ಬೆಂಗಳೂರು: ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ನೌಕರರು ಇಂದಿನಿಂದ ಮುಷ್ಕರದ ಮಾರ್ಗ ಹಿಡಿದಿದ್ದಾರೆ.
ಮುಷ್ಕರದ ಪರಿಣಾಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳಗ್ಗಿನಿಂದಲೇ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ತಬ್ಧವಾಗಿದ್ದು, ಬೆಂಗಳೂರಿನಲ್ಲೂ ಬಿಎಂಟಿಸಿ ಬಸ್ಗಳು ರಸ್ತೆಗಿಳಿಯದ ಕಾರಣ ದಿನನಿತ್ಯ ಕೆಲಸ ಕಾರ್ಯಗಳಿಗೆ ಬಸ್ಗಳನ್ನೇ ನೆಚ್ಚಿಕೊಂಡ ಜನ ಬೇರೆ ವ್ಯವಸ್ಥೆ ಹುಡುಕಿಕೊಳ್ಳಲು ಪರದಾಡುತ್ತಿದ್ದಾರೆ.
ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದು, ಕೇವಲ ಬೆರಳಿಕೆಯಷ್ಟು ಅಂತರರಾಜ್ಯ ಬಸ್ಗಳು ಮಾತ್ರ ಓಡಾಟ ಆರಂಭಿಸಿವೆ. ಮೆಜೆಸ್ಟಿಕ್ ಬಸ್ ನಿಲ್ದಾಣವೂ ಖಾಲಿ ಖಾಲಿಯಾಗಿದ್ದು ಬೆಳಗ್ಗೆ ಬೇಗ ಬಂದರೆ ಬಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಆಗಮಿಸಿದ್ದ ಜನ ನಿರಾಶರಾಗಿದ್ದಾರೆ. ಪ್ರತಿನಿತ್ಯಕ್ಕೆ ಹೋಲಿಸಿದರೆ ಇಂದು ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿದೆ. ಅಂತೆಯೇ, ನಗರ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಘಗಿತಗೊಂಡಿರುವ ಹಿನ್ನೆಲೆಯಲ್ಲಿ ಯಶವಂತಪುರ, ಗೊರಗುಂಟೆ ಪಾಳ್ಯ, ಪೀಣ್ಯ ಸೇರಿದಂತೆ ಬಹುತೇಕ ಎಲ್ಲಾ ಭಾಗಗಳಲ್ಲೂ ಪ್ರಯಾಣಿಕರಿಗೆ ತೊಂದರೆಯಾಗಿದೆ.
ಕೊಪ್ಪಳ, ತುಮಕೂರು, ಹಾವೇರಿ, ಮಂಡ್ಯ, ಬಾಗಲಕೋಟೆ, ಚಿತ್ರದುರ್ಗ, ರಾಮನಗರ, ನೆಲಮಂಗಲ, ಯಾದಗಿರಿ, ಕೋಲಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಆಗಿದೆ. ಬೀದರ್ನಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶೇ.40ರಷ್ಟು ಬಸ್ ಮಾತ್ರ ಸಂಚಾರ ಆರಂಭಿಸಿವೆ.
ಖಾಸಗಿ ಬಸ್ ಎಂಟ್ರಿ: ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎನ್ನುವುದು ನಿಶ್ಚಿತವಾಗುತ್ತಿದ್ದಂತೆಯೇ ಬೆಂಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್ಗಳು ಲಗ್ಗೆ ಇಟ್ಟಿವೆ. ಆರಂಭದಲ್ಲಿ ಒಂದೆರೆಡು ಬಿಎಂಟಿಸಿ ಬಸ್ ಕಣ್ಣಿಗೆ ಬಿದ್ದವಾದರೂ ಅದರಲ್ಲಿದ್ದ ಚಾಲಕರು ಹಾಗೂ ನಿರ್ವಾಹಕರು ನಮ್ಮ ಪಾಳಿ ಮುಗಿದಿದೆ. ಬಸ್ ಅನ್ನು ಡಿಪೋಕ್ಕೆ ಬಿಟ್ಟು ಮನೆಗೆ ತೆರಳಲು ಬಂದಿದ್ದೇವೆ ಎಂದು ಹೇಳುವ ಮೂಲಕ ಇಂದು ಯಾರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂಬುದನ್ನು ಹೇಳಿದರು.
ದುಪ್ಪಟ್ಟು ದರ ವಸೂಲಿ : ಸಾರ್ವಜನಿಕ ಸಾರಿಗೆ ಇಲ್ಲದ ಕಾರಣ ಖಾಸಗಿ ಬಸ್ಸುಗಳು ಹಾಗೂ ಅಟೋಗಳು ಇಂದು ರಸ್ತೆಗಳಲ್ಲಿ ಹೆಚ್ಚಾಗಿ ಓಡಾಡಿಕೊಂಡಿದ್ದು, ಪರಿಸ್ಥಿತಿಯ ಲಾಭವನ್ನು ಖಾಸಗಿ ಬಸ್ಸುಗಳ ಮಾಲೀಕರು ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಡೆ ಪ್ರಯಾಣಿಕರಿಂದ ದುಪ್ಪಟ್ಟು ದರ ಕೇಳುವುದು, ಕೆಲವೆಡೆ ಪ್ರಯಾಣಿಕರಿಂದ ದುಪ್ಪಟ್ಟು ದರ ಪಡೆಯುತ್ತಿರುವುದು ಕಂಡು ಬರುತ್ತಿದೆ.
ಪರೀಕ್ಷೆ ಮುಂದೂಡಿಕೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವ ವಿದ್ಯಾಲಯ ಹಾಗೂ ಮಂಗಳೂರು ವಿಶ್ವ ವಿದ್ಯಾಲಯ ಸೇರಿದಂತೆ ಹಲವು ಕಾಲೇಜುಗಳು, ವಿಶ್ವ ವಿದ್ಯಾಲಯಗಳು ಇಂದು ನಡೆಸಲು ಉದ್ದೇಶಿಸಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಿವೆ ಎಂದು ವಿಶ್ವವಿದ್ಯಾಲಯಗಳ ಪ್ರಕಟಣೆ ತಿಳಿಸಿದೆ.
ಹೆಚ್ಚುವರಿ ಮೆಟ್ರೋ : ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಇಂದು ಮುಷ್ಕರ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ಹೆಚ್ಚುವರಿ ರೈಲುಗಳನ್ನು ಓಡಿಸಲು ಮೆಟ್ರೋ ಸಂಸ್ಥೆ ತೀರ್ಮಾನಿಸಿದೆ. ಸ್ಮಾರ್ಟ್ ಕಾರ್ಡ್ ಹೊಂದಿದವರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.