ಬೆಂಗಳೂರು : ಮಸ್ಕಿಯಲ್ಲಿ ಆಪರೇಷನ್ ಕಮಲಕ್ಕೆ ಮುಖಭಂಗವಾಗಿ ಕಾಂಗ್ರೆಸ್ ನ ಬಸನಗೌಡ ತುರ್ವಿಹಾಳ 20 ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ. ಬಸವಕಲ್ಯಾಣದಲ್ಲಿ ಬಿಜೆಪಿಯ ಶರಣು ಸಲಗರ 20 ಸಾವಿರ ಮತಗಳ ಅಂತರದಿಂದ ಮುನ್ನಡೆ ಕಾಯ್ದೆಕೊಂಡಿದ್ದು ಅನುಕಂಪಕ್ಕೆ ಮತದಾರ ಜೈ ಅನ್ನದ ಕಾರಣ ಈಗ ಈ ಕ್ಷೇತ್ರ “ಕೈ” ಜಾರಿ ಹೋಗಿದೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. 26ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಈ ಹೊತ್ತಿಗೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ 66,965 ಮತಗಳಿಸಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರ ಹತ್ತಿರದ ಸ್ಪರ್ಧಿ ಕಾಂಗ್ರೆಸ್ನ ಮಾಲಾ ನಾರಾಯಣರಾವ್ 47,839 ಮತಗಳಿಸಿದ್ದಾರೆ. ಹಾಗೇ ಜೆಡಿಎಸ್ನ ಸಯ್ಯದ್ ಯಸ್ರಬ್ ಅಲಿ ಖಾದ್ರಿ 11,295 ವೋಟ್ ಪಡೆದಿದ್ದಾರೆ. ಈ ಮಧ್ಯೆ ಬಿಜೆಪಿಯಿಂದ ಟಿಕೆಟ್ ಸಿಗದೆ ಬಂಡಾಯ ಎದ್ದು ಸ್ಪರ್ಧಿಸಿದ್ದ 9148 ಮತ ಗಳಿಸಿದ್ದಾರೆ. ಇಲ್ಲೀಗ ಬಿಜೆಪಿ ತನ್ನ ಸಮೀಪ ಸ್ಪರ್ಧಿ 19,126 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.
ಬಸವಕಲ್ಯಾಣದಲ್ಲಿ ಈ ಹಿಂದೆ ಶಾಸಕರಾಗಿದ್ದ ಕಾಂಗ್ರೆಸ್ನ ನಾರಾಯಣ ರಾವ್ ಅವರು 2020ರ ಸೆಪ್ಟೆಂಬರ್ನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕಾಂಗ್ರೆಸ್ ನಾರಾಯಣ್ರಾವ್ ಅವರ ಪತ್ನಿ ಮಲ್ಲಮ್ಮ ನಾರಾಯಣ್ರಾವ್ ಅವರನ್ನೇ ಆಯ್ಕೆ ಮಾಡಿತ್ತು. ಉಪಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಇಲ್ಲಿ ನಾರಾಯಣ್ ರಾವ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರಿಂದ ಅನುಕಂಪದ ಅಲೆಯ ಆಧಾರದಲ್ಲಿ ಮಲ್ಲಮ್ಮ ಅವರೇ ಗೆಲ್ಲಬಹುದು ಎಂಬ ಅಂದಾಜು ಇತ್ತು. ಆದರೆ ಈಗಿನ ಲೆಕ್ಕಾಚಾರ ನೋಡಿದರೆ ಉಲ್ಟಾ ಆಗುವಂತೆ ಕಾಣುತ್ತಿದೆ. ಬಿಜೆಪಿ ಗೆಲುವಿನತ್ತ ದಾಪುಗಾಲು ಇಡುತ್ತಿದೆ.
