ಕಾರ್ಮಿಕ ವರ್ಗದ ವಿಶಿಷ್ಟ ಪಾತ್ರ ಏಂಗೆಲ್ಸ್ ಕೊಡುಗೆ: ತೆಕ್ಕೆಡೆತ್

– ವಸಂತರಾಜ ಎನ್.ಕೆ.

ಪ್ರೊ.ಕೆ.ಕೆ.ತೆಕ್ಕೆಡೆತ್

ವೈಜ್ಞಾನಿಕ ಸಮಾಜವಾದದ ಪರಿಕಲ್ಪನೆಯಲ್ಲಿ, ಅದನ್ನು ಸಾಕಾರಗೊಳಿಸುವ ಪ್ರಕ್ರಿಯೆಯಲ್ಲಿ ಕಾರ್ಮಿಕ ವರ್ಗದ ವಿಶಿಷ್ಟ ಪಾತ್ರವನ್ನು ಗುರುತಿಸಿದ್ದು ಏಂಗೆಲ್ಸ್ ಅವರ ವಿಶೇ಼ಷ ಕೊಡುಗೆಯಾಗಿತ್ತು. ಏಂಗೆಲ್ಸ್ ಜತೆಗೆ ಜಂಟಿ ಅಧ್ಯಯನ, ಚಿಂತನೆ, ಚಳುವಳಿಯಲ್ಲಿ ಭಾಗವಹಿಸುವಿಕೆ ಆರಂಭವಾಗುವ ಮೊದಲು ಮಾರ್ಕ್ಸ್ ಅವರ ಕೃತಿಗಳಲ್ಲಿ ಕಾರ್ಮಿಕ ವರ್ಗದ ಪಾತ್ರದ ಬಗ್ಗೆ ಹೆಚ್ಚಿನ ಪ್ರಸ್ತಾಪ ಕಂಡು ಬರುವುದಿಲ್ಲ. ಮುಂದೆನೂ ವೈಜ್ಞಾನಿಕ ಸಮಾಜವಾದದ ಪರಿಕಲ್ಪನೆಯನ್ನು ಸಾಕಾರಗೊಳಿಸುವುದರಲ್ಲಿ ಕಾರ್ಮಿಕ ವರ್ಗದ ಪಾತ್ರದ ಕುರಿತು ಚಿಂತನೆಯನ್ನು ವಿಸ್ತರಿಸುತ್ತಾ ಆಳಗೊಳಿಸುತ್ತಾ ಹೋದದ್ದರಲ್ಲಿ ಏಂಗೆಲ್ಸ್ ವಿಶೇಷ ಪಾತ್ರ ವಹಿಸಿದರು. ಹೀಗೆಂದವರು ಹಿರಿಯ ಮಾರ್ಕ್ಸ್ ವಾದಿ ವಿದ್ವಾಂಸ ಮತ್ತು ಭಾರತದ ಅಧ್ಯಾಪಕರ ಚಳುವಳಿಯ ಪ್ರಸಿದ್ಧ ನಾಯಕರಾಗಿದ್ದ ಪ್ರೊ.ಕೆ.ಕೆ.ತೆಕ್ಕೆಡೆತ್.

ಇದನ್ನು ಓದಿ: ಏಂಗೆಲ್ಸ್ 200 ಮಾಲಿಕೆಯ ಎರಡು ಪುಸ್ತಕಗಳ ಪರಿಚಯ

ಜುಲೈ20ರಂದು ನಡೆದ ಆನ್ ಲೈನ್ ಸಭೆಯೊಂದರಲ್ಲಿ ಪ್ರೊ. ತೆಕ್ಕೆಡೆತ್, ಡಾ.ಜಿ.ರಾಮಕೃಷ್ಣ ಅವರು ಬರೆದ “ಫ್ರೆಡೆರಿಕ್ ಏಂಗೆಲ್ಸ್” ಪುಸ್ತಕವನ್ನು ಬಿಡುಗಡೆ ಮಾಡಿ, ‘ವೈಜ್ಞಾನಿಕ ಸಮಾಜವಾದಕ್ಕೆ ಏಂಗೆಲ್ಸ್ ಕೊಡುಗೆ’ ಕುರಿತ ವಿಶೇ಼ಷ ಉಪನ್ಯಾಸ ಮಾಡುತ್ತಿದ್ದರು. “ಫ್ರೆಡೆರಿಕ್ ಏಂಗೆಲ್ಸ್” ಪುಸ್ತಕ ಏಂಗೆಲ್ಸ್ ದ್ವಿಶತಮಾನೋತ್ಸವದ ಸಂದರ್ಭದಲ್ಲಿ ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕ ಸಂಸ್ಥೆಗಳು ಜಂಟಿಯಾಗಿ ಪ್ರಕಟಿಸುತ್ತಿರುವ ‘ಏಂಗೆಲ್ಸ್ 200 ಮಾಲಿಕೆಯ’ ಮೊದಲನೆಯ ಪುಸ್ತಕ.

