ಬೆಂಗಳೂರು : ವಿಶ್ವ ಕಾರ್ಮಿಕ ದಿನಾಚರಣೆಯನ್ನು ಇಂದು ರಾಜ್ಯವ್ಯಾಪಿ ಆಚರಿಸಲಾಯಿತು. ವಿವಿಧ ಕಾರ್ಮಿಕ ಸಂಘಟನೆಗಳು ಜೆಸಿಟಿಯು ನೇತೃತ್ವದಲ್ಲಿ ಮೆರವಣಿಗೆ ನಡೆಸಿದವು.
ಬೆಂಗಳೂರಿನಲ್ಲಿ ನಡೆದ ಕಾರ್ಮಿಕ ದಿನಾಚಾರಣೆಗೆ ಸುಪ್ರೀಂಕೋರ್ಟ್ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿಯಾದ ವಿ.ಗೋಪಾಲ ಗೌಡರವರು ಚಾಲನೆಯನ್ನು ನೀಡಿದರು. ಕಾರ್ಮಿಕ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಶಾಂತಿಯುತ ಮೆರವಣಿಗೆ ನಡೆಸಲು ಅನುಮತಿ ಕೋರಿ ಕಾರ್ಮಿಕ ಸಂಘಟನೆಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದವು. ರಾಜ್ಯ ಸರಕಾರ ಮೆರವಣಿಗೆ ನಡೆಸದಂತೆ ನಿರ್ದೇಶನ ನೀಡಿದೆ ಎಂದು ಮೆರವಣಿಗೆಗೆ ಅನುಮತಿ ನಿರಾಕರಣೆ ಮಾಡಿದ್ದರು. ಆದರೂ ಕಾರ್ಮಿಕರು ಐಕ್ಯತೆಯ ಮೂಲಕ ಮೆರವಣಿಗೆ ನಡೆಸಿ ‘ ಕಾರ್ಮಿಕ ನಿರ್ದರಿಸಿದರೆ ಏನೂ ಬೇಕಾದರೂ ಮಾಡಬಲ್ಲ’ ಎಂಬುದನ್ನು ನಿರೂಪಿಸಿ ತೋರಿಸಿದ್ದೀರಿ ಎಂದರು.
ಕಾರ್ಮಿಕ ದಿನಾಚರಣೆ ಸ್ಮರಿಸುವ ಮೆರವಣಿಗೆಯನ್ನು ನಿಲ್ಲಿಸುವುದು ಇಡೀ ಚಳವಳಿಯ ಮಹತ್ವವನ್ನು ಕಡೆಗಣಿಸುತ್ತದೆ ಮತ್ತು ಕಾರ್ಮಿಕರ ಹೋರಾಟಗಳನ್ನು ದುರ್ಬಲಗೊಳಿಸುತ್ತದೆ. ಸ್ವಾತಂತ್ರ್ಯದ 75 ವರ್ಷಗಳ ಹೊರತಾಗಿಯೂ, ಸ್ವತಂತ್ರ ಭಾರತದಲ್ಲಿ ಕಾರ್ಮಿಕರು ಎರಡನೇ ದರ್ಜೆಯ ಪ್ರಜೆಗಳಾಗಿಯೇ ಉಳಿದಿದ್ದಾರೆ ಎಂಬ ಕಟುವಾದ ವಾಸ್ತವವನ್ನು ಇದು ಮತ್ತೊಮ್ಮೆ ನೆನಪಿಸಿದೆ ಎಂದು ಸರಕಾರ ಮತ್ತು ಹೈಕೋರ್ಟ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಚಿಂತಕರೂ ದುಡಿಯುವ ಜನರ ಪರವಾಗಿ ಸದಾ ದನಿ ಎತ್ತುವ ಡಾ.ಜಿ.ರಾಮಕೃಷ್ಣ ಅವರು ತಮ್ಮ ಎಂಭತ್ತನೇ ವಯಸ್ಸಿನಲ್ಲೂ ಗಟ್ಟಿ ಧ್ವನಿಯಲ್ಲಿ ಕಾರ್ಮಿಕ ಚಳುವಳಿ ಒಟ್ಟುಗೂಡಿ ಮೇ ದಿನಾಚರಣೆ ಆಚರಿಸುತ್ತಿರುವುದರ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಈ ಐಕ್ಯತೆಯನ್ನು ಎಲ್ಲಾ ಜನವಿರೋಧಿ ನೀತಿಗಳ ವಿರುದ್ಧದ ಹೋರಾಟಗಳಲ್ಲಿ ಪ್ರದರ್ಶನ ಮಾಡಿ ಬಂಡವಾಳಶಾಹಿ ವ್ಯವಸ್ಥೆಯನ್ನು ಸಮಾಜವಾದಿ ವ್ಯವಸ್ಥೆಯನ್ನಾಗಿ ಬದಲಾಯಿಸುವುದೊಂದೇ ದಾರಿ ಎಂದು ಹೇಳಿದರು.
ಕಾನೂನು ತಜ್ಞರು ಹಾಗೂ ಕಾರ್ಮಿಕ ಮುಖಂಡರೂ ಆಗಿರುವ ಪ್ರೊ. ಬಾಬು ಮ್ಯಾಥ್ಯೂ ಅವರು ಮೇ ದಿನಾಚರಣೆಯ ಮಹತ್ವವನ್ನು ವಿವರಿಸುತ್ತಾ ಕನಿಷ್ಠ ಕೂಲಿಯ ಅಗತ್ಯತೆಯ ಬಗ್ಗೆ ತಿಳಿಸಿದರು.
ನಂತರದಲ್ಲಿ ಸಭೆಯನ್ನು ಉದ್ದೇಶಿಸಿ ಜೆಸಿಟಿಯುನ ಎಲ್ಲಾ ಘಟಕಗಳ ಮುಖಂಡರು ಮಾತನಾಡಿದರು.
ಬೀದರ, ಕಲಬುರ್ಗಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಾಮರಾಜ ನಗರಗಳಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು. ಕೈಗಾರಿಕಾ ವಲಯದ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ, ಕಟ್ಟಡ ಕಾರ್ಮಿಕರು, ಹಮಾಲಿ, ಪ್ಲಾಂಟೇಶನ್ ಕಾರ್ಮಿಕರು ಭಾಗಿಯಾಗಿದ್ದರು.