ಇದನ್ನೂ ಓದಿ : ಚುನಾವಣಾ ಫಲಿತಾಂಶ : ಹೊಸ ಇತಿಹಾಸದತ್ತ ಎಲ್.ಡಿ.ಎಫ್ – ಭಾರೀ ಮುನ್ನಡೆ ಕಾಯ್ದುಕೊಂಡ ಎಡರಂಗ
ಬಿಜೆಪಿಯಿಂದ ಈ ಬಾರಿ ಬಸವಕಲ್ಯಾಣ ಉಪಚುನಾವಣೆ ಉಸ್ತುವಾರಿಯನ್ನು ಡಿಸಿಎಂ ಲಕ್ಷಣ್ ಸವದಿ ಹೊತ್ತಿದ್ದರು. ಬಸವಕಲ್ಯಾಣವನ್ನು ಗೆಲ್ಲಲು ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಪಕ್ಷದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು, ಒಟ್ಟಾಗಿ ಕೆಲಸ ಮಾಡಬೇಕು ಎಂದು ಪಕ್ಷದ ನಾಯಕರು, ಮುಖಂಡರಿಗೆ ಕರೆ ನೀಡಿದ್ದರು. ಬಸವಕಲ್ಯಾಣದಲ್ಲಿನ ಜನರ ಬೆಂಬಲಕ್ಕೆ ಸಿಎಂ ಯಡಿಯೂರಪ್ಪ ಧನ್ಯವಾದ ತಿಳಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವದಿಸಿದ ಕ್ಷೇತ್ರದ ಎಲ್ಲ ಮತದಾರ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿ ಶ್ರೀ ಶರಣು ಸಲಗರ ಅವರಿಗೆ ಮತ್ತು ಅಲ್ಲಿನ ಎಲ್ಲಾ ನಮ್ಮ ಕಾರ್ಯಕರ್ತರಿಗೆ ಅಭಿನಂದನೆಗಳು. @BJP4Karnataka
— B.S. Yediyurappa (@BSYBJP) May 2, 2021
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವಗೌಡ ತುರವಿಹಾಳ ಗೆಲುವಿನತ್ತ ದಾಪುಗಾಲು ಇಡುತ್ತಿದ್ದಾರೆ. ಮತಎಣಿಕೆಯಲ್ಲಿ ಸದ್ಯ 20,000 ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವಗೌಡ ತುರವಿಹಾಳ ಮುನ್ನಡೆ ಸಾಧಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ 19942 ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಬಸವಗೌಡ ತುರವಿಹಾಳ 49336 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಭಾರೀ ಅಂತರವನ್ನು ಕಾಂಗ್ರೆಸ್ ಅಭ್ಯರ್ಥಿ ಪಡೆದುಕೊಂಡಿದ್ದಾರೆ.ಕಳೆದ ಬಾರಿಯ ಚುನಾವಣೆಯಲ್ಲಿ ಸುಮಾರು 200 ಮತಗಳ ಅಂತರದಲ್ಲಿ ಪ್ರತಾಪಗೌಡ ಪಾಟೀಲ್ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ಭಾರೀ ಅಂತರದಲ್ಲಿ ಸೋಲನ್ನು ಅನುಭವಿಸುವುದು ಖಚಿತವಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 10.16 ಲಕ್ಷ ಮತದಾನ ಆಗಿತ್ತು. ಈವರೆಗೆ 3.20 ಲಕ್ಷ ಮತ ಎಣಿಕೆಯಷ್ಟೇ ನಡೆದಿದೆ. ನಾಲ್ಕೂವರೆ ತಾಸುಗಳಿಂದ ಮತ ಎಣಿಕೆ ನಡೆಯುತ್ತಿದೆ. ಕೋವಿಡ್ ಕಾರಣದಿಂದಾಗಿ ಕಡಿಮೆ ಸಿಬ್ಬಂದಿ ನಿಯೋಜಿಸಿರುವುದರಿಂದಾಗಿ ಮತ ಎಣಿಕೆಯ ವೇಗ ಕಡಿಮೆ ಇದೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ 1,17,549 ಮತಗಳನ್ನು ಪಡೆದಿದ್ದು, ಅವರು, 11,213 ಮತಗಳ ಅಂತರದಿಂದ ಮುನ್ನಡೆ ಗಳಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ 1,07,401 ಮತಗಳನ್ನು ಪಡೆದಿದ್ದಾರೆ.
ಪಂಚರಾಜ್ಯ ವಿಧಾನಸಭೆ ಫಲಿತಾಂಶ
- ತಮಿಳುನಾಡಿನಲ್ಲಿ ಡಿಎಂಕೆಗೆ 137 ಅಣ್ಣಾಡಿಎಂಕೆಗೆ 96 ಕ್ಷೇತ್ರಗಳಲ್ಲಿ ಮುನ್ನಡೆ
- ಕೇರಳದಲ್ಲಿ ಎಲ್ಡಿಎಫ್ 90 ಯುಡಿಎಫ್ 46 ಕ್ಷೇತ್ರಗಳಲ್ಲಿ ಮುನ್ನಡೆ
- ಅಸ್ಸಾಂನಲ್ಲಿ ಬಿಜೆಪಿ 78, ಕಾಂಗ್ರೆಸ್ 47 ಕ್ಷೇತ್ರಗಳಲ್ಲಿ ಮುನ್ನಡೆ
- ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 205 ಬಿಜೆಪಿ 84,ಎಡರಂಗ ಮೈತ್ರಿ : 01 ಕ್ಷೇತ್ರಗಳಲ್ಲಿ ಮುನ್ನಡೆ
- ಪುದುಚೇರಿ : ಎನ್. ಆರ್.ಸಿ 11 ಮತ್ತು ಕಾಂಗ್ರೆಸ್ 06 ಕ್ಷೇತ್ರಗಳ ಮುನ್ನಡೆ.