ಉಪ ಚುನಾವಣೆ ದಿನಾಂಕ ನಿಗದಿ : ಮೂರು ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ

ಬೆಂಗಳೂರು : ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಬೆನ್ನಲ್ಲೆ ಆಡಳಿತ ಪಕ್ಷ ಬಿಜೆಪಿ, ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್‌ ನಲ್ಲಿ ಚಟುವಟಿಕೆಗಳು ಗರಿಗೆದರಿವೆ.

ನಾಮಪತ್ರ ಸಲ್ಲಿಸಲು ಅ.8 ಕಡೆಯ ದಿನವಾಗಿರುವುದರಿಂದ ಹೆಚ್ಚು ವಿಳಂಬ ಮಾಡದೆ ಗೆಲ್ಲುವ ಹುರಿಯಾಳುಗಳನ್ನೇ ಕಣಕ್ಕಿಳಿಸಲು ಬಿಜೆಪಿ ಪಕ್ಷ ಮುಂದಾಗಿದೆ ಎಂದು ತಿಳಿದುಬಂದಿದೆ. ಪ್ರಚಾರಕ್ಕೆ ಕೇವಲ ಎರಡು ವಾರಗಳ ಸಮಯಾವಕಾಶ ಸಿಗುವುದರಿಂದ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳಿಗೆ ಮುಂದಿನ ಸೋಮವಾರದೊಳಗೆ ಬಹುತೇಕ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಿಂಧಗಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ರಮೇಶ್ ಭೂಸನೂರ ಮಠ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಅಂತರದ ಮತಗಳಿಂದ ಪರಾಭವಗೊಂಡಿದ್ದ ಅವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿದೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಹೊರಗಿನ ಅಭ್ಯರ್ಥಿಗೆ ಮಣೆ ಹಾಕಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದ ಬಿಜೆಪಿ ಈ ಬಾರಿಯೂ ಸಿಂಧಗಿಯಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ರಮೇಶ್ ಭೂಸನೂರಮಠ ಬಿಜೆಪಿಗೆ ನಿಷ್ಠರಾಗಿರುವುದರಿಂದ ಪಕ್ಷ ಅವರಿಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಹಾನಗಲ್‍ಗೆ ಯಾರು?: ಮಾಜಿ ಸಚಿವ ಸಿಎಂ ಉದಾಸಿ ಅವರ ನಿಧನದಿಂದ ತೆರವಾಗಿರುವ ಪ್ರತಿಷ್ಠಿತ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಈ ಕ್ಷೇತ್ರಕ್ಕೆ ಕಣಕ್ಕಿಳಿಯಲು ಬಿಜೆಪಿಯಿಂದ ಹಲವಾರು ಅಭ್ಯರ್ಥಿಗಳ ಹೆಸರು ಕೇಳಿಬಂದಿದೆಯಾದರೂ ಅಂತಿಮವಾಗಿ ಗೆಲ್ಲುವ ಕುದುರೆಗಳನ್ನೇ ಕಣಕ್ಕಿಳಿಸಬೇಕಾಗಿರುವುದರಿಂದ ಕೊನೆ ಕ್ಷಣದವರೆಗೂ ಅಭ್ಯರ್ಥಿ ಹೆಸರು ಗುಟ್ಟಾಗಿಯೇ ಉಳಿಯುವ ಸಾಧ್ಯತೆ ಇದೆ.

ಉದಾಸೀ ಅವರ ಪುತ್ರ ಶಿವಕುಮಾರ್ ಉದಾಸಿ ಈಗಾಗಲೇ ಸಂಸದರಾಗಿರುವುದರಿಂದ ಅವರ ಸ್ಪರ್ಧೆ ಸಾಧ್ಯತೆ ತೀರಾ ಕಡಿಮೆ. ಇನ್ನು ಅವರ ಕುಟುಂಬದವರಿಗೆ ಪಕ್ಷ ಮಣೆ ಹಾಕುವ ಸಾಧ್ಯತೆಗಳು ಕ್ಷೀಣಿಸಿವೆ. ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರು ಕೂಡ ಆಗಾಗ್ಗೆ ಕೇಳಿಬಂದಿದೆ.

ಇದನ್ನೂ ಓದಿ : ಉಪಚುನಾವಣೆ: ಹಾನಗಲ್-ಸಿಂಧಗಿ ಕ್ಷೇತ್ರಗಳಿಗೆ ಅ.30ರಂದು ಮತದಾನ

ಲಿಂಗಾಯತರ ಭದ್ರಕೋಟೆಯಾಗಿದೆ : ಹಾನಗಲ್ ಕ್ಷೇತ್ರವು ಹೇಳಿಕೇಳಿ ಲಿಂಗಾಯತರ ಭದ್ರಕೋಟೆಯಾಗಿದೆ. ಈ ಕ್ಷೇತ್ರದಲ್ಲಿ ಈ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ.  ಹಾವೇರಿ ಕ್ಷೇತ್ರವನ್ನು ಅದೃಷ್ಟ ಎಂದು ಭಾವಿಸಿರುವ ಯಡಿಯೂರಪ್ಪ ತಮ್ಮ ಪುತ್ರನಿಗೆ ರಾಜಕೀಯ ಬುನಾದಿ ಹಾಕಲು  ಲೆಕ್ಕಾಚಾರ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಶಿಕಾರಿಪುರವು ಹಾನಗಲ್ ಕ್ಷೇತ್ರಕ್ಕೆ ಹೊಂದಿಕೊಂಡಿರುವುದರಿದ ಸಹಜವಾಗಿ ಅವರ ಪ್ರಭಾವವು ಸಾಕಷ್ಟಿದೆ. ಕೊನೆ ಕ್ಷಣದಲ್ಲಿ ವಿಜಯೇಂದ್ರ ಸ್ರ್ಪಧಿಸಬೇಕೆಂದು ಕಾರ್ಯಕರ್ತರ ಒತ್ತಡ ಹೆಚ್ಚಾದರೆ ಬಿಜೆಪಿ ಮಣೆ ಹಾಕಿದರೂ ಹಾಕಬಹುದು.