1845ರಲ್ಲಿ ಪ್ರಕಟಿತವಾದ ಏಂಗೆಲ್ಸ್ ಮೇರುಕೃತಿ ‘ಇಂಗ್ಲೆಂಡಿನ ಕಾರ್ಮಿಕ ವರ್ಗದ ಪರಿಸ್ಥಿತಿ’ಯನ್ನು ಓದಿ ಮೆಚ್ಚಿಕೊಂಡ ಮಾರ್ಕ್ಸ್, ಏಂಗೆಲ್ಸ್ ಜತೆ ಸ್ನೇಹ ಬೆಳೆಸಿ ಮುಂದೆ ಅದು ಜೀವನಪರ್ಯಂತ ಮುಂದುವರೆದ ಐತಿಹಾಸಿಕ ಸಾಹಚರ್ಯವೂ ಆಯಿತು. ತಂದೆಯ ಜವಳಿ ಕಾರ್ಖಾನೆಯಲ್ಲಿ ಕೆಲಸ ಮಾಡಲು ಇಂಗ್ಲೆಂಡಿಗೆ ಬಂದ ಏಂಗೆಲ್ಸ್ ಅಲ್ಲಿನ ಕಾರ್ಮಿಕ ವರ್ಗದ ಸಂಕಷ್ಟ ಬವಣೆಗಳನ್ನು ಮಾತ್ರ ನೋಡಲಿಲ್ಲ. ಕಾರ್ಮಿಕ ವರ್ಗದ ಹೋರಾಟದ ಕೆಚ್ಚನ್ನೂ ಕಂಡರು. ಕೆಲವು ‘ಒಳ್ಳೆಯವರು’ ‘ಸಹೃದಯಿಗಳು’ ‘ಕರುಣಾಳು ಮಾಲಿಕರು’ ಸಮಾಜವಾದವನ್ನು ಸಾಕಾರಗೊಳಿಸುತ್ತಾರೆ (ಅಥವಾ ಯಾರು ಎಂಬುದು ಸ್ಪಷ್ಟವಿಲ್ಲದ) ಕಲ್ಪನಾ ವಿಹಾರಿ ಮತ್ತಿತರ ರೀತಿಯ ಸಮಾಜವಾದಿಗಳ ಸಮಾಜವಾದದ ಪರಿಕಲ್ಪನೆಗೆ ಪ್ರತಿಯಾಗಿ, ಏಂಗೆಲ್ಸ್ ಅವರು ಕಾರ್ಮಿಕ ವರ್ಗದ ಸಮಾಜವಾದವನ್ನು ಪ್ರತಿಪಾದಿಸಿದರು ಎಂದು ಪ್ರೊ.ತೆಕ್ಕೆಡೆತ್ ತಿಳಿಸಿದರು.

