ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯ

ದೊಡ್ಡಬಳ್ಳಾಪುರ: ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರವು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿದೆ. ನಮ್ಮ ಹಕ್ಕುಗಳಿಗೆ ಹೋರಾಡುವ ಸ್ವಾತಂತ್ರ್ಯ ಸಹ ಇಲ್ಲದಂತೆ ಮಾಡಲಾಗುತ್ತಿದೆ. ಈ ದಿಸೆಯಲ್ಲಿ ಸರ್ಕಾರದ ವಿರುದ್ಧ ಸಂಘಟನಾತ್ಮಕವಾಗಿ ಹೋರಾಟ ನಡೆಸುವುದು ಸಿಐಟಿಯು ಹೊಣೆಯಾಗಿದ್ದು, ಕಾರ್ಮಿಕ ಸಂಘಟನೆಗಳು ನಮ್ಮೊಂದಿಗೆ ಒಗ್ಗೂಡಬೇಕೆಂದು ಸಿಐಟಿಯು ಜಿಲ್ಲಾಧ್ಯಕ್ಷ ಸಿ ನರಸಿಂಹಮೂರ್ತಿ ಹೇಳಿದರು.

ನಗರದ ಮಹಿಳಾ ಸಮಾಜದಲ್ಲಿ ನಡೆದ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) 5ನೇ ತಾಲೂಕು ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ, ಇರುವ ಉದ್ಯೋಗಗಳನ್ನು ನಾಶಪಡಿಸುವ ಮೂಲಕ ನಿರುದ್ಯೋಗವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತಿದೆ. ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕಾರ್ಪೋರೇಟ್‌ ವಲಯಕ್ಕೆ ಅನುಕೂಲಕರವಾಗಿದೆ. ಇದರಿಂದ, ಕಾರ್ಮಿಕರಿಗೆ ಇಎಸ್‌ಐ, ಪಿಎಫ್‌ ಸೌಲಭ್ಯಗಳು ಕಡಿತವಾಗಿದೆ. ಸರ್ಕಾರಗಳು ನೇಕಾರರು ಹಾಗೂ ರೈತರಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿಲ್ಲ ಎಂದು ದೂರಿದರು.

ಸೌಲಭ್ಯ ನೀಡಲು ನಿರ್ಲಕ್ಷ್ಯ

ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಟಿ. ಲೀಲಾವತಿ ಮಾತನಾಡಿ, ಕೋವಿಡ್‌ ಸಮಯದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ನಂತರ ಸರಿಯಾಗಿ ನಡೆಸಿಕೊಳ್ಳದೇ ನಿರ್ಲಕ್ಷಿಸಿದೆ. ಅಂಗನವಾಡಿ ನೌಕರರನ್ನು ಮುಷ್ಕರ ಮಾಡದಂತೆ ಸುತ್ತೋಲೆ ಹೊರಡಿಸಿರುವ ಸರ್ಕಾರ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮಾತ್ರ ನೀಡುತ್ತಿಲ್ಲ ಎಂದು ದೂರಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ. ವೆಂಕಟೇಶ್‌ ಮಾತನಾಡಿ, ಸರ್ಕಾರ ಧ್ವಜದ ವಿಚಾರದಲ್ಲಿಯೂ ಕಾರ್ಪೋರೇಟ್‌ ವಲಯಕ್ಕೆ ಅನುಕೂಲ ಮಾಡಿಕೊಡಲು ಹೊರಟಿದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿ ಇಡೀ ದೇಶಕ್ಕೆ ಧ್ವಜ ತಯಾರಿಸಿಕೊಡುವ ಘಟಕವಿದ್ದು, ಗ್ರಾಮೋದ್ಯೋಗಕ್ಕೆ ಸಂಚಕಾರ ತಂದಿದೆ ಎಂದರು.

ಮುಂದಿನ ತಿಂಗಳು ಜಿಲ್ಲಾ ಸಮ್ಮೇಳನ

ಮುಂದಿನ ತಿಂಗಳು ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಪ್ರಸಕ್ತ ಜನ ಸಾಮಾನ್ಯರ, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ, ಹೋರಾಟದ ರೂಪುರೇಷೆ, ಹೊಸ ಸಮಿತಿಗಳ ರಚನೆ ನಡೆಯಲಿವೆ ಎಂದರು.

ವೇದಿಕೆಯಲ್ಲಿ ಸಿಐಟಿಯು ತಾಲೂಕು ಸಂಚಾಲಕ ರೇಣುಕಾರಾಧ್ಯ, ಪ್ಲೊರೆನ್ಸ್‌ ಫ್ಲೋರಾ ಕಾರ್ಮಿಕ ಸಂಘದ ಅಧ್ಯಕ್ಷ ಆರ್‌ ಚಂದ್ರ ತೇಜಸ್ವಿ , ಎಲ್‌ ಆರ್‌ ನಳಿನಾಕ್ಷಿ, ಸಂಚಾಲಕ ಎಂ. ಮಂಜುನಾಥ್‌, ಎಫ್‌ಕೆಎಆರ್‌ಡಿಯು ತಾಲೂಕು ಕಾರ್ಯದರ್ಶಿ ಇನಾಯತ್‌ ಪಾಷಾ, ಕಾರ್ಯದರ್ಶಿ ಸುಮಾ, ಬಿ. ನರೇಶ್‌ ಕುಮಾರ್‌, ಮಣೀಶ್‌ ಶರ್ಮಾ, ಮುಖಂಡ ಸಿ.ಎಚ್‌. ರಾಮಕೃಷ್ಣ, ರುದ್ರಾರಾಧ್ಯ ಹಾಗೂ ಮತ್ತಿತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *