ಬೆಂಗಳೂರು :ರಾಜ್ಯದ ಉಪಚುನಾವಣೆಯ ಫಲಿತಾಂಶ ಇದೀಗ ಅಧಿಕೃತವಾಗಿ ಹೊರಬಿದ್ದಿದ್ದು, ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭಾರೀ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.
ಎಲ್ಲಾ ಸುತ್ತುಗಳ ಎಣಿಕೆ ಮುಗಿದ ನಂತರ ಯಾರಿಗೆ ಎಷ್ಟು ಮತ ಸಿಕ್ಕಿವೆ? ಎಂಬ ಮಾಹಿತಿ ಲಭ್ಯವಾಗಿದೆ.
ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದಿದ್ದ ಸಿ.ಪಿ ಯೋಗೇಶ್ವರ್, 1,12,388 ಮತಗಳನ್ನು ಸ್ವೀಕರಿಸಿದ್ದರೆ, ನಿಖಿಲ್ 87,031 ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ ಸಿಪಿವೈ 25,357 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಂಗಾರು ಹನುಮಂತುಗೆ 83,961 ಮತಗಳು ಲಭಿಸಿದರೆ, ಅನ್ನಪೂರ್ಣಗೆ 93.606 ಮತಗಳು ಸಿಕ್ಕಿವೆ. ಬಿಜೆಪಿ ವಿರುದ್ಧ ಭರ್ಜರಿ ಪೈಪೋಟಿ ಕೊಟ್ಟ ಅನ್ನಪೂರ್ಣ ತುಕಾರಾಮ್, 9,645 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಶಿಗ್ಗಾಂವಿಯಲ್ಲಿ ಮೈತ್ರಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿರುದ್ಧ ಸ್ಪರ್ಧೆಗಿಳಿದಿದ್ದ ಯಾಸಿರ್ ಪಠಾಣ್ 1,00,587 ಮತಗಳನ್ನು ಸ್ವೀಕರಿಸಿದರೆ, ಭರತ್ 86,960 ಮತಗಳನ್ನು ಪಡೆದುಕೊಂಡಿದ್ದಾರೆ. 13,448 ಮತಗಳಿಂದ ಪಠಾಣ್ ಗೆಲುವು ಸಾಧಿಸಿದ್ದಾರೆ.
ಈ ಮೂಲಕ ಮೂರು ಕ್ಷೇತ್ರಗಳಲ್ಲಿಯೂ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್, ಪಕ್ಷದ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಬೈಎಲೆಕ್ಷನ್ ಗೆಲುವನ್ನು ಮುಂದಿಟ್ಟು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಮಾಡಿದ್ದ ಆರೋಪ, ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.