ರಯಾಣಿಸುವುದು ತಪ್ಪಲಿದೆ.
ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲು ಸಿದ್ಧತೆಗಲು ನಡೆದಿವೆ. ಇಂಧನ ಮತ್ತು ಮೂಲ ಸೌಕರ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಉದ್ದೇಶಿತ ವಿಮಾನ ನಿಲ್ದಾಣದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.