ಭಾವನ ಟಿ.
ಕಾರ್ಮೋಡ ಸುರಿಸಿದ್ದು ಬೆಂಕಿಯ ಮಳೆಯ…
ನಾವ್ ಬಿತ್ತಿದ್ದ ಮೋಡವೇನೂ ಪ್ರೀತಿಯ ಬೀಜವೆನಲ್ಲವಲ್ಲ
ಅದೂ ಸಹ ಜ್ವಾಲಾಮುಖಿಯೇ!
ಇನ್ನೆಲ್ಲಿಯ ಹೊನ್ನಿನ ಪೈರಿನಾಪೇಕ್ಷೆ?
ಸುಗ್ಗಿಯ ಸಗ್ಗದ ಮತ್ತೇರಿ ಕುಣಿಯುವುದೆಂತೂ?!!
ಒಡಲ ತುಂಬಾ ಅಗ್ನಿಯ ಉರಿಯುವ ಕೆಂಡ
ಮನದ ತುಂಬೆಲ್ಲಾ ದ್ವೇಷದ ಕುಂಡ
ಬಯಸಿದ್ದು ಮಾತ್ರ ಹಾಲಿನಂತಹ ಸಮೃದ್ಧಿ
ಮೇಘಗಳ ಶ್ವೇತ ವರ್ಣಕ್ಕೂ ಮಸಿ ಬಳಿಯಲೂ ಹೇಸದವರು
ಬದುಕ ಕೇಳಿದ್ದು ಸ್ವಚ್ಛಂಧ ತಿರುಳನ್ನು…
ಹೌದು ನಗೆಪಾಟಲಿಯಲ್ಲವೇ?
ಆ ಮರವ ಉರುಳಿಸಿ, ಕಾಂಕ್ರೀಟ್ ಕಾಡ ಬೆಳೆಸಿದಾಗ
ಆ ಸಾವಿರ ಕೆರೆಗಳ ಮುಚ್ಚಿ,
ಅದರ ಸಮಾಧಿಯ ಮೇಲೆ ಹೊಗೆಯುಗುಳುವ ದೈತ್ಯ ರಕ್ಕಸನ (ಕಾರ್ಖಾನೆ – ಉದ್ಯಮ) ಹುಟ್ಟಿಸಿದ ಮೇಲೆ
ಉಸಿರಾಡಲು ಕಡೆ ಪಕ್ಷ ಹಸಿರ ಹೆಸರ ಉಳಿಸದೇ ನಿರ್ನಾಮ ಮಾಡಲು ಹೊರಟಾಗ…
ನೆನಪಾಗಲಿಲ್ಲವೇ ಹಾಹಾಕಾರ ಮುಂದೊಂದು ದಿನ ಎದುರಾಗಬಹುದೆಂದು?
ಹಾ ಆ ಪ್ರಕೃತಿಯೆಂದರೆ ತಾಯಿಯೇನೋ ನಿಜಾ
ಎಲ್ಲ ಕರ್ಮಗಳ – ಮಕ್ಕಳು ಮಾಡಿದ ಅನಾಚಾರಗಳ ಹೊಟ್ಟೆಯಲ್ಲಿಟ್ಟುಕೊಂಡು ತಿಳಿಹೇಳಿ ಸಾಂತ್ವಾನ ನೀಡುವವಳು…
ಮೀತಿಮೀರಿದಾಗ ಭದ್ರಕಾಳಿಯಂತೆ ಬುದ್ಧಿ ಕಲಿಸುವವಳು
ಅರಿತವ ಏನೋ ಬದುಕಬಲ್ಲ
ಅಜ್ಞಾನಿಯ ಆತ್ಮಹತ್ಯೆಯೊಂತು ಕಟ್ಟಿಟ್ಟ ಬುತ್ತಿಯಂತೆ…
ಇಲ್ಯಾವುದು ಅಸಹಜ – ಅಸಮರ್ಪಕವಲ್ಲ
ಎಲ್ಲವೂ ಸರಿಯಾದದ್ದೇ
ನಮ್ಮಿಂದಾದ ಪಾಪದ ಬೇಡಗಳ ಕಂತೆಯ ಸ್ವಲ್ಪ ಭಾರವನ್ನಾದರೂ ನಾವೇ ಹೊರಲೇಬೇಕಲ್ಲವೇ?
ಅದೇ ಹೆಣ್ಣಿನ ಭ್ರೂಣ ಹತ್ಯೆ ಮಾಡಿ
ಮನೆಗೊಂದು ಸಂಸ್ಕಾರವಂತೆ – ಸುಶೀಲೆ – ಸದ್ಗುಣಿ ಸೊಸೆ ಬೇಕೆಂಬಂತೆ
ಕೊಲ್ಲುವಾಗ ಹೃದಯವದು ಅರಿಯಬೇಕಿತ್ತು ಮುಂದೆ ಬೆಳಗಬೇಕಾದವಳ ರೂಪವ ಕೊನೆಗಾಣಿಸುತ್ತಿರುವ ನನ್ನಳಿವು ಖಚಿತವಲ್ಲವೇ?
ಅವಳೇಚ್ಚೆತ್ತುಕೊಂಡರೆ ಮುಗಿಯಿತಷ್ಟೇ ನಾವು ತೃಣ ಸಮಾನ
ವಿಶ್ವ ಶಕ್ತಿಯ ಪರಿಜ್ಞಾನವಿಲ್ಲದೆ ಕೈ ಬೆರಳ ತುದಿಯಲ್ಲಿ ಆಡಿಸಲು ಹೋದವಗೆ
ಕೈ ಬೆರಳಲ್ಲದೇ ಮೈ ಸುಟ್ಟುಕೊಳ್ಳಬೇಕಾದ್ದು ನಿಜ ಅನಿವಾರ್ಯವಲ್ಲ
ಉಪ್ಪಿನ ಅತೀಯಾದ ರುಚಿಯ ಉಂಡ ಮೇಲೆ
ಉರಿಯುವ ನಾಲಿಗೆಯ ನೀರಿಂದ ದೂರವಿಡಲಾದೀತೆ?!!
ಇತರರ ಮುಳುಗಿಸುವವ ತಾನೂ ತಿಳಿಯದೇ ಮುಳುಗಲೇ ಬೇಕಲ್ಲವೇ?
ಮಾನ್ಸೂನ್ ಹೃದಯವ ಹಳಿಯುವುದೊಂದೆ ಬಾಕಿ
ಪಶ್ಚಾತ್ತಾಪಪಟ್ಟರು ಬದಲಾಗದಿಲ್ಲಿಯ ಕೋಪ – ತಾಪಗಳು…
ಮನದ ಹೂಳೆತ್ತದೆ ಕಸದ ಗುಂಡಿ ಮಾಡಿಕೊಂಡಿರುವವರೆಗೂ ಅನುಭವಿಸಬೇಕಾದ್ದೆ
ಇದೆಲ್ಲವೂ ಸಹಜವೇ ನಮ್ಮೆಲ್ಲರ ಅಸಹಜತೆ – ಅರಾಜಕತೆಯಿಂದ…
ಅದೇ ನಾವು ಬಿತ್ತಿದ್ದು ವಿಷಾದದ ವಿಷದ ಬೀಜವನ್ನೇ
ವಿಷದ ಹೊರತು ಅಮೃತದ ಫಲಾಪೇಕ್ಷೆ ಮಾಡುವುದೆಂತು…??!
ಮೂರ್ಖತನವೇ ಸರಿ…
ಹ್ಹಹ್ಹ ಹ್ಹ…
ಅದ್ಭುತವಾದ ಪ್ರಕೃತಿ ವೈವಿಧ್ಯಮತೆಯ ಕವಿತೆ ಸಾಹಿತ್ಯ ಅಭಿನಂದನೆಗಳು ಭಾವನ
Worst writer