ಚಂಡಿಗಡ : ಮುಝಪ್ಪರ್ ನಗರ ಮಹಾಪಂಚಾಯ್ತ್ ನಂತರ ಕರ್ನಾಲ್ ನಲ್ಲಿ ರೈತರ ಮತ್ತೊಂದು ಮಹಾಪಂಚಾಯ್ತ್ ನಡೆಸಿದ್ದಾರೆ. ಆ.28ರಂದು ನಡೆದಿದ್ದ ಪೊಲೀಸ್ ಲಾಠಿಪ್ರಹಾರವನ್ನು ಖಂಡಿಸಿ ಹಾಗೂ ಅಧಿಕಾರಿಯನ್ನು ವಜಾ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ಸಪ್ಟಂಬರ್ 5ರಂದು 10ಲಕ್ಷಕ್ಕೂ ಹೆಚ್ಚು ರೈತರನ್ನು ಅಣಿನೆರೆಸಿದ ಮುಝಫ್ಫರ ನಗರ ಮಹಾಪಂಚಾಯ್ತ್ ನಡೆದ ಎರಡೇ ದಿನಕ್ಕೆ ಸಪ್ಟಂಬರ್ 7ರಂದು ಹರ್ಯಾಣದ ಕರ್ನಾಲ್ ನಲ್ಲಿ ಎರಡು ಲಕ್ಷ ರೈತರು ಭಾಗವಹಿಸಿದ ಇನ್ನೊಂದು ಮಹಾಪಂಚಾಯ್ತ್ ನಡೆದಿದೆ. ಸಿಂಘು ಗಡಿಯಲ್ಲಿ ರಾಷ್ಟ್ರೀಯ ಸಮಾವೇಶದ ಮರುದಿನ ಆಗಸ್ಟ್ 28ರಂದು ಕರ್ನಾಲ್‍ನಲ್ಲಿ ಬಿಜೆಪಿ ರಾಜ್ಯ ಸರಕಾರ ನಡೆಸಿದ ಉಗ್ರ ಲಾಠೀ ಪ್ರಹಾರವನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯುತ್ತಿದೆ.
ಸರಕಾರ ಸೆಕ್ಷನ್ 144 ಜಾರಿ ಮಾಡಿತ್ತು, ಇಂಟರ್ನೆಟ್ ಸಂಪರ್ಕವನ್ನು ಕಡಿದು ಹಾಕಲಾಗಿತ್ತು. ಆದರೂ ಪ್ರತಿಭಟನೆಯನ್ನು ತಡೆಯುವುದು ಅದಕ್ಕಾಗಲಿಲ್ಲ.
ಇದನ್ನೂ ಓದಿ : ‘ರೈತರನ್ನು ಚನ್ನಾಗಿ ಹೊಡೆಯಿರಿ’ ಪೊಲೀಸರಿಗೆ ಆದೇಶಿಸಿದ್ದ ಅಧಿಕಾರಿಯ ವಿಡಿಯೊ ವೈರಲ್
ರೈತರ ತಲೆ ಒಡೆದರೂ ಪರವಾಗಿಲ್ಲ, ಅವರು ಮುಖ್ಯಮಂತ್ರಿಗಳ ಸಭೆಯ ಹತ್ತಿರ ಬರಲು ಬಿಡಬಾರದು ಎಂದು ಆದೇಶ ನೀಡಿ ಒಬ್ಬ ರೈತನ ಸಾವಿಗೆ ಮತ್ತು ಹಲವಾರು ರೈತರು ತೀವ್ರವಾಗಿ ಗಾಯಗೊಳ್ಳಲು ಕಾರಣನಾದ ಎಸ್‍ಡಿಎಂ ಆಯುಷ್ ಸಿನ್ಹಾರನ್ನು ಕೆಲಸದಿಂದ ತೆಗೆದು ಹಾಕಬೇಕು, ಆತನ ವಿರುದ್ದ ಕೊಲೆ ಮೊಕದ್ದಮೆ ಹೂಡಬೇಕು, ಹುತಾತ್ಮ ಸುಶೀಲ್ ಕಾಜಲ್ ಕುಟುಂಬದವರಿಗೆ 25ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಗಾಯಗೊಂಡ ರೈತರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಬೇಕು ಎಂಬ ಸಂಯುಕ್ತ ಕಿಸಾನ್ ಮೋರ್ಚಾದ ಆಗ್ರಹಕ್ಕೆ ಹರ್ಯಾಣ ಸರಕಾರ ಒಪ್ಪದ್ದರಿಂದ ಮಿನಿ ಸಚಿವಾಲಯದತ್ತ ಮೆರವಣಿಗೆ ಮುಂದುವರೆಸಿದ್ದಾರೆ.
ಸೆಪ್ಟಂಬರ್ 9ರಂದು ಉತ್ತರಪ್ರದೇಶದ ರಾಜಧಾನಿ ಲಕ್ನೌದಲ್ಲಿ ಮತ್ತೊಂದು ಮಹಾಪಂಚಾಯ್ತ್ ನಡೆಯಲಿದೆ, ಇದೇ ರೀತಿ ದೇಶಾದ್ಯಂತ ಸೆಪ್ಟಂಬರ್ 27ರ ಭಾರತ್ ಬಂದ್ ಕಾರ್ಯಾಚರಣೆಗೆ ಸಿದ್ಧತೆ ಆರಂಭವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.