ಬೆಂಗಳೂರು| ಮಾರ್ಚ್ 22 ರಂದು ಕರ್ನಾಟಕ ಬಂದ್

ಬೆಂಗಳೂರು: ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ಹಾಗೂ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಗಳ ಮೇಲೆ ಮರಾಠಿಗರ ದಾಳಿ ಖಂಡಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಶುಕ್ರವಾರ ಸಾಲು ಸಾಲು ಪ್ರತಿಭಟನೆಗೆ ಕರೆ ನೀಡಿದ್ದು, ಮಾರ್ಚ್ 3 ರಂದು ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ಹಾಗೂ ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ ಮಾಡುವುದಾಗಿ ಘೋಷಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಮಾರ್ಚ್ 22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲು ನಿರ್ಧರಿಸಲಾಗಿದೆ.

ಮಾರ್ಚ್ 3 ರಂದು ರಾಜಭವನಕ್ಕೆ ಮುತ್ತಿಗೆ ಹಾಗೂ ಮಾರ್ಚ್ 7 ರಂದು ಬೆಳಗಾವಿ ಚಲೋಗೆ ಕರೆ ನೀಡಲಾಗಿದ್ದು, ಇದಕ್ಕೆ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಅಲ್ಲದೆ ಮಾರ್ಚ್ 11 ರಂದು ಮೇಕೆದಾಟಿಗಾಗಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್, ಮಾ.14 ರಾಮನಗರ ಮಂಡ್ಯ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಮತ್ತು ಮಾ.17 ರಂದು ಹೊಸಕೋಟೆ – ಚೆನ್ನೈ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಹಾಮದ್ ಸಾವಿಗೆ ತೇಜಸ್ವಿನಿ‌ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ: ಸಂತೋಷ್ ಬಜಾಲ್

ಕರ್ನಾಟಕ ಬಂದ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಬೆಂಬಲ ಕೊಡಬೇಕು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇಲಾಖೆಯ ಎಲ್ಲ ಬಸ್​ಗಳನ್ನು ಅಂದು ನಿಲ್ಲಿಸಬೇಕು. ನಮಗೆ ಹೋಟೆಲ್ ಮಾಲೀಕರು, ಸಿನಿಮಾ ರಂಗದವರು, ಸರ್ಕಾರಿ ನೌಕರರು, ದೊಡ್ಡ ಹಾಗೂ ಸಣ್ಣ ವಾಹನಗಳ(ಲಾರಿ, ಖಾಸಗಿ ಬಸ್, ಕಾರು, ವ್ಯಾನ್) ಮಾಲೀಕರು ನಮಗೆ ಬೆಂಬಲ ಸೂಚಿಸಬೇಕು ಎಂದು ವಾಟಾಳ್ ಮನವಿ ಮಾಡಿದ್ದಾರೆ.

ಮರಾಠರಿಗೆ ಸರಿಯಾದ ಪಾಠ ಕಲಿಸಬೇಕಿದೆ. ಹೀಗಾಗಿ ಕರ್ನಾಟಕ ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಗಳು ಸಂಪೂರ್ಣ ಬೆಂಬಲ ನೀಡಬೇಕು ಎಂದು ವಾಟಳ್ ನಾಗರಾಜ್ ಅವರು ಹೇಳಿದ್ದಾರೆ.

ಬಂದ್ ಹಾಗೂ ಬೆಳಗಾವಿ ಚಲೋ ನಡೆಸುವ ಬಗ್ಗೆ ಆಯೋಜಿಸಿದ್ದ ಸಭೆಯಲ್ಲಿ ವಾಟಾಳ್ ನಾಗರಾಜ್, ಸಾರಾ ಗೋವಿಂದು, ಕರವೇ ಪ್ರವೀಣ್ ಶೆಟ್ಟಿ, ಕನ್ನಡ ಕುಮಾರ್, ಜಯಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್, ಗಿರೀಶ್ ಗೌಡ, ರೂಪೇಶ್ ರಾಜಣ್ಣ ಸೇರಿ ಅನೇಕ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು.

ಇದನ್ನೂ ನೋಡಿ: ಆಧುನಿಕ ಸಾಧನ ಹಾಗೂ ತಂತ್ರಜ್ಞಾನದಿಂದಾಗಿ ಯುವಪೀಳಿಗೆ ಓದಿನಿಂದ ಸಂಪೂರ್ಣ ವಿಮುಖರಾಗುತ್ತಿದ್ದಾರೆJanashakthi Media

Donate Janashakthi Media

Leave a Reply

Your email address will not be published. Required fields are marked *