ರಾಜ್ಯ ಬಜೆಟ್‌ನಲ್ಲಿ ಕಾರ್ಮಿಕರ ಬೇಡಿಕೆಗಳಿಗೆ ಆದ್ಯತೆ ನೀಡಲು ಆಗ್ರಹಿಸಿ ಫೆ.10ರಂದು ಸಿಐಟಿಯು ಪ್ರತಿಭಟನೆ

ಬೆಂಗಳೂರು: ರಾಜ್ಯ ಸರ್ಕಾರ ಬಜೆಟ್‌ ಮಂಡನೆಗೆ ಸಿದ್ಧತೆ ಆರಂಭವಾಗಿದ್ದು, ಈ ಬಾರಿ ಬಜೆಟ್ಟಿನಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಪರಿಗಣಿಸಬೇಕೆಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕರ್ನಾಟಕ ರಾಜ್ಯ ಸಮಿತಿ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸಲು ನಾಳೆ(ಫೆಬ್ರವರಿ 10) ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಣೆ ನೀಡಿದೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರವ ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.‌ ವರಲಕ್ಷ್ಮಿ ಅವರು, 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಕಾರ್ಮಿಕರ ಪರವಾದ ಕಾನೂನುಗಳು ಜಾರಿಗೆ ತರಬೇಕು. ವಿದ್ಯುಚ್ಛಕ್ತಿ ಖಾಸಗೀಕರಣ ಕೈಬಿಟ್ಟು, ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ತಿರಸ್ಕರಿಸಬೇಕು. ಬೆಲೆ ಏರಿಕೆ ಆಧಾರದಲ್ಲಿನ ತುಟ್ಟಿಭತ್ಯೆಯೊಂದಿಗೆ ಎಲ್ಲಾ ವಿಭಾಗಗಳ ಕಾರ್ಮಿಕರಿಗೂ ಸಮಾನ ಕನಿಷ್ಠ ವೇತನ ರೂ. 31 ಸಾವಿರ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಬೆಂಗಳೂರು ದುಡಿಯುವ ವರ್ಗದ ಕೇಂದ್ರ: ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್‌ ಸೇನ್‌

ರಾಜ್ಯದಲ್ಲಿರುವ ವಿವಿಧ ತೆರನಾದ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು, ಶ್ರಮಿಕರು ಇಂದು ಬಂಡವಾಳಗಾರರ ಪರವಾಗಿ ರೂಪಿತವಾದ ಸರ್ಕಾರದ ನೀತಿಗಳಿಂದ ಹಲವು ರೀತಿಯಲ್ಲಿ ಸಂಕಷ್ಟಕ್ಕೊಳಗಾಗಿದ್ದಾರೆ. ಕರೋನಾ ಬಂದ ನಂತರವಂತೂ ಕಾರ್ಮಿಕ ವರ್ಗ ಮತ್ತಷ್ಟು ತೀವ್ರ ಸಂಕಷ್ಟಕ್ಕೆ ಸಿಲುಕಿ ತೀವ್ರ ಶೋಷಣೆಗೊಳಗಾಗಿದೆ ಎಂದು ಆರೋಪಿಸಿದರು.

ಕೆಲಸದ ಭದ್ರತೆಗಿಂತ ಉದ್ದಿಮೆಗಳ ಭದ್ರತೆಯೇ ಆದ್ಯತೆಯಾಗಿದೆ. ಉದ್ದಿಮೆಗಳ ಭದ್ರತೆಗೆ ಉದ್ಯೋಗ ಯೋಗ್ಯ ಎಂಬುದು ಬದಲಾಗಿ ‘’ಇನ್ನು ಮುಂದೆ ಯಾವುದೇ ಉದ್ಯೋಗಗಳಿಗೆ ದೀರ್ಘವಧಿಯ ಭದ್ರತೆಯಿಲ್ಲ” ಎಂಬಂತಾಗಿದೆ.  ಇದರ ಭಾಗವಾಗಿ 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಬದಲಾಯಿಸಿ ಮುಷ್ಕರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತದೆ ಎಂದರು.