ಕಮ್ಯುನಿಸ್ಟ್ ಪ್ರಣಾಳಿಕೆ ಬರೆಯುವಾಗ ಮಾರ್ಕ್ಸ್ ಗೆ ಬರೆದ ಪತ್ರದಲ್ಲಿ ಕಮ್ಯುನಿಸಂ ನ ಮೂರು ಮುಖ್ಯ ತತ್ವಗಳಲ್ಲಿ, ಅದು ಬಂಡವಾಳಶಾಹಿ ಶೋಷಣೆಯಿಂದ ಕಾರ್ಮಿಕ ವರ್ಗದ ವಿಮೋಚನೆ ಆಗಿರುತ್ತದೆ ಎಂಬುದು ಮೊದಲನೆಯದು ಎಂದು ಏಂಗೆಲ್ಸ್ ಗುರುತಿಸಿದರು. ಮುಂದೆ ಪ್ಯಾರೀಸ್ ಕಮ್ಯುನ್ ಅನುಭವಗಳ ವಿಶ್ಲೇಷಣೆ ಮಾಡುತ್ತಾ ಕಲಿಯಬೇಕಾದ ಮೂರು ಪಾಠಗಳಲ್ಲಿ, ಕಾರ್ಮಿಕ ವರ್ಗವನ್ನು ಕ್ರಾಂತಿಯತ್ತ ಮುನ್ನಡೆಸಲು ಒಂದು ರಾಜಕೀಯವಾಗಿ ಸೈದ್ಧಾಂತಿಕವಾಗಿ ಸನ್ನದ್ಧವಾದ ಮುಂಚೂಣಿ ಗುಂಪು ಬೇಕಾಗುತ್ತದೆ ಎಂಬುದು ಒಂದು ಮುಖ್ಯ ಪಾಠ ಎಂದರು. ಅದೇ ರೀತಿ ಜರ್ಮನ್ ಕಾರ್ಮಿಕ ಪಕ್ಷದ ಕಾರ್ಯಕ್ರಮದ ವಿಮರ್ಶೆಯಾದ ‘ಗೋತಾ ಕಾರ್ಯಕ್ರಮದ ವಿಮರ್ಶೆ’ ಯಲ್ಲಿ ಬಂಡವಾಳಶಾಹಿ ಯಿಂದ ಸಮಾಜವಾದಿ ವ್ಯವಸ್ಥೆಗೆ ಸ್ಥಿತ್ಯಂತರದಲ್ಲಿ ಕಾರ್ಮಿಕ ವರ್ಗದ ವಿಶಿಷ್ಟ ಪಾತ್ರವನ್ನು ಮತ್ತೆ ಪ್ರತಿಪಾದಿಸಲಾಗುತ್ತದೆ. ಕಾರ್ಮಿಕ ವರ್ಗದ ಅನುಭವಗಳನ್ನು ವಿಶ್ಲೇಷಿಸುತ್ತಾ ಸಮಾಜವಾದದ ಪರಿಕಲ್ಪನೆಯನ್ನು ಹೆಚ್ಚೆಚ್ಚು ಸಮೃದ್ಧ ಮತ್ತು ಪಕ್ವಗೊಳಿಸುತ್ತಾ ‘ವೈಜ್ಞಾನಿಕ’ ಗೊಳಿಸಿದ್ದರಲ್ಲಿ ಏಂಗೆಲ್ಸ್ ಅವರ ವಿಶೇಷ ಪಾತ್ರವಿತ್ತು ಎಂದು ಮುಂದುವರೆಯುತ್ತಾ ಪ್ರೊ.ಕೆ.ಕೆ.ತೆಕ್ಕೆಡೆತ್ ಪ್ರತಿಪಾದಿಸಿದರು.

ಡಿ.ಎ.ವಿಜಯಭಾಸ್ಕರ್

ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎ.ವಿಜಯಭಾಸ್ಕರ್ ಅವರು ಏಂಗೆಲ್ಸ್ 200 ಮಾಲಿಕೆಯ ಪ್ರಕಟಣಾ-ಪೂರ್ವ ರಿಯಾಯಿತಿ ಕೂಪನನ್ನು ಬಿಡುಗಡೆ ಮಾಡಿ, 50 ಪುಸ್ತಕಗಳ ಸೆಟ್ ಕೂಪನ್ ಖರೀದಿಸುವ ಘೋಷಣೆ ಮಾಡಿದ್ದಲ್ಲದೆ, ಅದರ ಬೆಲೆಯಾದ ರೂ.60 ಸಾವಿರದ ಚೆಕ್ ನ್ನು ನವಕರ್ನಾಟಕ ಕ್ಕೆ ನೀಡಿದರು. ‘ಬಂಡವಾಳ ಸಂಫುಟ-2’ ಮತ್ತು ಬಿಡುಗಡೆಯಾಗುತ್ತಿರುವ ಎರಡು ಪುಸ್ತಕಗಳು ಸೇರಿದಂತೆ ಏಂಗೆಲ್ಸ್ 200 ಮಾಲಿಕೆಯ ಆರು ಪುಸ್ತಕಗಳ ಸೆಟ್ ಬೆಲೆ 1800 ರೂ. ಅದು ಪ್ರಕಟಣಾ-ಪೂರ್ವ ರಿಯಾಯಿತಿ ಕೂಪನು ಖರೀದಿ ಮಾಡಿದರೆ ರೂ. 1200 ಕ್ಕೆ ಲಭ್ಯವಿರುತ್ತದೆ ಎಂದು ತಿಳಿಸಿದರು. ಈ ಮಾಲಿಕೆಯ ಮಹತ್ವ ಮತ್ತು ಇಂದಿನ ಸನ್ನಿವೇಶದಲ್ಲಿ ದುಡಿಯುವ ಜನರಲ್ಲಿ ಇದರ ಪ್ರಸಾರದ ಅಗತ್ಯ ಕುರಿತು ಅವರು ಒತ್ತಿ ಹೇಳಿದರು. ಎರಡು ಪ್ರಕಾಶನ ಸಂಸ್ಥೆಗಳಿಗೆ ಅವರು ಶುಭ ಕೋರಿದರು.

