ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಈ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 31,980 ಕೋಟಿ ಅಂದ್ರೆ ಒಟ್ಟು ಬಜೆಟ್ ಶೇಖಡ 12% ಮಾತ್ರವಾಗಿದೆ. ಕಳೆದ ವರ್ಷದ ಬಜೆಟ್ ಗೆ ಹೊಲಿಸಿದರೆ ಕೇವಲ 1% ಹಣ ಮಾತ್ರ ಹೆಚ್ಚಿಸುವುದರ ಮೂಲಕ ಬಿಜೆಪಿ ರಾಜ್ಯ ಸರ್ಕಾರ ತನ್ನ ಶಿಕ್ಷಣ ವಿರೋಧಿ, ವಿದ್ಯಾರ್ಥಿ ದ್ರೋಹಿ ನೀತಿಯನ್ನು ಮುಂದುವರೆಸಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಆರೋಪಿಸಿದೆ.
ರಾಜ್ಯ ಸರ್ಕಾರ ಮತ್ತೆ ಮಠ ಮಾನ್ಯಗಳಿಗೆ , ಗೋಶಾಲೆಗಳು, ಜಾತಿವಾರು ಪ್ರತಿಮೆಗಳ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮೀಸಲಿಡುವುದರ ಮೂಲಕ ಬಿಜೆಪಿ ಸರ್ಕಾರಕ್ಕೆ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿ ಕಣ್ಣೋಟ ಇಲ್ಲ ಎಂಬುದು ಈ ಬಜೆಟ್ ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ ಎಂದು ರಾಜ್ಯಾಧ್ಯಕ್ಷ ಅಮರೇಶ ಕಡಗದ್ ಆರೋಪಿಸಿದ್ದಾರೆ.
ಕೊವೀಡ್ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಶಿಕ್ಷಣ ಕ್ಷೇತ್ರದ ಪುನಃ ಚೇತನಕ್ಕೆ ಇದು ನಿರಾಸೆಯ ಬಜೆಟ್ ಆಗಿದೆ. ಕೊರೋನಾ ದಿಂದ ಶೈಕ್ಷಣಿಕ ಸಮಸ್ಯೆಗಳು ತೀವ್ರವಾಗಿವೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಏರಿಕೆ ಕಂಡಿದೆ ಆದರೆ ಇದಕ್ಕೆ ಪೂರಕವಾಗಿ ಖಾಲಿ ಇರುವ ಶಿಕ್ಷಕ, ಉಪನ್ಯಾಸಕರ ಹುದ್ದೆಗಳ ಭರ್ತಿ ಮಾಡಬೇಕಾಗಿತ್ತು ಆದರೆ ಕೇವಲ ಮೌಖಿಕ ಭರವಸೆ ಮಾತ್ರ ದೊರೆತಿದೆ. ಇದೆ ಸಂದರ್ಭದಲ್ಲಿ 15,000 ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಖಾಯಂ ನೇಮಕಾತಿ ಮಾಡಿಕೊಳ್ಳುವ ವರೆಗೂ 27,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಹೇಳಿ ರಾಜ್ಯ ಸರ್ಕಾರ ದ್ವಂದ್ವ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀರಿಸಲಾಗುವುದು ಮತ್ತು ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಎಂಬ ಘೋಷಣೆಗಳಲ್ಲಿ ತಾಂತ್ರಿಕ,ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಗೊಳಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರಿ ವಿಶ್ವವಿದ್ಯಾಲಯಗಳ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಬೇಕಿತ್ತು ವಿಶೇಷವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಳಿಸಬೇಕು, ವಿದ್ಯಾರ್ಥಿ ವೇತನ, ವಿಧ್ಯಾಸಿರಿ, ಶುಲ್ಕ ಪುನರ್ ಪಾವತಿ, ಅಗತ್ಯ ತರಗತಿ ಕೊಠಡಿಗಳ ನಿರ್ಮಾಣ, ಶೌಚಾಲಯ, ಪ್ರಯೋಗಾಲಯ,ಉಚಿತ ಲ್ಯಾಪ್ಟಾಪ್, ಉಚಿತ ಬಸ್ ಪಾಸ್ , ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ ಕನಿಷ್ಠ 3500/-ರೂ ಹೆಚ್ಚಿಸಬೇಕೆಂದು, ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮುಂತಾದ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಹಾಗೂ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನಲ್ಲಿ 30% ಮೀಸಲಿಡಬೇಕಿತ್ತು. ಆದರೆ ಈ ರಾಜ್ಯ ಸರ್ಕಾರ ಇದ್ಯಾವುದನ್ನೂ ಪರಿಗಣಿಸದೆ ಶಿಕ್ಷಣ ಕ್ಷೇತ್ರದ ಕುರಿತು ಮತ್ತೊಮ್ಮೆ ನಿರ್ಲಕ್ಷ್ಯತೆ ತೋರಿದೆ ಎಂದು ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ ಆರೋಪಿಸಿದ್ದಾರೆ.