ಕರೊನೋತ್ತರ ಸಂಕಷ್ಟಗಳು ನಿವಾರಣೆಯಾಗಬೇಕಾದರೆ ಎಲ್ಲ ರೀತಿಯ ಕೆಲಸ ಮಾಡುವ ಶ್ರಮಜೀವಿಗಳ ಕನಿಷ್ಟ ವೇತನ ಬೆಲೆಯೇರಿಕೆಯ ಆಧಾರದಲ್ಲಿ ರೂ. 31 ಸಾವಿರಕ್ಕೆ ಒಂದೇ ಬಾರಿಗೆ ಪರಿಷ್ಕರಣೆಯಾಗಬೇಕು ಎಂಬುದು ಕನಿಷ್ಟ ವೇತನ ಸಲಹಾ ಮಂಡಳಿಯಲ್ಲಿರುವ ಕಾರ್ಮಿಕ ವರ್ಗದ ಒಕ್ಕ್ಕೊರಲಿನ ಆಗ್ರಹವಾಗಿದೆ. ಈ ಹಿನ್ನಲೆಯಲ್ಲಿ, ಕೈಗಾರಿಕಾ ಶಾಂತಿಯನ್ನು ಕಾಪಾಡಲು  ಹಾಗೂ ಎಲ್ಲ ಕ್ಷೇತ್ರಗಳಲ್ಲಿರುವ ಅನೌಪಚಾರಿಕ ಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿ ʻʻಕರ್ನಾಟಕ ಕಾರ್ಮಿಕ ಸಮ್ಮೇಳನʼʼ (ಕೆಎಲ್‌ಸಿ) ವನ್ನು ನಡೆಸಬೇಕು ಎನ್ನುವ ಬೇಡಿಕೆಯನ್ನು ಒಳಗೊಂಡು ಫೆಬ್ರವರಿ 10ರಂದು ವಿವಿಧ ಕಾರ್ಮಿಕ ವಿಭಾಗಗಳ ಬೇಡಿಕೆಗಳಿಗೆ ತಮ್ಮ ಬಜೆಟ್ ನಲ್ಲಿ ನ್ಯಾಯ ಒದಗಿಸಬೇಕೆಂದು ಸಿಐಟಿಯುವಿನ ನೇತೃತ್ವದಲ್ಲಿ ರಾಜ್ಯದ  ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನು ಓದಿ: ಕಾರ್ಮಿಕರ ಐಕ್ಯತೆ – ಜನತೆಯ ಸೌಹಾರ್ದತೆಗಾಗಿ ಸಿಐಟಿಯು 15ನೇ ರಾಜ್ಯ ಸಮ್ಮೇಳನ

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅವರು, ಕನಿಷ್ಟ ವೇತನ ಸಲಹಾ ಮಂಡಳಿ, ಕಾರ್ಮಿಕರ ಕಲ್ಯಾಣ ಮಂಡಳಿ, ಕಟ್ಟಡ ಹಾಗು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಅಸಂಘಟಿತ ಕಾರ್ಮಿಕರ ಕಲ್ಯಾಣ ಮೊದಲಾದ ತ್ರಿಪಕ್ಷೀಯ ಮಂಡಳಿ/ಸಮಿತಿಗಳಲ್ಲಿ ಸಿಐಟಿಯು ಪ್ರತಿನಿಧಿಗಳನ್ನು ಸೇರ್ಪಡೆ ಮಾಡಬೇಕು. ರಾಜ್ಯದಲ್ಲಿ ಕಾರ್ಖಾನೆ ಕಾಯ್ದೆಗೆ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ಕೈಗಾರಿಕಾ ನಿಶ್ಚಿತ ಕಾಲಾವಧಿ ಕಾರ್ಮಿಕರ ನೇಮಕದ ಮಾದರಿ ಸ್ಥಾಯಿ ಆದೇಶಗಳಿಗೆ ಮಾಡಲಾಗಿರುವ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಮತ್ತು ಅಪಾಯಕಾರಿ ಕೆಲಸಗಳಲ್ಲೂ ದುಡಿಸಿಕೊಳ್ಳಲು ನೀಡಿರುವ ರಿಯಾಯಿತಿ ರದ್ದು ಮಾಡಬೇಕು ಎಂದು ಆಗ್ರಹಿಸಲಾಗಿದ್ದು, ಆಟೋ ಟ್ಯಾಕ್ಸಿ ಮುಂತಾದ ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಬೇಕು. ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ದರ್ಜಿಗಳು, ಮೆಕ್ಯಾನಿಕ್‌ ಗಳು ಮನೆಗೆಲಸ ಮಹಿಳೆಯರು ಸೇರಿ ವಿವಿಧ ವಿಭಾಗಳಿಗೆ ಈಗಾಗಲೇ ಕಾರ್ಮಿಕ ಇಲಾಖೆ ರೂಪಿಸಿರುವ ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಕರಡನ್ನು ಶಾಸನವನ್ನಾಗಿ ವಿಧಾನಸಭೆಯಲ್ಲಿ ಅಂಗೀಕರಿಸಬೇಕು. ಅದಕ್ಕೆ ಅಗತ್ಯವಿರುವ ಸೆಸ್ ಸಂಗ್ರಹಕ್ಕೆ ಸರ್ಕಾರ ಕ್ರಮವಹಿಸಬೇಕು ಎಂದು ಹೇಳಿದರು.

ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಟ್ಟಡ ನಿರ್ಮಾಣ ಆಟೋ, ಟ್ಯಾಕ್ಸಿ, ಮನೆಗೆಲಸ, ಹಮಾಲಿ, ಬೀದಿಬದಿ ಹಾಗೂ ಉದ್ಯೋಗ ಖಾತ್ರಿಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಶ್ರಮಜೀವಿಗಳು ಹಾಗೂ ಖಾಸಗೀ ಮತ್ತು ಸರ್ಕಾರದ ಮುನ್ಸಿಪಾಲಿಟಿ, ಗ್ರಾಮ ಪಂಚಾಯ್ತಿಗಳಲ್ಲಿ ದುಡಿಯುತ್ತಿರುವ ನೌಕರರು ಸೇರಿ  ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ಮತ್ತು ವಿವಿಧ ಸ್ಕೀಂಗಳಲ್ಲಿ ಕೆಲಸ ಮಾಡುವ ಅಂಗನವಾಡಿ, ಬಿಸಿಯೂಟ, ಆಶಾ ಮೊದಲಾದ ಕಾರ್ಮಿಕರ ಬೇಡಿಕೆಗಳನ್ನು ಪರಿಗಣಿಸಬೇಕೆಂದು ಪ್ರತಿಭಟನೆ ಮೂಲಕ ಆಗ್ರಹಿಸಲಾಗುತ್ತಿದೆ ಎಂದರು.

ಇದನ್ನು ಓದಿ: ಕನಿಷ್ಠ ವೇತನ ರೂ.35,931 ನಿಗದಿಪಡಿಸಬೇಕೆಂದು ಆಗ್ರಹಿಸಿ ಸಿಐಟಿಯು ಪ್ರತಿಭಟನೆ

ಸಿಐಟಿಯುವಿನ ಇತರ ಪ್ರಮುಖ ಹಕ್ಕೊತ್ತಾಯಗಳು;