ಲೇಖಕರು ಚಿಂತಕರು ವೈದ್ಯರು ಆದ ಡಾ.ಎಚ್.ಜಿ.ಜಯಲಕ್ಷ್ಮಿ ಅವರು ಪುಸ್ತಕ ಪರಿಚಯ ಮಾಡಿದರು. ಪುಸ್ತಕದಲ್ಲಿ ಬರುವ ಏಂಗೆಲ್ಸ್ ಅವರ ಜೀವನ ಚರಿತ್ರೆಯ ಭಾಗದ ಆಸಕ್ತಿಕಾರಕ ಅಂಶಗಳನ್ನು ರೋಚಕವಾಗಿ ವಿವರಿಸಿದರು. ಮಾರ್ಕ್ಸ್ ವಾದದ ಬೆಳವಣಿಗೆಯ ಸ್ಥೂಲ ಚರಿತ್ರೆಯನ್ನು ಕೊಡುವ ಪುಸ್ತಕದ ಭಾಗವನ್ನು, ಏಂಗೆಲ್ಸ್ ಅವರ ಅಭಿಜಾತ ಕೃತಿಗಳ ಸ್ಥೂಲ ಪರಿಚಯದ ಮೂಲಕ ಸಮರ್ಥವಾಗಿ ನಿರೂಪಿಸಿದರು.

ಡಾ.ಜಿ.ರಾಮಕೃಷ್ಣ

20ನೆಯ ಶತಮಾನದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಜಪಾನಿ ವಿಜ್ಞಾನಿಯೊಬ್ಬರು ತಮ್ಮ ಸಂಶೋಧನೆಗೆ ಪ್ರೇರಣೆ ಏಂಗೆಲ್ಸ್ ಅವರ ‘ಪ್ರಕೃತಿಯ ಗತಿತಾರ್ಕಿಕತೆ’ ಪುಸ್ತಕದಿಂದ ದೊರಕಿತು ಎಂದು ಹೇಳುತ್ತಾರೆ. ಏಂಗೆಲ್ಸ್ ಅವರ ಚಿಂತನೆ, ಕೃತಿಗಳು ಎಷ್ಟು ಪ್ರಭಾವಶಾಲಿಯಾಗಿವೆ ಎಂದು ಇದು ತೋರಿಸುತ್ತದೆ. ಬಿಸ್ಮಾರ್ಕ್ ಜರ್ಮನಿಯ ಕಾರ್ಮಿಕ ಪಕ್ಷವನ್ನು ನಿ಼ಷೇಧಿಸಿದಾಗ ಧೃತಿಗೆಡದೆ, ಏಂಗೆಲ್ಸ್ ಸಲಹೆಯಂತೆ ಸಹಕಾರಿ ಸಂಘಗಳನ್ನು ರಚಿಸಿ ಕಾರ್ಮಿಕರೊಂದಿಗೆ ಜನರೊಂದಿಗೆ ಸಂಪರ್ಕ ಸತತವಾಗಿ ಇಟ್ಟುಕೊಂಡು ನಿಷೇಧ ತೆಗೆದಾಗ ಹಿಂದಿನದಕ್ಕಿಂತ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿ ಹೊಮ್ಮಿತು. ಹೀಗೆ ವಿಶ್ವಕೋಶದಂತಹ ಜ್ಞಾನವಂತ, ಹಲವು ಜ್ಞಾನಕ್ತೇತ್ರಗಳಲ್ಲಿ ಭಾಷೆಗಳಲ್ಲಿ ಪಾರಂಗತ, ಚಿಂತಕ, ಚಳುವಳಿಗಾರ, ಕ್ರಾಂತಿಕಾರಿ, ಮಹಾನ್ ಮಾನವತಾವಾದಿ, ಮಿಲಿಟರಿ ವ್ಯೂಹಗಾರ – ಹೀಗೆ ಏಂಗೆಲ್ಸ್ ನಂತಹ ಬಹುಮುಖಿ ಪ್ರತಿಭೆಯ ಬದುಕು ಕೃತಿಗಳ ಕುರಿತು ಬರೆಯುವುದು ಒಂದು ವ್ಯಾಸಂಗವೇ. ಅವರ ಕೃತಿಗಳ ಅಧ್ಯಯನವನ್ನು ಮಾಡಿ, ಅದರ ಬೆಳಕಿನಲ್ಲಿ ಇಂದಿನ ಪರಿಸ್ಥಿತಿಯನ್ನು ಬದಲಾಯಿಸುವ ಕುರಿತು ಚಿಂತನೆ ಮತ್ತು ಅದನ್ನು ಕಾರ್ಯಾಚರಣೆಗಳಿಸುವ ಬದ್ಧತೆ ಮಾತ್ರವೇ ಏಂಗೆಲ್ಸ್ ನ್ನು ನೆನಪಿಸಿಕೊಳ್ಳುವ ವಿಧಾನ ಎಂದು ಪುಸ್ತಕದ ಲೇಖಕರಾದ ಡಾ.ಜಿ.ರಾಮಕೃಷ್ಣ ಏಂಗೆಲ್ಸ್ ಕುರಿತು ಭಾವಪೂರ್ಣವಾಗಿ ಮಾತನಾಡಿದರು.

