ಬೆಂಗಳೂರು: ಗುರುವಾರ ಇಡೀ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಇಲಾಖೆ ಸೇರಿ ಒಟ್ಟು ಹತ್ತು ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳ ಜತೆ ಬಜೆಟ್ ಪೂರ್ವಭಾವಿ ಚರ್ಚೆ ನಡೆಸಿದರು.
ಆ ಮೂಲಕ, ಮಾರ್ಚ್ 6ರಂದು ಮಂಡಿಸಲಿರುವ ತಮ್ಮ ದಾಖಲೆಯ 17ನೇ ಬಜೆಟ್‌ಗೆ ಅವರು ತಯಾರಿ ಆರಂಭಿಸಿದರು.
ಇದನ್ನೂ ಓದಿ : ಬೆಂಗಳೂರು | ವಿಬಿ ಜಿ ರಾಮ್ ಜಿ ವಿರುದ್ಧ ಸದನದ ಕಠಿಣ ನಿಲುವು : ನಿರ್ಣಯ ಪಾಸ್
ಬೆಳಿಗ್ಗೆ 11 ಗಂಟೆಯಿಂದ ಸಂಜೆ 5.30ರವರೆಗೆ ರೇಸ್‌ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ 2026-27ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಅರಣ್ಯ ಮತ್ತು ಪರಿಸರ ಇಲಾಖೆ, ಕಾನೂನು ಮತ್ತು ಸಂಸದೀಯ ಇಲಾಖೆ, ಪ್ರವಾಸೋದ್ಯಮ, ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ, ಕಾರ್ಮಿಕ, ಒಳಾಡಳಿತ, ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಚಿವರು, ಅಧಿಕಾರಿಗಳ ಜತೆ ಪೂರ್ವಭಾವಿ ಚರ್ಚೆ ನಡೆಸಿದರು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೂ ಇದ್ದರು.
ಹೊಸ ಯೋಜನೆಗಳಿಗೆ ಅಗತ್ಯವಿರುವ ಅನುದಾನವೆಷ್ಟು ಎನ್ನುವ ಬಗ್ಗೆಯೂ ಸಮಾಲೋಚನೆ ನಡೆಯಿತು. ಸಭೆಯಲ್ಲಿ ಇಲಾಖಾವಾರು ಹಾಲಿ ಇರುವ ಯೋಜನೆಗಳಿಗೆ ಅಗತ್ಯ ಅನುದಾನ ಮತ್ತು ಹೊಸ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು. ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಯಾವೆಲ್ಲಾ ಯೋಜನೆಗಳು ಅನುಷ್ಠಾನಗೊಂಡಿವೆ, ಎಷ್ಟು ಬಾಕಿ ಇವೆ ಎಂದು ಮುಖ್ಯಮಂತ್ರಿ ಮಾಹಿತಿ ಪಡೆದುಕೊಂಡರು.
ವಿವಿಧ ಇಲಾಖೆಗಳ ಜೊತೆ ಶುಕ್ರವಾರವೂ ಮುಖ್ಯಮಂತ್ರಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ.
ಇದನ್ನೂ ನೋಡಿ : ಬೀದಿ ನಾಟಕ | ಒಂದನ್ನಾದರೂ ಒತ್ತಿ ಎರಡನ್ನಾದರೂ ಒತ್ತಿ’ Janashakthi Media