ಸಾರ್ವಜನಿಕ ಉದ್ದಿಮೆಗಳ ಹಾಗೂ ಸೇವೆಗಳ ಖಾಸಗೀಕರಣದ ನೀತಿಗಳನ್ನು ಕೈಬಿಡಬೇಕು. ಕಾರ್ಮಿಕ ಸಂಘದ ಮಾನ್ಯತೆಗೆ ಹಾಗು ಗುತ್ತಿಗೆ ಮುಂತಾದ ತಾತ್ಕಾಲಿಕ ಕಾರ್ಮಿಕರ ಕೆಲಸದ ಖಾಯಂಮಾತಿಗೆ ಶಾಸನ ರೂಪಿಸಿ ಜಾರಿಗೊಳಿಸಬೇಕು. ಸರ್ಕಾರದ ನಿಗಮ ಮಂಡಳಿಗಳಲ್ಲಿ ಮತ್ತು ಇಲಾಖೆಗಳಲ್ಲಿ ದುಡಿಯುವ ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಖಾಯಂ ಮಾಡಬೇಕು. ಗುತ್ತಿಗೆ ಕಾರ್ಮಿಕರ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು. ಎಲ್ಲಾ ಜಿಲ್ಲೆಗಳಲ್ಲೂ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.

ಅಕ್ರಮ ಲೇಆಫ್, ಲಾಕೌಟ್, ರಿಟ್ರೆಚ್‌ಮೆಂಟ್‌ಗೆ ಅನುಮತಿಸಬಾರದು. ಋಣಭಾದ್ಯತೆ ಮತ್ತು ದಿವಾಳಿ ಸಂಹಿತೆ ಕಾನೂನುಗಳ ಕ್ರಮಕ್ಕೆ ಒಳಗಾಗಿರುವ ಸಂಸ್ಥೆಗಳ ಕಾರ್ಮಿಕರ ಉದ್ಯೋಗ ಮತ್ತು ಸೇವಾ ಷರತ್ತುಗಳು ಹಾಗೂ ವೇತನ ಸಂರಕ್ಷಣೆಗೆ ಕ್ರಮ ವಹಿಸಬೇಕು. ಕರ್ನಾಟಕ ಕಾರ್ಮಿಕ ಅಧ್ಯಯನ ಸಂಸ್ಥೆಯನ್ನು ಬಲಪಡಿಸಿ ಅಭಿವೃದ್ಧಿಪಡಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಬೇಕು, ವೇತನ ಪರಿಷ್ಕರಣೆಯಾಗಬೇಕು. ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು, ನಿವೃತ್ತಿ ವೇತನ ಸೌಲಭ್ಯವಿಲ್ಲದೆ ಯಾರನ್ನೂ ಕೆಲಸದಿಂದ ಬಿಡುಗಡೆ ಮಾಡಬಾರದು.

ಕಟ್ಟಡ ಕಾಮಿಕರಿಗೆ ಘೋಷಿಸಿರುವ ಎಲ್ಲ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಮತ್ತು ಕಲ್ಯಾಣ ಮಂಡಳಿ ನಿಧಿ ದುರುಪಯೋಗ ನಿಲ್ಲಬೇಕು, ವಿವಿಧ ಕಿಟ್ ಖರೀದಿಗಳಲ್ಲಿ ನಡೆದಿರುವ ಭ್ರಷ್ಟಚಾರ ತನಿಖೆಯಾಗಬೇಕು ಮತ್ತು ಬಾಕಿ ಶೈಕ್ಷಣಿಕ, ಮದುವೆ, ಪಿಂಚಣಿ, ಆರೋಗ್ಯ ಅರ್ಜಿಗಳಿಗೆ ಕೂಡಲೇ ಧನ ಸಹಾಯ ಪಾವತಿಯಾಗಬೇಕು. ಕಟ್ಟಡ ಸಾಮಾಗ್ರಿಗಳ ಮೇಲಿನ ಜಿ.ಎಸ್.ಟಿ. ಕಡಿತ ಮಾಡಬೇಕು.

ಇದನ್ನು ಓದಿ: ದುಡಿಯುವ ಜನರ ಹಿತವನ್ನು ನಿರ್ಲಕ್ಷ್ಯ ಮಾಡಿದ ರಾಜ್ಯ ಬಜೆಟ್: ಸಿಐಟಿಯು ಟೀಕೆ

ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ನೀಡುವುದರಲ್ಲಿ ಕೊರತೆಯಾಗಿರುವ ವೇತನದ ಬಿಡುಗಡೆ ಮಾಡಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಬೇಕು. ಇಎಫ್‌ಎಂಎಸ್‌ಗೆ ಸೇರ್ಪಡೆಯಾಗದೆ ಉಳಿದಿರುವ ನೌಕರರನ್ನು ಸೇರಿಸಬೇಕು ಕಸಗುಡಿಸುವವರಿಗೆ ಅನುಮೋದನೆ ನೀಡಬೇಕು ಮತ್ತು ಕನಿಷ್ಠ ವೇತನ ಪರಿಷ್ಕರಣೆ ಆಗಬೇಕು.

ಮುನಿಸಿಪಾಲಿಟಿಗಳಲ್ಲಿ ಗುತ್ತಿಗೆ, ನೇರ ಪಾವತಿ, ದಿನಗೂಲಿಗಳಾಗಿ ದುಡಿಯುತ್ತಿರುವ ಎಲ್ಲ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಬೇಕು. ಗುತ್ತಿಗೆ ಪದ್ದತಿ ರದ್ದು ಮಾಡಿ, ಎಲ್ಲಾ ಮುನಿಸಿಪಲ್ ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ಸಂಬಳ ನೀಡಬೇಕು.

ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರಿಗೆ ಸರ್ಕಾರಿ ನೌಕರರಷ್ಟು ಸಮಾನ ವೇತನ ಪರಿಷ್ಕರಣೆ ಮಾಡಬೇಕು. ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ಎಲ್ಲಾ  ಕಾರ್ಮಿಕರನ್ನು ಷರತ್ತಿಲ್ಲದೆ ಪುನರ್ ನೇಮಕ ಮಾಡಬೇಕು.

ಕೇಂದ್ರ ಸರ್ಕಾರವು ತಂಬಾಕು ನಿಷೇಧ ಕಾಯ್ದೆಯ ತಿದ್ದುಪಡಿ ಭಾಗವಾಗಿ ಸಂಕಷ್ಟಕ್ಕೆ ಸಿಲುಕಿರುವ ಬೀಡಿ ಕಾರ್ಮಿಕರಿಗೆ ಮಾಸಿಕ ರೂ.6,000 ಪರಿಹಾರ ನೀಡಬೇಕು. ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಯೋಜನೆಗಳನ್ನು ಜಾರಿಗೆ ತರಬೇಕು. ಜಿಎಸ್‌ಟಿ ಜಾರಿಯಿಂದಾಗಿ ರದ್ದಾಗಿರುವ ಬೀಡಿ ಕಾರ್ಮಿಕರ ಎಲ್ಲಾ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಬೇಕು. ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡಬೇಕು. ಬೀಡಿ ಕಾರ್ಮಿಕರ ಕನಿಷ್ಟ ಕೂಲಿ ಪರಿಷ್ಕರಣೆ ಮಾಡಬೇಕು, ಧೀರ್ಘಕಾಲದಿಂದ ನ್ಯಾಯಾಲಯದಲ್ಲಿ ಕಾರ್ಮಿಕರ ಮೇಲಿನ ಪ್ರಕರಣಗಳು ಬಾಕಿ ಉಳಿದಿದ್ದು, ಇದಕ್ಕೆ ಸರ್ಕಾರ ಕಾರಣವಾಗಿದ್ದು, ಸರ್ಕಾರದ ನಡೆಯನ್ನು ಬದಲಿಸಿ ಬೀಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು.

ತೋಟ ಕಾರ್ಮಿಕರ ಕಾಯ್ದೆಯನ್ನು ಉಳಿಸಿ ಪ್ಲಾಂಟೇಶನ್ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಿ ಮನೆ, ಶಿಕ್ಷಣ, ಆರೋಗ್ಯ, ಸವಲತ್ತುಗಳನ್ನು ಜಾರಿ ಮಾಡಬೇಕು. ಅಂತರ ರಾಜ್ಯ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಿ, ಯೋಜನೆ ರೂಪಿಸಿ ವಸತಿ ಆರೋಗ್ಯ, ಶಿಕ್ಷಣ ಒದಗಿಸಬೇಕು.