ದೇಶದಲ್ಲಿಯೇ ಎನ್ಇಪಿ ಜಾರಿಗೊಳಿಸುತ್ತಿರುವುದು ಕರ್ನಾಟಕ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಇದಕ್ಕೆ ಅಗತ್ಯವಾದ ಮೂಲ ಸೌಕರ್ಯ, ಉಪನ್ಯಾಸಕರ ನೇಮಕಾತಿಗೆ ಬಿಡಿಗಾಸು ನೀಡಿಲ್ಲ.
ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸೂಕ್ತ ತರಬೇತಿ ಕೇಂದ್ರಗಳನ್ನು ತೆರೆಯುವ ಬದಲು ಕೆಪಿಎಸ್ಸಿ, ನೀಟ್, ಯುಪಿಎಸ್ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ ಎಂಬ ಹೊಸ ಯೋಜನೆಯಡಿ ಆನ್ ಲೈನ್ ವೇದಿಕೆಯಲ್ಲಿ ತರಬೇತಿ ನೀಡಲಾಗುವುದು ಎಂದು ಘೋಷಿಸಿರುವುದು ಕಂಡರೆ ಕಾಟಾಚಾರಕ್ಕೆ ಯೋಜನೆ ಘೋಷಿಸಿ ಕೈ ತೊಳೆದುಕೊಳ್ಳುವ ಹಾದಿಯಲ್ಲಿ ಈ ಸರ್ಕಾರಕ್ಕೆ ಆನ್ ಲೈನ್ ಶಿಕ್ಷಣದ ಅವಲಂಬನೆಯನ್ನು ಹೆಚ್ಚಿಸುತ್ತದೆ ಹುನ್ನಾರ ನಡೆಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದ ಪ್ರತಿ ಬಾರಿಯೂ ಶಿಕ್ಷಣ ಕ್ಷೇತ್ರಕ್ಕೆ ಹಣ ಕಡಿತ ಮಾಡುವ ಪರಿಪಾಠವನ್ನು ಮುಂದುವರಿಸಿದ್ದು, ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ದ್ರೋಹ ಬಗೆದಿದೆ. ಈ ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ವಿದ್ಯಾರ್ಥಿಗಳು ಹೋರಾಟ ನಡೆಸಬಾರದು ಎಂಬ ದುರುದ್ದೇಶದಿಂದ ರಾಜ್ಯ ಸರ್ಕಾರ ಹಿಜಾಬ್ ಕೇಸರಿ ಶಾಲು ವಿವಾದದ ಹುಟ್ಟು ಹಾಕಿ ಇದರ ಮರೆಯಲ್ಲಿ ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಂಘಟನೆ ಆರೋಪಿಸಿದೆ.
ಈ ರಾಜ್ಯ ಸರ್ಕಾರದ ಶಿಕ್ಷಣ, ವಿದ್ಯಾರ್ಥಿ ದ್ರೋಹಿ ಬಜೆಟ್ ವಿರೋಧಿಸಿ ಹೋರಾಟಗಳನ್ನು ತೀವ್ರಗೊಳಿಸಲು ತನ್ನೆಲ್ಲ ಘಟಕಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಎಸ್ಎಫ್ಐ ಕರೆ ನೀಡಿದೆ.