ಇದನ್ನು ಓದಿ: ಏಂಗೆಲ್ಸ್ 200 ಮಾಲಿಕೆಯ ಅನಾವರಣ – ಎರಡು ಪುಸ್ತಕಗಳ ಬಿಡುಗಡೆ

ಮಾಲಿಕೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಡಾ.ಬಿ.ಆರ್.ಮಂಜುನಾಥ ಅವರು ಕಾರ್ಯಕ್ರಮದ ನಿರೂಪಣೆಯನ್ನೂ ಮಾಡಿದರು. ನವಕರ್ನಾಟಕದ ಕಾರ್ಯಕಾರಿ ನಿರ್ದೇಶಕ ರಮೇಶ ಉಡುಪ ಅವರು ವಂದನಾರ್ಪಣೆ ಸಲ್ಲಿಸಿದರು., ಗುರುರಾಜ ದೇಸಾಯಿ ತಾಂತ್ರಿಕ ನಿರ್ವಹಣೆಯನ್ನು ಮಾಡಿದರು. ಈ ಇಡೀ ಕಾರ್ಯಕ್ರಮವನ್ನು ಜನಶಕ್ತಿ ಮೀಡಿಯಾ ಫೇಸ್ ಬುಕ್ ನಲ್ಲಿ ಲೈವ್ ಪ್ರಸಾರ ಮಾಡಿದ್ದು, ಯೂ ಟ್ಯೂಬ್ ನಲ್ಲೂ ಅದು ಮುಂದೆ ಲಭ್ಯವಿರುತ್ತದೆ.

  ಕಾರ್ಯಕ್ರಮ ಪೂರ್ಣ ವಿಡಿಯೊ ಹಾಗೂ  ಪ್ರೊ.ಕೆ.ಕೆ.ತೆಕ್ಕೆಡೆತ್ ರವರ ಮಾತುಗಳನ್ನು ಕೇಳಲು  ಈ ಲಿಂಕ್‌ ಕ್ಲಿಕ್‌ ಮಾಡಿ : ಏಂಗೆಲ್ಸ್ 200 ಮಾಲಿಕೆಯ ಅನಾವರಣ – ಫ್ರೆಡೆರಿಕ್ ಎಂಗೆಲ್ಸ್ ವೈಜ್ಞಾನಿಕ ಸಮಾಜವಾದಕ್ಕೆ ಏಂಗೆಲ್ಸ್‌ ಕೊಡುಗೆ

Donate Janashakthi Media

Leave a Reply

Your email address will not be published. Required fields are marked *