ಕಾಂಗ್ರೆಸ್‌ ನಲ್ಲಿ ಬಿರುಸುಗೊಂಡ ಚಟುವಟಿಕೆ : ಉಪ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ ನಲ್ಲೂ ಚಟುವಟಿಕೆಗಳು ಗರಿಗೆದರಿವೆ.  ಸಿಂದಗಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಯವರು, ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಮನಗೊಳಿಯವರನ್ನು ಘೋಷಣೆ ಮಾಡಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿದಂತ ಅವರು ಹಾನಗಲ್ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿ ಫೈನಲ್ ಆಗಿಲ್ಲ. ಈ ಕ್ಷೇತ್ರದಲ್ಲಿ ಮನೋಹರ್ ತಹಶೀಲ್ದಾರ್, ಶ್ರೀನಿವಾಸ್ ಮಾನೆ ಆಕಾಂಕ್ಷಿಗಳಾಗಿದ್ದಾರೆ. ಆದ್ರೇ, ವರಿಷ್ಠರು ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದಾರೆ. ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂದರು.

ಜೆಡಿಎಸ್‌ ಹಿಂದೆ ಬಿದ್ದಲ್ಲ : ಜೆಡಿಎಸ್‌ ಕೂಡ ಬಿಜೆಪಿ, ಕಾಂಗ್ರೆಸ್‌ ಗಿಂತ ತಾನೇನು ಕಮ್ಮಿ ಇಲ್ಲ ಎಂಬಂತೆ ಚುನಾವಣೆಗೆ ತಯಾರಿ ನಡೆಸುತ್ತಿದೆ.  ಈಗಾಗಲೆ ನಯಾಜ್ ಅವರನ್ನು ಹಾನಗಲ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇವೆ  ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಅಕ್ಟೋಬರ್ 30ರಂದು ನಡೆಯಲಿರುವ ಹಾನಗಲ್ ಮತ್ತು ಸಿಂಧಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್ ಸಿದ್ಧವಾಗಿದೆ ಎಂದು ಬಿಡದಿಯ ತಮ್ಮ ತೋಟದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಸಿಂಧಗಿ ಹಾಗೂ ಹಾನಗಲ್ ನಲ್ಲಿ ಶಾಸಕರ ಅಕಾಲಿಕ ಮರಣ ಹೊಂದಿದ್ದರು. ಈ ಕಾರಣಕ್ಕಾಗಿ ಇದೀಗ ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿದೆ. ಜೆಡಿಎಸ್ ಚುನಾವಣೆಗೆ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.

ನಿನ್ನೆಯಿಂದ ವಿನೂತನ ಕಾರ್ಯಗಾರ ಮಾಡುತ್ತಿದ್ದೇವೆ. ಈ ಸಮಯದಲ್ಲಿಯೇ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದಾರೆ. ಇದು ನಮ್ಮ ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದತಾ ಪರೀಕ್ಷೆಯಂತೆ ಬಂದಿದೆ ಎಂದಿದ್ದಾರೆ.  ಸಿಂದಗಿ ಸಿಂಧಗಿ ಕ್ಷೇತ್ರದಲ್ಲಿ ಐವರು ಟಿಕೆಟ್ ಕೇಳುತ್ತಿದ್ದಾರೆ. ಈಗಾಗಲೇ ಚರ್ಚೆಗಳು ಕೂಡ ಮಾಡುತ್ತಿದ್ದೇವೆ. ಎರಡೂ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಹಾಕುತ್ತೇವೆ ಹಾಗೂ ಚುನಾವಣೆಗೆ ಸಾಮೂಹಿಕ ನಾಯಕತ್ವದಲ್ಲಿ ಹೋಗುತ್ತೇವೆ ಎಂಬುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಒಟ್ಟಾರೆ ಮೂರು ಪಕ್ಷಗಳು ಉಪಚುನಾವಣೆಗೆ ತಯಾರಿ ನಡೆಸಿದ್ದು, ಗೆಲುವಿಗಾಗಿ ರಣ ತಂತ್ರ ಹೆಣೆಯುತ್ತಿವೆ. ಸಿಎಂ ಬೊಮ್ಮಾಯಿವರಿಗೆ ಇದು ಪರೀಕ್ಷಾ ಸಮಯವಾದರೆ, ಕಾಂಗ್ರೆಸ್‌ ಗೆ ಬಲ ಹೆಚ್ಚಿಸಿಕೊಳ್ಳುವ ಕಾಲ ವಾಗಿದೆ. ಜೆಡಿಎಸ್‌ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸಲು ಹವಣಿಸುತ್ತಿದೆ. ಹಾಗಾಗಿ ಈ ಉಪಚುನಾವಣೆಯಲ್ಲಿ ಗೆಲ್ಲುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *