ಗುರುರಾಜ ದೇಸಾಯಿ
ಅಕ್ಕಿ ಕೊಡೋದು ಹೆಂಗೆ ಅಂತಾ ನಾವು ಹೇಳ್ತಿವಿ ಎಂದು ಬಿಜೆಪಿ ಸದಸ್ಯರು ಒಕ್ಕೋರಲಿನಿಂದ ಮನವಿ ಮಾಡಿದಾಗ, ಹೌದಾ ನೀವು ಹೆಂಗೆ ಕೊಟ್ಟಿದ್ರಿ ಅಂತಾ ಗೊತ್ತಿದೆ ಎಂದು ಸ್ಪೀಕರ್, ಬಿಜೆಪಿ ಶಾಸಕರ ಕಾಲೆಳೆದಾಗ ಸದನ ನಗೆಗೆಡಲಲ್ಲಿ ತೇಲಿತು.
16ನೇ ವಿಧಾನಸಭೆಯ ಅಧಿವೇಶನ ನಿನ್ನೆಯಿಂದ ಆರಂಭಗೊಂಡಿದೆ. ಇಂದು ನಡೆದ ಸದನದಲ್ಲಿ ಹಲವು ಸ್ವಾರಸ್ಯಗಳು ಗಮನ ಸೆಳೆದೆವು. ಕಾಂಗ್ರೆಸ್ ಗ್ಯಾರಂಟಿ ಕುರಿತು ನಿಲುವಳಿ ಪ್ರಸ್ಥಾಪಿಸಿ ಚರ್ಚೆಗೆ ಅವಕಾಶ ಕೋರಿ ಬಿಜೆಪಿ ಗದ್ದಲ ನಡೆಸಿತು. ಸ್ಪೀಕರ್, ಬಿಜೆಪಿ ಶಾಸಕರು ಹಾಗೂ ಎಚ್‌ಡಿ ರೇವಣ್ಣ ನಡುವೆ ಮಾತಿನ ಚಕಮಕಿ ನಡೆಯಿತು.
ಮುಧ್ಯಾಹ್ನ 3 : 15 ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ನಿಲುವಳಿ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಸಭಾಧ್ಯಕ್ಷರು ಎಷ್ಟೆ ಮನವಿ ಮಾಡಿದರು ಬಿಜೆಪಿ ಸದಸ್ಯರು ಸುಮ್ಮನಾಗಲಿಲ್ಲ, ಕೊನೆಗೆ ಮಾಜಿ ಸಿಂಎ ಬಸವರಾಜ ಬೊಮ್ಮಾಯಿ ಗದ್ದಲದ ಘೋಷಣೆ ನಡುವೆ ಮಾತನಾಡಲು ಆರಂಭಿಸಿದರು.
“ನಾನು ಅಕ್ಕಿ ಕೊಡುವುದು ಹೆಂಗೆ ಅಂತ ಹೇಳ್ತೆನೆ, ನಾವು ಕೊಡುವ ಸೂಚನೆ ಸರ್ಕಾರಕ್ಕೆ ಅನುಕೂಲ ಆಗುತ್ತೆ, ಅವಕಾಶ ಕೊಡ್ರಿ ಮಾತಾಡ್ತಿನಿ ಅಂದ್ರು”
ಆಗ ಸ್ಪೀಕರ್ ಖಾದರ್ ಹೌದು, ಅಕ್ಕಿ ಕೊಡುದು ಹೆಂಗೆ ಅಂತ ನಿಮ್ಮನ್ನ ನೋಡಿ ಕಲಿಬೇಕು, 2019 ರಲ್ಲಿ 7 ಕೆ.ಜಿ ಇದ್ದ ಅಕ್ಕಿಯನ್ನು 5 ಕೆ.ಜಿ ಮಾಡಿದ್ರಿ ಎಂದು ಚಾಟಿ ಬೀಸಿದಾಗ, ನೀವು ನಮ್ಮ ಸ್ನೇಹಿತರು, ನಮ್ಮ ಕಡೆ ಜಾಸ್ತಿ ಸಪೋರ್ಟ್ ಮಾಡಬೇಕು ಎಂದು ಸ್ಪೀಕರ್ ಎಸೆದ ಚಂಡನ್ನು ಮಾಜಿ ಸಿಎಂ ನಿಧಾನವಾಗಿ ಕೆಳಕ್ಕೆ ಹಾಕಿದರು.
ಇದನ್ನೂ ಓದಿ : ಯತ್ನಾಳ್‌ಗೆ ಸಂವಿಧಾನ ಪಾಠ ಮಾಡಿದ ಸ್ಪೀಕರ್
ಆ ವೇಳೆ ಎದ್ದು ನಿಂತ ಶಾಸಕ ಎಚ್.ಡಿ.ರೇವಣ್ಣ, ಪಂಚೆ ಸರಿಪಡಿಸಿಕೊಳ್ಳುತ್ತಾ, ತೆಂಗು ಬೆಳೆಗಾರರ ಬಗ್ಗೆ ನಾನು ನಿಲುವಳಿ ಸೂಚಿಸಿದ್ದೆ ಅದನ್ನ ತೊಗಳ್ರಿ ಅದರ ಬಗ್ಗೆ ಮಾತಾಡ್ರಿ ಎಂದರು.
ಆಗ ಬಸವರಾಜ ಬೊಮ್ಮಾಯಿ, ನೀವು ಸುಮ್ನೆ ಇರ್ರಿ ರೇವಣ್ಣ, ನೀವು ನಮ್ಮ ಅತ್ಯಾಪ್ತರು ನೀವು ಹೆಂಗ ಮಾಡಿದ್ರೆ ಹೆಂಗ, ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಿ, ನಿಮ್ಮ ಜೊತಿಗೆ ಇರೋದು ನಾವು, ನೀವು ನಮಗೆ ಬೆಂಬಲ ಕೊಡಬೇಕ್ರಿ ಎಂದು ಹೇಳುವ ಮೂಲಕ 2024 ರ ಲೋಕಸಭಾ ಚುನಾವಣೆಯ ಹೊಂದಾಣಿಕೆ ಅಸ್ತ್ರ ಬೀಸಿದರು. ಮತ್ತೆ ಪಂಚೆ ಸರಿಮಾಡಿಕೊಂಡ ರೇವಣ್ಣ ಸುಮ್ಮನೆ ಕುಳಿತರು.
ವಿರೋಧ ಪಕ್ಷದ ಶಾಸಕರನ್ನು ಹೀಗೆ ನಿಲ್ಲಿಸಿ, ನೀವು ಆಡಳಿತ ಪಕ್ಷದ ಪರವಾಗಿ ಬ್ಯಾಟ್ ಬೀಸಿದರೆ ಹೇಗೆ ಎಂದು ಶಾಸಕ ಸುನೀಲ್ ಕುಮಾರ್ ಸ್ಪೀಕರ್ ತಾಳ್ಮೆಯನ್ನು ಪ್ರಶ್ನಿಸಲು ಮುಂದಾದರು, ಆಗ ನಿಮ್ಮ ಖುರ್ಚಿಗಿಂತ, ನನ್ನ ಖುರ್ಚಿಗೆ ಗೌರವ ಇದೆ. ಇಲ್ಲಿ ಕುಳಿತು ನೀವು ಹೇಳಿದ ಹಾಗೆ ಕೇಳಲು ಆಗಲ್ಲ, ನಾನು ಪ್ರತಿಪಕ್ಷಗಳ ಮಿತ್ರ, ನಿಮಗೆ ಚರ್ಚೆಗೆ ಅವಕಾಶ ಕೊಡ್ತೇನೆ, ಆದ್ರೆ ಸಂಪ್ರದಾಯ ಮುರಿಯಲು ಸಿದ್ದನಿಲ್ಲ, ನಾನು ತಪ್ಪು ಸಂದೇಶ ಕೊಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ಕೆಂಡಾಮಂಡಲವಾದರು.
ನೀವು ಜನಪರ, ಒಳ್ಳೆಯರು, ಅವಕಾಶವನ್ನು ಕೊಡಿ ಎಂದು ಸ್ಪೀಕರ್‌ರನ್ನು ಬೊಮ್ಮಾಯಿ ಹೊಗಳಲು ಮುಂದಾದರು, ಆಗ ಖಾದರ್ ತಲೆ ಅಲ್ಲಾಡಿಸಿ ಮೌನವಾಗಿ ಇದ್ದರು.
ಅಯ್ಯೂ ಈ ಬಿಜೆಪಿಯವರ ಕಥೆ ಇಷ್ಟೆ, ಆಡಳಿತದಲ್ಲಿ ಇದ್ದಾಗ್ಲೂ ಹಿಂಗೆ ಮಾಡ್ತಾರೆ. ವಿರೋಧ ಪಕ್ಷದಲ್ಲಿ ಇದ್ದಾಗ್ಲೂ ಹಿಂಗೆ ಮಾಡ್ತಾರೆ, ತೌಡ ಕುಟ್ಟೊದು ಇವರ ಕೆಲಸ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಲೆ ಬಿಜೆಪಿ ಸದಸ್ಯರ ಗಲಾಟೆ ಹೆಚ್ಚಾಯ್ತು.
ಇದೆಲ್ಲವನ್ನು ಗಮನಿಸಿದ ಹೊಸ ಶಾಸಕರು ಅಯ್ಯೋ ಮೊನ್ನೆ ನಮಗೆ ಪಾಠ ಮಾಡಿದ್ದು ಏನು? ಇಲ್ಲಿ ನಡೀತಾ ಇರೋದು ಏನು ಎಂದು ಪೆಚ್ಚುಮೋರಿ ಹಾಕಿಕೊಂಡ, ಕೈ ಕೈ ಹಿಸುಕುತ್ತಾ, ಉಗುಳು ನಿಂಗಿಕೊಂಡು ಸುಮ್ಮನೆ ಕುಳಿತಂತೆ ಕಂಡು ಬಂತು.