ಇದನ್ನು ಓದಿ: ಪೆನ್ಶನ್ ಕಾಯ್ದೆ ತಿದ್ದುಪಡಿ-ಜನಗಳ ಜೀವಮಾನದ ಉಳಿತಾಯಗಳಿಗೂ ಕೈಹಾಕುವ ಕುತಂತ್ರ: ಸಿಐಟಿಯು ಖಂಡನೆ

ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಮಾದರಿಯಲ್ಲಿ ರಾಜ್ಯ ಕಾರ್ಮಿಕ ಸಮ್ಮೇಳನ ನಡೆಸಬೇಕು. ಗಿಗ್ ಆರ್ಥಿಕತೆಯ ಕಾರ್ಮಿಕರ ಸೇವಾ ಶರತ್ತುಗಳ ಶಾಸನ ರೂಪಿಸಿ ಜಾರಿಗೊಳಿಸಬೇಕು. ಸೇಲ್ಸ್ ಪ್ರಮೋಷನ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳ ಕುರಿತು ಕಾನೂನುಗಳನ್ನು ಜಾರಿಗೊಳಿಸಬೇಕು. ಮೀನುಗಾರರಿಗೆ ಇಂಧನ ಸಬ್ಸಿಡಿ ಹಾಗೂ ಮೀನು ಮಾರಾಟ ವ್ಯವಸ್ಥೆ, ಸಾಮೂಹಿಕ ವಿಮೆ ಯೋಜನೆ ಹಾಗೂ ಕಲ್ಯಾಣ ಯೋಜನೆಗಳನ್ನು ಒಳಗೊಂಡು ಅವರ ಬೇಡಿಕೆಗಳನ್ನು ಈಡೇರಿಸಲು ಕ್ರಮವಹಿಸಬೇಕು.

ರಾಜ್ಯದಲ್ಲಿ ಜೀವವಿಮಾ ಪ್ರತಿನಿಧಿಗಳನ್ನು ಕೇರಳದ ಮಾದರಿಯಲ್ಲಿ ರಾಜ್ಯ ಸರ್ಕಾರದ ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸೇರ್ಪಡೆ ಮಾಡಬೇಕು ಹಾಗೂ ಇತರೆ ವೃತ್ತಿದಾರರಿಗೆ ನೀಡುವ ಸೌಲಭ್ಯಗಳನ್ನು ವಿಸ್ತರಿಸಬೇಕು.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಾರ್ಷಿಕ 200 ದಿನಗಳ ಕೆಲಸ ಹಾಗೂ ದಿನಕ್ಕೆ ರೂ.700 ವೇತನ ನೀಡಬೇಕು. ನಗರ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸಿ ಜಾರಿ ಮಾಡಬೇಕು.

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲನ್ನು ಪಡೆಯಲು ಕೂಡಲೇ ಕ್ರಮವಹಿಸಬೇಕು. ಎಲ್ಲಾ ಖಾಸಗಿ ನೌಕರರಿಗೂ ನಿವೃತ್ತಿ ವಯಸ್ಸು 60 ವರ್ಷ ಆಗಬೇಕೆಂಬ ತೀರ್ಮಾನ ಸಮರ್ಪಕವಾಗಿ ಜಾರಿಯಾಗಬೇಕು.

ಕಾರ್ಮಿಕರ ಪರವಾಗಿರುವ ಬೇಡಿಕೆಗಳನ್ನು ಒಳಗೊಂಡು ಸರ್ಕಾರವನ್ನು ಎಚ್ಚರಿಸಲು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯಲಿದೆ ಎಂದು ಸಿಐಟಿಯು ಕರೆ ನೀಡಿದೆ. ರಾಜ್ಯ ಸರ್ಕಾರ ಫೆಬ್ರವರಿ 17ರಂದು ಬಜೆಟ್‌ ಮಂಡನೆಯಾಗಲಿದ್ದು, ಸರ್ಕಾರ ಕಾರ್ಮಿಕರ ಪರವಾದ ಹಕ್ಕೊತ್ತಾಯಗಳನ್ನು ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *